ವ್ಯಾಪಾರ, ಹವಾಮಾನ ಕೋವಿಡ್ ಬಗ್ಗೆ ಯೂರೋಪಿಯನ್ ನಾಯಕರ ಜತೆ ಮೋದಿ ಚರ್ಚೆ
ನರೇಂದ್ರ ಮೋದಿ (Photo source: PTI)
ಹೊಸದಿಲ್ಲಿ, ಅ.30: ಯೂರೋಪಿಯನ್ ಮಂಡಳಿಯ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಮತ್ತು ಯೂರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲಿಯಾನ್ ಜತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚರ್ಚೆ ನಡೆಸಿದರು. ರೋಮ್ನಲ್ಲಿ ನಡೆಯುತ್ತಿರುವ 16ನೇ ಜಿ20 ಶೃಂಗದ ವೇಳೆ ಪ್ರಧಾನಿಯವರು ಯೂರೋಪಿಯನ್ ಮುಖಂಡರ ಜತೆ ಚರ್ಚಿಸಿದರು. ರಾಜಕೀಯ ಮತ್ತು ಭದ್ರತಾ ವಿಷಯಗಳು, ವ್ಯಾಪಾರ, ಹೂಡಿಕೆ ಮತ್ತು ಆರ್ಥಿಕ ಸಹಕಾರ ಸೇರಿದಂತೆ ಸೇರಿದಂತೆ ಭಾರತ ಮತ್ತು ಯೂರೋಪಿಯನ್ ಒಕ್ಕೂಟದ ನಡುವಿನ ಸಹಕಾರ ಬಗ್ಗೆ ಮುಖಂಡರು ಮಾತುಕತೆ ನಡೆಸಿದರು. ಇದರ ಜತೆಗೆ ಕಳೆದ ಶೃಂಗದಲ್ಲಿ ಚರ್ಚಿಸಿದ್ದ 2025ರ ಮಾರ್ಗಸೂಚಿ ಬಗ್ಗೆಯೂ ಚರ್ಚೆ ನಡೆಯಿತು.
ಹವಾಮಾನ ಬದಲಾವಣೆ, ಕೋವಿಡ್-19 ಸಾಂಕ್ರಾಮಿಕ ಮತ್ತು ಪ್ರಚಲಿತ ಜಾಗತಿಕ ಮತ್ತು ಪ್ರಾದೇಶಿಕ ಅಭಿವೃದ್ಧಿ ಹಿತಾಸಕ್ತಿಗಳ ಬಗ್ಗೆಯೂ ಮಾತುಕತೆ ನಡೆಸಲಾಯಿತು. ಲಸಿಕೆ ವಿಚಾರದಲ್ಲಿ ಭಾರತದ ಅದ್ಭುತ ಯಶಸ್ಸಿಗೆ ಯೂರೋಪಿಯನ್ ಮುಖಂಡರು ಮೆಚ್ಚುಗೆ ಸೂಚಿಸಿದರು ಎಂದೂ ಸರ್ಕಾರ ಹೇಳಿದೆ.
ಜಿ-20 ಶೃಂಗದಲ್ಲಿ ಪಾಲ್ಗೊಳ್ಳಲು ಇಟೆಲಿಗೆ ಆಗಮಿಸಿದ ಬಳಿಕ ಇದು ಮೋದಿಯವರ ಪ್ರಮುಖ ಮಾತುಕತೆಯಾಗಿದೆ. ಮೋದಿ ಜತೆಗಿನ ಭೇಟಿ ಅತ್ಯುತ್ತಮವಾಗಿತ್ತು ಎಂದು ಯೂರೋಪಿಯನ್ ಕಮಿಷನ್ ಅಧ್ಯಕ್ಷೆ ಲಿಯಾನ್ ಹೇಳಿದ್ದಾರೆ. ನಮ್ಮ ವ್ಯಾಪಾರ ಮಾತುಕತೆಗಳನ್ನು ಆರಂಭಿಸಲು ನಾವು ಒಪ್ಪಿಕೊಂಡಿದ್ದೇವೆ. ಹವಾಮಾನ, ಅನುಶೋಧನೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ.