2060ರ ವೇಳೆಗೆ ಹಸಿರು ಮನೆ ಅನಿಲ ಹೊರಸೂಸುವಿಕೆ ಶೂನ್ಯ ಮಟ್ಟಕ್ಕೆ: ಸೌದಿ ಆರೇಬಿಯ ಘೋಷಣೆ
ದುಬೈ.ಅ.23: ವಿಶ್ವದ ಅತಿ ದೊಡ್ಡ ತೈಲ ಉತ್ಪಾದಕ ದೇಶಗಳಲ್ಲೊಂದಾದ ಸದಿ ಆರೇಬಿಯವು ಜಾಗತಿಕ ತಾಪಮಾನಕ್ಕೆ ಕಾರಣವಾಗುವ ‘ಹಸಿರುಮನೆ ಅನಿಲ’ಗಳ (ಕಾರ್ಬನ್ ಡೈಆಕ್ಸೈಡ್,ಮಿಥೇನ್,ನೈಟ್ರಸ್ ಆಕ್ಸೈಡ್ ಇತ್ಯಾದಿ ಅನಿಲಗಳು) ಹೊರಸೂಸುವಿಕೆಯ ಪ್ರಮಾಣವನ್ನು 2060 ವೇಳೆಗೆ ಶೂನ್ಯಮಟ್ಟಕ್ಕೆ ಇಳಿಸುವ ಗುರಿಯನ್ನು ಹೊಂದಿದೆ. ಇದರೊಂದಿಗೆ ಮಾನವ ನಿರ್ಮಿತ ಹವಾಮಾನ ಬದಲಾವಣೆಯನ್ನು ತಡೆಗಟ್ಟುವ ಜಾಗತಿಕ ಮಟ್ಟದಲ್ಲಿ ಪ್ರಯತ್ನಕ್ಕೆ ಕೈಜೋಡಿಸಿರುವ 100 ರಾಷ್ಟ್ರಗಳ ಸಾಲಿಗೆ ಅದು ಸೇರ್ಪಡೆಗೊಂಡಿದೆ.
ಸೌದಿ ಆರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರು ಶನಿವಾರ ದೇಶದ ಪ್ರಪ್ರಥಮ ಪ್ರಪ್ರಥಮ ಹಸಿರು ಉತ್ತೇಜನ ವೇದಿಕೆಯ ಉದ್ಘಾಟನೆಯ ಸಂದರ್ಭದಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ. ಸ್ಕಾಟ್ಲ್ಯಾಂಡ್ ನ ಗ್ಲಾಸ್ಗೊ ನಡೆಯಲಿರುವ ಸಿಓಪಿ 26 ಜಾಗತಿಕ ಹವಾಮಾನ ಸಮಾವೇಶಕ್ಕೆ ಕೆಲವೇ ದಿನಗಳಿರುವಂತೆಯೇ ಸೌದಿ ಆರೇಬಿಯ ಈ ಘೋಷಣೆ ಮಾಡಿರುವುದು ಹೆಚ್ಚಿನ ಗಮನಸೆಳೆದಿದೆ.ಜಾಗತಿಕ ತಾಪಮಾನ ಹೆಚ್ಚು ಹಾಗೂ ಅದರಿಂದ ಉದ್ಭವಿಸುವ ಸವಾಲುಗಳನ್ನು ಎದುರಿಸುವ ಗುರಿಯೊಂದಿಗೆ ನಡೆಯುವ ಈ ಸಮಾವೇಶದಲ್ಲಿ ಜಗತ್ತಿನಾದ್ಯಂತದ ವಿವಿ ದೇಶಗಳ ವರಿಷ್ಠರು ಪಾಲ್ಗೊಳ್ಳಲಿದ್ದಾರೆ.
ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆಗೊಳಿಸಲು ಸೌದಿ ಆರೇಬಿಯವು ದೀರ್ಘಾವಧಿಯ ಗುರಿಯನ್ನು ಇರಿಸಿರುವ ಹೊರತಾಗಿಯೂ ಅದು ಸದ್ಯಕ್ಕೆ ಕಚ್ಚಾ ತೈಲ ಹಾಗೂ ನೈಸರ್ಗಿಕ ಅನಿಲವನ್ನು ವ್ಯಾಪಕವಾಗಿ ಉತ್ಪನನ ನಡೆಸುತ್ತಿದೆ ಹಾಗೂ ಹೊರರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ.