varthabharthi


ಮುಂಬೈ ಸ್ವಗತ

ಮುಂಬೈ ಕನ್ನಡಿಗರ ಹೆಮ್ಮೆಯ ಸಭಾಗೃಹಗಳು

ವಾರ್ತಾ ಭಾರತಿ : 29 Oct, 2021
ದಯಾನಂದ ಸಾಲ್ಯಾನ್

ಹೊಟ್ಟೆಪಾಡಿಗೆಂದು ಮುಂಬೈಗೆ ಬಂದ ಹೆಚ್ಚಿನ ನಮ್ಮ ಹಿರಿಯರು ಇಲ್ಲಿ ತಮ್ಮ ಜಾತಿ ಬಾಂಧವರನ್ನು ಒಟ್ಟು ಸೇರಿಸಿ ತಮ್ಮವರಿಗಾಗಿ ಕಟ್ಟಿಕೊಂಡ ಸಂಸ್ಥೆಗಳು ಜಾತಿ-ಮತ-ಧರ್ಮಗಳನ್ನು ಮೀರಿ ಮಾಡಿರುವ ಸಾಧನೆ ಹಿರಿದಾದುದು. ಈ ಸಂಘಟನೆಗಳ ಸಭಾಗೃಹಗಳಿಂದಾಗಿ ಈ ಮಹಾನಗರದಲ್ಲಿ ಕನ್ನಡಿಗರು ಕಾರ್ಯಕ್ರಮಗಳಿಗಾಗಿ ಪರದಾಡುವುದನ್ನು ತಪ್ಪಿಸಿದೆ. ಮಹಾನಗರದುದ್ದಕ್ಕೂ ಹರಡಿರುವ ಸಭಾಗೃಹಗಳು ಒಂದು ರೀತಿಯಲ್ಲಿ ಇಲ್ಲಿನ ಕನ್ನಡಿಗರ ನಡುವಿನ ಸೇತುವೆಯಾಗಿಯೂ ಮಹತ್ವದ ಪಾತ್ರ ವಹಿಸಿವೆ.ಮುಂಬೈಯಲ್ಲಿ ಕನ್ನಡ ಸಂಸ್ಕೃತಿ, ಕನ್ನಡತನ ಇಂದು ಜೀವಂತವಾಗಿದ್ದರೆ ಇಲ್ಲಿನ ಕನ್ನಡ ಮನಪಾ ಶಾಲೆ, ಕನ್ನಡ ರಾತ್ರಿ ಶಾಲೆ, ಹೊಟೇಲ್‌ಗಳಷ್ಟೇ ಮಹತ್ವದ ಪಾತ್ರ ವಹಿಸಿದವುಗಳು ಇಲ್ಲಿಯ ಜಾತೀಯ ಸಂಘ-ಸಂಸ್ಥೆಗಳು ಎಂಬುದನ್ನು ನಾವು ಮರೆಯಬಾರದು. ಅವುಗಳು ಹೊರತರುವ ಮುಖವಾಣಿಗಳಿರಲಿ, ನಡೆಸುತ್ತಿರುವ ಶಾಲೆ,ಕಾಲೇಜುಗಳು ಅಥವಾ ಬ್ಯಾಂಕುಗಳಾಗಿರಲಿ ಇವೆಲ್ಲವುಗಳ ಮೂಲಕ ಇಲ್ಲಿನ ಜಾತೀಯ ಸಂಘಟನೆಗಳು ಜಾತಿ-ಮತ-ಧರ್ಮ-ಪ್ರಾದೇಶಿಕತೆಯನ್ನು ಮೀರಿ ನಿಂತವುಗಳು. ಇಲ್ಲಿಯ ಜಾತೀಯ ಸಂಘಟನೆಗಳು ತಮ್ಮವರ ಒಗ್ಗೂಡುವಿಕೆಗಾಗಿ, ಸಾಂಸ್ಕೃತಿಕ, ಸಾಹಿತ್ಯಕ ಕಾರ್ಯಕ್ರಮಗಳಿಗಾಗಿ ಕಟ್ಟಿಕೊಂಡ ಸಭಾಗೃಹಗಳು ಇಂದು ಈ ನಗರದುದ್ದಕ್ಕೂ ಹರಡಿಕೊಂಡಿರುವುದನ್ನು ನಾವು ಗಮನಿಸಲೇಬೇಕು.

ವಡಲಾದಲ್ಲಿರುವ 1965ರಲ್ಲಿ ನಿರ್ಮಿಸಲ್ಪಟ್ಟ ‘ದ್ವಾರಕನಾಥ್ ಭವನ್ ಸಭಾಗೃಹ’ ಶ್ರೀರಾಮಮಂದಿರ, ವಡಲಾ ಇದರ ಆಶ್ರಯದಲ್ಲಿದೆ. ಪ್ರತಿಷ್ಠಿತ ಜಿಎಸ್‌ಬಿ ಸಮಾಜದ ಈ ಭವನದಲ್ಲಿ ನೆಲಮಹಡಿಯಲ್ಲಿ ಸುಮಾರು 450ರಿಂದ 500ಮಂದಿ ಸೇರಬಹುದಾದ ಸಭಾಗೃಹವಿದೆ. ಹವಾನಿಯಂತ್ರಿತ ವಾದ ಈ ಸಭಾಗೃಹದಲ್ಲಿ ವಿವಾಹ ಸಮಾರಂಭ, ಹುಟ್ಟುಹಬ್ಬ, ಸಣ್ಣಪುಟ್ಟ ಸಭೆ ಸಮಾರಂಭಗಳು, ಬ್ಯಾಂಕುಗಳ, ಕಾರ್ಪೊರೇಟ್ ಕಂಪೆನಿಗಳ ಸಭೆಗಳು ಜರಗುತ್ತವೆ. ಮೂರನೇ ಮಹಡಿಯಲ್ಲಿ ಸುಮಾರು 500ಮಂದಿ ಕುಳಿತುಕೊಳ್ಳಬಹುದಾದಂತಹ ಹವಾ ನಿಯಂತ್ರಿತ ಸಭಾಗೃಹ ‘ವಿದ್ಯಾಧಿರಾಜ ಸ್ವಾಮೀಜಿ ಹಾಲ್’ ಇದೆ. ನಾಟಕ, ಯಕ್ಷಗಾನ, ನೃತ್ಯಕಾರ್ಯಕ್ರಮ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ಹೆಚ್ಚಾಗಿ ಜರಗುತ್ತಿವೆ. ಎರಡನೇ ಮಹಡಿಯಲ್ಲಿ ಸುಮಾರು 100 ಜನರು ಕುಳಿತುಕೊಳ್ಳಬಹುದಾದಂತಹ ‘ಇಂದಿರಾಕಾಂತ್ ಸ್ವಾಮೀಜಿ ಹಾಲ್’ ಇದೆ. ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹುಟ್ಟುಹಬ್ಬ, ಶ್ರಾದ್ಧ ಮುಂತಾದ ಕಾರ್ಯಕ್ರಮಗಳು ಜರಗುತ್ತಿವೆ. ಇದೂ ಹವಾನಿಯಂತ್ರಿತ ಸಭಾಗೃಹವಾಗಿದೆ.

ಸುಮಾರು 50-60ವರ್ಷಗಳಿಂದ ಮುಂಬೈಯ ಹೃದಯ ಭಾಗ ದಾದರ್ (ಪಶ್ಚಿಮ)ನಲ್ಲಿ ದೇವಾಡಿಗ ಸಮಾಜದವರ ‘ದೇವಾಡಿಗ ಸೆಂಟರ್’ ಇದೆ. ಸುಮಾರು 120 ಜನ ಸೇರಬಹುದಾದಂತಹ ಹವಾನಿಯಂತ್ರಿತ ಮಿನಿ ಸಭಾಗೃಹ ಇದೆ. ಮುಖ್ಯವಾಗಿ ಮಾರ್ಕೆಟಿಂಗ್ ಕಂಪೆನಿಗಳ ಸಭೆಗಳಿಗೆ ಈ ಹಾಲ್ ಯಾವತ್ತೂ ಕಾದಿರಿಸಲಾಗಿರುತ್ತದೆ. ಅಲ್ಲದೆ ನಿಶ್ಚಿತಾರ್ಥ, ಹುಟ್ಟುಹಬ್ಬ ಇತ್ಯಾದಿ ಸಣ್ಣಪುಟ್ಟ ಸಮಾರಂಭಗಳಿಗೂ ಹೇಳಿ ಮಾಡಿಸಿದ ಈ ಸಭಾಗೃಹದಲ್ಲಿ ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳೂ ನಡೆಯುತ್ತಿರುತ್ತವೆ. 2007ರಲ್ಲಿ ನೆರೂಲ್ (ಪಶ್ಚಿಮದ) ಸೆಕ್ಟರ್ ಒಂದರಲ್ಲಿ ನಿರ್ಮಾಣಗೊಂಡಿರುವ ‘ದೇವಾಡಿಗ ಭವನ’ದಲ್ಲಿ ‘ಮುತ್ತಯ್ಯ ಮೊಯ್ಲಿ ಮತ್ತು ನಾಗಿ ಎಂ. ಮೊಯ್ಲಿ ಸಭಾಗೃಹ’ ಇದೆ. ಈ ಹವಾನಿಯಂತ್ರಿತ ಸಭಾಗೃಹದಲ್ಲಿ ಸುಮಾರು 550 ಜನರು ಸೇರಬಹುದು. ಸುಮಾರು ಅಷ್ಟೇ ಜನ ಸೇರಬಹುದಾದಂತಹ ‘ಧರ್ಮಪಾಲ್ ದೇವಾಡಿಗ ಸಭಾಗೃಹ’ವೂ ಲಭ್ಯವಿದೆ. ಇವುಗಳಲ್ಲಿ ಮದುವೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಂಪೆನಿಗಳ ಸಮಾವೇಶಗಳು ಜರಗುತ್ತಿವೆ. ಇಲ್ಲಿನ ಕ್ಯಾಟರಿಂಗ್ ವ್ಯವಸ್ಥೆಯನ್ನು ಅಶೋಕ್ ತ್ರಿವೇದಿ ಅನ್ನುವವರು ನಿರ್ವಹಿಸುತ್ತಿದ್ದಾರೆ.

ನವೆಂಬರ್ 9, 1986ರಲ್ಲಿ ಕುರ್ಲಾ (ಪೂರ್ವ)ದಲ್ಲಿ ತಲೆ ಎತ್ತಿ ನಿಂತ ‘ಬಂಟರ ಭವನ’ ಕನ್ನಡಿಗರ ಹೆಮ್ಮೆಯ ಭವನಗಳಲ್ಲಿ ಒಂದು. ಆದರೆ ಅದು ನಿರ್ಮಾಣಗೊಂಡ ಎಂಭತ್ತರ ದಶಕದಲ್ಲಿ ಈ ಸಭಾಗೃಹ ಯಾರಿಗಾಗಿ? ಅಲ್ಲಿಗೆ ಯಾರು ಹೋಗುತ್ತಾರೆ? ಎಂಬಿತ್ಯಾದಿ ಮಾತುಗಳು, ಮೂದಲಿಕೆಗಳು ಕೇಳಿಬರುತ್ತಿದ್ದವು. ಈ ಮಾತು ಅಂದು ಸಹಜವಾಗಿತ್ತು. ಏಕೆಂದರೆ ಅಲ್ಲಿ ಸುತ್ತಮುತ್ತ ಭಯದ ವಾತಾವರಣವಿತ್ತು. ರಾತ್ರಿ 6-7ರ ನಂತರ ಅಲ್ಲಿಗೆ ಹೋಗುವುದೇ ಅಪಾಯಕರ ಎಂಬ ಅಂದಿನ ಪರಿಸ್ಥಿತಿಯಲ್ಲಿ ಬಂಟ ಸಮುದಾಯದವರು ಮುಂದಾಲೋಚನೆಯಿಂದ ಕಟ್ಟಿದ ಈ ಭವನ ಹಾಗೂ ಅಲ್ಲಿನ ಸಭಾಗೃಹ ಅಂದಿನ ಆ ಭಯದ ವಾತಾವರಣ ದೂರ ಮಾಡಿ ಇಂದು ಎಲ್ಲ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದೆ. ಎಂಭತ್ತರ ದಶಕದಲ್ಲಿ ಸಾಮಗರು ಮುಂಬೈಯಲ್ಲಿ ರಾಷ್ಟ್ರಮಟ್ಟದ ತುಳು ಸಮ್ಮೇಳನದ ಆಯೋಜನೆಗೆ ಆರಿಸಿಕೊಂಡದ್ದು ಬಂಟರ ಭವನವನ್ನು. ಭವನದ ನೆಲ ಮಾಳಿಗೆಯ ‘ಮುಕ್ತಾನಂದ ಸಭಾಗೃಹ’ದಲ್ಲಿ ಸಾಯಂಕಾಲ ಉದ್ಘಾಟನೆಗೊಂಡು ರಾತ್ರಿಪೂರ್ತಿ ಜರಗಿದ ಆ ಕಾರ್ಯಕ್ರಮ ಬಹಳ ಯಶಸ್ಸನ್ನು ಕಂಡಿತ್ತು, ಜೊತೆಗೆ ತುಳು-ಕನ್ನಡಿಗರಲ್ಲಿ ಸಹಜವಾಗಿದ್ದ ಭಯವನ್ನು ದೂರ ಮಾಡಿತ್ತು. ಅಂದಿನಿಂದ ತುಳು-ಕನ್ನಡಿಗರ ಬಹುಮುಖ್ಯ ಕಾರ್ಯಕ್ರಮಗಳಿಗೆ ಪ್ರಥಮ ಆದ್ಯತೆ ಬಂಟರ ಭವನಕ್ಕೆ. ಸುಮಾರು 600-650ರಷ್ಟು ಜನರನ್ನು ಸೇರಿಸಿಕೊಳ್ಳುತ್ತಿದ್ದ ಮುಕ್ತಾನಂದ ಸಭಾಗೃಹ ಇಂದು ಬಹಳಷ್ಟು ರೂಪಾಂತರಗೊಂಡು ಹವಾನಿಯಂತ್ರಿತವಾಗಿ ಸುಮಾರು 350 ಜನರನ್ನು ಸೇರಿಸಬಹುದಾದಂತಹ ವಿವಿಧ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಮೇಲಿನ ಮುಖ್ಯ ಸಭಾಗೃಹದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮವಾದಾಗ ಇದು ಡೈನಿಂಗ್ ಹಾಲ್ ಆಗಿ ಪರಿವರ್ತನೆಗೊಳ್ಳುತ್ತದೆ. ‘ಶ್ರೀಮತಿ ರಾಧಾಬಾಯಿ ತಿಮ್ಮಪ್ಪಭಂಡಾರಿ’ ಸಭಾಗೃಹ ಹವಾನಿಯಂತ್ರಿತವಾಗಿದ್ದು ಮುಖ್ಯವಾಗಿ ವಿವಾಹ ಸಮಾರಂಭಗಳಿಗೆ ಒದಗುವ ಉದ್ದೇಶವನ್ನು ಹೊಂದಿತ್ತು.

ವಿಸ್ತಾರವಾದ ವೇದಿಕೆ, ಧ್ವನಿ-ಬೆಳಕಿನ ವ್ಯವಸ್ಥೆ ಎಲ್ಲವೂ ಈ ಸಭಾಗೃಹವನ್ನು ಬಹು ಉದ್ದೇಶಿತ ಸಭಾಗೃಹವನ್ನಾಗಿಸಿದೆ. ತುಳು-ಕನ್ನಡಿಗರ ದೊಡ್ಡ ಸಮಾವೇಶಗಳು, ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳು, ಯಕ್ಷಗಾನ, ನಾಟಕ ಎಲ್ಲವೂ ಇಲ್ಲಿ ನಡೆಯುತ್ತಿರುತ್ತವೆ. ಸುಮಾರು 1,000 ಜನರು ಕುಳಿತುಕೊಳ್ಳುವ ಈ ಸಭಾಗೃಹದಲ್ಲಿ ಬೃಹತ್ ಕಾರ್ಯಕ್ರಮಗಳು ನಡೆಯುವಾಗ ಮೆಟ್ಟಲುಗಳಲ್ಲಿ ಕುಳಿತು (ಉದಾ ಬಿಸುಪರ್ಬ ಇತ್ಯಾದಿ) ಕಾರ್ಯಕ್ರಮಗಳ ಸವಿ ಸವಿದು ಹೋದವರಿದ್ದಾರೆ. ತಲಾ ನೂರು ಜನರು ಸೇರಬಹುದಾದಂತಹ ‘ಕಬೆಲೆಗುತ್ತು ಕಾಶಿ ಸಿದ್ದು ಶೆಟ್ಟಿ ಕಿರು ಸಭಾಗೃಹ’ ಹಾಗೂ ‘ಶ್ರೀಮತಿ ಲತಾ ಪ್ರಭಾಕರ ಶೆಟ್ಟಿ ಕಿರು ಸಭಾಗೃಹ’ಗಳಿವೆ. ವಿವಾಹ ನಿಶ್ಚಿತಾರ್ಥ, ಕಂಪೆನಿಗಳ ಕಾನ್ಫರೆನ್ಸ್, ಶ್ರಾದ್ಧ ಇತ್ಯಾದಿ ಕಾರ್ಯಕ್ರಮಗಳು ಇಲ್ಲಿ ಜರಗುತ್ತಿರುತ್ತವೆ. ‘ಶ್ರೀಮತಿ ರಂಜನಿ ಸುಧಾಕರ್ ಹೆಗ್ಡೆ ಸಮಾಜ ಕಲ್ಯಾಣ ಬಿಲ್ಡಿಂಗ್’ನ ಎರಡನೇ ಹಾಗೂ ಮೂರನೇ ಅಂತಸ್ತುಗಳಲ್ಲಿ ತಲಾ 300 ಜನ ಸೇರುವ ‘ಶ್ರೀಮತಿ ವಿಜಯಲಕ್ಷ್ಮೀ ಮಹೇಶ್ ಶೆಟ್ಟಿ ಸಭಾಗೃಹ’ ಹಾಗೂ ‘ನಗ್ರಿಗುತ್ತು ಶ್ರೀಮತಿ ಸಂಧ್ಯಾ ವಿವೇಕ ಶೆಟ್ಟಿ ಸಭಾಗೃಹ’ಗಳಿವೆ. ಇವು ಕೂಡ ಹವಾನಿಯಂತ್ರಿತವಾಗಿವೆ. ಮದುವೆ ಇತ್ಯಾದಿ ಕಾರ್ಯಕ್ರಮಗಳು ಇಲ್ಲಿ ಜರಗುತ್ತವೆ. ನಾಲ್ಕನೇ ಮಹಡಿಯಲ್ಲಿ ‘ಶ್ರೀಮತಿ ಸುನೀತಾ ಮುದ್ದಣ್ಣ ಶೆಟ್ಟಿ (ತೆರೆದ) ಸಭಾಗೃಹ’ವಿದೆ. ಸುಮಾರು 300ಜನರನ್ನು ಒಟ್ಟುಗೂಡಿಸಬಹುದಾದ ಈ ಸಭಾಗೃಹದಲ್ಲಿ ಮದುವೆ, ಊಟದ ವ್ಯವಸ್ಥೆಗಾಗಿಯೂ ಉಪಯೋಗಿಸಲ್ಪಡುತ್ತದೆ. ಕೆಳಗೆ ಇನ್ನೊಂದು ‘ಬಸ್ತಿ ರಾಮಣ್ಣ ಶೆಟ್ಟಿ (ತೆರೆದ) ಸಭಾಗೃಹ’ ಇದೆ. ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಇದು ಉಪಯೋಗಕ್ಕೆ ಬರುತ್ತದೆ. ಸುಮಾರು 300 ಜನರನ್ನು ಇಲ್ಲಿ ಸೇರಿಸಿಕೊಳ್ಳಬಹುದು. ಸುಮಾರು 80 ರಿಂದ 100 ವಾಹನಗಳ ನಿಲುಗಡೆ ವ್ಯವಸ್ಥೆಯನ್ನು ಹೊಂದಿರುವ ಬಂಟರ ಭವನದ ಕ್ಯಾಟರಿಂಗ್ ವ್ಯವಸ್ಥೆಯೂ ಚೆನ್ನಾಗಿದೆ.

ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜದವರ ‘ಶ್ರೀವರದ ಸಿದ್ಧಿವಿನಾಯಕ ಸೇವಾ ಭವನ’ ಡೊಂಬಿವಲಿ ಪೂರ್ವದ ಬೋಪರ್ ರೋಡ್‌ನಲ್ಲಿದೆ. 600 ಮಂದಿ ಸೇರಬಹುದಾದಂತಹ ತೆರೆದ ಸಭಾಗೃಹ (2001) ಹಾಗೂ ‘ಗುರುಕೃಪಾ ಸೇವಾ ಭವನ’, ‘ನಾರಾಯಣ ಕೃಪಾ ಸೇವಾ ಭವನ’ (2019) ಎಂಬ ಮೂರು ಹೊಸ ಸಭಾಗೃಹಗಳು ತಲೆಯೆತ್ತಿವೆ. ಈ ಸಭಾಗೃಹಗಳೂ ಹವಾನಿಯಂತ್ರಿತವಾಗಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಮದುವೆ, ಶಾಲೆಗಳ ಕಾರ್ಯಕ್ರಮ ಇತ್ಯಾದಿಗಳು ಇಲ್ಲಿ ಜರಗುತ್ತಿರುತ್ತವೆ.

‘ಬಸವೇಶ್ವರ ಕಲ್ಚರಲ್ ಸೊಸೈಟಿ’ಯು ಸುಮಾರು 300 ಜನರು ಸೇರಬಹುದಾದಂತಹ ತೆರೆದ ಸಭಾಗೃಹವನ್ನು ಹೊಂದಿದೆ. ಚೆಂಬೂರಿನಲ್ಲಿರುವ ಈ ಸಭಾಗೃಹ ಕೇವಲ ತಮ್ಮ ಸದಸ್ಯರಿಗಷ್ಟೇ ಸೀಮಿತವಾಗಿದೆ. 1987ರಿಂದಲೂ ಇದು ಕ್ರಿಯಾಶೀಲವಾಗಿದೆ.

ಜಿಎಸ್‌ಬಿ ಸೇವಾ ಮಂಡಲ, ಸಾಯನ್ ಇವರ ಆಶ್ರಯದಲ್ಲಿರುವ ‘ಶ್ರೀ ಗುರುಗಣೇಶ್‌ಪ್ರಸಾದ್ ಹಾಲ್’ ತಲಾ 450 ಜನ ಸೇರಬಹುದಾದಂತಹ ನಾಲ್ಕು ಸಭಾಗೃಹಗಳನ್ನು ಹೊಂದಿದ್ದು ಇವುಗಳಲ್ಲಿ ಮೂರು ಸಭಾಗೃಹಗಳು ಹವಾನಿಯಂತ್ರಿತವಾಗಿವೆ. ಮೇ 19. 1987ರಂದು ಉದ್ಘಾಟನೆಗೊಂಡಿರುವ ಈ ಸಭಾಗೃಹಗಳಲ್ಲಿ ಮದುವೆ, ಕಾರ್ಪೊರೇಟ್ ಮೀಟಿಂಗ್, ಇತರ ಸಮಾವೇಶಗಳು, ವಾರ್ಷಿಕ ಮಹಾಸಭೆಗಳು, ಸಾಮಾಜಿಕ ಕಾರ್ಯಕ್ರಮಗಳಲ್ಲದೆ ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರಗುತ್ತಿರುತ್ತವೆ.

