ಸಸ್ಯದ ಅಡುಗೆ ಮನೆಗೆ ಡಿಜಿಟಲ್ ಸ್ಪರ್ಶ
ರಿಮೋಟ್ ಕಂಟ್ರೋಲ್‌ನಿಂದ ಬೆಳವಣಿಗೆ ನಿಯಂತ್ರಣ
ಸದಾ ಬದಲಾಗುತ್ತಿರುವ ಬದುಕಿನಲ್ಲಿ ಸ್ಥಿರ ಯಶಸ್ಸಿಗೆ ಡಿಜಿಟಲ್ ರೂಪಾಂತರ ನಿರ್ಣಾಯಕ ಅಂಶವಾಗಿದೆ. ಸಾಧನಗಳು, ವ್ಯವಸ್ಥೆಗಳು ಹಾಗೂ ಮಾನವರ ನಡುವಿನ ಸತತ ಸುರಕ್ಷತಾ ಅಂತರ್‌ಸಂಪರ್ಕ ಅಥವಾ ಸಂವಹನವು ಸ್ಥಿತಿಸ್ಥಾಪಕತ್ವಕ್ಕಾಗಿ ಡಿಜಿಟಲ್ ಮೂಲ ಸೌಕರ್ಯಗಳನ್ನು ಒದಗಿಸಿದೆ. ಡಿಜಿಟಲ್ ಕಾರ್ಯಚರಣೆಯು ನಿರಂತರವಾಗಿ ಪರಿಷ್ಕೃತವಾಗುತ್ತಾ ಸಾಗಿದೆ. ಹಾಗಾಗಿ ಅದಕ್ಕೊಂದು ಸಾಂಸ್ಥಿಕ ರೂಪ ದೊರೆತು ಉದ್ಯಮದ ಸ್ವರೂಪ ಪಡೆದಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಎಲ್ಲಾ ಕ್ಷೇತ್ರಗಳಲ್ಲೂ ಆವರಿಸಿಕೊಂಡಿದೆ. ತಂತ್ರಜ್ಞಾನದ ಪರಿಕರಗಳಿಲ್ಲದ ಕ್ಷೇತ್ರ ಯಾವುದೂ ಇಲ್ಲ ಎನ್ನುವಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕೃಷಿ ಹಾಗೂ ಸಸ್ಯಗಳ ಬೆಳವಣಿಗೆಯಲ್ಲೂ ತ್ವರಿತ ಅಭಿವೃದ್ಧಿ ಸಾಧಿಸಲು ತಂತ್ರಜ್ಞಾನ ಬಳಸಲಾಗುತ್ತದೆ. ಸ್ಮಾರ್ಟ್ ತಂತ್ರಜ್ಞಾನದ ಬಳಕೆಯಿಂದ ಮಾನವರ ಕೆಲಸಗಳು ಸುಗಮವಾಗುವುದಲ್ಲದೆ ತ್ವರಿತ ಹಾಗೂ ನಿರ್ದಿಷ್ಟತೆಗೊಳಪಟ್ಟಿವೆ. ಕೆಲಸಗಳನ್ನು ತ್ವರಿತಗೊಳಿಸಲು ರಿಮೋಟ್ ಕಂಟ್ರೋಲ್ ಒಂದು ಉತ್ತಮ ತಂತ್ರಜ್ಞಾನಾಧಾರಿತ ಸಾಧನ. ನಮ್ಮ ಇಂದಿನ ಬಹುತೇಕ ಕೆಲಸಗಳನ್ನು ರಿಮೋಟ್ ಕಂಟ್ರೋಲ್ ಸುಲಭವಾಗಿಸಿದೆ.
ಟಿ.ವಿ. ಚಾನೆಲ್ ಬದಲಿಸುವುದರಿಂದ ಹಿಡಿದು, ಅಡುಗೆ ಮಾಡಲು, ನೀರು ಕಾಯಿಸಲು, ಹಾಲು ಕಾಯಿಸಲು, ವಿದ್ಯುತ್ ದೀಪ ನಿಯಂತ್ರಿಸಲು, ವಾಹನ ಚಲಾಯಿಸಲು, ಮೋಟಾರು ಪಂಪ್ ನಡೆಸಲು ಹೀಗೆ ಎಲ್ಲದಕ್ಕೂ ರಿಮೋಟ್ ಕಂಟ್ರೋಲ್ ವ್ಯವಸ್ಥೆಯನ್ನು ಬಳಸುತ್ತೇವೆ. ಅಲ್ಲದೆ ಕೆಲ ರೋಗಗಳಿಗೆ ರಿಮೋಟ್ ಕಂಟ್ರೋಲ್ ಮೂಲಕ ಚಿಕಿತ್ಸೆಯನ್ನೂ ನೀಡಲಾಗುತ್ತದೆ. ಸೇವಾ ತಜ್ಞರು ಇಂಟರ್‌ನೆಟ್ ಮೂಲಕ ರಿಮೋಟ್ ಬಳಸಿ ಕುಳಿತಲ್ಲಿಂದಲೇ ಇನ್ನೊಂದು ಕಂಪ್ಯೂಟರ್‌ನ್ನು ಪ್ರವೇಶಿಸಿ ಅದನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ವ್ಯವಸ್ಥೆಯೂ ಜಾರಿಯಲ್ಲಿದೆ. ಹೀಗಿರುವಾಗ ಸಸ್ಯಗಳ ಬೆಳವಣಿಗೆಗೆ ರಿಮೋಟ್ ಕಂಟ್ರೋಲ್ ಬಳಸಿದರೆ ಹೇಗೆ ಎಂಬ ಐಡಿಯಾ ಬಂದಿದ್ದೇ ತಡ ವಿಜ್ಞಾನಿಗಳ ತಂಡವೊಂದು ಅದಕ್ಕೆ ಪೂರಕ ಮಾಹಿತಿ ಹಾಗೂ ಸಲಕರಣೆಗಳ ಸಿದ್ಧತೆಯೊಂದಿಗೆ ಕಾರ್ಯಮಗ್ನವಾಯಿತು. ಅವರ ಕಾರ್ಯದ ಫಲದಿಂದ ಸಸ್ಯಗಳ ಬೆಳವಣಿಗೆಯನ್ನು ನಿಯಂತ್ರಿಸಲು ರಿಮೋಟ್ ಬಂದಾಯಿತು. ಇತ್ತೀಚಿನ ವರ್ಷಗಳಲ್ಲಿ ಬುದ್ಧಿವಂತ ಸಂವೇದಕ ತಂತ್ರಗಳು ಕೃಷಿಯಲ್ಲಿ ಗಮನಾರ್ಹ ಸಾಧನೆಯನ್ನು ಸಾಧಿಸಿವೆ.
ಅಲ್ಪಪ್ರಮಾಣದ ಮಾನವ ಹಸ್ತಕ್ಷೇಪದೊಂದಿಗೆ ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮೂಲಕ ಹಲವಾರು ಚಟುವಟಿಕೆಗಳನ್ನು ಕಾರ್ಯಗಳನ್ನು ಸರಿಯಾಗಿ ಯೋಜಿಸಲು ಕೃಷಿಯಲ್ಲಿ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ನೀರು, ರಸಗೊಬ್ಬರ ಮತ್ತು ಬೀಜದಂತಹ ಕನಿಷ್ಠ ಸಂಪನ್ಮೂಲಗಳನ್ನು ಬಳಸಿಕೊಂಡು ಗರಿಷ್ಠ ಇಳುವರಿ ನೀಡುವ ಅನೇಕ ವಿಧಾನಗಳು ಜಾರಿಯಲ್ಲಿವೆ. ಸೆನ್ಸಾರ್ ಮತ್ತು ಮ್ಯಾಪಿಂಗ್ ಮೂಲಕ ರೈತರು ತಮ್ಮ ಬೆಳೆಗಳನ್ನು ಸೂಕ್ಷ್ಮ ಪ್ರಮಾಣದಲ್ಲಿ ಅರ್ಥಮಾಡಿಕೊಳ್ಳಲು, ಸಂಪನ್ಮೂಲಗಳನ್ನು ಸಂರಕ್ಷಿಸಲು ಮತ್ತು ಪರಿಸರದ ಮೇಲಿನ ಪರಿಣಾಮಗಳನ್ನು ಕಡಿಮೆ ಮಾಡಲು ಬಳಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಜರ್ಮನಿಯ ವುರ್ಜ್‌ಬರ್ಗ್‌ನ ‘ಜೂಲಿಯಸ್ ಮ್ಯಾಕ್ಸಿಮಿಲಿಯನ್ ವಿಶ್ವವಿದ್ಯಾನಿಲಯ’ದ ಸಂಶೋಧಕರ ತಂಡವೊಂದು ಸಸ್ಯಗಳ ಬೆಳವಣಿಗೆಯಲ್ಲಿ ಒಂದು ಹೆಜ್ಜೆ ಮುಂದಿರಿಸಿದೆ. ಅದೇನೆಂದರೆ ಸಸ್ಯದ ಅಡುಗೆ ಮನೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ. ತಮ್ಮ ಪ್ರಯೋಗಕ್ಕಾಗಿ ಅವರು ಸಸ್ಯದ ಬೆಳವಣಿಗೆಗೆ ಕಾರಣವಾಗಿರುವ ದ್ಯುತಿಸಂಶ್ಲೇಷಣೆಯನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಕೈಹಾಕಿರುವುದು ಶ್ಲಾಘನೀಯ.
ಸಸ್ಯದ ಪತ್ರರಂಧ್ರವನ್ನು ದೂರದಿಂದಲೇ ನಿಯಂತ್ರಿಸುವ ವಿಧಾನವನ್ನು ಜೆ.ಎಂ.ವಿ. ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಎಲೆಗಳು ಹೀರಿಕೊಳ್ಳುವ ಇಂಗಾಲದ ಡೈ ಆಕ್ಸೈಡ್ ಹಾಗೂ ನೀರಿನ ಪ್ರಮಾಣವನ್ನು ನಿಯಂತ್ರಿಸಲು ರಿಮೋಟ್ ಕಂಟ್ರೋಲ್ ಬಳಸಲಾಗುತ್ತಿದೆ. ಪ್ರತಿಯೊಂದು ಪತ್ರರಂಧ್ರವನ್ನು ಒಂದು ಜೋಡಿ ಕಾವಲು ಕೋಶಗಳಿಂದ ಬೆಸೆಯಲಾಗುತ್ತದೆ. ಕಾವಲು ಕೋಶಗಳಲ್ಲಿ ಆಂತರಿಕ ಒತ್ತಡ ಕಡಿಮೆಯಾದಾಗ ಅವು ರಂಧ್ರದ ಗಾತ್ರವನ್ನು ತಗ್ಗಿಸುತ್ತವೆ ಮತ್ತು ಮುಚ್ಚುತ್ತವೆ. ಒತ್ತಡ ಹೆಚ್ಚಾದಾಗ ಕಾವಲು ಕೋಶಗಳು ದೂರ ಸರಿಯುತ್ತವೆ ಮತ್ತು ರಂಧ್ರವನ್ನು ಅಗಲಗೊಳಿಸುತ್ತವೆ. ಕಾವಲು ಕೋಶಗಳೊಳಗಿನ ಸಿಗ್ನಲಿಂಗ್ ಮಾರ್ಗಗಳು ಸಂಕೀರ್ಣವಾಗಿದ್ದು, ಹಸ್ತಕ್ಷೇಪ ಮಾಡುವುದು ಕಷ್ಟಕರ. ಆದರೆ ಲಘುವಾದ ಬೆಳಕಿನ ಕಿರಣಗಳನ್ನು ಹಾಯಿಸಿ ಪತ್ರರಂಧ್ರವನ್ನು ಕುಶಲತೆಯಿಂದ ನಿರ್ವಹಿಸಲು ಒಂದು ಹೊಸ ಮಾರ್ಗವನ್ನು ಅಭಿವೃದ್ಧಿಪಡಿಸಿದ್ದಾರೆ. ಜೆ.ಎಂ.ವಿ.ನ ಸಂಶೋಧಕರು ಹಾಗೂ ಪ್ರಾಧ್ಯಾಪಕರಾದ ರೈನರ್ ಹೆಡ್ರಿಚ್ ಮತ್ತು ಅವರ ತಂಡದವರು ಈ ರಿಮೋಟ್ ಕಂಟ್ರೋಲ್‌ನ್ನು ರೂಪಿಸಿದ್ದಾರೆ. ತಂಬಾಕು ಸಸ್ಯಗಳ ಕಾವಲು ಕೋಶಗಳಲ್ಲಿನ ಬೆಳಕಿನ ಸೂಕ್ಷ್ಮ ಪ್ರೊಟೀನ್ ಸ್ವಿಚ್‌ನ್ನು ಅಳವಡಿಸಿದರು.
ಈ ಹಿಂದೆ ಪ್ರಾಣಿಗಳ ಜೀವಕೋಶಗಳಲ್ಲಿ ಬಳಸಲಾಗುವ ಆಪ್ಟೊಜೆನೆಟಿಕ್ಸ್ ತಂತ್ರಜ್ಞಾನವನ್ನು ಈ ಸ್ವಿಚ್‌ನಲ್ಲಿ ಬಳಸಲಾಗಿದೆ. ಸ್ವಿಚ್‌ಗಾಗಿ ಪಾಚಿ ಜಾತಿಯ ಗಿಲ್ಲಾರ್ಡಿಯಾ ಥೀಟಾದಿಂದ ಬೆಳಕಿನ ಸೂಕ್ಷ್ಮ ಪ್ರೊಟೀನ್‌ನ್ನು ಬಳಸಿದ್ದಾರೆ. ಬೆಳಕಿನ ಕಿರಣಗಳನ್ನು ಹಾಯಿಸಿದಾಗ ಪ್ರೊಟೀನ್ ಮತ್ತು ಅದರ ಅಯಾನ್‌ಕೋಶಗಳ ಮೂಲಕ ಹಾಯ್ದು ಶೇಫರ್ಡ್ ಕ್ಲೋರೈಡನ್ನು ರಕ್ಷಕ ಕೋಶಗಳಿಂದ ಹೊರಹಾಕಿ 15 ನಿಮಿಷಗಳಲ್ಲಿ ಪತ್ರರಂಧ್ರವನ್ನು ಮುಚ್ಚುವಂತೆ ಮಾಡುತ್ತದೆ. ಬೆಳಕಿನ ಕಿರಣವು ಪತ್ರರಂಧ್ರದ ಆಂತರಿಕ ಚಲನೆಗೆ ರಿಮೋಟ್ ಕಂಟ್ರೋಲ್‌ನಂತಿದೆ ಎಂದು ಜೆ.ಎಂ.ವಿ.ನ ಬಯೋಫಿಸಿಕ್ಸ್ ಪ್ರಾಧ್ಯಾಪಕ ರೈನರ್ ಹೆಡ್ರಿಚ್ ಅವರ ಪ್ರಕಾರ ಸಸ್ಯಗಳ ಬೆಳವಣಿಗೆ ಮತ್ತು ನಿಯಂತ್ರಣಗಳ ಮೇಲೆ ನಡೆದ ಇತ್ತೀಚಿನ ಸಂಶೋಧನೆಗಳು ಅಯಾನ್ ಚಾನೆಲ್ ಮತ್ತು ಪತ್ರರಂಧ್ರ ನಿಯಂತ್ರಣದ ನಡುವಿನ ಸಂಪರ್ಕದ ಪುರಾವೆಗಳನ್ನು ನೀಡುತ್ತವೆ. ಒತ್ತಡ ಸಮಯದಲ್ಲಿ ಸಸ್ಯ ಅಯಾನ್ ಚಾನೆಲ್‌ಗಳನ್ನು ಸಕ್ರಿಯಗೊಳಿಸಲಾಗುತ್ತದೆ. ಈ ಪಕ್ರಿಯೆಯು ಕ್ಯಾಲ್ಸಿಯಂ ಮೇಲೆ ಅವಲಂಬಿತವಾಗಿರುತ್ತದೆ ಎಂದು ರೈನರ್ ಹೆಡ್ರಿಚ್ ಹೇಳುತ್ತಾರೆ.
ಪ್ರಾಣಿ ಜೀವಕೋಶಗಳ ಫಾಲೋ ಅಪ್ ಆಪ್ರೋ ಯೋಜನೆಯಲ್ಲಿ ಕ್ಯಾಲ್ಸಿಯಂ ವಾಹಕ ಚಾನೆಲ್ ಹೋಡೋಪ್ಸಿನ್‌ಗಳನ್ನು ನಿರ್ದಿಷ್ಟವಾಗಿ ಕ್ಯಾಲ್ಸಿಯಂನ್ನು ಬೆಳಕಿನ ಒಡ್ಡುವ ಮೂಲ ಕಾವಲು ಕೋಶಗಳಿಗೆ ಹರಿಯುವಂತೆ ಮಾಡಲು ಮತ್ತು ಅಯಾನ್ ಚಾನೆಲ್ ಸಕ್ರಿಯಗೊಳಿಸುವಂತೆ ಇಲ್ಲಿಯೂ ಅದೇ ವಿಧಾನವನ್ನು ಬಳಸಿಕೊಳ್ಳಲಾಗಿದೆ. ಈ ರಿಮೋಟ್ ಕಂಟ್ರೋಲ್‌ನಿಂದ ಸಸ್ಯಗಳು ತಮ್ಮ ನೀರಿನ ಬಳಕೆಯನ್ನು ಹೇಗೆ ನಿಯಂತ್ರಿಸುತ್ತವೆ ಮತ್ತು ಇಂಗಾಲದ ಡೈ ಆಕ್ಸೈಡನ್ನು ಹೇಗೆ ಸ್ಥಿರೀಕರಣಗೊಳಿಸಿ ಪತ್ರರಂಧ್ರದ ಆಂತರಿಕ ಚಲನೆಗೆ ಹೇಗೆ ಸೇರಿಸಿಕೊಳ್ಳುತ್ತವೆ ಎಂಬುದರ ಕುರಿತು ಒಳನೋಟಗಳನ್ನು ಪಡೆಯಬಹುದು. ಕಾಲಕಾಲಕ್ಕೆ ನಡೆಯುವ ಇಂತಹ ಸಂಶೋಧನೆಗಳಿಂದ ಸಸ್ಯಗಳ ಬೆಳವಣಿಗೆಯಲ್ಲಿ ಹೊಸ ಹೊಸ ಹೆಜ್ಜೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಭವಿಷ್ಯದಲ್ಲಿ ಸಸ್ಯಶಾಸ್ತ್ರಜ್ಞರು ಮತ್ತು ಬೆಳೆ ವಿಜ್ಞಾನಿಗಳು ಕಾವಲು ಕೋಶಗಳಲ್ಲಿ ಹೆಚ್ಚು ಅಯಾನ್ ಚಾನೆಲ್‌ಗಳೊಂದಿಗೆ ಸಸ್ಯ ಪ್ರಭೇದಗಳನ್ನು ಇಂಜಿನಿಯರಿಂಗ್ ಮಾಡಲು ಸಾಧ್ಯವಾಗುತ್ತದೆ. ಇದು ಸೂರ್ಯನ ತಾಪ ಮತ್ತು ದೀರ್ಘಕಾಲದ ಬರದಿಂದ ಸಸ್ಯಗಳನ್ನು ರಕ್ಷಿಸಿಕೊಳ್ಳಲು ಹೆಚ್ಚು ಪರಿಣಾಮಕಾರಿಯಾದ ವ್ಯವಸ್ಥೆಯಾಗಿದೆ.
