ಅಜ್ಮಾನ್: ಬಿಸಿಎಫ್ ನಿಂದ ಸಚಿವ ಡಾ.ಅಶ್ವತ್ಥ ನಾರಾಯಣರಿಗೆ ಸನ್ಮಾನ
ಯುಎಇ, ಅ.30: ಕರ್ನಾಟಕ ಸರಕಾರದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣರನ್ನು ದುಬೈಯ ಬ್ಯಾರೀಸ್ ಕಲ್ಚರಲ್ ಫೋರಂ(ಬಿಸಿಎಫ್) ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.
ಅಜ್ಮಾನ್ನ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಸಭಾಂಗಣದಲ್ಲಿ ಬಿಸಿಎಫ್ ಅಧ್ಯಕ್ಷ ಬಿ.ಕೆ.ಯೂಸುಫ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣರನ್ನು ಕರ್ನಾಟಕದ ಉನ್ನತ ಶಿಕ್ಷಣ, ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಜೈವಿಕ ವಿಜ್ಞಾನ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನುಪರಿಗಣಿಸಿ ವಿಶೇಷ ಸ್ಮರಣ ಫಲಕ ನೀಡಿ ಸನ್ಮಾನಿಸಲಾಯಿತು.
ಇದೇವೇಳೆ ಯುಎಇ - ಅಜ್ಮಾನ್ ನಲ್ಲಿ ಹೆಸರಾಂತ ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಸ್ಥಾಪಿಸಿ ವೈದ್ಯಕೀಯ ವಿಜ್ಞಾನ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಉತ್ಕೃಷ್ಟ ಸೇವೆ ನೀಡುತ್ತಿರುವ ಹಾಗೂ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿಗೆ ಅನುಸಾರವಾಗಿ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಅಧ್ಯಕ್ಷ ಹಾಗೂ ಬಿಸಿಎಫ್ ಪ್ರಧಾನ ಸ್ಥಾಪಕ ಪೋಷಕರೂ ಆಗಿರುವ ಡಾ.ತುಂಬೆ ಮೊಯ್ದಿನ್ ರನ್ನು 'SPECIAL HON. CORPORATE SOCIAL RESPONSIBILITY AWARD' ನೀಡಿ ಸನ್ಮಾನಿಸಲಾಯಿತು.
ಯುಎಇಯ ಓರ್ವ ಜನಪ್ರಿಯ ಕನ್ನಡಿಗ ಮುಖಂಡ, ಫಾರ್ಚ್ಯೂನ್ ಗ್ರೂಪ್ ಹೋಟೆಲ್ ಮಾಲಕ, ಕೆಎನ್ಆರ್ ಐ ಅಧ್ಯಕ್ಷರೂ ಆಗಿರುವ ಪ್ರವೀಣ್ ಶೆಟ್ಟಿಯವರನ್ನು ಕೋವಿಡ್-19 ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ ಕನ್ನಡಿಗರಿಗೆ ಊರಿಗೆ ತೆರಳಲು ವಿಮಾನ ಯಾನದ ವ್ಯವಸ್ಥೆ ಹಾಗೂ ಮತ್ತು ಇತರ ನೆರವು ಒದಗಿಸಿದ್ದಕ್ಕಾಗಿ 'SPECIAL AWARD OF CORPORATE SOCIAL RESPONDIBILITY AWARD' ನೀಡಿ ಸನ್ಮಾನಿಸಲಾಯಿತು
ಬಿಸಿಎಫ್ ಉಪಾಧ್ಯಕ್ಷರುಗಳಾದ ಅಬ್ದುಲ್ಲತೀಫ್ ಮುಲ್ಕಿ ಮತ್ತು ಅಮೀರುದ್ದೀನ್ ಎಸ್.ಐ. ಉಪಸ್ಥಿತರಿದ್ದರು.
ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮುಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.