ಸಾಂತಾಕ್ರೂಸ್ ಪೂರ್ವದಲ್ಲಿ 16.4.1995ರಲ್ಲಿ ತಲೆಯೆತ್ತಿರುವ ‘ಬಿಲ್ಲವ ಭವನ’ದಲ್ಲಿ ಪ್ರಾರಂಭದಲ್ಲಿ 150-200 ಜನ ಸೇರಬಹುದಾದಂತಹ ಕಿರು ಸಭಾಗೃಹಗಳಿದ್ದವು ಆದರೆ 16.4.2006ರಲ್ಲಿ ಉದ್ಘಾಟನೆಗೊಂಡ ವಿಸ್ತ್ರತ ಭವನದಲ್ಲಿ ಸುಮಾರು 450ಜನರ ಕುಳಿತುಕೊಳ್ಳುವಷ್ಟು ಸುಸಜ್ಜಿತ ಹವಾನಿಯಂತ್ರಿತ ಸಭಾಗೃಹವಲ್ಲದೆ ಮೂರನೇ ಹಾಗೂ ನಾಲ್ಕನೇ ಮಹಡಿಗಳಲ್ಲಿ ಬಹುಪಯೋಗಿ ತಲಾ 350ಜನರು ಸೇರಬಹುದಾದ ಎರಡು ಸಭಾಗೃಹಗಳಿವೆ. ಮುಖ್ಯ ಸಭಾಗೃಹವು ನಾಟಕ, ಯಕ್ಷಗಾನ, ಸಾಹಿತ್ಯ ಕಾರ್ಯಕ್ರಮ, ವಿವಾಹ ಸಮಾರಂಭ ಇತ್ಯಾದಿಗಳಿಗೆ ಲಭ್ಯವಿದೆ. ಕೆಲವರ್ಷಗಳ ಹಿಂದೆ ನಡೆಯುತ್ತಿದ್ದ ನಾಟಕ ಸ್ಪರ್ಧೆ ಸಂದರ್ಭ ಸಭಾಗೃಹ 700ಕ್ಕಿಂತಲೂ ಹೆಚ್ಚು ಜನರನ್ನು ತನ್ನೊಳಗೆ ಸೇರಿಸಿಕೊಂಡಿತ್ತು. ಎರಡನೇ ಮಹಡಿಯಲ್ಲಿ ಕಾನ್ಫರೆನ್ಸ್ ಹಾಲ್‌ನ್ನು ಹೊಂದಿದ್ದು ಕಾರ್ಪೊರೇಟ್ ಕಂಪೆನಿಗಳ ಮೀಟಿಂಗ್ ಮೊದಲಾದವುಗಳಿಗೆ ಇದನ್ನು ನೀಡಲಾಗುತ್ತಿದೆ. ಮಾತ್ರವಲ್ಲದೆ ಇಲ್ಲಿನ ಕನ್ನಡಿಗರ ಪತ್ರಕರ್ತರ ಸಂಘ, ಮಹಾರಾಷ್ಟ್ರ ಕನ್ನಡಿಗ ಕಲಾವಿದರ ಪರಿಷತ್ತು ಮೊದಲಾದವುಗಳ ಸಭೆಗಳಿಗೆ ಈ ಹಾಲ್‌ನ್ನು ಉಚಿತವಾಗಿ ನೀಡಲಾಗುತ್ತಿದೆ. ನೆಲಮಾಳಿಗೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುವ ‘ಕೋಟಿ ಚೆನ್ನಯ’ ಚಾವಡಿ ಇದೆ.

ಬಿಲ್ಲವರ ಅಸೋಸಿಯೇಶನ್ ಇಪ್ಪತ್ತೆರಡು ಶಾಖೆಗಳನ್ನು ಹೊಂದಿದ್ದು ಅವುಗಳಲ್ಲಿ 20 ಶಾಖೆಗಳಲ್ಲಿ 50ರಿಂದ 100 ಜನ ಸೇರಬಹುದಾದ ಕಿರು ಸಭಾಗೃಹಗಳು ಬಹುಪಯೋಗಿಯಾಗಿವೆ.

ಮೊಗವೀರ ಭವನವು ಅಂಧೇರಿ(ಪಶ್ಚಿಮ)ಯಲ್ಲಿದ್ದು ಅಲ್ಲಿನ ‘ಶಾಲಿನಿ ಜಿ. ಶಂಕರ್ ಕನ್ವೆನ್ಷನ್ ಸೆಂಟರ್’ ಸಭಾಗೃಹವು 1996ರಲ್ಲಿ ಉದ್ಘಾಟನೆಗೊಂಡು ಆ ಪರಿಸರದಲ್ಲಿ ಬಹುಬೇಡಿಕೆಯ ಸಭಾಗೃಹವೊಂದು ತಲೆಯೆತ್ತಿತು. ಸುಮಾರು 700ಜನ ಸೇರಬಹುದಾದ ಈ ಹವಾನಿಯಂತ್ರಿತ ಸಭಾಗೃಹದಲ್ಲಿ, ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳು, ವಿವಾಹ ಸಮಾರಂಭ, ನಾಟಕ, ಯಕ್ಷಗಾನ ಇತ್ಯಾದಿ ಕಾರ್ಯಕ್ರಮಗಳು ಜರುಗುತ್ತಿರುತ್ತವೆ. ಅದೇ ಹೆಸರಿನ 200 ಜನ ಸೇರಬಹುದಾದಂತಹ ಹವಾನಿಯಂತ್ರಿತ ಕಿರು ಸಭಾಗೃಹವೂ ಇದೆ. ಇಲ್ಲೂ ಸಾಹಿತ್ಯ ಸಭೆಗಳು, ಕಾರ್ಪೊರೇಟ್ ಮೀಟಿಂಗ್‌ಗಳು ಹುಟ್ಟುಹಬ್ಬ, ನಿಶ್ಚಿತಾರ್ಥ, ಸೀಮಂತ ಇತ್ಯಾದಿಗಳು ನಡೆಯುತ್ತಿರುತ್ತವೆ. ಇದಕ್ಕೆ ಸೇರಿಕೊಂಡಿರುವ ಹಳೆಯ ಕಟ್ಟಡದಲ್ಲೂ 250ರಿಂದ 300 ಜನ ಕುಳಿತುಕೊಳ್ಳುವ ಮಿನಿ ಸಭಾಗೃಹವಿದೆ. ಶಾಲೆ, ಕಾಲೇಜುಗಳನ್ನು ಹೊಂದಿರುವುದರಿಂದ ಹೆಚ್ಚಾಗಿ ಶನಿವಾರ, ರವಿವಾರಗಳಲ್ಲಿ ಮುಖ್ಯ ಸಭಾಗೃಹಗಳು ವರ್ಷವಿಡೀ ತುಂಬುತ್ತಿರುತ್ತವೆ. ಇಲ್ಲಿ ಸುಮಾರು 80-90 ಕಾರು ಪಾರ್ಕಿಂಗ್ ವ್ಯವಸ್ಥೆಯೂ ಹೊಂದಿದೆ.

