varthabharthi


ಆರೋಗ್ಯ

ಆತ್ಮಹತ್ಯೆಯ ನಿರ್ಧಾರ ಸಲ್ಲದು

ವಾರ್ತಾ ಭಾರತಿ : 3 Nov, 2021
ಡಾ. ಕ್ಯಾಥರಿನ್ ಜೆನಿಫರ್ Psychologist, DMHP ಉಡುಪಿ. ಡಾ. ಮನು ಆನಂದ್ Psychiatrist, DMHP ಉಡುಪಿ

ಒಬ್ಬ ಮನುಷ್ಯನ ಬೆಳವಣಿಗೆಯಲ್ಲಿ ಪೋಷಕರು, ಮಿತ್ರರು, ಬಂಧುಬಳಗ, ಸಮಾಜ ಮತ್ತು ಸರಕಾರದ ಪಾಲು ಇರುತ್ತದೆ. ಮನುಷ್ಯ ಸಂಘ ಜೀವಿ, ಅವನ ಸುಖ ದುಃಖಗಳನ್ನು ಜನರ ಜೊತೆ ಹಂಚಿಕೊಳ್ಳುತ್ತಾ ಬೆಳೆಯುತ್ತಾನೆ. ಆದರೆ ಆತ್ಮಹತ್ಯೆ ಎಂದಾಗ ಮಾತ್ರ ಯಾರ ಬಗ್ಗೆಯೂ ಯೋಚಿಸುವುದಿಲ್ಲ.
 ನಮ್ಮ ದೇಶದಲ್ಲಿ ಪ್ರತಿ ವರ್ಷ ಸಹಸ್ರಾರು ಮಂದಿ ತಾವಾಗಿಯೇ ಜೀವ ಕಳೆದುಕೊಳ್ಳುತ್ತಾರೆ ಹಾಗೂ ಅದಕ್ಕಿಂತ ಹೆಚ್ಚು ಜನ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ.

ಜನರು ಆತ್ಮಹತ್ಯೆಗೆ ಶರಣಾಗಲು ಹಲವು ಕಾರಣಗಳಿವೆ:
  
* ಖಿನ್ನತೆ, ಸ್ಕಿರೆಫ್ರೇನಿಯಾ, ಆಘಾತ, ಒತ್ತಡ ಸಂಬಂಧವಾದ ಮಾನಸಿಕ ಕಾಯಿಲೆಗಳು.

* ನಿರುದ್ಯೋಗ, ಬಡತನ ಮತ್ತು ಆರೋಗ್ಯ ಅಸಮಾನತೆಗಳು.

* ಕೌಟುಂಬಿಕ ಹಿಂಸೆ, ಸಂಬಂಧಿಕರು ಹಾಗೂ ಸ್ನೇಹಿತರ ನಡುವಣ ಬಾಂಧವ್ಯದಲ್ಲಿ ಬಿರುಕು.
ಆತ್ಮಹತ್ಯೆಯು ಸಂಪದ್ಭರಿತ ದೇಶಗಳಲ್ಲಿ ಮಾತ್ರ ಸಂಭವಿಸುವುದಿಲ್ಲ, ಪ್ರಪಂಚದ ಎಲ್ಲಾ ಪ್ರದೇಶಗಳಲ್ಲಿ ನಡೆಯುವ ಘಟನೆಯಾಗಿದೆ. ಅದಕ್ಕೆ ಯಾರೂ ಕೂಡ ಒಳಗಾಗಬಹುದು.

ಮುನ್ನೆಚ್ಚರಿಕೆಗಳು:
ಯಾರಾದರೂ ತಕ್ಷಣ ಆತ್ಮಹತ್ಯೆಗೆ ಪ್ರಯತ್ನಿಸುವ ಅಪಾಯವನ್ನು ಹೊಂದಿರಬಹುದು ಎಂಬುದಕ್ಕೆ ಕೆಲವೊಂದು ಎಚ್ಚರಿಕೆಯ ಚಿಹ್ನೆಗಳಿವೆ.
*ಹತಾಶ ಭಾವನೆ, ನಕಾರಾತ್ಮಕ ಯೋಚನೆಗಳು ಅಥವಾ ಬದುಕಲು ಯಾವುದೇ ಕಾರಣವಿಲ್ಲ ಎಂಬುದಾಗಿ ಮಾತಾಡುವುದು.
* ತಾನು ಇತರರಿಗೆ ಹೊರೆಯಾಗಿದ್ದೇನೆ ಎಂಬ ಮನೋಭಾವನೆ.
* ಕುಟುಂಬ ಮತ್ತು ಸ್ನೇಹಿತರಿಂದ ದೂರವಾಗುವುದು.
* ಅತಿಯಾದ ದುಃಖ, ಆತಂಕ, ತಳಮಳ ಹಾಗೂ ಸಿಟ್ಟಿಗೆ ಒಳಗಾಗುವುದು.
* ಊಟ ಹಾಗೂ ನಿದ್ರೆ ಮಾದರಿಯಲ್ಲಿ ಬದಲಾವಣೆಗಳು.
* ಸಾಯುವುದಕ್ಕೆ ಮಾರ್ಗಗಳನ್ನು ಹುಡುಕುವುದು ಹಾಗೂ ಯೋಜನೆಗಳನ್ನು ಮಾಡುವುದು.
* ಹೆಚ್ಚಾದ ಮದ್ಯಪಾನ ಮತ್ತು ಅಮಲು ಪದಾರ್ಥಗಳ ಬಳಕೆ.
* ಜೀವಕ್ಕೆ ಹಾನಿ ಉಂಟು ಮಾಡುವ ಅಪಾಯಕಾರಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು(ಉದಾ: ದುಡುಕಿನ ಚಾಲನೆ).
ಆತ್ಮಹತ್ಯೆಯು ಒತ್ತಡಕ್ಕೆ ಸಾಮಾನ್ಯ ಪ್ರತಿಕ್ರಿಯೆ ಯಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ಆತ್ಮಹತ್ಯಾ ಆಲೋಚನೆಗಳು ಅಥವಾ ಕ್ರಿಯೆಗಳು ತೀವ್ರ ಸಂಕಟದ ಸಂಕೇತವಾಗಿದೆ ಮತ್ತು ಅದನ್ನು ನಿರ್ಲಕ್ಷಿಸಬಾರದು.

