ಓ ಮೆಣಸೇ...
ದಲಿತರು ಹಾಗೂ ಅಲ್ಪಸಂಖ್ಯಾತರು ಕಾಂಗ್ರೆಸ್‌ನ ಫೌಂಡೇಶನ್- ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ
ಆ ಫೌಂಡೇಶನ್ ಮೇಲೆ ತಾನೇ ಆರೆಸ್ಸೆಸ್ ನೋರು ರಾಮ ಮಂದಿರ ಕಟ್ಟುತ್ತಾ ಇರುವುದು.
ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿರುವ ಮುಸ್ಲಿಂ ನಾಯಕರನ್ನು ರಾಜಕೀಯವಾಗಿ ಮುಗಿಸುತ್ತಿದ್ದಾರೆ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ನೀವು ಜೆಡಿಎಸ್‌ನಲ್ಲಿರೋ ಮುಸ್ಲಿಂ ನಾಯಕರ ಬ್ಯಾಂಕ್ ಬ್ಯಾಲೆನ್ಸ್ ಮುಗಿಸಿದ ಹಾಗೆ.
ಬಸವರಾಜ ಬೊಮ್ಮಾಯಿಗೆ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಬೇಕಾದರೆ ಆರೆಸ್ಸೆಸ್‌ನ್ನು ಹೊಗಳುವುದು ಅನಿವಾರ್ಯ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಕಾಂಗ್ರೆಸ್ ನಲ್ಲಿದ್ದೋರು ಗುಟ್ಟಾಗಿ ಆರೆಸ್ಸೆಸ್ ಚಾಕರಿ ಮಾಡುತ್ತಿರುವುದು ಯಾಕೆ ?
ಆರೆಸ್ಸೆಸ್ ಮತ್ತು ಬಿಜೆಪಿ ಮುಸ್ಲಿಂ ವಿರೋಧಿಯಲ್ಲ - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಮನುಷ್ಯ ವಿರೋಧಿ ಎನ್ನುವ ಆರೋಪದ ಬಗ್ಗೆ ಏನು ಹೇಳುತ್ತೀರಿ?
ಗ್ರಾಮ ವಾಸ್ತವ್ಯ ಎಂದರೆ ಬಂದ ಸಿದ್ದ, ಹೋದ ಸಿದ್ದ ಎಂಬಂತಾಗಬಾರದು - ಆರ್.ಅಶೋಕ್, ಸಚಿವ
ಅಂದರೆ, ವಾಸ್ತವ್ಯ ಹೂಡಿದ ಮನೆಯನ್ನು ಶಾಶ್ವತವಾಗಿ ತಮ್ಮ ಹೆಸರಿಗೆ ಬರೆಸಿ ಕೊಳ್ಳಬೇಕು ಎಂದೇ?
ಕುಣಿಯಲು ಬಾರದವರು ನೆಲ ಡೊಂಕು ಅಂದರಂತೆ ಹಾಗಿದೆ ಮಾಜಿ ಸಿಎಂ ಸಿದ್ದರಾಮಯ್ಯರ ಮಾತು - ಶ್ರೀರಾಮುಲು, ಸಚಿವ
ಆರೆಸ್ಸೆಸ್ ಹೇಳಿದಂತೆ ಕುಣಿದು ಕುಪ್ಪಳಿಸುತ್ತಿರುವವರ ಮಾತು.
ಭಾರತದ ಆರ್ಥಿಕತೆಯು ಬಲವಾಗಿ ಪುಟಿದೇಳುತ್ತಿದೆ - ವಿ.ಮುರಳೀಧರನ್, ಕೇಂದ್ರ ಸಚಿವ
ಅಂಬಾನಿ, ಅದಾನಿ ಮನೆಯೊಳಗೇ ಇರಬೇಕು.
ನನ್ನ ಸೋಲಿಗೆ ಸಂಘ ಪರಿವಾರದವರ ಸಮಾಜ, ಧರ್ಮ ಒಡೆಯುವ ಕುತಂತ್ರ ಕೆಲಸ ಮಾಡಿದೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ
ಅವರು ಕುತಂತ್ರ ಮಾಡುತ್ತಿರುವಾಗ ನೀವು ಏನು ಮಾಡುತ್ತಿದ್ದಿರಿ?
ನನ್ನ ಆಸ್ತಿ ಹಿಂದೆ ಎಷ್ಟಿತ್ತೊ ಈಗಲೂ ಅಷ್ಟೇ ಇದೆ - ಸಿ.ಟಿ.ರವಿ, ಶಾಸಕ
ಆದುದರಿಂದ ದೇಶದ ಆರ್ಥಿಕತೆ ಕುಸಿದಿಲ್ಲ ಎಂದು ಭಾವಿಸೋಣವೇ?
ಇಂದು ರಾಜಕೀಯ ಎಂದರೆ ಗೆದ್ದು ಬಂದು ದುಡ್ಡು ಮಾಡುವುದು ಎಂಬಂತಾಗಿದೆ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ನಿಮ್ಮ ಕಾಲದಲ್ಲಿ ಸೋತರೂ ದುಡ್ಡು ಮಾಡಲು ಅವಕಾಶ ಇತ್ತೇ?
