varthabharthi


ಮುಂಬೈ ಸ್ವಗತ

ಮುಂಬೈ ಕನ್ನಡಕ್ಕೆ ಕ್ರೈಸ್ತರ ಕೊಡುಗೆ

ವಾರ್ತಾ ಭಾರತಿ : 22 Oct, 2021
ದಯಾನಂದ ಸಾಲ್ಯಾನ್

ಈವರೆಗೆ ಗಮನಿಸಿದ ಒಟ್ಟು ಸಾಹಿತಿಗಳಲ್ಲಿ ಹೆಚ್ಚಿನವರು 65-70ರ ವಯೋಮಾನ ದಾಟಿದ ಕೊಂಕಣಿ ಮುಂಬೈ ಸಾಹಿತಿಗಳು. ಕೇವಲ ನಾಲ್ಕೈದು ಮಂದಿ 50ರಿಂದ ಮೇಲ್ಪಟ್ಟವರು. ಹೊಸ ಪೀಳಿಗೆ ಅಂದರೆ ಮೂರನೇ ಜನರೇಶನ್ ಕೊಂಕಣಿ ಸಾಹಿತ್ಯ ಕ್ಷೇತ್ರಕ್ಕೆ ಏಕೆ ಇಳಿಯಲಿಲ್ಲ ಎಂಬ ದೊಡ್ಡ ಪ್ರಶ್ನೆ ಕಾಡುತ್ತದೆ.


ಭಾಗ-3

1995ರಲ್ಲಿ ಮುಂಬೈಗೆ ಆಗಮಿಸಿದ್ದ ರೋನ್ಸ್, ಬರವಣಿಗೆಯಲ್ಲಿ ಕ್ರಿಯಾಶೀಲವಾಗಿ ತನ್ನನ್ನು ತೊಡಗಿಸಿಕೊಂಡರು. ಇಲ್ಲಿ ಬರುವ ಮೊದಲೇ ಮಂಗಳೂರು ಮಿತ್ರ, ಮುಂಗಾರು, ಉದಯವಾಣಿ, ಹೊಸದಿಗಂತ ಪತ್ರಿಕೆಗಳಿಗೆ ವರದಿ ಕಳುಹಿಸುವ ಮೂಲಕ ಪತ್ರಕರ್ತರ, ಪತ್ರಿಕೆಗಳ ನಿಕಟ ಸಂಬಂಧ ಅವರಿಗಿತ್ತು. ಮುಂಬೈಗೆ ಆಗಮಿಸಿದ್ದ ಮೊದಲ ದಿನಗಳಲ್ಲಿ ಕೊಂಕಣಿ ಪತ್ರಿಕೆಯ ಪ್ರತಿನಿಧಿಯಾಗಿ, ವರದಿಗಾರನಾಗಿ, ಬ್ಯೂರೊ ಚೀಫ್ ಆಗಿ ಈ ರಂಗದಲ್ಲಿ ಮತ್ತಷ್ಟು ಅನುಭವ ಗಳಿಸಿಕೊಂಡರು. ‘ರಾಕ್ಣೊ’ ಜೊತೆಗೆ ಒಂದಷ್ಟು ಬೇರೆ ಪತ್ರಿಕೆಗಳ ನಂಟು ಇದ್ದರೂ ನಿಜವಾದ ಪತ್ರಕರ್ತ ಹೇಗಿರಬೇಕು, ಅವರಿಗಿರುವ ಬದ್ಧತೆ, ನಿರ್ಭೀತತೆ ರೋನ್ಸ್ ಅವರಿಗೆ ದೊರೆತದ್ದು ಉದಯವಾಣಿ ಬಳಗಕ್ಕೆ ಸೇರಿಕೊಂಡ ನಂತರ ಕೆ.ಟಿ. ವೇಣುಗೋಪಾಲ್ ಅವರ ಮಾರ್ಗದರ್ಶನದಲ್ಲಿ. ಕ್ಯಾಮರಾ ಕ್ಲಿಕ್ಕಿಸಿ ಫೋಟೊ ತೆಗೆಯುತ್ತಿದ್ದ ರೋನ್ಸ್ ಯಾವುದೇ ತರಗತಿಗೆ ಸೇರದೆ ಫೋಟೊಗ್ರಫಿಯ ಎಲ್ಲಾ ಸಾಧ್ಯತೆಗಳನ್ನು ಸ್ವತಃ ಕಂಡುಕೊಂಡರು. ಕೊಂಕಣಿಯ ಎಲ್ಲಾ ಪತ್ರಿಕೆಗಳ ವರದಿಗಾರನಾಗಿ, ಪ್ರತಿನಿಧಿಯಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿರುವ ರೋನ್ಸ್, ಸುಮಾರು ಇಪ್ಪತ್ತು ಪತ್ರಿಕೆಗಳು, ಅಂತರ್ಜಾಲ ಪತ್ರಿಕೆ, ಯೂಟ್ಯೂಬ್, ಟಿವಿ ಮಾಧ್ಯಮ ಸೇರಿ ಸುಮಾರು ನಲ್ವತ್ತರಷ್ಟು ಮಾಧ್ಯಮಗಳಿಗೆ ಸಚಿತ್ರ ವರದಿ ಕಳುಹಿಸುತ್ತಿರುವ ಮುಂಬೈಯ ಪತ್ರಕರ್ತ. ಎಂದೂ ತಮ್ಮ ಕಾರ್ಯದಲ್ಲಿ ರಾಜಿ ಮಾಡಿಕೊಳ್ಳದ ಅಪರೂಪದ ಪ್ರಾಮಾಣಿಕ ಪತ್ರಕರ್ತ ರೋನ್ಸ್ ಪತ್ರಕರ್ತರ ಯೋಗಕ್ಷೇಮಕ್ಕಾಗಿ ಕಟ್ಟಿದ ಸಂಸ್ಥೆ ‘ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ (ರಿ.)’. ಪ್ರಾರಂಭದಲ್ಲಿ ಸಂಘದ ಗೌರವ ಪ್ರಧಾನ ಕಾರ್ಯದರ್ಶಿಯಾಗಿದ್ದು, ಇದೀಗ ಅಧ್ಯಕ್ಷರಾಗಿ ಪತ್ರಕರ್ತರಿಗೆ ಸದಾ ಸ್ಪಂದಿಸುತ್ತಿದ್ದಾರೆ. ಜಾತಿ, ಮತ, ಧರ್ಮವನ್ನು ಮೀರಿ ಎಲ್ಲರೊಂದಿಗೆ ಒಂದಾಗಿ ಪತ್ರಿಕಾಧರ್ಮವನ್ನು ಅಕ್ಷರಶಃ ಪಾಲಿಸುವ ರೋನ್ಸ್ ಇಲ್ಲಿನ ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕನ್ನಡ-ತುಳು-ಕೊಂಕಣಿ ಭಾಷೆಗಳಲ್ಲಿ ಕವಿತೆ ವಾಚಿಸಿದ್ದಾರೆ. ಇವರ ಕ್ರಿಯಾಶೀಲತೆಯನ್ನು ಗಮನಿಸಿ ‘ದಿವೋ’ ಪತ್ರಿಕೆ ನೀಡುವ ವಾರ್ಷಿಕ ಪ್ರಶಸ್ತಿಯಲ್ಲದೆ, ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ 2014ರಲ್ಲಿ ಕರ್ನಾಟಕ ಮಾಧ್ಯಮ ಅಕಾಡಮಿ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.

