ಶಾಲೆಯ ಕಟ್ಟಡದ ಕೊನೆಯ ಮಹಡಿಯಿಂದ ವಿದ್ಯಾರ್ಥಿಯ ತಲೆ ಕೆಳಗಾಗಿ ನೇತಾಡಿಸಿದ ಮುಖ್ಯೋಪಾಧ್ಯಾಯನ ಬಂಧನ
ಲಕ್ನೋ, ಅ. 29: ವಿದ್ಯಾರ್ಥಿಯೋರ್ವನನ್ನು ಶಾಲಾ ಕಟ್ಟಡದ ಕೊನೆಯ ಮಹಡಿಯಿಂದ ಕಾಲು ಹಿಡಿದು ತಲೆ ಕೆಳಗಾಗಿ ನೇತಾಡಿಸಿದ ಆಘಾತಕಾರಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಉತ್ತರಪ್ರದೇಶದ ಮಿರ್ಝಾಪುರ ಶಾಲೆಯೊಂದರ ಮುಖ್ಯೋಪಾಧ್ಯಾಯರನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಮಧ್ಯಾಹ್ನದ ಊಟದ ಬಿಡುವಿನ ವೇಳೆ ಬೇರೆಬೇರೆ ತರಗತಿಗಳ ವಿದ್ಯಾರ್ಥಿಗಳು ಆಟವಾಡುತ್ತಿದ್ದ ಸಂದರ್ಭ ವಿದ್ಯಾರ್ಥಿಯೋರ್ವನಿಗೆ ಕಚ್ಚಿರುವುದಕ್ಕೆ ಕ್ಷಮೆ ಕೋರದೇ ಇದ್ದರೆ ಕೆಳಗೆ ಹಾಕಲಾಗುವುದು ಎಂದು ಮುಖ್ಯೋಪಾದ್ಯಾಯ ಮನೋಜ್ ವಿಶ್ವಕರ್ಮ ಬಾಲಕ ಸೋನು ಯಾದವ್ನನ್ನು ಕಾಲು ಹಿಡಿದುಕೊಂಡು ತಲೆ ಕೆಳಗಾಗಿ ನೇತಾಡಿಸಿ ಬೆದರಿಕೆ ಒಡ್ಡಿದ್ದಾನೆ.
ವಿದ್ಯಾರ್ಥಿಗೆ ಕಚ್ಚಿರುವುದಕ್ಕೆ ಆಕ್ರೋಶಿತರಾದ ಮುಖ್ಯೋಪಾಧ್ಯಾಯ ಮನೋಜ್ ವಿಶ್ವಕರ್ಮ 2ನೇ ತರಗತಿ ವಿದ್ಯಾರ್ಥಿ ಸೋನು ಯಾದವ್ನನ್ನು ಎಳೆದುಕೊಂಡು ಶಾಲೆಯ ಕಟ್ಟಡದ ಕೊನೆಯ ಮಹಡಿಗೆ ಹೋದರು. ಅಲ್ಲಿ ಆತನ ಕಾಲು ಹಿಡಿದು ತಲೆ ಕೆಳಗಾಗಿ ನೇತಾಡಿಸಿ, ‘‘ನೀನು ಕಚ್ಚಿದ ವಿದ್ಯಾರ್ಥಿಯಲ್ಲಿ ಕ್ಷಮೆ ಕೇಳದೇ ಇದ್ದರೆ ಕೆಳಗೆ ಹಾಕಲಾಗುವುದು’’ ಎಂದು ಬೆದರಿಕೆ ಒಡ್ಡಿದ್ದರು. ಸೋನು ಯಾದವ್ ಗಟ್ಟಿಯಾಗಿ ಅಳುತ್ತಿರುವುದು ಕೇಳಿ ವಿದ್ಯಾರ್ಥಿಗಳ ಸಮೂಹ ಸೇರಿದ ಬಳಿಕ ಮನೋಜ್ ವಿಶ್ವಕರ್ಮ ಅವರು ಸೋನು ಯಾದವ್ನನ್ನು ಬಿಟ್ಟಿದ್ದಾರೆ.
‘‘ಮುಖ್ಯೋಪಾಧ್ಯಾಯರು ಮಾಡಿರುವುದು ತಪ್ಪು. ಆದರೆ, ಅವರು ಪ್ರೀತಿಯ ಕಾರಣಕ್ಕೆ ಮಾಡಿದರು. ಆದುರಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ’’ ಎಂದು ಸೋನು ಯಾದವ್ನ ತಂದೆ ರಂಜಿತ್ ಯಾದವ್ ಹೇಳಿದ್ದಾರೆ.
‘‘ಆತನ (ಸೋನು ಯಾದವ್)ನನ್ನು ಸರಿಪಡಿಸುವತಂತೆ ಆತನ ತಂದೆ ರಂಜಿತ್ ಯಾದವ್ ಹೇಳಿದ್ದರು’’ ಎಂದು ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ ಅಡಿಯಲ್ಲಿ ಬಂಧಿತರಾಗಿರುವ ಮುಖ್ಯೋಪಾಧ್ಯಾಯ ಮನೋಜ್ ವಿಶ್ವಕರ್ಮ ಹೇಳಿದ್ದಾರೆ.
‘‘ಸೋನು ತುಂಬಾ ಕೀಟಲೆಯ ವಿದ್ಯಾರ್ಥಿ. ಆತ ಮಕ್ಕಳಿಗೆ ಕಚ್ಚುತ್ತಿದ್ದ. ಅಧ್ಯಾಪಕರಿಗೆ ಕೂಡ ಕಚ್ಚುತ್ತಿದ್ದ. ಸರಿಪಡಿಸುವಂತೆ ಆತನ ತಂದೆ ನನಗೆ ಹೇಳಿದ್ದರು. ಆದುದರಿಂದ ನಾವು ಆತನನ್ನು ಹೆದರಿಸಲು ಪ್ರಯತ್ನಿಸಿದೆವು. ಹೆದರಿಕೆ ಹುಟ್ಟಲು ಆತನನನ್ನು ಕೊನೆಯ ಮಹಡಿಯಿಂದ ತಲೆಕೆಳಗಾಗಿ ನೇತಾಡಿಸಿದೆವು’’ ಎಂದು ಅವರು ಹೇಳಿದ್ದಾರೆ.