varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 1 Nov, 2021
ಪಿ.ಎ.ರೈ

ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಅಡ್ಡಿ ಉಂಟುಮಾಡಲು ಇನ್ನು ಯಾರಿಂದಲೂ ಸಾಧ್ಯವಿಲ್ಲ - ಅಮಿತ್ ಶಾ, ಕೇಂದ್ರ ಸಚಿವ

ಹೌದು, ನಿಮ್ಮ್ಮಬ್ಬರಿಂದ ಮಾತ್ರ ಅದು ಸಾಧ್ಯವಾಗಿರುವುದು.


ಜನರ ಸಾವು, ನೋವುಗಳನ್ನು ಸಂಭ್ರಮಿಸುವ ಏಕೈಕ ಪಕ್ಷ ಇದ್ದರೆ ಅದು ಬಿಜೆಪಿ - ಬಿ.ಕೆ.ಹರಿಪ್ರಸಾದ್, ಶಾಸಕ

ಸಾವು ನೋವುಗಳು ಮತಗಳನ್ನು ತಂದು ಕೊಡುತ್ತವೆ ಎಂದ ಮೇಲೆ ಸಂಭ್ರಮ ಸಹಜ ತಾನೇ.


ಕೋವಿಡ್ ಸಂದರ್ಭದಲ್ಲಿ ಹಸಿವಿನಿಂದ ಯಾರೂ ಸತ್ತಿಲ್ಲ - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಬಹುಶಃ ಲಾಕ್‌ಡೌನ್ ಸಂದರ್ಭದಲ್ಲಿ ಹಸಿವಿನಿಂದ ಸತ್ತಿರಬೇಕು.


ಅಧಿಕಾರ ಇರಲಿ, ಬಿಡಲಿ ಯಡಿಯೂರಪ್ಪ ರಾಜಾಹುಲೀನೆ- ವಿಜಯೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ

ಹಲ್ಲು, ಉಗುರು ಇಲ್ಲದ ಹುಲಿ.


ನಮ್ಮ ಪಕ್ಷದ ಲಾಭ ಪಡೆದುಕೊಂಡವರು ಯಾರೂ ಈಗ ನಮ್ಮಂದಿಗಿಲ್ಲ, ಎಲ್ಲ ಹಣ, ಅಧಿಕಾರದ ಬೆನ್ನುಹತ್ತಿ ಹೋಗಿದ್ದಾರೆ- ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ಬಿಜೆಪಿ, ಕಾಂಗ್ರೆಸ್‌ನಿಂದ ನೀವು ಲಾಭ ಪಡೆದುಕೊಂಡ ಹಾಗೆ.


ದೇಶದಲ್ಲಿ ಆಗಲಿ, ರಾಜ್ಯದಲ್ಲೇ ಆಗಲಿ ಬಿಜೆಪಿಗೆ ಯಾವ ಪಕ್ಷದೊಂದಿಗೂ ಮೈತ್ರಿಮಾಡಿಕೊಳ್ಳುವ ಅಗತ್ಯವಿಲ್ಲ - ಈಶ್ವರಪ್ಪ, ಸಚಿವ

ಮೈತ್ರಿಗಿಂತ ದ್ವೇಷದಲ್ಲೇ ಹೆಚ್ಚು ನಂಬಿಕೆ ಇರಬೇಕು.


ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ಪರಿಣಾಮವಾಗಿ ರಾಜ್ಯದಲ್ಲಿ ಜೆಡಿಎಸ್ ನೆಲಕಚ್ಚ್ಚಿರುವುದು ನಿಜ - ಕುಮಾರಸ್ವಾಮಿ, ಮಾಜಿ ಸಿಎಂ

ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡು ನಂಬಿದ ಜನರನ್ನೇ ಕಚ್ಚಿದವರಲ್ಲವೇ ನೀವು ?


ಬೇರೆ ದೇಶದಿಂದಲೇ ಚೀನಾಕ್ಕೆ ಡೆಲ್ಟಾ ರೂಪಾಂತರಿ ಕಾಲಿಟ್ಟಿದೆ - ವು ಲಿಯಾಂಗ್ ಯು, ಚೀನಾ ಆರೋಗ್ಯ ಆಯೋಗದ ಅಧಿಕಾರಿ

ಹೌದು, ಚೀನಾದಲ್ಲಿ ತಯಾರಾದ ವೈರಸ್ ಆಗಿದ್ದಿದ್ದರೆ ಇಷ್ಟು ಸಮಯ ಬಾಳಿಕೆ ಬರುತ್ತಿರಲಿಲ್ಲ.