ಮೊಗವೀರ ಮಂಡಳಿಯ ಡೊಂಬಿವಲಿ ಪಶ್ಚಿಮ ಶಾಖೆಯಲ್ಲಿ ಸುಮಾರು 100-150 ಜನ ಸೇರಬಹುದಾದ ಹವಾನಿಯಂತ್ರಿತ ಸಭಾಗೃಹವಿದೆ. ಸಾಹಿತ್ಯ ಕಾರ್ಯಕ್ರಮಗಳು, ಹುಟ್ಟುಹಬ್ಬ, ಸೀಮಂತ ಮೊದಲಾದ ಕಾರ್ಯಕ್ರಮಗಳಿಗೆ ಇದು ಬೇಡಿಕೆಯಲ್ಲಿದೆ. ಸುರತ್ಕಲ್‌ನಲ್ಲಿ ಸ್ಥಳವನ್ನು ಹೊಂದಿರುವ ಮೊಗವೀರ ವ್ಯವಸ್ಥಾಪಕ ಮಂಡಳಿ, ಅಲ್ಲೂ ಕಿರು ಸಭಾಗೃಹ ಹೊಂದಿದೆ.

 ನವಿ ಮುಂಬೈಯ ಐರೋಳಿಯಲ್ಲಿರುವ ‘ಹೆಗಡೆ ಭವನ’ ಬಹು ಉದ್ದೇಶಿತ ಸಭಾಗೃಹಗಳನ್ನು ಹೊಂದಿದೆ. ಸುಮಾರು 450 ಜನರನ್ನು ಸೇರಿಸಬಹುದಾದ ಹವಾನಿಯಂತ್ರಿತ ಸಭಾಗೃಹವು ಯಕ್ಷಗಾನ, ನಾಟಕ, ಸಾಹಿತ್ಯ ಸಮಾರಂಭ, ಆ ಭಾಗದ ಸಂಘ-ಸಂಸ್ಥೆಗಳ ವಾರ್ಷಿಕ ಸಮ್ಮಿಲನ, ವಿವಾಹ ಸಮಾರಂಭ ಇತ್ಯಾದಿಗಳಿಗೆ ಉಪಯೋಗಿಸಲ್ಪಡುತ್ತದೆ. ಮಾತ್ರವಲ್ಲದೆ 150 ಜನ ಸೇರಬಹುದಾದ ಕಿರು ಸಭಾಗೃಹವೂ ಹವಾನಿಯಂತ್ರಿತವಾಗಿದ್ದು, ಇಲ್ಲಿ ಸಣ್ಣಪುಟ್ಟ ಸಾಹಿತ್ಯ ಕಾರ್ಯಕ್ರಮ, ಹುಟ್ಟುಹಬ್ಬ, ಸೀಮಂತ, ನಿಶ್ಚಿತಾರ್ಥಗಳಿಗೆ ಒದಗಿ ಬರುತ್ತಿದೆ. ತಳಮಾಳಿಗೆಯಲ್ಲಿ ವಿಸ್ತಾರವಾದ ಸ್ಥಳವಿದ್ದು ಊಟದ ವ್ಯವಸ್ಥೆ ಇಲ್ಲಿ ನಡೆಯುತ್ತಿದೆ.
ನವಿ ಮುಂಬೈಯ ಜೂಹಿನಗರ (ಪಶ್ಚಿಮ) ರೈಲ್ವೆ ನಿಲ್ದಾಣದ ಹತ್ತಿರ ಇರುವ ‘ಬಂಟ್ಸ್ ಸೆಂಟರ್’ನಲ್ಲಿ ಬಹುಪಯೋಗಿ 850ಜನ ಸೇರಬಹುದಾದ ‘ಸದಾನಂದ ಶೆಟ್ಟಿ ಸಭಾಗೃಹ’ ಇದೆ. ಈ ಹವಾನಿಯಂತ್ರಿತ ಸಭಾಗೃಹದಲ್ಲಿ ವಿವಾಹ ಸಮಾರಂಭ, ನಾಟಕ, ಯಕ್ಷಗಾನ, ಕಂಪೆನಿಗಳ ಸಭೆಗಳು ಜರಗುತ್ತಿರುತ್ತವೆ. ನಿಶ್ಚಿತಾರ್ಥ, ಸೀಮಂತ, ಸಾಹಿತ್ಯ ಸಂಬಂಧಿ ಕಾರ್ಯಕ್ರಮ ಮೊದಲಾದ ಸಣ್ಣಪುಟ್ಟ ಕಾರ್ಯಕ್ರಮಗಳಿಗಾಗಿ 50ರಿಂದ 100 ಮಂದಿ ಸೇರಬಹುದಾದ ‘ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹ’ ಇದೆ. ಕೆಳಗಿನ ಮಹಡಿಯಲ್ಲಿ ಊಟದ ವ್ಯವಸ್ಥೆಯಿದೆ. 2008-09ರ ಸಾಲಿನಲ್ಲಿ ಉದ್ಘಾಟನೆಗೊಂಡ ಈ ಸಭಾಗೃಹಗಳು ಆ ಭಾಗದ ಕನ್ನಡಿಗರ ಬೇಡಿಕೆಯನ್ನು ಪೂರೈಸಲು ಯಶಸ್ವಿಯಾಗಿವೆ.

