varthabharthi


ಸಿನಿಮಾ

ಪುನೀತ್ ಎಂಬ ಪಕ್ಕದ್ಮನೆ ಹುಡುಗ

ವಾರ್ತಾ ಭಾರತಿ : 30 Oct, 2021
ಡಾ. ಕೆ. ಪುಟ್ಟಸ್ವಾಮಿ

ಪುನೀತ್ ಎಂಬ ದೇದಿಪ್ಯಮಾನವಾಗಿ ಮಿನುಗುತ್ತಿದ್ದ ನಕ್ಷತ್ರವೊಂದು ದಿಢೀರನೆ ನೆಲಕ್ಕುರುಳಿದೆ...ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ನೋವು ತಂದಿದೆ.... ಅವರ ನೆನಪುಗಳು ಮಾತ್ರ ಅಭಿಮಾನಿಗಳೆದೆಯಲ್ಲಿ ಚಿರಸ್ಥಾಯಿಯಾಗಿ ನಿಲ್ಲಲಿವೆ...


  ನಾನು ಸಿನೆಮಾ ನೋಡುವಾಗ ಮೊದಲು ಅತ್ತದ್ದು ಬೆಟ್ಟದ ಹೂವು ಚಿತ್ರ ನೋಡುವಾಗ, ನನ್ನ 28ನೇ ವಯಸ್ಸಿನಲ್ಲಿ. ಓದುವ ಅದಮ್ಯ ಹಂಬಲದ ರಾಮುವಿಗೆ ಜನಪ್ರಿಯ ವಾಲ್ಮೀಕಿ ರಾಮಾಯಣ ಪುಸ್ತಕ ಕೊಳ್ಳುವ ಕನಸು. ಬೆಟ್ಟದ ಹೂಗಳನ್ನು ಸಂಗ್ರಹಿಸಿ ಹಣ ಕೂಡಿಸಿಕೊಂಡು ಪುಸ್ತಕ ಕೊಳ್ಳಲು ಸಿದ್ಧಮಾಡಿಕೊಂಡಾಗ ಚಳಿಯಲ್ಲಿ ನಡುಗುವ ತಂಗಿಯ ಅಗತ್ಯ ಮತ್ತು ರಾಮುವಿನ ಕನಸಿನ ಆಯ್ಕೆಯನ್ನು ಬಡತನವು ಮುಂದೊಡ್ಡುತ್ತದೆ. ತಂಗಿಗೆ ಕಂಬಳಿ ಹೊದಿಸಿ ಕತ್ತಲಲ್ಲಿ ಹೊರಗೆ ಕೂತು ಕಣ್ಣಂಚಿನಲ್ಲಿ ನೀರು ತುಳುಕಿಸುವ ರಾಮು ಬಡತನದ ರೌದ್ರ, ಬಡವರ ಅಸಹಾಯಕತೆ ಮತ್ತು ಬಯಕೆಯನ್ನು ಈಡೇರಿಸಿಕೊಳ್ಳದ ನೋವನ್ನು ಅಭಿವ್ಯಕ್ತಿಸುವಾಗ ನೋಡುಗನು ಸಹ ಕಣ್ಣೀರಾಗುತ್ತಾನೆ. ಭಾವುಕ ದೃಶ್ಯಗಳು ಕಲೆಯ ಪರಿಣಾಮವನ್ನು ಔನ್ನತ್ಯಕ್ಕೇರಿಸಬಲ್ಲವು ಎನ್ನುವುದಕ್ಕೆ ಆ ದೃಶ್ಯ ಸಾಕ್ಷಿ. ಈ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಗಳಿಸಿದ ಪುನೀತ್ ರಾಜ್‌ಕುಮಾರ್ ತನ್ನ ತಂದೆಗೆ ದಕ್ಕದ ಪ್ರಶಸ್ತಿಯನ್ನು ಪಡೆದ ಪುನೀತ.

ಇಂತಹ ನಲವತ್ತಾರು ವರ್ಷದ ಪುನೀತ್ ಸಾವು ಅರವತ್ತಾರನೇ ಕನ್ನಡ ರಾಜ್ಯೋತ್ಸವಕ್ಕೆ ಸೂತಕದ ಛಾಯೆಯನ್ನು ತಂದಿತ್ತರು.