ಭಾರತ ಮತ್ತು ಇಸ್ರೇಲ್ ಒಂದೇ ತರದ ಭಯೋತ್ಪಾದನೆಯನ್ನು ಎದುರಿಸುತ್ತಿವೆ? -ಎಸ್.ಜೈ.ಶಂಕರ್, ಕೇಂದ್ರ ಸಚಿವ
ಹೌದು, ಪ್ರಭುತ್ವದಿಂದ ಪ್ರಾಯೋಜಿಸಲ್ಪಟ್ಟ ಭಯೋತ್ಪಾದನೆ.
ನನ್ನ ಜೀವನ ತೆರೆದ ಪುಸ್ತಕ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
ಜನರ ಪಾಲಿಗೆ ತೊರೆದ ಪುಸ್ತಕ.
ನಳಿನ್‌ಕುಮಾರ್ ಕಟೀಲು ಶತಮಾನದ ಶ್ರೇಷ್ಠ ಅವಿವೇಕಿ - ದಿನೇಶ್ ಗುಂಡೂರಾವ್, ಎಐಸಿಸಿ ಕಾರ್ಯದರ್ಶಿ
ಅವಿವೇಕಿ ಆದರೆ ಏನಾಯಿತು, ಶ್ರೇಷ್ಠ ಎಂದು ಗುರುತಿಸಿದರಲ್ಲ ಅಷ್ಟು ಸಾಕು ಎಂದರಂತೆ ಕಟೀಲು.
ಆರೆಸ್ಸೆಸ್‌ನ ಗೋಮುಖ ವ್ಯಾಘ್ರ ಮನಸ್ಥಿತಿ ಬಹಿರಂಗಪಡಿಸುವ ದೃಢತೆ, ಆತ್ಮವಿಶ್ವಾಸ ಕಾಂಗ್ರೆಸ್‌ಗೆ ಇರುತ್ತಿದ್ದರೆ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ - ರಮೇಶ್‌ಕುಮಾರ್, ಶಾಸಕ
ಆಗ ಕಾಂಗ್ರೆಸ್‌ನೊಳಗಿರುವ ಆರೆಸ್ಸೆಸ್‌ನ ಮುಖಗಳಿಗೆ ಸಮಸ್ಯೆ ಆಗುತ್ತಿತ್ತು.
ಪ್ರಧಾನಿ ಮೋದಿ ಮಹಿಳೆಯರಿಗೆ ಒಂದಲ್ಲ ಒಂದು ಸೌಲಭ್ಯ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ - ಯಡಿಯೂರಪ್ಪ, ಮಾಜಿ ಸಿಎಂ
ಯಾವ ದೇಶದ ಮಹಿಳೆಯರಿಗೆ ಎನ್ನುವ ಮಾಹಿತಿ ನೀಡಿದ್ದರೆ ಒಳ್ಳೆಯದಿತ್ತು.
ಶ್ರೀರಾಮ ಮಂದಿರದ ನಿರ್ಮಾಣದ ಲೆಕ್ಕವನ್ನು ಹಾದಿ ಬೀದಿಯಲ್ಲಿ ಕೇಳಬೇಡಿ - ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಮಠಕ್ಕೆ ಬಂದು ಕೇಳಿದರೆ ಕೊಡುತ್ತೀರಾ?
ಕಾಂಗ್ರೆಸ್ ತಪ್ಪಿನಿಂದಲೇ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ - ಎಚ್.ಡಿ.ರೇವಣ್ಣ, ಶಾಸಕ
ಜೆಡಿಎಸ್ ಜೊತೆ ಕಾಂಗ್ರೆಸ್ ಕೈ ಜೋಡಿಸಿದ್ದು ಸಣ್ಣ ತಪ್ಪು ಅಲ್ಲ ಬಿಡಿ.
ನಮ್ಮದು ಜಾತಿ ರಾಜಕಾರಣವಲ್ಲ, ನೀತಿ ರಾಜಕಾರಣ- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಜಾತಿಯೇ ನೀತಿ ಆಗಿರಬೇಕು.
ಭಾರತದ ಸಂವಿಧಾನಕ್ಕೆ ಬುದ್ಧನೇ ಸ್ಫೂರ್ತಿ - ನರೇಂದ್ರ ಮೋದಿ, ಪ್ರಧಾನಿ
ಪತ್ನಿಯನ್ನು ತೊರೆಯಲು ಬುದ್ಧನೇ ಸ್ಫೂರ್ತಿ ಎನ್ನದಿರಿ.
ನಾಯಕನಾದವನು ಹೇಗಿರಬೇಕು ಎಂಬುದನ್ನು ಸಿಎಂ ಬೊಮ್ಮಾಯಿಯವರನ್ನು ನೋಡಿ ಮಾಜಿ ಸಿಎಂ ಸಿದ್ದರಾಮಯ್ಯ ಕಲಿಯಲಿ - ಶ್ರೀನಿವಾಸಪ್ರಸಾದ್, ಸಂಸದ
ಹೇಗಿರಬಾರದು ಎನ್ನುವುದನ್ನು ನಿಮ್ಮನ್ನು ನೋಡಿ ಕಲಿಯಬಹುದು.
