ಹವಾಮಾನ ಬದಲಾವಣೆ; ಭಾರತದ ಜಿಡಿಪಿಗೆ ಶೇಕಡ 10ರಷ್ಟು ಹೊಡೆತ: ವರದಿ
ಫೈಲ್ ಫೋಟೊ
ಹೊಸದಿಲ್ಲಿ: ಹವಾಮಾನ ಬದಲಾವಣೆಯ ಪರಿಣಾಮಗಳು ತೀವ್ರಗುವ ಕಾರಣದಿಂದ ಭಾರತದ ಜಿಡಿಪಿಗೆ ಶೇಕಡ 10ರಷ್ಟು ಹೊಡೆತ ಬೀಳಲಿದೆ ಎಂದು ಹೊಸ ಹವಾಮಾನ ಪರಿಣಾಮ ವರದಿ ಅಂದಾಜಿಸಿದೆ. ರೋಮ್ನಲ್ಲಿ ನಡೆಯುವ ಜಿ-20 ಶೃಂಗಕ್ಕೆ ಪೂರ್ವಭಾವಿಯಾಗಿ ಬಿಡುಗಡೆ ಮಾಡಲಾದ ವರದಿಯ ಪ್ರಕಾರ, ಅಮೆರಿಕ, ಸೌದಿ ಅರೇಬಿಯಾ, ಜಪಾನ್ ಮತ್ತು ದಕ್ಷಿಣ ಕೊರಿಯಾದ ಜಿಡಿಪಿಗೆ ಕೂಡಾ ಶೇಕಡ 10ಕ್ಕಿಂತ ಅಧಿಕ ಹೊಡೆತ ಬೀಳಲಿದೆ.
ಜಿಎಂಸಿಸಿಯ 40ಕ್ಕೂ ಹೆಚ್ಚು ಸಂಶೋಧಕರ ತಂಡ ಈ ಅಧ್ಯಯನ ನಡೆಸಿದ್ದು, ಹವಾಮಾನ ಬದಲಾವಣೆ ಈಗಾಗಲೇ ಜಿ-20 ದೇಶಗಳಿಗೆ ಹೊಡೆತ ನೀಡುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಕಳೆದ 20 ವರ್ಷಗಳಲ್ಲಿ ಜಿ-20 ದೇಶಗಳಲ್ಲಿ ಉಷ್ಣ ಸಂಬಂಧಿ ಸಾವುಗಳು ಶೇಕಡ 15ರಷ್ಟು ಹೆಚ್ಚಿವೆ. ಅಂತೆಯೇ ಕಾಳ್ಗಿಚ್ಚು ಕೆನಡಾದ ಗಾತ್ರದ ಒಂದೂವರೆ ಪಟ್ಟು ಗಾತ್ರದಷ್ಟು ಅರಣ್ಯವನ್ನು ಆಹುತಿ ಪಡೆದಿದೆ ಎಂದು ವರದಿ ವಿವರಿಸಿದೆ.
ಜಿ-20 ದೇಶಗಳು 2050ರ ಒಳಗಾಗಿ ಶೇಕಡ 4ರಷ್ಟು ಹಾಗೂ 2100ರ ಒಳಗಾಗಿ ಶೇಕಡ 8ರಷ್ಟು ಜಿಡಿಪಿ ಕಳೆದುಕೊಳ್ಳಲಿವೆ. ಹೊಗೆಯುಗುಳುವಿಕೆ ಅತ್ಯಧಿಕ ಪ್ರಮಾಣದಲ್ಲೇ ಮುಂದುವರದಿದರೆ (4 ಡಿಗ್ರಿ ಸೆಲ್ಷಿಯಸ್) 2036-2065ರ ಅವಧಿಯಲ್ಲಿ ಉಷ್ಣಗಾಳಿ 25 ಪಟ್ಟು ಸುಧೀರ್ಘವಾಗಲಿದೆ. ಜಾಗತಿಕ ತಾಪಮಾನ 2 ಡಿಗ್ರಿಯಷ್ಟು ಹೆಚ್ಚಿದರೆ ಐದು ಪಟ್ಟು ಸುದೀರ್ಘವಾಗಲಿದೆ ಎಂದು ಹೇಳಲಾಗಿದೆ.
ಹೊಗೆಯುಗುಳುವಿಕೆ ಅಧಿಕ ಮಟ್ಟದಲ್ಲೇ ಇದ್ದರೆ ಭಾರತದಲ್ಲಿ 1.8 ಕೋಟಿ ಮಂದಿ 2050ರ ವೇಳೆಗೆ ನದಿಗಳ ಪ್ರವಾಹಕ್ಕೆ ತುತ್ತಾಗಲಿದ್ದಾರೆ. ಪ್ರಸ್ತುತ ದೇಶದಲ್ಲಿ 13 ಲಕ್ಷ ಮಂದಿ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಹೇಳಿದೆ.