ಆತ್ಮವೂ ಚರಿತ್ರೆಯೂ
ಶಿವರಾಮ ಕಾರಂತರು ‘‘ನನ್ನ ಜೀವನ ವೃತ್ತ ನನ್ನ ಒಬ್ಬಿಬ್ಬರು ಮಿತ್ರರಿಗೆ ಕುತೂಹಲಕಾರಿಯಾಗಿ ಕಂಡುದರಿಂದ, ಅವರು ತಾವು ಅದನ್ನು ಬರೆಯುತ್ತೇವೆಂದು ಉತ್ಸುಕತೆ ತೋರಿಸಿದಾಗ ನಾನು ಅವರಿಗೆ ಪರಿಹಾಸ ಮಾಡುತ್ತ ನೀವು ನನ್ನನ್ನು ಕೊಲ್ಲಬೇಕಿಲ್ಲ! ನನ್ನ ಆತ್ಮಹತ್ಯೆಯನ್ನು ನಾನೇ ಮಾಡಿಕೊಳ್ಳುತ್ತೇನೆ ಎಂದದ್ದುಂಟು.’’ ಎಂದು ಬರೆದಿದ್ದಾರೆ. ಈ ರೀತಿಯ ಪರಿಹಾಸ ಆತ್ಮಚರಿತ್ರೆಗೆ ಅಗತ್ಯ ಅಂಶ. ಆಗ ಯಾರೂ ಲಿಲ್ಲಿಪುಟ್ಟಿನ ಗಲಿವರನಾಗುವುದಿಲ್ಲ. ಸಾದಾ ಸರಳವಾಗಿ ಬದುಕನ್ನು ವ್ಯವಹರಿಸಿ ವಿವರಿಸತೊಡಗುತ್ತಾರೆ.
ಆತ್ಮಚರಿತ್ರೆಗಳನ್ನು ಅವುಗಳ ಕುರಿತ ಕೃತಿಗಳನ್ನು ಓದಿದಾಗ ಒಂದಿಷ್ಟು ವಿಚಾರಗಳನ್ನು ಮೆಲುಕುಹಾಕಬೇಕೆಂದೆನಿಸುತ್ತದೆ. ಕಂಡದ್ದು, ಕೇಳಿದ್ದು, ಓದಿದ್ದು ಹೀಗೆ. ಆತ್ಮಚರಿತ್ರೆಗಳ ಕುರಿತು ಬಂದ ಕೃತಿಗಳೂ ಕಡಿಮೆಯೇ: ಗದಗದ ದಲಿತ ಸಾಹಿತ್ಯ ಪರಿಷದ್ 2002ರಲ್ಲಿ ಪ್ರಕಟಿಸಿದ ಡಾ.ಶರಣಮ್ಮ ಅ.ಗೊರೇಬಾಳ ಅವರ ‘ಕನ್ನಡ ಸಾಹಿತ್ಯದಲ್ಲಿ ಆತ್ಮಚರಿತ್ರೆ’ ಈ ನಿಟ್ಟಿನಲ್ಲಿ ಮಹತ್ವದ ಸಾಧನೆ.
ಆತ್ಮಚರಿತ್ರೆಯೆಂಬ ಪದ ಇಂದು ಅಪರಿಚಿತವಲ್ಲ, ಮಾತ್ರವಲ್ಲ-ತೀರ ಪರಿಚಿತವಾಗುತ್ತಿದೆ. ಅವು ಸಾಹಿತ್ಯದ ಒಂದು ಅಂಗವಾಗಿ ಸ್ವೀಕಾರಗೊಂಡಿವೆ. ಆತ್ರಚರಿತ್ರೆಯನ್ನು ಆತ್ಮಕತೆಯೆಂದೂ ಆತ್ಮ ವೃತ್ತಾಂತವೆಂದೂ ಆತ್ಮವೃತ್ತವೆಂದೂ ರಂಜಿಸಿದರು. ಗಿರೀಶ್ ಕಾರ್ನಾಡರು ‘ಆತ್ಮ-ಕತೆಗಳು’ ಎಂದು ವಿಭಜಿಸಿದ್ದಾರೆ. ಕೆಲವು ಸಲ ಒಟ್ಟಾಗಿ ಅಥವಾ ಬಿಡಿಯಾಗಿ ಈ ಪದದ ಅಗತ್ಯವಿದೆಯೆಂದು ಅನ್ನಿಸುತ್ತದೆ. ಅವು ಕತೆಕಟ್ಟುತ್ತವೆ. ಅಪರೂಪಕ್ಕೆ ನಿಜ ಮತ್ತು ಸತ್ಯವನ್ನಷ್ಟೇ ಬಣ್ಣಿಸುವ, ಚಿತ್ರಿಸುವ ಕೃತಿಗಳು ಬರುತ್ತವೆ. ಉಳಿದಂತೆ ನೀವು