ಮುಂದಿನ ವರ್ಷ ಉತ್ತರಪ್ರದೇಶ ಚುನಾವಣೆಗೆ ಸ್ಪರ್ಧಿಸುವುದಿಲ್ಲ:ಅಖಿಲೇಶ್ ಯಾದವ್
ಲಕ್ನೋ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಸೋಮವಾರ ಹೇಳಿದ್ದಾರೆ.
ಚುನಾವಣೆಗೆ ತಮ್ಮ ಪಕ್ಷ ಹಾಗೂ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ನಡುವೆ ಮೈತ್ರಿಯನ್ನು ಅಂತಿಮಗೊಳಿಸಲಾಗಿದೆ ಎಂದು ಅವರು ಹೇಳಿದರು.
ಆರ್‌ಎಲ್‌ಡಿ ಜತೆಗಿನ ನಮ್ಮ ಮೈತ್ರಿ ಅಂತಿಮವಾಗಿದೆ. ಸೀಟು ಹಂಚಿಕೆ ಅಂತಿಮಗೊಳ್ಳಬೇಕಿದೆ ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅಝಂಗಢದ ಸಮಾಜವಾದಿ ಪಕ್ಷದ ಸಂಸದ ಹಾಗೂ ಅವರ ಪಕ್ಷದ ಮುಖ್ಯಮಂತ್ರಿ ಮುಖವೂ ಆಗಿರುವ ಯಾದವ್ ಅವರು "ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ" ಎಂದು ಹೇಳಿದರು.
ಚಿಕ್ಕಪ್ಪ ಶಿವಪಾಲ್ ಯಾದವ್ ಅವರ ಪ್ರಗತಿಶೀಲ ಸಮಾಜವಾದಿ ಪಕ್ಷದ ಲೋಹಿಯಾ (ಪಿಎಸ್‌ಪಿಎಲ್) ವನ್ನು ಚುನಾವಣೆಯಲ್ಲಿ ತಮ್ಮ ಜೊತೆ ಸೇರಿಸಿಕೊಳ್ಳುವ ಸಾಧ್ಯತೆಗಳ ಕುರಿತು "ನನಗೆ ಇದರಿಂದ ಯಾವುದೇ ತೊಂದರೆ ಇಲ್ಲ. ಅವರಿಗೆ ಹಾಗೂ ಅವರ ಜನರಿಗೆ ಸರಿಯಾದ ಗೌರವವನ್ನು ನೀಡಲಾಗುವುದು" ಎಂದು ಹೇಳಿದರು.