ಥಾಣೆ ಪರಿಸರದಲ್ಲಿ ಅಸ್ತಿತ್ವಕ್ಕೆ ಬಂದಿರುವ ‘ಥಾಣೆ ಬಂಟ್ಸ್’ ಇದರ ಕಿರು ಸಭಾಗೃಹ ಹವಾನಿಯಂತ್ರಿತವಾಗಿದ್ದು ಸುಮಾರು 100 ಮಂದಿ ಸೇರಬಹುದು. ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳು, ಸಣ್ಣಪುಟ್ಟ ಸಭೆ ಸಮಾರಂಭಗಳು ಇಲ್ಲಿ ಜರಗುತ್ತಿರುತ್ತವೆ.
ಘಾಟ್‌ಕೋಪರ್ ಪಶ್ಚಿಮದಲ್ಲಿ ಹವ್ಯಕ ಸಮಾಜ ಬಾಂಧವರ ಸುಮಾರು 150 ಜನ ಸೇರಬಹುದಾದ ಹವಾನಿಯಂತ್ರಿತ ಸಭಾಗೃಹವಿದೆ. ಇದು ಕೂಡಾ ಹುಟ್ಟುಹಬ್ಬ, ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳು, ಕಾರ್ಪೊರೇಟ್ ಮೀಟಿಂಗ್ ಸೀಮಂತ, ನಿಶ್ಚಿತಾರ್ಥಗಳಿಗೆ ಉಪಯೋಗಿಸಲ್ಪಡುತ್ತದೆ.
ಮೀರಾರೋಡ್ ಪೂರ್ವ ಕಾಶಿಗಾಂವ್‌ನಲ್ಲಿ ಹೈವೇ ಹತ್ತಿರ ‘ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್‌ನ ‘ಪ್ರಿಯಾ ವಿಶ್ವಕರ್ಮ ಭವನ’(2014) ಇದೆ. 200-250ಜನ ಸೇರಬಹುದಾದಂತಹ ಈ ಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಸಂಘ ಸಂಸ್ಥೆಗಳ ವಾರ್ಷಿಕ ಸಭೆ, ಸೀಮಂತ, ಮದುವೆ, ಹುಟ್ಟುಹಬ್ಬ ಕಾರ್ಯಕ್ರಮಗಳು ಜರಗುತ್ತಿವೆ. ಚಾರ್ ಬಂಗ್ಲೋದಲ್ಲೂ ಟೆರೇಸ್ ಹಾಲ್‌ನ್ನು ಹೊಂದಿದ್ದು ಸೀಮಂತ, ಉಪನಯನಗಳಿಗೆ ಬೇಡಿಕೆಯಲ್ಲಿರುವ ನೂರು ಜನ ಸೇರಬಹುದಾದ ಕಿರು ಸಭಾಗೃಹವಿದೆ.

ಇಲ್ಲಿನ ಕುಲಾಲ ಸಮುದಾಯ ರೋಡ್ ಬಂದರ್, ಥಾಣೆಯಲ್ಲಿ ಸುಮಾರು 13,500 ಚದರಡಿ ವಿಸ್ತೀರ್ಣದ ಸ್ಥಳವನ್ನು ಹೊಂದಿದ್ದು, ಸಾಧಾರಣವಾಗಿರುವ ಸುಮಾರು 500ಜನರನ್ನು ಸೇರಿಸಬಹುದಾದ ಸಭಾಗೃಹವಿದೆ. ಇದು ಸಣ್ಣ ಪುಟ್ಟ ಸಭೆಗಳಿಗೆ ಉಪಯೋಗಿಸಲ್ಪಡುತ್ತದೆ. ಆದರೆ ಇವರು ಮುಂದಾಲೋಚನೆಯಿಂದ ಮಂಗಳೂರಿನ ಹೃದಯಭಾಗ ಮಂಗಳಾದೇವಿ ದೇವಸ್ಥಾನದ ಹತ್ತಿರ ನಿರ್ಮಿಸಿರುವ ‘ಕುಲಾಲ ಭವನ’ ಬಹುಪಯೋಗಿ ಸಭಾಗೃಹಗಳನ್ನು ಹೊಂದಿದೆ. ನೆಲ ಮಹಡಿಯಲ್ಲಿ ಸುಮಾರು 60ರಿಂದ 80 ಕಾರ್ ಪಾರ್ಕಿಂಗ್ ವ್ಯವಸ್ಥೆ ಇರುವ ಈ ಭವನದಲ್ಲಿ 1,000 ಜನ ಕುಳಿತುಕೊಳ್ಳಬಹುದಾದ ಹವಾನಿಯಂತ್ರಿತ ಸಭಾಗೃಹ, ಮೇಲ್ಗಡೆ ಓಪನ್ ಟೆರೆಸ್ ಸಭಾಗೃಹ, ಇಲ್ಲೂ ಒಂದರಿಂದ ಒಂದೂವರೆ ಸಾವಿರ ಜನ ಸೇರಬಹುದಾದ ವ್ಯವಸ್ಥೆ ಇದೆ. ಕೊರೋನ ಪಿಡುಗಿನಿಂದಾಗಿ ಉದ್ಘಾಟನೆಗಾಗಿ ಕಾಯುತ್ತಿರುವ ಈ ಭವನ ಹಾಗೂ ಸಭಾಗೃಹದ ನೆಲಮಹಡಿಯಲ್ಲಿ ಈಗಾಗಲೇ ಸಂಸ್ಥೆಯೊಂದು ವ್ಯವಹಾರ ನಡೆಸುತ್ತಿದೆ. ಸುಮಾರು 13,500 ಚದರ ಅಡಿ ವಿಸ್ತೀರ್ಣದಲ್ಲಿ ಕಟ್ಟಲ್ಪಟ್ಟ ಈ ಭವನ 5 ವರ್ಷಗಳಲ್ಲಿ ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿದೆ. ಸಾಯನ್‌ನಲ್ಲಿರುವ ‘ಬಾಂಬೇ ಸೌತ್ ಕೆನರಾ ಬ್ರಾಹ್ಮಿಣ್ಸ್ ಅಸೋಸಿಯೇಷನ್’ ಇವರ ‘ಗೋಕುಲ್’ ಹೆಚ್ಚಿನ ಸಾಹಿತ್ಯ ಕಾರ್ಯಕ್ರಮಗಳಿಗೆ ಕೇಂದ್ರಬಿಂದುವಾಗಿತ್ತು. ಇದೀಗ ಅದೇ ಸ್ಥಳದಲ್ಲಿ ಸುಸಜ್ಜಿತ ಸಭಾಗೃಹಗಳೊಂದಿಗೆ ‘ಗೋಕುಲ್ ಭವನ’ ಉದ್ಘಾಟನೆಗೆ ಕಾದು ನಿಂತಿದೆ. 7 ಅಂತಸ್ತುಗಳ ಈ ಭವನದ ಕೆಳ ಅಂತಸ್ತಿನಲ್ಲಿ ದೇವಸ್ಥಾನ ಹಾಗೂ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಸಭಾಗೃಹವಲ್ಲದೆ ಎರಡು ತಲಾ 225-300 ಜನ ಕುಳಿತುಕೊಳ್ಳಬಹುದಾದ ಕಿರು ಸಭಾಗೃಹಗಳಿವೆ. ಅಲ್ಲದೆ ಇನ್ನೊಂದು ಸುಮಾರು 225 ಜನ ಸೇರಬಹುದಾದ ಸುಸಜ್ಜಿತ ಹವಾನಿಯಂತ್ರಿತ ಸಭಾಗೃಹವನ್ನು ಹೊಂದಿದೆ. ಸುಮಾರು 70 ಕಾರ್ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲಿದೆ. ಇದೇ ಸಂಸ್ಥೆಯ ಆಶ್ರಯದಲ್ಲಿ ನೆರೂಲ್‌ನಲ್ಲಿ ‘ಆಶ್ರಯ’ ಎಂಬ ಕಟ್ಟಡವನ್ನು ಹೊಂದಿದ್ದು, ಅಲ್ಲಿ ಸುಮಾರು 600 ಜನ ಸೇರಬಹುದಾದ ಹವಾನಿಯಂತ್ರಿತ ‘ವಿ.ಎಸ್. ಸೋಮೇಶ್ವರ ಸಭಾಗೃಹ’ ಹಾಗೂ 100 ಜನರು ಸೇರಬಹುದಾದ ಎ.ಕೆ. ಹೆಬ್ಬಾರ್ ಸಭಾಗೃಹ ಇದೆ.
ಮೇಲೆ ಪ್ರಸ್ತಾಪಿಸಿದ ಹೆಚ್ಚಿನೆಲ್ಲ ಸಭಾಗೃಹಗಳಲ್ಲೂ ಮೊನೊಪೊಲಿ ಕ್ಯಾಟರಿಂಗ್ ವ್ಯವಸ್ಥೆ ಇದ್ದು ಊಟೋಪಚಾರಗಳು ಚೆನ್ನಾಗಿವೆೆ.