ಗಮನಿಸಿದರೆ ಎಲ್ಲ ಕಡೆಯೂ ಲೇಖಕನೇ ನಾಯಕ. ಆತನ ಸುತ್ತ ಪೋಷಕ ಪಾತ್ರಗಳು; ಮತ್ತು ಖಳನಾಯಕರು. ಆದ್ದರಿಂದ ಇವು ಕತೆಗಳು. ‘ವೃತ್ತ’ವೂ ಸರಿಯೇ. ಅದು ಸುತ್ತಿಸುತ್ತಿ ಲೇಖಕನ ಕಡೆಗೇ ಫೋಕಸ್ ಆಗುತ್ತವೆ. ವೃತ್ತಾಂತವೂ ಸರಿ: ಈ ವೃತ್ತ ಮುಗಿಯುವುದು ಆತನಲ್ಲೇ. ಈ ಎಲ್ಲ ಸಮಾನಾರ್ಥದ ಅಪೇಕ್ಷೆಯುಳ್ಳ ವಿವಿಧ ಪದಗಳನ್ನು ಬಳಸುವಾಗ ಆಗಬಹುದಾದ ಗೊಂದಲಗಳನ್ನು ತಪ್ಪಿಸುವುದಕ್ಕಾಗಿ ಮತ್ತು ಆತ್ಮಚರಿತ್ರೆ ಎಂಬ ಪದ ಉಳಿದವುಗಳಿಗಿಂತ ಹೆಚ್ಚು ಸ್ಪಷ್ಟಾರ್ಥವನ್ನು ನೀಡುತ್ತದೆಯೆಂದು ನನಗನ್ನಿಸಿದ್ದರಿಂದ (ಬೇರೆ ಸಮರ್ಥನೆಯೇನಿಲ್ಲ) ಈ ಪದವನ್ನೇ ಬಹುತೇಕ ಎಲ್ಲ ಕಡೆ ಬಳಸಿದ್ದೇನೆ. ಓ.ಎಲ್.ನಾಗಭೂಷಣಸ್ವಾಮಿ ಸಂಪಾದಿತ ‘ವಿಮರ್ಶೆಯ ಪರಿಭಾಷೆ’ ಕೃತಿಯಲ್ಲಿ ‘‘ಆತ್ಮಚರಿತ್ರೆಯನ್ನು Memoir ಮತ್ತು Diary ಅಥವಾ journal ಗಳಿಂದ ಬೇರ್ಪಡಿಸಿ ನೋಡಬಹುದು. Memoir ‘is’ಲೇಖಕನ ಆತ್ಮವಿಕಾಸವನ್ನು ಚಿತ್ರಿಸುವುದಕ್ಕಿಂತ ಹೆಚ್ಚಾಗಿ ಅಥವಾ ಅದರೊಡನೆ, ಅವನು ಬಲ್ಲ ವ್ಯಕ್ತಿಗಳ, ಸಾಕ್ಷಿಯಾಗಿದ್ದ ಘಟನೆಗಳ ದಾಖಲೆಯಾಗಿರುತ್ತದೆ.’’ ಎಂದು ಹೇಳಿ ‘ನೆನಪಿನಂಗಳದಲ್ಲಿ’ ಮತ್ತು ‘ಜ್ಞಾಪಕ ಚಿತ್ರಶಾಲೆ’ಗಳನ್ನು ಉದಾಹರಿಸುತ್ತಾರೆ. ದಿನಚರಿ ಅಥವಾ ಡೈರಿ ದಿನನಿತ್ಯದ ಘಟನೆ, ಅನಿಸಿಕೆ, ಅನುಭವ, ಆಲೋಚನೆಗಳನ್ನು ತನ್ನ ಉಪಯೋಗ ಮತ್ತು ಸಂತೋಷಕ್ಕಾಗಿ ವ್ಯಕ್ತಿ ಮಾಡಿಟ್ಟುಕೊಳ್ಳುವ ದಾಖಲೆಗಳು. (ಬಹುಶಃ) ಇಲ್ಲಿ ಪ್ರಕಟಣೆಯ ಉದ್ದೇಶ ಇರುವುದಿಲ್ಲ. ಬೆರ್ಟೋಲ್ಟ್ ಬ್ರೆಕ್ಟ್ ಮತ್ತು ಕಿರ್ಕೆಗಾರ್ಡನ ‘‘ಡೀರಿಗಳನ್ನು ನೋಡಬಹುದು.’’ ಎನ್ನುತ್ತಾರೆ. ಇಲ್ಲಿ ನಿಖರವಾದ ನಿರೂಪಣೆಯಿಲ್ಲ; ನಮ್ಮ ಕಾನೂನಿನಡಿ ಇರುವಂತೆ ಗೆ ಬದಲಾಗಿ ‘includes’ ಎಂಬಂತಿದೆ.