ಏನು ಮಾಡಬೇಕು?
 ನಿಮಗೆ ತಿಳಿದಿರುವಂತಹ ಯಾರಾದರೂ ಇಂತಹ ಭಾವನಾತ್ಮಕ ನೋವಿನಲ್ಲಿದ್ದರೆ, ನೀವು ಕೆಳಕಂಡ ಕೆಲವೊಂದು ಕ್ರಮಗಳನ್ನು ಕೈಗೊಳ್ಳಬಹುದು.
* ಮೊದಲನೆಯದಾಗಿ ನೀವು ಅವರ ಬಗ್ಗೆ ಕಾಳಜಿವಹಿಸುತ್ತಿದ್ದೀರಿ ಮತ್ತು ಸಹಾಯ ಮಾಡಲು ಸಿದ್ಧರಿದ್ದೀರಿ ಎಂಬುದನ್ನು ತಿಳಿಯಪಡಿಸಿ.
* ನೀವು ಆ ವ್ಯಕ್ತಿಗೆ ‘‘ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಿದ್ದೀರಾ?’’ ಎಂದು ಪ್ರಶ್ನಿಸುವುದು ಸುಲಭದ ಮಾತಲ್ಲ. ಅಂತಹ ವ್ಯಕ್ತಿಗಳಿಗೆ ನಯವಾಗಿ ತಿಳಿಹೇಳುವುದರಿಂದ ಆತ್ಮಹತ್ಯೆಗಳಾಗಲಿ ಅಥವಾ ಆತ್ಮಹತ್ಯಾ ಆಲೋಚನೆಗಳಾಗಲಿ ಹೆಚ್ಚುವುದಿಲ್ಲ ಎಂದು ಅಧ್ಯಯನಗಳು ತೋರಿಸುತ್ತವೆ.
* ವ್ಯಕ್ತಿಯು ಖಿನ್ನತೆ, ಒತ್ತಡ ಅಥವಾ ಯಾವುದೇ ಸಮಸ್ಯೆಯಲ್ಲಿ ಸಿಲುಕಿದ್ದರೆ ಅವರನ್ನು ಆದಷ್ಟು ಏಕಾಂಗಿಯಾಗಿ ಬಿಡಬೇಡಿ. ಅವರು ತಮಗೆ ತಾವೇ ನೋವು ತಂದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
* ಆ ವ್ಯಕ್ತಿಯ ಮಾತುಗಳನ್ನು ಎಚ್ಚರಿಕೆಯಿಂದ ಆಲಿಸಿ, ಆ ವ್ಯಕ್ತಿ ಏನು ಯೋಚಿಸುತ್ತಾನೆ ಹಾಗೂ ಭಾವಿಸುತ್ತಾನೆ ಎಂಬುದನ್ನು ತಿಳಿಯಲು ಪ್ರಯತ್ನಿಸಿರಿ. ಇದು ಆತ್ಮಹತ್ಯಾ ಆಲೋಚನೆಗಳನ್ನು ಹೆಚ್ಚಿಸುವ ಬದಲು ಕಡಿಮೆ ಮಾಡುತ್ತದೆ.
* ಮಾನಸಿಕವಾಗಿ ತೀರಾ ಕುಗ್ಗಿರುವ ವ್ಯಕ್ತಿಯಾಗಿದ್ದರೆ ಅವರನ್ನು ಮನೋವೈದ್ಯರು ಅಥವಾ ಸರಕಾರಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಸೂಕ್ತ ಔಷಧೋಪಚಾರ ಮಾಡಿಸಿ.

ಕೆಲವೊಂದು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದ ಅಂತಹ ನಕಾರಾತ್ಮಕ ಯೋಚನೆಗಳನ್ನು ಹೋಗಲಾಡಿಸಿ ತಮ್ಮ ಯೋಗಕ್ಷೇಮದ ಮೇಲೆ ಗಮನವಿಡಬಹುದು:

* ಆರೋಗ್ಯಕರವಾದ ಆಹಾರವನ್ನು ಸೇವಿಸಿ ಮತ್ತು ಮದ್ಯಪಾನ ಮತ್ತು ಕೆಫೀನ್ ಸೇವನೆಯನ್ನು ಮಿತಿಗೊಳಿಸಿ.
* ಕಷ್ಟಕರ ಸಂದರ್ಭಗಳು ಬಂದಾಗ ಸಹಾಯವನ್ನು ಕೇಳಿ ಪಡೆದುಕೊಳ್ಳಬೇಕು.
* ಮಕ್ಕಳು ಹಾಗೂ ಮನೆಯವರೊಂದಿಗೆ ಹೆಚ್ಚು ಕಾಲ ಕಳೆಯಿರಿ.
ಈ ಎಲ್ಲ ಸಲಹೆ ಸೂಚನೆಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಆದಷ್ಟು ಆತ್ಮಹತ್ಯೆಯ ಪ್ರಕರಣಗಳನ್ನು ಕಡಿಮೆ ಮಾಡಲು ನಾವೆಲ್ಲರೂ ಒಂದಾಗಿ ಕೈಜೋಡಿಸಿ ಪ್ರಯತ್ನಿಸೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)