ಸೌದಿ ಅರೆಬಿಯಾ: ಗಣಿಗಾರಿಕೆ ಕ್ಷೇತ್ರದಲ್ಲಿ ಹೂಡಿಕೆಗೆ ಹೆಚ್ಚಿದ ಆಸಕ್ತಿ
ರಿಯಾದ್, ಅ.29: ಸೌದಿ ಅರೆಬಿಯಾದಲ್ಲಿ ಗಣಿಗಾರಿಕೆಯಲ್ಲಿ ಹೂಡಿಕೆ ಮಾಡಲು ಈ ವರ್ಷ ಹೆಚ್ಚಿನ ಹೂಡಿಕೆದಾರರು ಆಸಕ್ತಿ ತೋರಿದ್ದಾರೆ ಎಂದು ಗಣಿಗಾರಿಕೆ ವ್ಯವಹಾರ ಇಲಾಖೆಯ ಸಹಾಯಕ ಸಚಿವ ಖಾಲಿದ್ ಅಲ್ ಮುದೈಫರ್ ಹೇಳಿದ್ದಾರೆ.
ಎಫ್ಐಐ ಶೃಂಗಸಭೆಯ ನೇಪಥ್ಯದಲ್ಲಿ ಸುದ್ಧಿಗಾರರ ಜತೆ ಮಾತನಾಡಿದ ಅವರು, 2021ರಲ್ಲಿ 8 ಹೊಸ ಗಣಿಗಾರಿಕೆ ಲೈಸೆನ್ಸ್ ನೀಡಿದ್ದು ಇವೆಲ್ಲಾ ಬೃಹತ್ ಮೊತ್ತದ ಯೋಜನೆಗಳಾಗಿವೆ ಎಂದರು. ಗಣಿಗಾರಿಕೆಯು ಹೂಡಿಕೆಗೆ ಸಂಬಂಧಿಸಿದ್ದರಿಂದ ಇದರ ಕುರಿತ ನಿಯಮ ಸ್ಪರ್ಧಾತ್ಮಕವಾಗಿರಬೇಕು. ಯಾಕೆಂದರೆ ಜನತೆಗೆ ಇಲ್ಲಿ ಅಥವಾ ಬೇರೊಂದು ಕಡೆ ಹೂಡಿಕೆ ಮಾಡುವ ಆಯ್ಕೆ ಇರುತ್ತದೆ. ಆದ್ದರಿಂದ ಸೌದಿ ಅರೆಬಿಯಾವನ್ನು ವಿಶ್ವದಲ್ಲಿ ಅತ್ಯಂತ ಆಕರ್ಷಕ ಗಣಿಗಾರಿಕೆ ಹೂಡಿಕೆ ತಾಣವನ್ನಾಗಿಸಿದ್ದೇವೆ. ವಿಶ್ವದಲ್ಲೇ ಅತೀ ಕನಿಷ್ಟ ಗಣಿಗಾರಿಕೆ ತೆರಿಗೆ ವಿಧಿಸಲಾಗುತ್ತದೆ.
ಯಾಕೆಂದರೆ ನಾವು ಅಭಿವೃದ್ಧಿಯನ್ನು ಬಯಸುತ್ತೇವೆ. ಹೆಚ್ಚಿನ ಮೌಲ್ಯ, ಹೂಡಿಕೆ ವಿನಿಯೋಗಿಸಿದರೆ ಸೌದಿಯಲ್ಲಿ ಹೆಚ್ಚು ಉತ್ಪಾದಿಸಬಹುದು. ರಾಜಧನದಲ್ಲೂ ಸುಮಾರು 90%ವರೆಗೆ ವಿನಾಯಿತಿ ದೊರಕುತ್ತದೆ ಎಂದವರು ಹೇಳಿದ್ದಾರೆ. ಕಳೆದ 20 ವರ್ಷಕ್ಕೆ ಹೋಲಿಸಿದರೆ 2021ರ 9 ತಿಂಗಳಲ್ಲಿ ಅತ್ಯಧಿಕ ಅರ್ಜಿ ಸ್ವೀಕರಿಸಿದ್ದೇವೆ. ಇದುವರೆಗೆ 133 ಸ್ಥಳೀಯ ಪರಿಶೋಧನೆ(ಅನ್ವೇಷಣೆ) ಲೈಸೆನ್ಸ್ ನೀಡಿದ್ದು, 3 ಅಂತರಾಷ್ಟ್ರೀಯ ಪರಿಶೋಧನೆ ಲೈಸೆನ್ಸ್ ಪರಿಶೀಲನಾ ಹಂತದಲ್ಲಿದೆ ಎಂದವರು ಹೇಳಿದ್ದಾರೆ.