ಕೋವಿಡ್ ಬಿಕ್ಕಟ್ಟಿನ ಒಳ ಹೊರಗಿನ ಚರ್ಚೆ
ಕನ್ನಡನಾಡು, ನುಡಿ, ಸಂಸ್ಕೃತಿಗಾಗಿ ಅಪಾರ ಕೊಡುಗೆಗಳನ್ನು ನೀಡಿರುವ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಪ್ರಸಾರಾಂಗ, ಅದರಾಚೆಗಿನ ಜನಮನಕ್ಕೆ ಮಿಡಿಯುವುದೂ ತನ್ನ ಹೊಣೆಗಾರಿಕೆಯ ಭಾಗ ಎನ್ನುವುದನ್ನು 'ಕೋವಿಡ್ -19 ಬಿಕ್ಕಟ್ಟಿನ ಒಳ ಹೊರಗೂ' ಕೃತಿಯನ್ನು ಸಂಪಾದಿಸುವ ಮೂಲಕ ತೋರಿಸಿಕೊಟ್ಟಿದೆ. ಡಾ. ಎಚ್. ಡಿ. ಪ್ರಶಾಂತ್ ಅವರು ಸಂಪಾದಿಸಿರುವ ಈ ಕೃತಿ, ಪ್ರಸಾರಾಂಗ ತೊಡಗಿಸಿಕೊಂಡ ವಿಷಯ ವೈವಿಧ್ಯಕ್ಕೆ ಸಾಕ್ಷಿಯಾಗಿದೆ. ಕೋವಿಡ್ ರಾಜಕಾರಣದ ಬಗ್ಗೆ ನಾಡಿನ ವಿವಿಧ ಚಿಂತಕರು ಬರೆದಿರುವ ಗಂಭೀರ ಲೇಖನಗಳನ್ನು ಇಲ್ಲಿ ಒಟ್ಟುಗೂಡಿಸಲಾಗಿದೆ. ಕೋವಿಡ್ -19 ಎನ್ನುವುದು ಒಂದು ವೈರಸ್ ಅಷ್ಟೇ ಅಲ್ಲ, ಅದು ಹೇಗೆ ವಿವಿಧ ರಾಜಕೀಯ ಸ್ವರೂಪವನ್ನು ಪಡೆದುಕೊಂಡು ಜನರನ್ನು ಕಾಡಿತು ಎನ್ನುವುದನ್ನು ಚರ್ಚಿಸುವ ಮಹತ್ವದ ಬರಹಗಳು ಈ ಕೃತಿಯಲ್ಲಿವೆ. ಇಲ್ಲಿ ಕೋವಿಡ್‌ನ್ನು ವೈದ್ಯಕೀಯ ನೆಲೆಯಲ್ಲಿ ಮಾತ್ರ ಚರ್ಚಿಸದೇ ಅದರ ವಿವಿಧ ಆಯಾಮಗಳನ್ನು ವಿಮರ್ಶಾತ್ಮಕವಾಗಿ ನೋಡಲಾಗಿದೆ. ಕೋವಿಡ್ ಬೀರಿರುವ ಸಾಮಾಜಿಕ, ರಾಜಕೀಯ, ಆರ್ಥಿಕ ಪರಿಣಾಮಗಳನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ.
ಕೋವಿಡ್ -19 ಮಾನವ ಕುಲಕ್ಕೊಂದು ಎಚ್ಚರಿಕೆಯ ಕರೆ ಗಂಟೆಯಾಗಿದೆ ಎನ್ನುವುದು ಕ್ಲೀಷೆ ಎನಿಸುತ್ತಾದರೂ ಈ ಸಾಂಕ್ರಾಮಿಕವು ಬದುಕಿನ ಎಲ್ಲ ಆಯಾಮಗಳನ್ನು ಮರು ಪರಿಶೀಲಿಸುವಂತೆ ಮಾಡಿರುವುದು ವಾಸ್ತವ. ಈ ಎಲ್ಲ ಸಮಸ್ಯೆಗಳಿಗೆ ಅಂಕೆ ರಹಿತವಾದ ಆಧುನಿಕ ಅಭಿವೃದ್ಧಿಯೇ ಕಾರಣವೆಂದು ಹೇಳುವುದು ಸರಳವಾದ ಆಲೋಚನೆಯಾಗುತ್ತದೆ. ಆದರೆ ಸತ್ಯ ಸಂಕೀರ್ಣವಾಗಿದೆ. ನವ ಬಂಡವಾಳಶಾಹಿ ವ್ಯವಸ್ಥೆಯ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿರುವ ಪ್ರಜಾಪ್ರಭುತ್ವ ವ್ಯವಸ್ಥೆ, ಸೋಂಕಿನ ವಿಸ್ತಾರವನ್ನು ಅಂದಾಜಿಸಲಾಗದ ಸ್ಥಿತಿಯಲ್ಲಿರುವ ಸಾಮಾನ್ಯರಿಗೊಂದು ಕೈದೀವಿಗೆಯಾಗುವಲ್ಲಿ ಮಾಧ್ಯಮಗಳ ಸೋಲು, ವೈಜ್ಞಾನಿಕ ಮನೋಭಾವದ ಜಾಗದಲ್ಲಿ ತಳವೂರುತ್ತಿರುವ ಅವೈಜ್ಞಾನಿಕತೆ, ಗ್ರಾಮೀಣ ಜನರ ಮತ್ತು ರೈತರ ಸಮಸ್ಯೆಯ ಬೇರುಗಳು ಕೋವಿಡ್ ಆಚೆಗೂ ಚಾಚಿಕೊಂಡಿರುವುದನ್ನು ಗಮನಿಸುವಲ್ಲಿ ಶೈಕ್ಷಣಿಕ ವೈಫಲ್ಯ, ವಲಸೆ ಕಾರ್ಮಿಕರ ದುರಂತ, ಆಧುನಿಕ ತಂತ್ರಜ್ಞಾನದ ಸೀಮಿತತೆ, ಅವುಗಳ ಅಸಹಾಯಕತೆ, ಬಡವರಿಗೆ, ಕಾರ್ಮಿಕರಿಗೆ ನೆರವಾಗದ ಡಿಜಿಟಲ್ ಯುಗ, ಇವೆಲ್ಲದರ ಮೇಲೆ ಇಲ್ಲಿರುವ ಬರಹಗಳು ಬೆಳಕು ಚೆಲ್ಲುತ್ತವೆ.
ಡಾ.ವಿ.ರಾಜೇಂದ್ರ, ನಾಗೇಶ ಹೆಗಡೆ, ಟಿ.ಆರ್.ಅನಂತರಾಮು, ಡಾ.ಗೋಪಾಲ ದಾಬಡೆ,ಅಮರ್ತ್ಯ ಸೇನ್, ಶಾರದಾ ಗೋಪಾಲ, ಬಸವರಾಜು ಮೇಗಲಕೇರಿ, ನೀಲಾ ಕೆ., ಶಿವಸುಂದರ್, ಡಾ. ಬಿ. ಎಂ. ಪುಟ್ಟಯ್ಯ, ಡಾ. ಅರುಣ್ ಜೋಳದಕೂಡ್ಲಿಗೆ.... ಹೀಗೆ ನಾಡಿನ ಬಹುಮುಖ್ಯ ಬರಹಗಾರರು ಬೇರೆ ಬೇರೆ ನೆಲೆಯಲ್ಲಿ ಕೋವಿಡ್ ದಿನಗಳನ್ನು ಚರ್ಚಿಸಿದ್ದಾರೆ. ವೈದ್ಯಕೀಯ ಸವಾಲು,ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸ್ಥಿತಿಗತಿ, ಆಹಾರ ಭದ್ರತೆ, ಕೋವಿಡ್‌ನ್ನು ನಿಭಾಯಿಸುವಲ್ಲಿ ಮಾಧ್ಯಮಗಳ ವೈಫಲ್ಯ, ಶ್ರಮಿಕರ ಸ್ಥಿತಿಗತಿ, ಕೋವಿಡ್ ಕಾಲದಲ್ಲಿ ಮಕ್ಕಳ ಆರೋಗ್ಯ, ವೇಶ್ಯಾವಾಟಿಕೆಯ ಅವಲಂಬಿತರ ಮೇಲಿನ ದುಷ್ಪರಿಣಾಮ, ಆನ್‌ಲೈನ್ ಕಲಿಕೆಯ ಸವಾಲುಗಳು....ಹೀಗೆ ಬೇರೆ ಬೇರೆ ವಿಷಯಗಳು ನಮ್ಮನ್ನು ಕೋವಿಡ್ ಹೆಸರಿನಲ್ಲಿ ಸಾಮಾಜಿಕ ಆರ್ಥಿಕ ಒಳಸುಳಿಗಳಲ್ಲಿ ಸಿಲುಕಿಕೊಂಡ ತಳಸ್ತರದ ಭಾರತವನ್ನು ಪರಿಚಯಿಸುತ್ತದೆ. ಕೋವಿಡ್ ಕುರಿತಂತೆ ಕನ್ನಡದಲ್ಲಿ ಬಂದ ಮಹತ್ವದ ಕೃತಿಗಳಲ್ಲಿ ಇದೂ ಒಂದು.
ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 450. ಕೃತಿಯ ಮುಖಬೆಲೆ 400 ರೂಪಾಯಿ. ಆಸಕ್ತರು 080 - 22372388 ದೂರವಾಣಿಯನ್ನು ಸಂಪರ್ಕಿಸಬಹುದು.