ಒಂದು ಕಾಲದಲ್ಲಿ ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸಿ ಸಾಕುವ ಸರಕಾರ ಇತ್ತು. ಆದರೆ ಈಗ ಕಾಲ ಬದಲಾಗಿದೆ - ಸಿ.ಟಿ.ರವಿ, ಶಾಸಕ

ಈಗ ಪಾಕಿಸ್ತಾನಕ್ಕೆ ಖುದ್ದು ಹೋಗಿ ಬಿರಿಯಾನಿ ತಿಂದು ಬರುವ ಸರಕಾರ ಬಂದಿದೆ ಅಷ್ಟೇ.


ಪಂಜಾಬಿನಲ್ಲೊಬ್ಬ, ಕರ್ನಾಟಕದಲ್ಲೊಬ್ಬ ಸಿದ್ದು ಇದ್ದಾರೆ. ಈ ಇಬ್ಬರು ಸಿದ್ದುಗಳಿಂದ ಕಾಂಗ್ರೆಸ್ ಅವನತಿಯತ್ತ ಸಾಗಿದೆ
-ಜಗದೀಶ್ ಶೆಟ್ಟರ್, ಮಾಜಿ ಸಿಎಂ

ದೇಶ ಅವನತಿಯತ್ತ ಸಾಗುತ್ತಿರುವುದು ಯಾರಿಂದ ಎನ್ನುವ ಬಗ್ಗೆ ಮಾಹಿತಿ ಇದೆಯೇ?


ಮಹಿಳೆಯರನ್ನು ರಕ್ಷಿಸುವಲ್ಲಿ ಈ ದೇಶ ಹಾಗೂ ರಾಜ್ಯ ಸಂಪೂರ್ಣ ವಿಫಲವಾಗಿದೆ - ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕಿ
*ಮಹಿಳೆಯರಿಂದ ಬಿಜೆಪಿಯನ್ನು ರಕ್ಷಿಸುವುದು ಹೇಗೆ ಎನ್ನುವುದು ಬಿಜೆಪಿ ವರಿಷ್ಠರ ಚಿಂತೆಯಾಗಿದೆ.


ಗೆಲ್ಲಲಿ ಸೋಲಲಿ ನಾವು ನಮ್ಮ ತಂಡದ ಪರವಿರಬೇಕು - ಗೌತಮ್ ಗಂಭೀರ್, ಮಾಜಿ ಕ್ರಿಕೆಟಿಗ

ಕ್ರಿಕೆಟ್ ಗೆದ್ದಾಗ ಕ್ರಿಕೆಟ್ ಜೊತೆಗಿರುವುದು ಕ್ರಿಕೆಟಿಗೆ ಮರ್ಯಾದೆ.


ಜೆಡಿಎಸ್ ಒಂದು ಪಕ್ಷವಲ್ಲ ಅದೊಂದು ಕಂಪೆನಿ - ಶ್ರೀನಿವಾಸ ಪ್ರಸಾದ್, ಸಂಸದ

ಬಹುಶಃ ನಾಟಕ ಕಂಪೆನಿ ಇರಬೇಕು.


ಜೆಡಿಎಸ್ ಮುಗಿಸಲು ಆ ಪಕ್ಷದ ನಾಯಕರೇ ಸಾಕು - ಸಿದ್ದರಾಮಯ್ಯ, ಮಾಜಿ ಸಿಎಂ

ಅದಕ್ಕಾಗಿ ಜೆಡಿಎಸ್‌ನ್ನು ತೊರೆದು ಬಂದಿರಾ?


ಗ್ರಾಮ ಪಂಚಾಯತ್ ಸದಸ್ಯರಿಗೆ ಇರುವ ಅಧಿಕಾರ, ದಿಲ್ಲಿ ನಾಯಕರಿಗೂ ಇಲ್ಲ -ಬಿ.ಎಲ್.ಸಂತೋಷ್, ಬಿಜೆಪಿ ರಾ.ಸಂ.ಪ್ರಧಾನ ಕಾರ್ಯದರ್ಶಿ
ಮತ್ಯಾಕೆ ನೀವು ಗ್ರಾಮ ಬಿಟ್ಟು ದಿಲ್ಲಿಗೆ ಹೋಗಿದ್ದು ?


ಕುರುಬರಿಗೆ ಸಿದ್ದರಾಮಯ್ಯರನ್ನು ಕಂಡರೆ ಇಂಗ್ಲಿಷ್ ಸಿನೆಮಾ ನೋಡಿದ ಹಾಗೆ ಆಗುತ್ತದೆ. ಅದಕ್ಕೆ ಅವರು ವೇದಿಕೆ ಏರಿದ ತಕ್ಷಣ ಚಪ್ಪಾಳೆ, ಶಿಳ್ಳೆ ಹೊಡೆಯುತ್ತಾರೆ - ಎಚ್.ವಿಶ್ವನಾಥ್, ವಿ.ಪ.ಸದಸ್ಯ

ನಿಮ್ಮನ್ನು ನೋಡಿದರೆ ‘ಹಾರರ್’ ಸಿನೆಮಾ ನೋಡಿದ ಹಾಗೆ ಆಗುತ್ತಂತೆ. ಅದಕ್ಕೆ ನೀವಿರುವಲ್ಲಿ ಜನ ಬರುವುದೇ ಇಲ್ಲ.