ಕನ್ನಡಿಗರ ಅತೀ ತೀವ್ರವಾದ ಗೌರವಕ್ಕೆ ಪಾತ್ರವಾದದ್ದು ಡಾ. ರಾಜ್‌ಕುಮಾರ್ ಅವರ ಕಲೆ, ಕನ್ನಡಾಭಿಮಾನ, ವಿನಯ-ಸಂಸ್ಕಾರಗಳು... ಪುನೀತ್ ಅವರ ಪರಂಪರೆಯ ಮುಂದುವರಿದ ಕೊಂಡಿಯಾಗಿದ್ದರು. ಹೊಸತಲೆಮಾರಿನ ನಟರಲ್ಲಿ ಅಬಾಲವೃದ್ಧರ ಅಭಿಮಾನ ಪ್ರೀತಿ ಗಳಿಸಿದ್ದರು. ವಯಸ್ಸಾದ ನಮ್ಮಂತಹವರಿಗೆ ಪುನೀತ್ ನಮ್ಮ ಕಣ್ಣೆದುರು ತೆರೆಯ ಮೇಲೆ ಬೆಳೆದ ಮಗು. ‘ಪ್ರೇಮದ ಕಾಣಿಕೆ’ಯ ವರುಷದ ಕೂಸು ‘ಸನಾದಿ ಅಪ್ಪಣ್ಣ’ ಚಿತ್ರದಲ್ಲಿ ಪುಟು ಪುಟು ತಪ್ಪಾಡಿಸಾಡಿ ಹೆಜ್ಜೆ ಹಾಕಿ ತೆರೆಯ ಮೇಲೆ ಬಂದು ತಂದೆಯ ಪಾತ್ರ ವಹಿಸಿದ್ದ ರಾಜ್ ಕೊರಳ ತಬ್ಬಿದಾಗ ಮುಂದೂಂದು ದಿನ ಆ ಹೆಜ್ಜೆ ಕನ್ನಡಿಗರೆದೆಗೂ ಇಳಿದು ಕೊರಳು ಬಳಸಬಹುದೆಂಬ ಕಲ್ಪನೆ ಇರಲಿಲ್ಲ.

ನಂತರದ ‘ವಸಂತಗೀತ’ದಲ್ಲಿ ಚಳಿಬಿಟ್ಟು ಕುಣಿದು, ವಿಲನ್‌ಗಳಿಗೆ ಚಳ್ಳೆಹಣ್ಣು ತಿನ್ನಿಸುವ, ‘ಚಲಿಸುವ ಮೋಡಗಳಲ್ಲಿ’ ಕಾಣದಂತೆ ಮಾಯವಾದನು ಎಂದು ಹಾಡುತ್ತಾ ‘‘ಏನ್ ಸರ್, ಹನಿಮೂನಾ?’’ ಎಂದು ರಾಜ್‌ಗೆ ಛೇಡಿಸುವ, ‘ಭೂಮಿಗೆ ಬಂದ ಭಗವಂತ’, ‘ಭಾಗ್ಯವಂತ’, ‘ಎರಡು ನಕ್ಷತ್ರಗಳು’, ‘ಭಕ್ತ ಪ್ರಹ್ಲಾದ’, ‘ಪರಶುರಾಮ’ ಚಿತ್ರಗಳಲ್ಲಿ ಹಾಡುತ್ತಾ ಕುಣಿಯುತ್ತಾ ಲಗ್ಗೆಯಿಟ್ಟ ಪುನೀತ್ ತನ್ನ ಬಿಂಬದಿಂದ ನಮ್ಮೆದುರು ಬೆಳೆದ ಅಭಿಮಾನದ ಹುಡುಗ. ಶಿವಣ್ಣ, ರಾಘಣ್ಣ, ಸುದೀಪ್, ದರ್ಶನ್, ಯಶ್ ಎಲ್ಲರೂ ಯುವಕರಾಗಿ ಅವತರಿಸಿದರೆ ಪುನೀತ್ ಕಣ್ಣೆದುರೇ ನಿಧಾನವಾಗಿ ಮನೆ ಮಗನಂತೆ ಕನ್ನಡಿಗರ ಮುಂದೆ ಬೆಳೆದರು. ಹಾಗಾಗಿ ಕನ್ನಡಿಗರಿಗೆ ಅಪ್ಪು ಬಗ್ಗೆ ವಿಶೇಷ ಕಕ್ಕುಲಾತಿ ಇತ್ತು. ಪುನೀತ್ ಕ್ರಮೇಣ ಯುವ ಮನಸ್ಸನ್ನು ಆವರಿಸಿದ್ದು ಸಹ ಕನ್ನಡ ಚಿತ್ರರಂಗದ ವಿಶಿಷ್ಟ ವಿದ್ಯಮಾನ.