ನಾಟಕ, ಕತೆ, ಕವಿತೆಗಳನ್ನು ಬರೆಯುತ್ತಾ ಬಂದಿದ್ದ ನವೀನ್ ಕುಲಶೇಖರ 1966ರಲ್ಲಿ ಮುಂಬೈಗೆ ಆಗಮಿಸಿದ ನಂತರ ಇಲ್ಲಿ ‘ಮರಾಠಿ ಲೋಕಸತ್ತಾ’, ‘ಜನ ಸತ್ತಾ’, ‘ಬ್ಲಿಟ್ಜ್’ ಪತ್ರಿಕೆಯ ಮರಾಠಿ ಆವೃತ್ತಿ ಹಾಗೂ ಇಲ್ಲಿನ ‘ಕರ್ನಾಟಕ ಮಲ್ಲ’ ಪತ್ರಿಕೆಗೆ ನಿರಂತರ ವಿಶೇಷ ಲೇಖನಗಳನ್ನು ಬರೆಯುತ್ತಿದ್ದರು. ಇವರ ‘ತುಜೆಸ್ ಕಾತಿರ್’ ಎಂಬ ಕೊಂಕಣಿ ಪತ್ತೆದಾರಿ ಕಾದಂಬರಿ ಇವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿದೆ. ‘ಮೊಗಚೊ ಪಿಸೊ’, ‘ತುಮ್ ಹಂಗಸೊರ್?’ ಹಾಗೂ ‘ಮೊಗಚಿ ಜೀಕ್’ ಸಂಗೀತ ನಾಟಕಗಳು ರಂಗದಲ್ಲಿ ಯಶಸ್ವಿ ಪ್ರಯೋಗಗಳನ್ನು ಕಂಡಿವೆ. ಸುಮಾರು ಹದಿನೈದು ಕತೆೆಗಳನ್ನು ಬರೆದಿರುವ ಇವರ ಕಾದಂಬರಿಯೊಂದು ಪತ್ರಿಕೆಯಲ್ಲಿ ಎಪ್ಪತ್ತು ಕಂತುಗಳಲ್ಲಿ ಹರಿದುಬಂದು ಪತ್ರಿಕೆಯ ಪ್ರಸಾರಕ್ಕೆ ಕಾಣಿಕೆ ನೀಡಿದೆ. ‘ದಿವೋ’ ಕೊಂಕಣಿ ವಾರಪತ್ರಿಕೆಯ ಸ್ಥಾಪಕ ಸದಸ್ಯರೂ ಆಗಿದ್ದ ಇವರು ‘ಮುಲುಂಡು ಕೊಂಕಣಿ ಭಾಷಾ ಮಂಡಳಿ’ ಮೊದಲಾದ ಕೊಂಕಣಿ ಸಂಸ್ಥೆಗಳ ಗೌರವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕೆನರಾ ಬ್ಯಾಂಕಿನ ಉನ್ನತ ಅಧಿಕಾರಿಯಾಗಿದ್ದು, 2011ರಲ್ಲಿ ನಿವೃತ್ತರಾದ ನಂತರ ಮಂಗಳೂರು ದೇರೆಬೈಲ್ ನಲ್ಲಿ ವಿಶ್ರಾಂತಿ ಜೀವನ ಸಾಗಿಸುತ್ತಿದ್ದಾರೆ. ಅಲ್ಲೂ ಈಗ ‘ಈಮಾಜ್’, ‘ಬಂಗ್ಲೊ’ ಇತ್ಯಾದಿ ನಾಟಕಗಳ ಮೂಲಕ ಕಾಣಿಸಿಕೊಂಡು ರಂಗಭೂಮಿಗೆ ಅಮೂಲ್ಯ ಕಾಣಿಕೆ ನೀಡುತ್ತಿದ್ದಾರೆ.

ವಸಾಯಿ ರೋಡ್‌ನಿಂದ ಮಂಗಳೂರಿಗೆ ಹೋಗುವ ಕೊಂಕಣ ರೈಲ್ವೆಯ ಪ್ರವಾಸಿಗರ ಸಮಸ್ಯೆಗಳ ಪರಿಹಾರವನ್ನು ಉದ್ದೇಶವಾಗಿಟ್ಟುಕೊಂಡು 2008ರಲ್ಲಿ ಹುಟ್ಟಿಕೊಂಡ ರೈಲ್ವೆ ಯಾತ್ರಿಕರ ಸಂಘ ಇದರ ಕಾರ್ಯಕಾರಿ ಕಾರ್ಯದರ್ಶಿ ಒಲಿವರ್ ಡಿ’ಸೋಜಾ. ದೇಶಾದ್ಯಂತ ಸಂಪನ್ಮೂಲ ವ್ಯಕ್ತಿಯಾಗಿ, ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿರುವ ಒಲಿವರ್ ಮಂಗಳೂರಿನ ನಾಗೋರಿಯಿಂದ ಮುಂಬೈಗೆ ಆಗಮಿಸಿದ್ದು 2006ರಲ್ಲಿ. ಸಮಾಜಶಾಸ್ತ್ರ, ರಾಜಕೀಯಶಾಸ್ತ್ರ ಮತ್ತು ಪತ್ರಿಕಾರಂಗದಲ್ಲಿ ಸ್ನಾತಕ ಪದವಿ ಗಳಿಸಿರುವ ಒಲಿವರ್, 1998ರಲ್ಲಿ ಪುಣೆ ಫಿಲ್ಮ್ ಆ್ಯಂಡ್ ಟಿವಿ ಇನ್‌ಸ್ಟಿಟ್ಯೂಟ್ ಇಂಡಿಯಾ ಇಲ್ಲಿಂದ ಚಲನಚಿತ್ರ ರಸಗ್ರಹಣದ ಡಿಪ್ಲೊಮಾದಲ್ಲಿ ಎರಡನೇ ರ್ಯಾಂಕ್ ಪಡೆದವರು. ಕೊಂಕಣಿ, ಕನ್ನಡ, ಇಂಗ್ಲಿಷ್‌ನಲ್ಲಿ ನಿರಂತರವಾಗಿ ಬರೆಯುತ್ತಿರುವ ಇವರ ಬರಹಗಳು ನಾಡಿನ ಹಾಗೂ ಮಹಾರಾಷ್ಟ್ರದ ಮುಖ್ಯ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಅವರು ಕೊಂಕಣಿಯಲ್ಲಿ ಬರೆದ ಪ್ರಥಮ ಕತೆೆ ‘ಜುದಾಸಾಚೊ ಉಮೊ’ ಕಳುಹಿಸಿಕೊಟ್ಟಾಗ ಅದನ್ನು ಮೆಚ್ಚಿದ ಅಂದಿನ ಕೊಂಕಣಿ ವಿಭಾಗದ ಮುಖ್ಯಸ್ಥರಾಗಿದ್ದ ಯೂಸೂಫ್ ಶೇಖ್ ಅವರು ಆ ಕತೆೆಯ ಹಿನ್ನೆಲೆಯ ಕುರಿತು ಸಂದರ್ಶನ ನಡೆಸಿ ಜೊತೆಗೆ ಕತೆೆಯನ್ನೂ ಬಿತ್ತರಿಸಿದ್ದು ತನಗೆ ಪ್ರಶಸ್ತಿ ಸಿಕ್ಕಂತೆ ಎಂದು ಉದ್ಗರಿಸುತ್ತಾರೆ ಒಲಿವರ್. 1987ರಿಂದ ಕೆಲವರ್ಷ ಆಕಾಶವಾಣಿಯಲ್ಲಿ ಉದ್ಘೋಷಕರಾಗಿಯೂ ಕಾರ್ಯನಿರ್ವಹಿಸಿದ್ದ ಒಲಿವರ್ ಡಿ’ಸೋಜಾ ಇಲ್ಲಿನ ಹೆಚ್ಚಿನ ಕನ್ನಡ, ತುಳು ಸಂಘಟನೆಗಳೊಂದಿಗೆ ನಿಕಟ ಸಂಬಂಧ ಇರಿಸಿಕೊಂಡಿದ್ದಾರೆ. ವಸಾಯಿ ಕೊಂಕಣಿ ಅಸೋಸಿಯೇಶನ್‌ನ ಸ್ಥಾಪನೆಯಲ್ಲೂ ಮುಂಚೂಣಿಯಲ್ಲಿದ್ದ ಒಲಿವರ್ ಆ ಸಂಸ್ಥೆಯ ಕ್ರಿಯಾಶೀಲ ಸದಸ್ಯರು. ವಿರಾರ್ ಶಂಕರ್ ಶೆಟ್ಟಿ ಅಧ್ಯಕ್ಷ, ಒಲಿವರ್ ಕಾರ್ಯಕಾರಿ ಕಾರ್ಯದರ್ಶಿಯಾಗಿರುವ ರೈಲ್ವೆ ಯಾತ್ರಿಕರ ಸಂಘಟನೆಯ ಮುತುವರ್ಜಿ ಹಾಗೂ ನಿರಂತರ ಕಾರ್ಯವೈಖರಿಯಿಂದ ಶೀಘ್ರವೇ ವಸಾಯಿಯಲ್ಲಿ 4 ಫ್ಲಾಟ್‌ಫಾರಂ ಒಳಗೊಂಡ ಟರ್ಮಿನಸ್ ಉದ್ಘಾಟನೆಗೊಳ್ಳಲಿದೆ.