ಆತ್ಮಚರಿತ್ರೆ ಬರೆಯುವ ಅನೇಕರಿಗೆ ತಮ್ಮ ಬಗ್ಗೆ ಮತ್ತು ತಮ್ಮ ಕೃತಿಯ ಬಗ್ಗೆ ಸ್ಪಷ್ಟ ಕಲ್ಪನೆಯಿದ್ದಂತಿಲ್ಲ. ತಾನೇಕೆ ಬರೆಯುತ್ತೇನೆ? ಅಥವಾ ಏಕೆ ಬರೆಯಬಾರದು? ಹೀಗೆಲ್ಲ ಜಿಜ್ಞಾಸೆಗಳಿದ್ದರೂ ತನ್ನ ಕಲ್ಪನೆಯ ಧೋರಣೆಯಲ್ಲಿ ‘ಆತ್ಮಚರಿತ್ರೆ’ ಎಂದರೆ ತನ್ನ ಚರಿತ್ರೆ (ಇತಿಹಾಸ ಎಂಬರ್ಥದಲ್ಲಿ)ಯೇ, ತನ್ನ ಕತೆಯೇ, ಸಾಂದರ್ಭಿಕ ಮಿತಿಗಳನ್ನೊಳಗೊಂಡ ಸಾಹಿತ್ಯ-ಅದರಲ್ಲೂ ಉತತ್ಮ ನಿರೂಪಣೆಯ ಲೇಖನವೇ ಎಂಬ ಕುರಿತು ಉತ್ತರಿಸದೆ ಹೋದರೆ ಆತ್ಮಚರಿತ್ರೆಯ ಯಥಾವತ್ತಾದ ಮತ್ತು ಕಾಲ್ಪನಿಕವಾದ (ಅಂದರೆ ಮಾನಸಿಕವಾದ) ಭಾಗಗಳನ್ನು ಓದುಗ ಪರಿಭಾವಿಸುವುದು ಅನಿವಾರ್ಯವಾಗುತ್ತದೆ. ಇಂಗ್ಲಿಷಿನ ‘Confession’ ಎಂಬುದನ್ನು ಗದ್ಯರೂಪದ ಆತ್ಕತೆಯೆಂದೂ ನಿರೂಪಿಸಲಾಗಿದೆ. ಪಾಶ್ಚಾತ್ಯರಲ್ಲಿ ಪ್ರಚಲಿತವಿದ್ದ ಸ್ವಯಂಜೀವನ ಚರಿತ್ರೆ (Autobiography)ಯೆಂದು ಕರೆಯಲಾಗುವ ಒಂದು ಪ್ರಕಾರವನ್ನು ಆಮದು ಮಾಡಿಕೊಂಡಾಗ ಭಾರತೀಯರು ಅದನ್ನು ಈ ನೆಲಕ್ಕೆ ಒಗ್ಗಿಸುವ ಸಲುವಾಗಿ ‘ಆತ್ಮಚರಿತ್ರೆ’ಯೆಂದು ಕರೆದರು. ಭಾರತೀಯ ಸಿದ್ಧಾಂತದಲ್ಲಿ ‘ಆತ್ಮ’ವೆಂಬ ಪದವನ್ನು ಬಳಸುವಾಗ ಅದು ಅವಿನಾಶಿಯೆಂಬ ಇಂಗಿತವಿರುತ್ತದೆ. ಅದನ್ನು ಯಾವ ಪುಣ್ಯಾತ್ಮ ‘ದೇಹ’ಕ್ಕೋ ‘ಜೀವನ’ಕ್ಕೋ ಪರ್ಯಾಯವಾಗಿ ಮೊದಲು ಬಳಸಿದನೆಂಬುದು ಗೊತ್ತಿಲ್ಲ. ‘ಆತ್ಮ’ ಎಂಬ ಪದವು ‘ಸ್ವಂತ’ ಅಥವಾ ‘ತನ್ನ’ ಎಂಬ ಸೀಮಿತಾರ್ಥದಲ್ಲಿ ಬಳಕೆಯಾಗಬೇಕಾಗಿದೆಯೇ ಹೊರತು ‘ಮನಸ್ಸು’, ‘ಅಂತಸ್’ ಎಂದಲ್ಲ. ‘ಆತ್ಮ’ ಎಂಬ ಪದ ಸನಾತನ ಸ್ಮತಿಗಳದ್ದು. ಅದಕ್ಕೆ ‘ಜೀವ’, ‘ದೇಹದಿಂದ ಬೇರೆಯಾಗಿ ಅಮರವಾದದ್ದೆಂದು ನಂಬಿರುವ ತತ್ವ’ ಎಂದೂ ‘ಚೇತಸ್’, ‘ಮನಸ್ಸು’, ‘ಕ್ಷೇತ್ರಜ್ಞ’ ಎಂದೂ ‘‘ಶರೀರದಲ್ಲಿ ಅದಕ್ಕಿಂತ ಭಿನ್ನವಾಗಿದ್ದು ‘ನಾನು’ ಎಂಬ ಭಾವಕ್ಕೆ ಕಾರಣವಾದ ವಸ್ತು ಅಥವಾ ತತ್ವ’’, ‘ಸ್ವಯಂ
’, ‘ಅಂತರಂಗ’ ಎಂದೂ ಅರ್ಥಗಳಿವೆ. ‘ಆತ್ಮ’ಕ್ಕೆ ಆಧ್ಯಾತ್ಮಿಕ ಹರಹಿದೆ; ಹೊಳಪಿದೆ. ಉದಾಹರಣೆಗೆ ‘ಆತ್ಮಸಾಕ್ಷಿ’, ‘ಆತ್ಮವಂಚನೆ’ ಮುಂತಾದ ಪದಗಳನ್ನು ನಾವು ಒಳಗಿನ ಗೊಂದಲಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ಉಪಯೋಗಿಸುತ್ತೇವೆ. ಹಾಗೆ ನೋಡಿದರೆ ಇಂಗ್ಲಿಷ್‌ನಲ್ಲೂ ಬಯಾಗ್ರಫಿ ಎಂಬ ಪದಕ್ಕೆ ವೀಡಿಯೊ ಫೋಟೋಗ್ರಫಿಯ ರೀತಿಯ ಸತತ ಚಿತ್ರೀಕರಣದ ಸೂಚನೆಯಿದೆ. ನನಗಿರುವ ಸಂದಿಗ್ಧವೆಂದರೆ ಇಂಗ್ಲಿಷ್‌ನ ಪದಕ್ಕೆ ಅನುವಾದಕರೋ ಭಾಷಾಂತರಕಾರರೋ ಯಾಕೆ ‘ಆತ್ಮ’ವನ್ನು ಸಂಯೋಜಿಸಿದರು ಮತ್ತು ಹುಟ್ಟಿನಿಂದ ಸಾವಿನವರೆಗಿರುವ ಐತಿಹ್ಯಕ್ಕೆ ಆತ್ಮ ನೇತುಕೊಂಡಿತು? ಜೀವನಕ್ಕೆ ಮುಗಿವಿದೆ. ಸ್ವಯಂಜೀವನ ಚರಿತ್ರೆಯೆಂದು ಹೇಳಿದರೆ, ಬರೆದರೆ, ಅದಕ್ಕೂ ಅಂತ್ಯವಿರಬಹುದೆಂದು ಮತ್ತು ಅಳಿವುದು ಕಾಯ ಉಳಿವುದು ಕೀರ್ತಿ ಎಂಬಂತೆ ಜೀವನವಳಿದರೂ ಕಾಲಕೋಶದಲ್ಲಿ ಜೀವನದ ಚರಿತ್ರೆ ಅವಿನಾಶಿಯಾಗಿರಲೆಂಬ ಆಶಯವಿರಬಹುದು. ಇದು ಪಶ್ಚಿಮದ ಬೆಳಗು ಎಂಬ ಚಾರಿತ್ರಿಕ ಕಾರಣಕ್ಕಾಗಿ ಆತ್ಮಚರಿತ್ರೆಗಳ ನಿರೂಪಣೆಯನ್ನು ಅಲ್ಲೂ ಹುಡುಕಬಹುದಾಗಿದೆ. ‘An autobiography is the story of a social being sharing his thoughts about himself with others and seeking to explain his life both to himself and to them.’ ಇಲ್ಲೂ (‘story’) ಎಂಬ ಪದ ತಪ್ಪು ಸತ್ಯಗಳನ್ನು ಹೇಳಬಹುದು. ‘ನೆನಪುಗಳು’, ‘ಜ್ಞಾಪಕ ಚಿತ್ರಶಾಲೆ’ ಮುಂತಾದ ಹೆಸರುಗಳು ತಮ್ಮ ಕೃತಿಯ ಮಿತಿಗಳನ್ನು ಒಪ್ಪಿಕೊಂಡ ಸೌಜನ್ಯವನ್ನು ಪ್ರತಿಬಿಂಬಿಸುತ್ತವೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಆತ್ಮಚರಿತ್ರೆಯನ್ನು ‘ತನ್ನ ಮೂಲಕ ತನ್ನ ಹಾಗೂ ತನ್ನ ಕಾಲದ ಕುರಿತ ಸಾಂಸ್ಕೃತಿಕ ಸೃಜನಶೀಲ ವೈಚಾರಿಕ ಮಾಹಿತಿಯ ದಾಖಲೆ’ ಎಂದು ನಿರೂಪಿಸಬಹುದು.