‘ಅಪ್ಪು’, ‘ಅಭಿ’ ಚಿತ್ರದ ಪಾತ್ರಗಳು ಯುವ ಶಕ್ತಿಯ ಅಭಿವ್ಯಕ್ತಿಯಾಗಿ ಮೂಡಿಸಿದ ತಾಜಾತನ ಯುವ ಜನತೆಯ ಅದಮ್ಯ ಚೈತನ್ಯವನ್ನು ಪ್ರತಿನಿಧಿಸಿದರೆ ಪುನೀತ್ ಅವರ ಕುಣಿತ, ಸರಳ ನಗು, ಶಿಶುಸಹಜ ಕುತೂಹಲದ ನೋಟ ಎಳೆಯರನ್ನು ಸೆಳೆದವು. ಹಿಂಸೆಯನ್ನು ಅತಿಗೆ ಒಯ್ಯದ, ಸಾಹಸ-ಹೊಡೆದಾಟಗಳಿಗೂ ನೃತ್ಯದ ಲಾಲಿತ್ಯವನ್ನು ತಂದ, ಸಾಮಾಜಿಕ ಜವಾಬ್ದಾರಿ ಬಿಂಬಿಸುವ ಪಾತ್ರಗಳನ್ನೂ ನಿರ್ವಹಿಸಿ, ಅಶ್ಲೀಲತೆಯ ಸೋಂಕು ಇಲ್ಲದ ಚಿತ್ರಗಳಲ್ಲಿ ನಟಿಸಿದ ಪುನಿತ್ ಸಮಕಾಲೀನ ಪ್ರೇಕ್ಷಕರಿಗೆ ರುಚಿಶುದ್ಧ ಚಿತ್ರಗಳ ಭರವಸೆಯಂತಿದ್ದರು. ತೆರೆಯಿಂದ ಆಚೆಗಿನ ಅವರ ವಿನಯ ವರ್ತನೆ ಸಹ ಅನುಕರಣೀಯವಾದ ಕಾರಣ ಯುವಜನತೆಗೆ ಅನುಕರಣೀಯರಾಗಿದ್ದರು. ಹೊಸ ವಸ್ತು ನಿರೂಪಣೆಗಳ ಪ್ರಯೋಗಗಳಿಗೆ ತೆರೆದ ಬಾಗಿಲಾಗಿದ್ದ ಪುನೀತ್ ಅವರನ್ನು ಸಮರ್ಥವಾಗಿ ದುಡಿಸಿಕೊಳ್ಳುವ ನಿರ್ದೇಶಕರ ಅಭಾವ ಇದ್ದದ್ದನ್ನೂ ಮರೆಯುವಂತಿಲ್ಲ.

Punith Rajkumar was really a chip of the old block.... ಅಪ್ಪನ ಎಲ್ಲಾ ಸದ್ಗುಣ, ವೃತ್ತಿಪರತೆ, ಕಲೆ ಎಲ್ಲವನ್ನೂ ಮೈಗೂಡಿಸಿಕೊಂಡು, ತನ್ನ ಸ್ವಂತಿಕೆಯನ್ನೂ ಸೇರಿಸಿಕೊಂಡು ತನ್ನ ವೃತ್ತಿ ಮತ್ತು ಸಾರ್ವಜನಿಕ ಜೀವನಗಳಿಗೆ ಮೊುಗು ಕೊಟ್ಟಿದ್ದರು... ಯುವಕರಿಗೇನು, ನನ್ನಂತಹ ಹಿರಿಯ ನಾಗರಿಕರಿಂದಲೂ ‘ಭೇಷ್’ ಎನಿಸಿಕೊಂಡಿದ್ದರು... ಅವರ ಸಹೋದರರೂ ಅವರಷ್ಟೇ ಗುಣವಂತರು...

ಪುನೀತ್ ಎಂಬ ದೇದಿಪ್ಯಮಾನವಾಗಿ ಮಿನುಗುತ್ತಿದ್ದ ನಕ್ಷತ್ರವೊಂದು ದಿಢೀರನೆ ನೆಲಕ್ಕು ರುಳಿದೆ...ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ನೋವು ತಂದಿದೆ.... ಅವರ ನೆನಪುಗಳು ಮಾತ್ರ ಅಭಿಮಾನಿಗಳೆದೆಯಲ್ಲಿ ಚಿರಸ್ಥಾಯಿಯಾಗಿ ನಿಲ್ಲಲಿವೆ...

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)