ಕಾಂಜೂರು ಮಾರ್ಗ್ ನಿವಾಸಿ ಹೆನ್ರಿ ಡಿ’ ಪೌಲ್ ಮೂಲತಃ ಕಾರ್ಕಳದವರು. ‘ಪಯ್ಣಿರಿ’, ‘ದಿವೋ’ ಮೊದಲಾದ ಪತ್ರಿಕೆಗಳಲ್ಲಿ ಸಾಮಾಜಿಕ ಕಾಳಜಿಯ ಲೇಖನಗಳನ್ನು ಬರೆಯುತ್ತಾ ಬಂದಿರುವ ಹೆನ್ರಿಯವರ ‘ಸವಾಲಾಚೆ ಉಜ್ವಡ್’ ಎಂಬ ಕೃತಿ 4 ಸಂಪುಟಗಳಲ್ಲಿ ಬೆಳಕು ಕಂಡಿದೆ. 2003ರಿಂದ 2018ರವರೆಗೆ ‘ಕುಟಾಮ್’ ಪತ್ರಿಕೆಯ ಸಂಪಾದಕ, ಪ್ರಕಾಶಕರಾಗಿದ್ದ ಹೆನ್ರಿ ಪೌಲ್ ಅವರ ಆರೋಗ್ಯ ಕುರಿತ ಲೇಖನಗಳು ಬಹಳ ಪ್ರಸಿದ್ಧಿ ಪಡೆದಿವೆ.