ಆತ್ಮಚರಿತ್ರೆ/ಆತ್ಮ(-)ಕತೆಯನ್ನು ಸಾಹಿತ್ಯದ ಒಂದು ಭಾಗ/ಅಂಗವಾಗಿ ಕಂಡದ್ದು ಸಾಹಿತಿಗಳು. ಈಗ ಯಾವೊಬ್ಬ ಸಾಹಿತಿ ಶಾಂತಿಯಿಂದ ವಿರಮಿಸಬೇಕಾದರೆ ಆತ ಆತ್ಮಚರಿತ್ರೆಯನ್ನು ಬರೆಯಲೇಬೇಕೆಂಬ ಅಲಿಖಿತ ನೀತಿಸಂಹಿತೆ ಸೃಷ್ಟಿಯದಂತಿದೆ. ಪ್ರಾಯಃ ನಾನೂ ಈ ಸವೆದ ಹಾದಿಯಲ್ಲಿ ನಡೆದು ಬರೆಯಬಹುದು. ಯಾರು ಬೇಕಾದರೂ ಆತ್ಮಚರಿತ್ರೆಯನ್ನು ಬರೆಯಬಹುದು. ಬರೆಯಲು ಸಾಧ್ಯವಿಲ್ಲದವರು ಹೇಳಿ ಬರೆಸಬಹುದು. (ಹೀಗೆ ನಿರೂಪಣೆಯನ್ನು ಮಾಡಿದವರನ್ನು Ghost writers ಎನ್ನಬಹುದೇ?) ಆದರೆ ತನ್ನ ಕುರಿತಾದ ವಿವರಣೆಯೆಲ್ಲವೂ ಮಹತ್ವದ್ದಾಗಿರುವುದಿಲ್ಲ. ಇತ್ತೀಚೆಗೆ ಸಾಹಿತಿಗಳೆಲ್ಲ ಆತ್ಮಚರಿತ್ರೆ ಬರೆಯುವ ಹೊಸ ಸಂಪ್ರದಾಯ/ವಾಡಿಕೆ ಆರಂಭವಾಗಿದೆ. ಇವಕ್ಕೆ ಸಾಧಾರವಿಲ್ಲ. ಮಹತ್ವದ ಯಾವ ಬದುಕೂ-ಅದು ಸಮಾಜಕ್ಕೆ, ಭವಿಷ್ಯಕ್ಕೆ ಕೊಡುಗೆಯಾಗಬಹುದಾದರೆ- ಜೀವನಚರಿತ್ರೆಗೆ, ಆತ್ಮಚರಿತ್ರೆಗೆ ಅರ್ಹವಾಗಬಹುದು. ಒಂದು ರೀತಿಯಲ್ಲಿ ಇದು ಸ್ವಪ್ರಕಾಶನದ ಹಾಗೆ. ಬರಹಗಾರನಲ್ಲದ ಮಹತ್ವದ ವ್ಯಕ್ತಿಯೊಬ್ಬನ ಬದುಕು ಜೀವನಚರಿತ್ರೆ ಹಾಗೂ ಆತ್ಮಚರಿತ್ರೆಗೆ ಹೆಚ್ಚು ಯೋಗ್ಯವಾಗಬಹುದು. ಗಾಂಧಿ ತನ್ನ ಆತ್ಮಚರಿತ್ರೆಯಲ್ಲಿ ಅನಾಮಧೇಯ ಮೆಕ್ಸಿಕನ್ ಸಾಹಿತಿಯೊಬ್ಬನನ್ನು ಉಲ್ಲೇಖಿಸಿ ‘‘ಸಾಹಿತಿಯಾದವನು ಆತ್ಮವೃತ್ತ ಬರೆಯಬೇಕೇ? ಅವನ ಬರಹದಲ್ಲಿ ಓದಿ ತಿಳಿಯಲಾರದ ಆತ್ಮವೃತ್ತವೇನಿದೆ?’’ ಎನ್ನುತ್ತಾರೆ.
ನಮ್ಮ ಪುರಾತನ ಸಾಹಿತ್ಯದಲ್ಲಿ ಆತ್ಮಚರಿತ್ರೆಗಳಿಲ್ಲ. ಬಾಣನ ಹರ್ಷಚರಿತ, ಬಿಲ್ಹಣನ ವಿಕ್ರಮಾರ್ಕಚರಿತ ಇವು ಜೀವನ ಚರಿತ್ರೆಗಳ ಸಾಲಿಗೆ ಸೇರುವುದಿಲ್ಲವೆಂದು ಆನಂದ ಕೂಮಾರಸ್ವಾಮಿ ವಿವರಿಸಿದ್ದಾರೆ. ಹಿಂದೂ ಜ್ಞಾನಶಾಸ್ತ್ರಗಳಲ್ಲಿ ಚಾರಿತ್ರಿಕ ಅರಿವಿಗೆ ಎಂದೂ ಮುಖ್ಯಪಾತ್ರವನ್ನು ಕಲ್ಪಸಿರಲಿಲ್ಲವೆಂದು ಸ್ಪಷ್ಟವಾಗುತ್ತದೆ. ಆತ್ಮಚರಿತ್ರೆಯಲ್ಲಿ ಪ್ರಾಮಾಣಿಕತೆಯ ಸ್ಥಾನವನ್ನೂ ಪಾಲನ್ನೂ ಶೋಧಿಸುತ್ತಾ Nicolas