ದೀಪಾವಳಿ ಸಂಭ್ರಮಾಚರಣೆ: ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮಹಿಳೆ ಸಾವು: ನರ್ಸ್ ಅಮಾನತು
ಮಧ್ಯ ಪ್ರದೇಶ, ನ.7: ಮಧ್ಯಪ್ರದೇಶದ ಸಾಗರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ದೀಪಾವಳಿ ಸಂಭ್ರಮಾಚರಣೆಯಲ್ಲಿ ತೊಡಗಿ, ತೀವ್ರ ಅಸ್ವಸ್ಥ ಮಹಿಳೆಯ ಬಗ್ಗೆ ಕಾಳಜಿ ವಹಿಸದ ಕಾರಣದಿಂದಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಹೆರಿಗೆ ವಾರ್ಡ್ನಲ್ಲಿ ಸಂಭವಿಸಿದ ಈ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನರ್ಸ್ ಒಬ್ಬರನ್ನು ಅಮಾನತು ಮಾಡಲಾಗಿದ್ದು, ವೈದ್ಯರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
ಆಸ್ಪತ್ರೆ ಸಿಬ್ಬಂದಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದ ವೇಳೆ ಜೀವನ್ಮರಣ ಸ್ಥಿತಿಯಲ್ಲಿದ್ದ ಮಹಿಳೆಯ ಆರೈಕೆಯನ್ನು ನಿರ್ಲಕ್ಷಿಸಲಾಗಿತ್ತು ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಬುಂಡೇಲ್ಖಂಡ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಆಸ್ಪತ್ರೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುತ್ತಿರುವ ದೃಶ್ಯದ ವಿಡಿಯೊ ವೈರಲ್ ಆಗಿತ್ತು.
ಘಟನೆಗೆ ಸಂಬಂಧಿಸಿದಂತೆ ನರ್ಸ್ ಒಬ್ಬರನ್ನು ಅಮಾನತು ಮಾಡಲಾಗಿದ್ದು, ವೈದ್ಯರೊಬ್ಬರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಐದು ಮಂದಿಗೆ ಎಚ್ಚರಿಕೆ ನೋಟಿಸ್ ನೀಡಲಾಗಿದೆ ಎಂದು ಕಾಲೇಜಿನ ವಕ್ತಾರ ಡಾ.ಉಮೇಶ್ ಪಟೇಲ್ ಹೇಳಿದ್ದಾರೆ.
ಪ್ರಸೂತಿ ವಿಭಾಗದ ಹೆರಿಗೆ ವಾರ್ಡ್ ಮತ್ತು ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಕರ್ತವ್ಯದಲ್ಲಿದ್ದ ಐದು ಮಂದಿಯನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ ಎಂದು ವಿವರಿಸಿದ್ದಾರೆ.
ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷದಿಂದ 26 ವರ್ಷದ ಮಹಿಳೆ ಮೃತಪಟ್ಟಿದ್ದಾಳೆ ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಎಚ್ಚರಿಕೆ ಪತ್ರ ನೀಡಲಾಗಿದೆ. ವಿಡಿಯೊ ತುಣುಕು ವೀಕ್ಷಿಸಿ, ಆಸ್ಪತ್ರೆ ಸಿಬ್ಬಂದಿಯಿಂದ ಮಾಹಿತಿ ಪಡೆದ ಬಳಿಕ ಈ ಘಟನೆ ನಿಜ ಎನ್ನುವುದು ಸಾಬೀತಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.