ಪಾಕಿಸ್ತಾನಕ್ಕೆ 3 ಬಿಲಿಯನ್ ಡಾಲರ್ ನೆರವು ನೀಡಲಿರುವ ಸೌದಿ ಅರೇಬಿಯಾ
ರಿಯಾದ್, ಅ.27: ತೀವ್ರ ಆರ್ಥಿಕ ಸಮಸ್ಯೆಯಲ್ಲಿರುವ ಪಾಕಿಸ್ತಾನಕ್ಕೆ 3 ಬಿಲಿಯನ್ ಡಾಲರ್ ನೆರವು(ಸೆಂಟ್ರಲ್ ಬ್ಯಾಂಕ್‌ನಲ್ಲಿ ಠೇವಣಿಯ ರೂಪದಲ್ಲಿ) ನೀಡಲು, ಜೊತೆಗೆ ಮುಂದೂಡಿದ ಸಂದಾಯದ(ಸಾಲ) ರೂಪದಲ್ಲಿ 1.2 ಬಿಲಿಯನ್ ಡಾಲರ್ ನೆರವು, 1.5 ಬಿಲಿಯನ್ ಡಾಲರ್ ಮೌಲ್ಯದ ತೈಲ ಪೂರೈಸಲು ಸೌದಿ ಅರೆಬಿಯಾ ಒಪ್ಪಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ವಾರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದ ಸಂದರ್ಭ ಈ ಕುರಿತ ಒಪ್ಪಂದಕ್ಕೆ ಬರಲಾಗಿದ್ದು ಈ ಬಗ್ಗೆ ಪ್ರಧಾನಿಯವರ ಸಲಹೆಗಾರ (ವಿತ್ತ ಮತ್ತು ಕಂದಾಯ) ಶೌಕತ್ ತಾರಿನ್ ಮತ್ತು ಇಂಧನ ಸಚಿವ ಹಮ್ಮದ್ ಅಝರ್ ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ‘ಡಾನ್’ ವರದಿ ಮಾಡಿದೆ.
ಪಾಕಿಸ್ತಾನಕ್ಕೆ ಈ ವರ್ಷ ನೆರವು ನೀಡುವುದಾಗಿ ಸೌದಿ ಅರೆಬಿಯಾ ಘೋಷಿಸಿದೆ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಟ್ವೀಟ್ ಮಾಡಿದ್ದಾರೆ. ಪಾಕಿಸ್ತಾನ ಮತ್ತು ಅಂತರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ನಡುವೆ 2019ರ ಜುಲೈಯಲ್ಲಿ 6 ಬಿಲಿಯನ್ ಡಾಲರ್ ಮೊತ್ತದ ಸಾಲದ ಬಗ್ಗೆ ಒಪ್ಪಂದ ಏರ್ಪಟ್ಟಿದೆ.
ಈ ಸಾಲ ಪಡೆಯಬೇಕಿದ್ದರೆ ಪಾಕಿಸ್ತಾನದ ಸೆಂಟ್ರಲ್ ಬ್ಯಾಂಕ್‌ನಲ್ಲಿ ತಕ್ಷಣ 3 ಬಿಲಿಯನ್ ಡಾಲರ್ ಠೇವಣಿಯ ಅಗತ್ಯವಿದ್ದು ಈ ಮೊತ್ತವನ್ನು ಸೌದಿ ಅರೇಬಿಯಾ ನೀಡಲಿದ್ದು ಇದು ಐಎಂಎಫ್‌ನ ಒಪ್ಪಂದ ಅಂತ್ಯವಾಗುವ 2023ರ ಅಕ್ಟೋಬರ್ 23ರವರೆಗೆ ಪಾಕಿಸ್ತಾನದ ಖಾತೆಯಲ್ಲಿರುತ್ತದೆ. ಜತೆಗೆ, ಮುಂದೂಡಿದ ಸಂದಾಯದ ರೂಪದಲ್ಲಿ ಪ್ರತೀ ವರ್ಷ 1.5 ಬಿಲಿಯನ್ ಡಾಲರ್ ಮೌಲ್ಯದ ಕಚ್ಛಾತೈಲವನ್ನು ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ಪೂರೈಸಲಿದೆ.