ತುಂಬೆ ಮೆಡಿಸಿಟಿಗೆ ಸಚಿವ ಅಶ್ವತ್ಥ ನಾರಾಯಣ ಭೇಟಿ
ದುಬೈ : ತುಂಬೆ ಸಮೂಹ ಹಾಗೂ ಗಲ್ಫ್ ವೈದ್ಯಕೀಯ ವಿ.ವಿ. ಪರಸ್ಪರ ಸಹಕಾರಕ್ಕಾಗಿ ಕರ್ನಾಟಕದ ಉನ್ನತ ಶಿಕ್ಷಣ, ಮಾಹಿತಿ, ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರೊಂದಿಗೆ ಎರಡು ತಿಳಿವಳಿಕಾ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ತುಂಬೆ ಮೆಡಿಸಿಟಿಗೆ ರವಿವಾರ ಭೇಟಿ ನೀಡಿದರು. ಈ ಸಂದರ್ಭ ತುಂಬೆ ಮೆಡಿಸಿಟಿಯ ಸ್ಥಾಪಕ ಹಾಗೂ ಅಧ್ಯಕ್ಷ ಡಾ. ತುಂಬೆ ಮೊಯ್ದಿನ್ ಅವರು ಸಚಿವರನ್ನು ತನ್ನ ಕಚೇರಿಗೆ ಬರ ಮಾಡಿಕೊಂಡರು.
ಸಚಿವರ ಈ ಭೇಟಿಯಿಂದ ತುಂಬೆ ಸಮೂಹಕ್ಕೆ ಹಲವು ಬಾಗಿಲುಗಳನ್ನು ತೆರೆದಂತಾಗಿವೆ ಹಾಗೂ ಕರ್ನಾಟಕದ ಉನ್ನತ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಸಂಶೋಧನೆಯೊಂದಿಗೆ ಸಹಕಾರವನ್ನು ಸದೃಢಗೊಳಿಸಲು ತಿಳಿವಳಿಕಾ ಒಪ್ಪಂದಕ್ಕೆ ಸಹಿ ಹಾಕಲು ಕಾರಣವಾಗಿದೆ ಎಂದು ತಿಳಿಸಿದರು.
ಆಡಳಿತ ಮಂಡಳಿ ಒದಗಿಸಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಸಚಿವರು ಪ್ರಭಾವಿತರಾದರು ಹಾಗೂ ಅತಿ ಕಡಿಮೆ ಅವಧಿಯಲ್ಲಿ ಇಂತಹ ಗಮನಾರ್ಹ ಸಾಧನೆ ಮಾಡಿದ ಡಾ. ತುಂಬೆ ಮೊಯ್ದಿನ್ ಅವರನ್ನು ಪ್ರಶಂಸಿಸಿದರು.
‘‘ಕರ್ನಾಟಕದಲ್ಲಿ ಇದೇ ರೀತಿ ಪರಿಣಾಮ ಬೀರಬಲ್ಲ ಇಂತಹ ಸಂಸ್ಥೆ ಹಾಗೂ ಯೋಜನೆಗಳನ್ನು ಆರಂಭಿಸಲು ನಾವು ಡಾ. ತುಂಬೆ ಮೊಯ್ದಿನ್ ಅವರನ್ನು ಕರ್ನಾಟಕಕ್ಕೆ ಆಹ್ವಾನಿಸುತ್ತೇವೆ. ಅಗತ್ಯ ಇರುವ ಎಲ್ಲ ಬೆಂಬಲ ನೀಡುವುದಾಗಿ ಭರವಸೆ ನೀಡುತ್ತೇವೆ’’ ಎಂದು ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಹೇಳಿದರು.
ವಿಶ್ವವಿದ್ಯಾನಿಲಯ, ಸಂಘಟನೆ ಹಾಗೂ ಆಸ್ಪತ್ರೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಅನಂತರ ಸಚಿವರು ತುಂಬೆ ವಿ.ವಿ. ಆಸ್ಪತ್ರೆಗೆ ಭೇಟಿ ನೀಡಿದರು.