ಮೂಲತಃ ಮಂಗಳೂರಿನ ದೇರೆಬೈಲ್‌ನವರಾದ ವಿಕ್ಟರ್ ಲಾಸರ್ ಕಾನ್ಸೆಸ್ಟೋರವರು ಕೊಂಕಣಿ-ಕನ್ನಡ-ತುಳು ಗೀತೆ ರಚನೆಕಾರ ಹಾಗೂ ಸಂಗೀತಗಾರ, ಹಾಡುಗಾರ. 1978ರಲ್ಲಿ ಮುಂಬೈಗೆ ಆಗಮಿಸಿದ್ದ ವಿಕ್ಟರ್ ರಂಗಭೂಮಿ ಕಲಾವಿದನೂ ಹೌದು. ಇವರು ನಟಿಸಿದ ನಾಟಕಗಳಲ್ಲಿ ಮುಖ್ಯವಾಗಿ ಹಾಸ್ಯ ಪಾತ್ರಗಳಲ್ಲಿ ರಂಗದಲ್ಲಿ ಜೀವ ತುಂಬಿ ಸೈ ಅನ್ನಿಸಿಕೊಂಡಿದ್ದವರು. ವಕೋಲಾದಲ್ಲಿ ವಾಸಿಸುತ್ತಿದ್ದ ಹೆರಿ ಬೋಯ್, ವಕೋಲಾ ತಮ್ಮ 86ನೇ ವಯಸ್ಸಿನಲ್ಲಿ ನಿಧನ ಹೊಂದುವವರೆಗೂ ಕವಿತೆ, ಹಾಡುಗಳನ್ನು ಸದಾ ಗುಣುಗುಣಿಸುತ್ತಿದ್ದವರು. ನಕೆತ್ರ್ (ನಕ್ಷತ್ರ) ಹೆರಿ ಬೋಯ್ ಅವರ ಕೊಂಕಣಿ ಸಂಗೀತ ಸೀಡಿ. ಕೊಂಕಣಿಯ ಹಲವಾರು ಪತ್ರಿಕೆಗಳಲ್ಲಿ ಅವರ ಕವಿತೆ ಹಾಗೂ ವೈಚಾರಿಕ ಲೇಖನಗಳು ಪ್ರಕಟಗೊಳ್ಳುತ್ತಿತ್ತು.

ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಇವರ ಕಾರ್ಮಿಕರ ಕುರಿತ ಸಾವಿರಾರು ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಕಾರ್ಮಿಕರ ಸಂಘಟನೆಯ ಅಗತ್ಯ, ಕಾರ್ಮಿಕರ ನೋವು ನಲಿವು, ಉದ್ಯೋಗಪತಿಗಳು ಕಾರ್ಮಿಕರಿಗೆೆ ಮಾಡುವ ದಬ್ಬಾಳಿಕೆ-ಹೀಗೆ ಇವರ ಲೇಖನಿ ಸದಾ ಕಾರ್ಮಿಕರ ಪರವಾಗಿತ್ತು.

ಕೊಂಕಣಿಯಲ್ಲಿ ಸುಮಾರು 330 ಕತೆೆಗಳನ್ನು, ಎರಡು ಕಾದಂಬರಿಗಳನ್ನು (ಇಂಗ್ಲಿಷ್‌ನಿಂದ ‘ಪಿನೋಕ್ಯೋ’; ನಾ. ಡಿ’ಸೋಜಾ ಅವರ ಕನ್ನಡದಿಂದ ‘ವಿನುಸುನ್ನಿ ಅನಿ ಸಂಗಾತಿ’) ಕೊಂಕಣಿಗೆ ತಂದ ಯಶಸ್ಸು ಆ್ಯನ್ಸಿ ಡಿ’ಸೋಜಾ ಪಾಲಡ್ಕ ಅವರದ್ದು. ಹೈಸ್ಕೂಲ್‌ನಲ್ಲಿರುವಾಗಲೇ ನಾಟಕದ ಗೀಳು ಅಂಟಿಸಿಕೊಂಡಿದ್ದ ಪಾಲಡ್ಕ, ಒಟ್ಟು 7 ಕೊಂಕಣಿ ನಾಟಕಗಳನ್ನು ಬರೆದಿದ್ದಾರೆ. ಮಕ್ಕಳ ಸಾಹಿತ್ಯವನ್ನೂ ರಚಿಸಿದ ಆ್ಯನ್ಸಿ ಡಿ’ಸೋಜಾ ಪಾಲಡ್ಕ ಮಕ್ಕಳಿಗಾಗಿ ಈಗಾಗಲೇ ಸುಮಾರು ಸಾವಿರಕ್ಕಿಂತ ಹೆಚ್ಚು ಪಠ್ಯಗಳನ್ನು, 80ಕ್ಕಿಂತ ಅಧಿಕ ಮಕ್ಕಳ ಕತೆೆಗಳನ್ನು ಬರೆದಿದ್ದಾರೆ. ಮೂಲತಃ ಮೂಡುಬಿದಿರೆಯ ಪಾಲಡ್ಕದವರಾದ ಆ್ಯನ್ಸಿ ಈ ಕನಸಿನ ನಗರಕ್ಕೆ ಆಗಮಿಸಿದ್ದು 2002ರಲ್ಲಿ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ತಮ್ಮ ಕೃತಿಗೆ ಪಡೆದಿರುವ ಇವರ ‘ಪುತ್ತುಶೆಟ್ಟಿಚೊ ಕಣಿಯೊ’ ಬಹುಪ್ರಶಂಸೆಗೆ, ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಕವಿತಾ ಸಂಕಲನಕ್ಕೆ 1998ನೇ ಸಾಲಿನ ಡಾ. ಟಿ.ಎಂ.ಎ. ಪೈ ಸ್ಮಾರಕ ಪ್ರಶಸ್ತಿ ದೊರೆತಿದೆ. ‘ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ’ ಕೊಡುವ ‘ಬ್ಯುಸಿನೆಸ್ ಪ್ರೊಫೆಶನಲ್ ಪ್ರೋಗ್ರಾಂ ಅವಾರ್ಡ್’ ಪಡೆದಿರುವ ಆ್ಯನ್ಸಿ ಪಾಲಡ್ಕ ಇಲ್ಲಿನ ‘ವಸಾಯಿ ಕೊಂಕಣಿ ವೆಲ್ಫೇರ್ ಅಸೋಸಿಯೇಶನ್’ ಇದರ ಸ್ಥಾಪಕ ಅಧ್ಯಕ್ಷರು. ಸದ್ಯ ಪ್ರತಿಷ್ಠಿತ ಮಾಡೆಲ್ ಕೋ ಆಪರೇಟಿವ್ ಬ್ಯಾಂಕ್‌ನ ನಿರ್ದೇಶಕರಾಗಿದ್ದಾರೆ.