Berdeyev ಸರ್ ಡೈಮಂಡ್ ಡಿ’ಇವಾನ್‌ನ ಆತ್ಮಚರಿತ್ರೆಯ ಕುರಿತು ‘ಸತ್ಯವನ್ನು ನಿರ್ಲಕ್ಷಿಸಲಾಗಿದೆ’ ಎಂದಿದ್ದಾನೆ. ಹಾಗೆಯೇ ಲಾರ್ಡ್ ಹರ್ಬರ್ಟ್ ಆಫ್ ಚಾಲ್‌ಬರಿ (1583-1648)ಯ ಆತ್ಮಚರಿತ್ರೆಯ ಕುರಿತು ‘‘ಆತನ ಕೃತಿಯು, ಬೆಳಕಿಗೆ ಬಂದ ಅವನ ಜೀವನದ ಸಂಗತಿಗಳೆಲ್ಲವನ್ನೂ ಕೈಬಿಟ್ಟು ಬೆಳಕಿಗೆ ಬಾರದ ಸಂಗತಿಗಳನ್ನು ಕೈಗೆತ್ತಿಕೊಂಡು, ಬಾಹ್ಯ ಸಂಗತಿಗಳಿಗಿಂತ ಆಂತರಂಗಿಕ ವಿಚಾರಗಳಿಗೆ ಹೆಚ್ಚು ಒತ್ತು ನೀಡಿ ಹೊಸ ಶಕೆಯನ್ನು ಸೃಷ್ಟಿಸಿದೆ’’ ಎನ್ನುತ್ತಾನೆ. ಆತ್ಮಚರಿತ್ರೆ ಬದುಕಿನ ಪರಿಶುದ್ಧತೆಯ ಲಕ್ಷಣವೆಂದೇನಿಲ್ಲ. ಮನುಷ್ಯ ಸೃಷ್ಟಿಯ ಆದಿಯಿಂದಲೂ ಪೂರ್ಣತ್ವದ ಕಡೆಗೆ ಕತ್ತು ಚಾಚಿದಾಗಲೂ ಕಾಲುಗಳು ಈ ಮಣ್ಣು ನೆಲದಲ್ಲೇ ಇದ್ದವು. ಆದ್ದರಿಂದ ವಾಸ್ತವದ ಲೋಪ-ದೋಷಗಳು, ದೈಹಿಕ-ಮಾನಸಿಕ ಊನಗಳು ಇದ್ದೇ ಇದ್ದವು. ನಮ್ಮ ದೇಶ-ಕಾಲದಲ್ಲೇ ವ್ಯಕ್ತಿಗಳನೇಕರ ಖಾಸಗಿ ಬದುಕು ಅವರು ಸಾರ್ವಜನಿಕವಾಗಿ ಬಿಂಬಿಸಿದ್ದರ ವಿರುದ್ಧ ಪಾತಳಿಯಲ್ಲಿದ್ದು ತೀರಾ ಹತ್ತಿರದಿಂದ ಬಲ್ಲವರಿಗೆ ಭ್ರಮನಿರಸನವಾಗುವಂತಿದ್ದ ನಿದರ್ಶನಗಳು ಬೇಕಷ್ಟಿವೆ. ‘ಹೊಳೆಯುವುದೆಲ್ಲ ಹೊನ್ನಲ್ಲ’, ‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎಂದೆಲ್ಲ ಹೇಳಿದವರ ಮನಸ್ಸಿನಲ್ಲಿ ಈ ‘ಡಾ ಜೆಕಿಲ್ ಮತ್ತು ಮಿಸ್ಟರ್ ಹೈಡ್’ನಂತಹ ಒಡೆದ ವ್ಯಕ್ತಿತ್ವದ ಕಲ್ಪನೆಯಿದ್ದಿರಬಹುದು. ಒಬ್ಬ ವ್ಯಕ್ತಿಯ ಬದುಕಿನ ಒಳ-ಹೊರಗು ಬೇರೆಯಿದ್ದಾಗ ನಮ್ಮ ಸೌಜನ್ಯ ಹೊರಗನ್ನು ಮಾತ್ರ ಹೇಳಿ ಒಳಗನ್ನು ಕೆದಕದಿರುವಂತೆ ನಿರ್ದೇಶಿಸುತ್ತದೆ. ಅನೇಕ ಬಾರಿ ಆತ್ಮಚರಿತ್ರೆಗಳು ಪರಾಕುಪಂಪುಗಳಾದಾಗ ತಮ್ಮ ಸಾರ್ವಕಾಲಿಕ ಸತ್ಯ ಮತ್ತು ಮಹತ್ವವನ್ನು ಕಳೆದುಕೊಳ್ಳುತ್ತವೆ. ಆತ್ಮಶ್ಲಾಘನೆಯು ಸುಳ್ಳಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆತ್ಮಚರಿತ್ರೆಯೆಂದರೆ ಒಂದು ವಿಧದಲ್ಲಿ ವಿಮರ್ಶೆಯಂತೆ. ಇಂದು