ಹೀಗೆ ಹೊಟ್ಟೆಪಾಡಿಗೆಂದು ಮುಂಬೈಗೆ ಬಂದ ಹೆಚ್ಚಿನ ನಮ್ಮ ಹಿರಿಯರು ಇಲ್ಲಿ ತಮ್ಮ ಜಾತಿ ಬಾಂಧವರನ್ನು ಒಟ್ಟು ಸೇರಿಸಿ ತಮ್ಮವರಿಗಾಗಿ ಕಟ್ಟಿಕೊಂಡ ಸಂಸ್ಥೆಗಳು ಜಾತಿ-ಮತ-ಧರ್ಮಗಳನ್ನು ಮೀರಿ ಮಾಡಿರುವ ಸಾಧನೆ ಹಿರಿದಾದುದು. ಈ ಸಂಘಟನೆಗಳ ಸಭಾಗೃಹಗಳಿಂದಾಗಿ ಈ ಮಹಾನಗರದಲ್ಲಿ ಕನ್ನಡಿಗರು ಕಾರ್ಯಕ್ರಮಗಳಿಗಾಗಿ ಪರದಾಡುವುದನ್ನು ತಪ್ಪಿಸಿದೆ. ಮಹಾನಗರದುದ್ದಕ್ಕೂ ಹರಡಿರುವ ಸಭಾಗೃಹಗಳು ಒಂದು ರೀತಿಯಲ್ಲಿ ಇಲ್ಲಿನ ಕನ್ನಡಿಗರ ನಡುವಿನ ಸೇತುವೆಯಾಗಿಯೂ ಮಹತ್ವದ ಪಾತ್ರ ವಹಿಸಿವೆ. ಈ ಸಭಾಗೃಹಗಳಲ್ಲಿ ಹೆಚ್ಚಿನವುಗಳ ಬಾಡಿಗೆಯಲ್ಲಿ ತಮ್ಮ ಜಾತಿ ಬಾಂಧವರಿಗೆ ಶೇ. 20ರಿಂದ 40, ಇತರ ಜಾತಿಯವರಿಗೆ ಶೇ. 10ರಿಂದ 15 ರಿಯಾಯಿತಿ ಸಿಗುತ್ತಿವೆ. ಅಲ್ಲದೆ ಕೆಲವೊಂದು ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಾಡಿಗೆ ಇಲ್ಲದೆಯೂ ಸಭಾಗೃಹಗಳು ಲಭ್ಯವಾಗುತ್ತಿವೆ. ಬಂಟರ ಭವನ, ಬಿಲ್ಲವರ ಭವನ, ಮೊಗವೀರ ಭವನ ಮೊದಲಾದ ಕೆಲವೊಂದು ಸಭಾಗೃಹಗಳವರು ಆರ್ಥಿಕ ಸಂಕಷ್ಟದಲ್ಲಿರುವ ಸ್ವಜಾತಿ ಬಾಂಧವರಲ್ಲಿ ಬಾಡಿಗೆ ಪಡೆಯದೆ ತಾವೇ ಮುಂದೆ ನಿಂತು ಮದುವೆ ಮುಂತಾದ ಕಾರ್ಯಕ್ರಮಗಳನ್ನು ಮಾಡಿದ್ದಿದೆ. ಹೀಗೆ ಮುಂಬೈಯಲ್ಲಿದ್ದು ಸಮಾಜಮುಖಿ, ಜನಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕನ್ನಡ ಮನಸ್ಸುಗಳಿಗೆ ಶಿರಬಾಗಿ ವಂದನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)