ಜೀವನದಲ್ಲಿ ಒಮ್ಮೆಯಾದರೂ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ನಡ್ಡಾ ಅಂಗಡಿಯ ಮುಂದೆ ನಿಂತು ರೇಶನ್ ಖರೀದಿಸಿದ್ದರೆ ಬಡವರ ಕಷ್ಟ ಅರ್ಥವಾಗುತ್ತಿತ್ತು - ರಣದೀಪ್ ಸುರ್ಜೇವಾಲಾ, ರಾಜ್ಯ ಕಾಂಗ್ರೆಸ್ ಉಸ್ತುವಾರಿ
ಕಾಂಗ್ರೆಸ್ ರೇಷನ್‌ನಿಂದ ಹೊಟ್ಟೆ ಹೊರೆಯುತ್ತಿರುವ ನಿಮಗೂ ಅನ್ವಯ ಆಗುತ್ತದೆ, ಈ ಮಾತು.
ರಾಜಕಾರಣಿಗಳು ಯಾವುದೇ ಸಂದರ್ಭದಲ್ಲಿ ಒಬ್ಬರನ್ನೊಬ್ಬರು ವೈಯಕ್ತಿಕವಾಗಿ ಬೈದಾಡಿಕೊಳ್ಳುವುದು ಸರಿಯಲ್ಲ - ಬಸವರಾಜ ಹೊರಟ್ಟಿ, ವಿ.ಪ.ಸಭಾಪತಿ
ಅದೆಲ್ಲ, ಕಾರ್ಯಕರ್ತರಿಗೆ ಬಿಟ್ಟು ಬಿಡಿ ಎನ್ನುತ್ತಿರಬೇಕು.
ಕಾಂಗ್ರೆಸ್‌ನಲ್ಲೂ ಆರೆಸ್ಸೆಸ್‌ನವರಿದ್ದಾರೆ - ಕೆ.ಸಿ.ನಾರಾಯಣಗೌಡ, ಸಚಿವ
ಆರೆಸ್ಸೆಸ್ ಕಾಂಗ್ರೆಸ್ ಆಸ್ತಿ ಎನ್ನುವ ದಿನ ದೂರ ಇಲ್ಲ.
ಎಚ್.ಡಿ.ಕುಮಾರಸ್ವಾಮಿ ಆರೆಸ್ಸೆಸ್‌ನ್ನು ಕುರುಡರು ಆನೆಯನ್ನು ನೋಡಿದಂತೆ ನೋಡುತ್ತಾರೆ - ನಳಿನ್‌ಕುಮಾರ್ ಕಟೀಲು, ಸಂಸದ
ಆನೆ ಅಲ್ಲ, ತೋಳ ಎನ್ನುವುದು ಕಚ್ಚಿದಾಗ ಗೊತ್ತಾಗುತ್ತೆ ಬಿಡಿ.
ರಾಹುಲ್ ಗಾಂಧಿ ಕೈಯಲ್ಲಿ ದೇಶದ ಆಡಳಿತ ಇರುತ್ತಿದ್ದರೆ ಕೊರೋನದ ಸ್ಥಿತಿ ಊಹಿಸುವುದಕ್ಕೂ ಸಾಧ್ಯವಿರಲಿಲ್ಲ - ರಘುಪತಿ ಭಟ್, ಶಾಸಕ
ಹೌದು, ಕೊರೋನದ ಸ್ಥಿತಿ ಊಹಿಸುವುದಕ್ಕಾಗಿ ಮೋದಿ ಆಡಳಿತ ಬರಬೇಕಾಯಿತು.
ನಾನು ಇಲ್ಲಿಯೇ ಹ್ಯಾಪಿಯಾಗಿದ್ದೇನೆ, ರಾಷ್ಟ್ರ ರಾಜಕೀಯಕ್ಕೆ ಹೋಗಲ್ಲ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ನೀವು ಇಲ್ಲಿದ್ದರೆ ರಾಜ್ಯ ಕಾಂಗ್ರೆಸ್‌ನೊಳಗೆ ಕೆಲವರು ಹ್ಯಾಪಿ ಆಗಿರುವುದು ಕಷ್ಟ.
ದೇಶದ ಜನತೆ ಮಾತ್ರವಲ್ಲ, ಇಡೀ ಜಗತ್ತೇ ಪ್ರಧಾನಿ ಮೋದಿಯ ಆಡಳಿತವನ್ನು ಮೆಚ್ಚಿದೆ - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಅನ್ಯ ಗ್ರಹಗಳಿಂದಲೂ ಮೆಚ್ಚುಗೆಯ ಮಹಾ ಪೂರವೇ ಹರಿದು ಬಂದಿದೆಯಂತೆ.