ಕಳೆದ ಸುಮಾರು 40ವರ್ಷಗಳಿಂದ ಜೆರಿಮೆರಿ ಪರಿಸರದಲ್ಲಿ ವಾಸಿಸುತ್ತಿರುವ ಫ್ಲೋರಾ ಡಿ’ಸೋಜಾ ಓರ್ವ ಕವಿಯಾಗಿ, ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ. ಬಡವರನ್ನು ಕಂಡರೆ ಸದಾ ತುಡಿಯುವ ಇವರು ಎನ್‌ಸಿಪಿಯಲ್ಲಿ ಕಾರ್ಯಕರ್ತೆಯಾಗಿ ಜನಪರ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭ ಸುಮಾರು 175ರಷ್ಟು ಕಿಟ್‌ಗಳನ್ನು ನೀಡಿ ಆ ಮೂಲಕ ಅಸಹಾಯಕರಿಗೆ ನೆರವಿನ ಕೈ ಚಾಚಿದ್ದಾರೆ. ಓರ್ವ ಅತ್ಯುತ್ತಮ ರಂಗಕಲಾವಿದೆಯೂ ಆಗಿರುವ ಇವರು ‘ಮತರೋ ಸರ್‌ಬೆಲ’ ನಾಟಕದಲ್ಲಿ ಮುಖ್ಯಪಾತ್ರ ನಿರ್ವಹಿಸಿದ್ದಾರೆ. ‘ಬಾಂಬೆ ಕೆಥೊಲಿಕ್ ಸಭಾ’ ಇದರ ಅಧ್ಯಕ್ಷರು ಆಗಿರುವ ಫ್ಲೋರಾ ಡಿ’ಸೋಜ ಮೂಲತಃ ಉಡುಪಿಯ ಕಲ್ಮಾಡಿಯವರು.
1975ರಲ್ಲಿ ಮುಂಬೈಗೆ ಕಾಲಿರಿಸಿದ್ದ ಸುರತ್ಕಲ್‌ನ ಹೆನ್ರಿ ಡಿ’ಸಿಲ್ವಾ, ಉತ್ತಮ ನಾಟಕಕಾರ. ಇವರ ಒಟ್ಟು 8 ನಾಟಕಗಳು ಈಗಾಗಲೇ 200ಕ್ಕಿಂತಲೂ ಹೆಚ್ಚು ಪ್ರಯೋಗಗಳನ್ನು ಕಂಡಿವೆ. ‘ಕಜಾರ ಉಪರಾಂತ್’, ‘ಕೋನ್ ದಿಗ’, ‘ನಸೀಬಚೊ ಖೇಲ್’, ‘ನಿರ್ಮಲ್ಲೆ ನಿರ್ಮೋನೆ’ ಇತ್ಯಾದಿ ಇವರ ಪ್ರಸಿದ್ಧ ನಾಟಕಗಳು. ಇವರ ನಸೀಬಚೊ ಖೇಲ್ ಇತ್ತೀಚೆಗೆ (08-09-21) ವಿ4ನಲ್ಲಿ ಒಟಿಟಿ ಅಡಿಯಲ್ಲಿ ಪ್ರಸಾರ ಕಂಡಿದೆ. ಇವರ ನಾಟಕಗಳು ಅಮೆರಿಕ, ಲಂಡನ್, ಇಸ್ರೇಲ್, ಗಲ್ಫ್ ರಾಷ್ಟ್ರಗಳಲ್ಲಿ ರಂಗಕಂಡಿವೆ. ಇಲ್ಲಿ ಇವರು 1976ರಲ್ಲಿ ಪ್ರಾರಂಭಿಸಿದ ಸಂಸ್ಥೆ ‘ಕೆನರಾ ಯೂತ್ ಅಸೋಸಿಯೇಷನ್’. ಇವರ ಕೊಂಕಣಿ ಚಲನಚಿತ್ರ ಮಂಗಳೂರಿನ ಪ್ರಭಾತ್ ಟಾಕೀಸ್‌ನಲ್ಲಿ 3ವಾರ ಹೌಸ್‌ಫುಲ್ ಆಗಿರುವುದು ದಾಖಲೆ. 1989ರಲ್ಲಿ ಇವರು ನಿರ್ದೇಶಿಸಿ, ನಿರ್ಮಿಸಿರುವ ‘ಕಜಾರ ಉಪರಾಂತ್’ ವೀಡಿಯೊ ಫಿಲ್ಮ್ ಬಹುಬೇಡಿಕೆ ಪಡೆದಿತ್ತು.

 ಮೂಲತಃ ಕುಕ್ಕೆ ಸುಬ್ರಹ್ಮಣ್ಯದ ಕಡುಬಡತನದ ಕುಟುಂಬದಲ್ಲಿ ಜನಿಸಿದ ಕೆ.ಎಂ. ಮ್ಯಾಥ್ಯೂ ಅವರದ್ದು ಸರಳ ಸಜ್ಜನಿಕೆಯ ವ್ಯಕ್ತಿತ್ವ. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಮುಗಿಸಿ ಮುಂದೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಸ್ನಾತಕ ಪದವಿ ಪಡೆದಿದ್ದಾರೆ. 1986ರಲ್ಲಿ ಜೂನಿಯರ್ ಫೆಲೋ ಆಗಿ ಮುಂಬೈಗೆ ಆಗಮಿಸಿ ಡಾ. ತಾಳ್ತಜೆ ವಸಂತ ಕುಮಾರ್ ಅವರ ಮಾರ್ಗದರ್ಶನದಲ್ಲಿ ‘ರೆ. ಫರ್ಡಿನಾಂಡ್ ಕಿಟೆಲ್ ಒಂದು ಅಧ್ಯಯನ’ ಸಂಪ್ರಬಂಧವನ್ನು ಬರೆದು ಪಿಎಚ್. ಡಿ. ಪದವಿ ಪಡೆದಿದ್ದಾರೆ. ಇಲ್ಲಿನ ನಿಯತಕಾಲಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದ ಅವರು ಸ್ನಾತಕ ವಿದ್ಯಾರ್ಥಿಗಳಿಗೆ ನೆಚ್ಚಿನ ಗುರುಗಳಾಗಿದ್ದವರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಇವರ ಕೃತಿಯು ಅಭ್ಯಾಸನಿರತ ಸಂಶೋಧಕರಿಗೆ ಕೈಪಿಡಿ ಆಗಿದೆ.

‘ಮೇರಿ ನಜರತ್’ ಕಾವ್ಯನಾಮದಿಂದ ಕವಿತೆಗಳನ್ನು ಕಟ್ಟುತ್ತಿದ್ದ ಇವರ ಹೆಚ್ಚಿನ ವಿವರಗಳು ಲಭ್ಯವಿಲ್ಲ. ರೀಟಾ ಸಿ. ಪ್ರಿಯನ್ ಇವರು ಸಾಮಾಜಿಕ ಸಮಸ್ಯೆಗಳ ಬಗ್ಗೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಇವರ ಕವಿತೆಗಳು ‘ದಿವೋ’, ‘ರಾಕ್ಣೊ’ ಮೊದಲಾದ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಸಮಾಜದ ಸೂಕ್ಷ್ಮಗಳನ್ನು ಗಮನಿಸಿ ಪ್ರತಿಕ್ರಿಯಿಸುತ್ತಿದ್ದ ರೋನ್ ಮೈಕೆಲ್ ಕೊಂಕಣಿ ಪತ್ರಿಕೆಗಳಿಗೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಇವರು ಮೂಲತಃ ಮಂಗಳೂರಿನ ಕಂಕನಾಡಿ ಯವರು.