ಬಹಳ ಮೌಲಿಕವೆಂದನ್ನಿಸಿದ್ದು ನಾಳೆ ಗೌಣವಾಗಬಹುದು; ಎಲಸಲಾಗಬಹುದು. ಆದರೆ ಈ ಸಾಹಿತ್ಯ ಪ್ರಕಾರವನ್ನು ಇಷ್ಟು ಲಘುವಾಗಿ ಹೇಳಿದರೆ ಅನೇಕ ಆತ್ಮಚರಿತ್ರಕಾರರು ಆತ್ಮಹತ್ಯೆ ಮಾಡಿಕೊಳ್ಳಬಹುದು. ತನ್ನ ಬದುಕಿನ ಅಸಂಗತತೆಯ ಬಗ್ಗೆ ಅರಿವಿರುವ ಮಂದಿ ಮಾತ್ರ ಈ ಪ್ರಕಾರವನ್ನು ಗಂಭೀರವಾಗಿ ಸ್ವೀಕರಿಸಲೊಲ್ಲರು. ಶಿವರಾಮ ಕಾರಂತರು ‘‘ನನ್ನ ಜೀವನ ವೃತ್ತ ನನ್ನ ಒಬ್ಬಿಬ್ಬರು ಮಿತ್ರರಿಗೆ ಕುತೂಹಲಕಾರಿಯಾಗಿ ಕಂಡುದರಿಂದ, ಅವರು ತಾವು ಅದನ್ನು ಬರೆಯುತ್ತೇವೆಂದು ಉತ್ಸುಕತೆ ತೋರಿಸಿದಾಗ ನಾನು ಅವರಿಗೆ ಪರಿಹಾಸ ಮಾಡುತ್ತ ನೀವು ನನ್ನನ್ನು ಕೊಲ್ಲಬೇಕಿಲ್ಲ! ನನ್ನ ಆತ್ಮಹತ್ಯೆಯನ್ನು ನಾನೇ ಮಾಡಿಕೊಳ್ಳುತ್ತೇನೆ ಎಂದದ್ದುಂಟು.’’ ಎಂದು ಬರೆದಿದ್ದಾರೆ. ಈ ರೀತಿಯ ಪರಿಹಾಸ ಆತ್ಮಚರಿತ್ರೆಗೆ ಅಗತ್ಯ ಅಂಶ. ಆಗ ಯಾರೂ ಲಿಲ್ಲಿಪುಟ್ಟಿನ ಗಲಿವರನಾಗುವುದಿಲ್ಲ. ಸಾದಾ ಸರಳವಾಗಿ ಬದುಕನ್ನು ವ್ಯವಹರಿಸಿ ವಿವರಿಸತೊಡಗುತ್ತಾರೆ. ಬದುಕು ಸರಳವಾದರೆ ಆತ್ಮಚರಿತ್ರೆಯಲ್ಲಿ ಆಕರ್ಷಣೆಯೇನಿದೆ? ಸಾವಿರ ಕುರಿಗಳ ಮಂದೆಯ ಕುರುಬಗೆ ಮಾತ್ರವಲ್ಲ, ನಿವೃತ್ತಿಹೊಂದುವ ವರೆಗೆ ವಾಹನ ಚಾಲನೆ ಮಾಡುವವನಿಗೆ, ಬದುಕು ನೇರದಾರಿ. ಅಲ್ಲಿರುವ ತಿರುವುಗಳು, ಏರುತಗ್ಗುಗಳು, ಅವನಿಗೆ ಬದುಕಿನ ಹಾದಿಯೇ ಹೊರತು ವಿಸ್ಮಯವನ್ನು ತರುವ ವಿಚಾರವಲ್ಲ. ಗಾಂಧಿ ಆತ್ಮಚರಿತ್ರೆಯನ್ನು ಬರೆದರು. ಅದರ ಒತ್ತಡವನ್ನೂ ಬರೆದರು. ಅವರ ದೃಷ್ಟಿಯಲ್ಲಿ ಆತ್ಮಚರಿತ್ರೆಯೆಂದರೆ ಪಾಟೀಸವಾಲಿಲ್ಲದ ಸಾಕ್ಷ್ಯ. ಭಾರತೀಯ ಆತ್ಮಚರಿತ್ರೆಗಳು ಬಹುಪಾಲು ಗಾಂಧಿಯ ಸುತ್ತಲೇ ಗಿರಕಿಹೊಡೆಯುತ್ತವೆ; ಅದು ಅನಿವಾರ್ಯ ಕೂಡಾ. ಕನ್ನಡದಲ್ಲಿ ಸಾಕಷ್ಟು ಆತ್ಮಚರಿತ್ರೆಗಳು ಬಂದಿವೆ. ಹೆಚ್ಚಿನ ಕೃತಿಗಳಲ್ಲಿ ತನ್ನ ಬಾಲ್ಯದ ಘಟನೆಗಳು ದಟ್ಟವಾಗಿರುತ್ತವೆ. ತಾನು ಕಷ್ಟಪಟ್ಟು ಓದಿದ್ದು, ದುಡಿದದ್ದು ಇವೆಲ್ಲ ಅಸಾಮಾನ್ಯ ಸ್ಥಿತಿಗೆ ತನ್ನನ್ನು ಎತ್ತುತ್ತವೆಂದು ಬಗೆಯುತ್ತಾರೆ. ಪ್ರತೀಬಾರಿಯೂ ತಾನೇ ಸರಿ ಮತ್ತು ತಾನೇಕೆ ಸರಿಯೆಂಬುದರ ವಿವರಗಳಿರುತ್ತವೆ. ಒಬ್ಬ ಕಲಾವಿದನ ಬದುಕು ಎಷ್ಟು ರಂಗಾಗಿರುತ್ತದೆಂದರೆ ಅದರ ನಿಜವಾದ ಆಕರ್ಷಣೆಯಿರುವುದೇ ಆ ವರ್ಣರಂಜಿತ ಅಂಶಗಳಲ್ಲಿ. ಅವು ಮದ್ಯದ ವ್ಯಸನವಿರಬಹುದು, ಹೆಣ್ಣೊಬ್ಬಳ ಮೋಹವಿರಬಹುದು, ಕುದುರೆ ಜೂಜಿನ, ಜುಗಾರಿಯ ಗೀಳಿರಬಹುದು- ಇವನ್ನು ಬಿಟ್ಟು ಆತ ತನ್ನ ಬದುಕನ್ನು ಹೇಳುತ್ತಾನೆಂದರೆ ಆತ ಜಗಿಯಲು ನಿಸ್ಸಾರ ಕಬ್ಬಿನ ಜಲ್ಲೆಯನ್ನು ನೀಡುತ್ತಾನೆಂದರ್ಥ. ಅತಿಸಭ್ಯತೆ ಅಪಾರದರ್ಶಕ ಬದುಕನ್ನು ಮಾತ್ರ ನೀಡುತ್ತದೆ. ಸಲಿಂಗಕಾಮಿಗಳು ಕತೆ ಬರೆದಂತೆಯೇ ತಮ್ಮ ಆತ್ಮಚರಿತ್ರೆಯನ್ನೂ ಬರೆದರೆ ಹೇಗಿರುತ್ತದೆ? (ಪಾಶ್ಚಾತ್ಯರಲ್ಲಿ ಈ ಬಗೆಯ ಬರವಣಿಗೆಯಿದೆ.) ಕನ್ನಡದಲ್ಲಿ ಬಂದ ಆತ್ಮಚರಿತ್ರೆಗಳಲ್ಲಿ ಬೀಚಿಯವರ ‘ಭಯಾಗ್ರಫಿ’, ಕೆರೆಮನೆ ಶಿವರಾಮ ಹೆಗಡೆಯವರ ‘ನೆನಪಿನ ರಂಗಸ್ಥಳ’, ಲಂಕೇಶರ ‘ಹುಳಿಮಾವಿನ ಮರ’ ಈ ಬಗೆಯ ಮುಕ್ತತೆಯನ್ನು ಸೂಚಿಸಿವೆ. ಆದರೆ ಈ ಮುಕ್ತತೆಯಲ್ಲೂ ಒಂದು ಆಷಾಢಭೂತಿತನ ಕಾಣಿಸುತ್ತದೆಯೆಂಬ ಸಂಶಯಕ್ಕೂ ಎಡೆಯಿದೆ. ಇಂತಹ ಪ್ರಸಂಗಗಳನ್ನು ತಮ್ಮ ಅನುಕೂಲಕ್ಕೆ ತಕ್ಕಷ್ಟು ಮಾತ್ರ ಬಣ್ಣಿಸಿ ಹೀರೋತನದ ಮೆರುಗನ್ನು ಹೆಚ್ಚಿಸಿಕೊಂಡ ಬರವಣಿಗೆಗಳಿವೆ. ಇನ್ನು ಕೆಲವು ಪ್ರಾಕ್ಸಿ ಅಭಿನಂದನ ಗ್ರಂಥಗಳಂತಿರುತ್ತವೆ!
ಹಾಗೆಯೇ ಅನುಕಂಪಕ್ಕಾಗಿ ವರ್ಣಿತಗೊಂಡ ಬರವಣಿಗೆಗಳೂ ಇವೆ. ಬೀಚಿ ಹೇಳುವಂತೆ ‘‘ತಮ್ಮ ಬಡತನವೇ ತಮ್ಮ ಹೆಮ್ಮೆ ಎಂದು ಹೇಳಿಕೊಳ್ಳುವ ಸಾಹಿತಿಗಳೂ ಇದ್ದಾರೆ. ಇವರ ದೃಷ್ಟಿಯಲ್ಲಿ ಪ್ರಾಯಶಃ ಬಡತನವೇ ಪುಣ್ಯ. ಶ್ರೀಮಂತಿಕೆಯೇ ಪಾಪ!’’
ಜೋಳದರಾಶಿ ದೊಡ್ಡನಗೌಡರು ಹೇಳಿದಂತೆ ‘‘ಬದುಕಿರುವಷ್ಟು ದಿನಗಳು ಕೆಲಸವಿದ್ದೇ ಇರುತ್ತವೆ. ಬರಹಗಾರ ಅವನ್ನೆಲ್ಲ ಬರೆಯಬೇಕೆಂಬುದೇನಿಲ್ಲ.’’ ಇದು ಅರ್ಥವಾದರೆ ನಮ್ಮ ಅನೇಕ ಆತ್ಮಚರಿತ್ರೆಗಳು ಆತ್ಮದಂತೆ ಅವಿನಾಶಿಯಾಗಬಹುದು.