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕೃಷಿಯಲ್ಲಿ ತಾಂತ್ರಿಕತೆಯ ಬಳಕೆ ಇಂದು ಅನಿವಾರ್ಯವಾಗಿದೆ. ಹೊಸ ಹೊಸ ತಂತ್ರಜ್ಞಾನದ ವ್ಯವಸ್ಥೆಗಳನ್ನು ಸಮಯದ ಅನುಸಂಧಾನದೊಂದಿಗೆ ಅನುಷ್ಠಾನಗೊಳಿಸುವ ಮೂಲಕ ಕೃಷಿಯ ಪ್ರಗತಿಯನ್ನು ಹೆಚ್ಚಿಸುವುದು ಪ್ರಮುಖ ಆದ್ಯತೆಯ ವಿಷಯವಾಗಿದೆ. ಕೃಷಿಯು ಅನೇಕ ದೇಶಗಳಿಗೆ ಆರ್ಥಿಕತೆಯ ಬೆನ್ನೆಲುಬಾಗಿದೆ ಮತ್ತು ಅಭಿವೃದ್ಧಿಯ ಹೆಜ್ಜೆ ಹಾಕುತ್ತಿರುವ ದೇಶಗಳಿಗೆ ಆರ್ಥಿಕತೆಯ ಮಹತ್ವದ ಕೊಡುಗೆಯಾಗಿದೆ. ಕೃಷಿಯು ದೇಶದ ಆರ್ಥಿಕ ಸಮೃದ್ಧಿಯ ಪ್ರತೀಕವಾಗಿದೆ. ಕಾಲಕಾಲಕ್ಕೆ ಕೃಷಿಯು ಹೊಸ ಹೊಸ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅವುಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆ ಮಾಡುವುದು ಪ್ರಮುಖವಾದದ್ದು. ಈ ಹಿನ್ನೆಲೆಯಲ್ಲಿ ಸಸ್ಯದ ಆಹಾರೋತ್ಪನ್ನ ಭಾಗವಾದ ಎಲೆಗಳ ಅಡುಗೆ ಮನೆಯ ಅಭಿವೃದ್ಧಿಗೆ ಕೈಹಾಕಿದ ಜೆ.ಎಂ.ವಿ.ನ ರೈನರ್ ಹೆಡ್ರಿಚ್ ಅವರ ಕಾರ್ಯವನ್ನು ಮೆಚ್ಚಲೇಬೇಕು. ಇಂತಹ ನಿಖರವಾದ ತಂತ್ರಜ್ಞಾನ ಬಳಕೆಯಿಂದ ಕೃಷಿಗೆ ಡಿಜಿಟಲ್ ಸ್ಪರ್ಶ ನೀಡಲಾಗುತ್ತಿದೆ. ವಿಶ್ವದಾದ್ಯಂತ ಹೆಚ್ಚುತ್ತಿರುವ ಕೃಷಿ ಬೇಡಿಕೆಯನ್ನು ಪೂರೈಸಲು ಇಂತಹ ವಿಧಾನಗಳ ಅಗತ್ಯವಿದೆ. ಮಾಹಿತಿ ಸಂಗ್ರಹಿಸುವ ಮತ್ತು ಪರಿಸ್ಥಿತಿಗನುಗುಣವಾಗಿ ಮಾಹಿತಿಯನ್ನು ವಿಶ್ಲೇಷಿಸಿ, ಪೂರಕ ಸಂಪನ್ಮೂಲವನ್ನಾಗಿ ಬಳಸುವ ವೈಜ್ಞಾನಿಕ ವಿಧಾನಗಳು ಕೃಷಿಯಲ್ಲಿ ಹೆಚ್ಚಿದಂತೆಲ್ಲಾ ಕೃಷಿ ಮತ್ತು ಕೃಷಿಕರ ಅಭಿವೃದ್ಧಿ ಸಾಧ್ಯವಾಗುತ್ತದೆ. ಇಂತಹ ಇನ್ನಷ್ಟು ವೈವಿಧ್ಯಮಯ ಸಂಶೋಧನೆಗಳು ಕೃಷಿಯಲ್ಲಿ ಬರಲಿ, ಆ ಮೂಲಕ ಸುಸ್ಥಿರತೆ ಸಾಧ್ಯವಾಗಲಿ ಮತ್ತು ಜಾಗತಿಕ ತಾಪಮಾನ ತಗ್ಗಿಸುವ ಹೊಸ ಪ್ರಯೋಗಗಳು ಮೂಡಲಿ ಎಂಬುದೇ ನಮ್ಮೆಲ್ಲರ ಆಶಯ.