ಮುಂಬೈಯ ಕೊಂಕಣಿ ಬರಹಗಾರರು ಸಾಧನೆಯ ಹಲವಾರು ಮೈಲುಗಲ್ಲುಗಳನ್ನು ನಿರ್ಮಿಸಿದ್ದಾರೆ. ಆದರೆ ಒಟ್ಟು ಈ ಬರಹಗಾರರನ್ನು ಮತ್ತು ಇಂದಿನ ದಿನಗಳನ್ನು ಗಮನಿಸಿದಾಗ ಒಂದು ರೀತಿಯ ಆತಂಕದ ವಾತಾವರಣ ಕಾಣುತ್ತದೆ. ಏಕೆಂದರೆ ನಾವು ಈವರೆಗೆ ಗಮನಿಸಿದ ಒಟ್ಟು ಸಾಹಿತಿಗಳಲ್ಲಿ ಹೆಚ್ಚಿನವರು 65-70ರ ವಯೋಮಾನ ದಾಟಿದ ಕೊಂಕಣಿ ಮುಂಬೈ ಸಾಹಿತಿಗಳು. ಕೇವಲ ನಾಲ್ಕೈದು ಮಂದಿ 50ರಿಂದ ಮೇಲ್ಪಟ್ಟವರು. ಹೊಸ ಪೀಳಿಗೆ ಅಂದರೆ ಮೂರನೇ ಜನರೇಶನ್ ಕೊಂಕಣಿ ಸಾಹಿತ್ಯ ಕ್ಷೇತ್ರಕ್ಕೆ ಏಕೆ ಇಳಿಯಲಿಲ್ಲ ಎಂಬ ದೊಡ್ಡ ಪ್ರಶ್ನೆ ಕಾಡುತ್ತದೆ. ಈ ಬಗ್ಗೆ ಹಿರಿಯರಾದ ‘ದಿವೋ’ ಪತ್ರಿಕೆಯ ಲಾರೆನ್ಸ್ ಕುವೆಲ್ಹೋ ಅವರನ್ನು ವಿಚಾರಿಸಿದರೆ ‘‘ಹೊಸ ಪೀಳಿಗೆ ಕನ್ನಡ ಮಾಧ್ಯಮಕ್ಕೆ ಹೋಗುತ್ತಿಲ್ಲ’’ ಎಂಬ ಉತ್ತರ ನೀಡುತ್ತಾರೆ. ಆದರೆ ಇಲ್ಲಿನ ಕೊಂಕಣಿ ಸಾಹಿತಿಗಳು ಹಿಂದಿನಿಂದಲೂ ಕನ್ನಡ ಹಾಗೂ ದೇವನಾಗರಿ ಲಿಪಿ ಬಳಸುತ್ತಿದ್ದಾರೆ. ಇಲ್ಲಿನ ಸಾಹಿತ್ಯ ಇತಿಹಾಸ ಕೆದಕಿದರೆ ಹತ್ತು ಹಲವು ಲೇಖಕರ ಸಂಘಟನೆಗಳು ಜನ್ಮತಾಳಿದ್ದನ್ನು ನಾವು ಗಮನಿಸಬಹುದು. 16.02.1998ರಂದು ರಿಚರ್ಡ್ಸ್ ಪಿರೇರ ಅವರ ಮುತು ವರ್ಜಿಯಿಂದ ಕೊಂಕಣಿ ಲೇಖಕರ ಸಂಘವು ವಿದ್ಯಾವಿಹಾರದಲ್ಲಿನ ಫಾತಿಮಾ ಇಗರ್ಜಿಯ ಕಿರು ಸಭಾಗೃಹದಲ್ಲಿ ರೂಪುಗೊಂಡಿತ್ತು. ಆದರೆ ಈ ಮಹತ್ವದ ಲೇಖಕರ ಸಂಘಟನೆಯಿಂದಲೂ ಹೊಸಪೀಳಿಗೆಯ ಲೇಖಕರನ್ನು ಬೆಳಕಿಗೆ ತರಲು ಅಸಾಧ್ಯವಾಯಿತು. ಈ ನಿಟ್ಟಿನಲ್ಲಿ ಇಲ್ಲಿರುವ ಕೊಂಕಣಿ ಸಾಹಿತಿಗಳು ಹೊಸ ಪೀಳಿಗೆ ಸಾಹಿತ್ಯ ಕ್ಷೇತ್ರಕ್ಕೆ ಕಾಲಿರಿಸಬೇಕಾದ ಜರೂರಿಯನ್ನು ಮನಗಾಣಬೇಕು. ಆ ನಿಟ್ಟಿನಲ್ಲಿ ಇನ್ನಾದರೂ ಕಾರ್ಯಪ್ರವೃತ್ತರಾಗಬೇಕು. ‘ರಾಕ್ಣೊ’, ‘ದಿವೋ’ದಂತಹ ಪತ್ರಿಕೆಗಳು ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)