ಸ್ವಾತಂತ್ರಾ ನಂತರ ಸುದೀರ್ಘ ಕಾಲದವರೆಗೆ ದೇಶದ ಆರೋಗ್ಯ ಕ್ಷೇತ್ರವನ್ನು ತೀರಾ ಕಡೆಗಣಿಸಲಾಗಿತ್ತು -ನರೇಂದ್ರ ಮೋದಿ, ಪ್ರಧಾನಿ

ನೀವು ಮತ್ತು ಕೊರೋನದ ಆಗಮನ ಆರೋಗ್ಯ ಕ್ಷೇತ್ರದ ಬಗ್ಗೆ ಜನ ತಲೆ ಕೆಡಿಸುವಂತಾಯಿತು.


ಕಾಂಗ್ರೆಸ್‌ನವರು ಹುಟ್ಟು ಕುಡುಕರು - ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ

ಅಬಕಾರಿ ಇಲಾಖೆ ಲಾಭದಲ್ಲಿರುವುದೇ ಅವರಿಂದ ಅಂತೆ.


ಹಿಂದೆ 40 ವರ್ಷಗಳ ಕಾಲ ಕಾಂಗ್ರೆಸ್ ಹೇಗೆ ಕೇಂದ್ರ ಸ್ಥಾನದಲ್ಲಿತ್ತೋ ಅದೇರೀತಿ ಮುಂದಿನ ಹಲವು ದಶಕಗಳ ಕಾಲ ಬಿಜೆಪಿ ಉಳಿಯಲಿದೆ- ಪ್ರಶಾಂತ್ ಕಿಶೋರ್, ಚುನಾವಣಾ ತಂತ್ರಗಾರ

ಆದರೆ ದೇಶ ಮಾತ್ರ ಹೇಗಿರುತ್ತೆ ಎನ್ನುವುದನ್ನು ಕಲ್ಪಿಸಲೂ ಸಾಧ್ಯವಿಲ್ಲ.


ಮೀಸಲಾತಿ ಕೊಡುವುದಾಗಿ ಮಾತುಕೊಟ್ಟು ತಪ್ಪಿದ್ದಕ್ಕೆ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು, ನಮಗೆ 2‘ಎ’ ಮೀಸಲಾತಿ ನೀಡದಿದ್ದರೆ ಬೊಮ್ಮಾಯಿ ಸರಕಾರಕ್ಕೂ ಶಾಕ್ ಗ್ಯಾರೆಂಟಿ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ

ಹೊಸ ಸಿಡಿ ಸಿಕ್ಕಿದೆಯೇ?


ನಾವು ಶಿಕ್ಷಕರನ್ನು ನೇಮಿಸಿದ್ದು ಪಾಠಮಾಡಲಿ ಎಂದೇ ಹೊರತು ಅವರ ಸಂಸಾರವನ್ನು ನೋಡಿಕೊಳ್ಳಲಿ ಎಂದಲ್ಲ
- ಬಿ.ಸಿ.ನಾಗೇಶ್, ಸಚಿವ

ಶಿಕ್ಷಕರಿಗೆ ಹಾಗಾದರೆ ಸಂಸಾರವನ್ನು ಹೊಂದುವ ಹಕ್ಕಿಲ್ಲವೇ?


ಬಿಟ್ ಕಾಯಿನ್ ಪ್ರಕರಣದಲ್ಲಿ ಕೇಳಿ ಬರುತ್ತಿರುವ ಹೆಸರುಗಳನ್ನು ಗಮನಿಸಿದರೆ ಆಘಾತವಾಗುತ್ತಿದೆ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ನಿಮ್ಮ ಆಪ್ತರ ಹೆಸರು ಅದರಲ್ಲಿದೆಯೇ?


ಮದ್ಯ ಸೇವಿಸಿದವರು ಜೈಲಿಗೆ ಹೋಗುವುದಿಲ್ಲ, ಡ್ರಗ್ಸ್ ಸೇವಿಸಿದವರನ್ನು ಜೈಲಿಗಟ್ಟಲಾಗುತ್ತಿದೆ - ರಾಮದಾಸ್ ಅಠಾವಳೆ, ಕೇಂದ್ರ ಸಚಿವ
ಅಧಿಕಾರಿಗಳ ವರ್ತನೆ ನೋಡಿದರೆ ಡ್ರಗ್ಸ್ ಸೇವಿಸಿದವರು ಯಾರು ಎನ್ನುವ ಪ್ರಶ್ನೆ ಉತ್ತರವಿಲ್ಲದೆ ಉಳಿದು ಬಿಡುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು