ಇರಾಕ್ ಪ್ರಧಾನಿ ನಿವಾಸದ ಮೇಲೆ ಡ್ರೋನ್ ದಾಳಿ: ಪ್ರಧಾನಿ ಪಾರು, 6 ಭದ್ರತಾ ಸಿಬ್ಬಂದಿಗೆ ಗಾಯ
ಬಗ್ದಾದ್, ನ.7: ಇರಾಕ್ ಪ್ರಧಾನಿ ಮುಸ್ತಫಾ ಅಲ್‌ಕಧಿಮಿಯ ಬಗ್ದಾದ್ ನಿವಾಸವನ್ನು ಗುರಿಯಾಗಿಸಿಕೊಂಡು ರವಿವಾರ ಸ್ಫೋಟಕ ತುಂಬಿದ್ದ ಡ್ರೋನ್ ದಾಳಿ ನಡೆದಿದ್ದು ಪ್ರಧಾನಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ . ಆದರೆ ಪ್ರಧಾನಿಯ ನಿವಾಸದ ಹೊರಗೆ ಭದ್ರತೆಗೆ ನಿಯೋಜಿಸಿದ್ದ ವೈಯಕ್ತಿಕ ಭದ್ರತಾ ಪಡೆಯ 6 ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಾಳಿಗೆ 3 ಡ್ರೋನ್‌ಗಳನ್ನು ಬಳಸಲಾಗಿದ್ದು ಇದರಲ್ಲಿ 2ನ್ನು ಭದ್ರತಾ ಪಡೆಗಳು ನೆಲಕ್ಕುರುಳಿಸಿವೆ. ಆದರೆ 3ನೇ ಡ್ರೋನ್ ಪ್ರಧಾನಿಯ ನಿವಾಸಕ್ಕೆ ಅಪ್ಪಳಿಸಿದೆ . ಯಾವುದೇ ಸಂಘಟನೆ ಇದುವರೆಗೆ ಈ ದಾಳಿಯ ಹೊಣೆ ವಹಿಸಿಲ್ಲ ಎಂದು ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಐಎನ್‌ಎ ವರದಿ ಮಾಡಿದೆ.
ಬಿಗಿ ಭದ್ರತೆಯ ಹಸಿರು ವಲಯ(ಗ್ರೀನ್ ರೆನ್)ದಲ್ಲಿ ನಡೆದಿರುವ ಈ ವಿದ್ಯಮಾನವು ತೀವ್ರ ಆತಂಕಕ್ಕೆ ಕಾರಣವಾಗಿದೆ.ಪ್ರಧಾನಿ ನಿವಾಸ, ಸರಕಾರಿ ಕಚೇರಿಗಳು ಹಾಗೂ ವಿದೇಶಿ ರಾಯಭಾರಿ ಕಚೇರಿಗಳನ್ನು ಹೊಂದಿರುವ ಹಸಿರು ವಲಯದಲ್ಲಿ ಭದ್ರತಾ ಪರಿಸ್ಥಿತಿ ಸ್ಥಿರವಾಗಿದೆ. ಡ್ರೋನ್ ದಾಳಿಯಲ್ಲಿ ಪ್ರಧಾನಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ ಮನೆಯಲ್ಲಿದ್ದ ಕೆಲವರು ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಆಂತರಿಕ ಸಚಿವಾಲಯದ ವಕ್ತಾರರು ಹೇಳಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.
ದೇವರ ದಯೆಯಿಂದ ನಾನು ಕ್ಷೇಮವಾಗಿದ್ದೇನೆ. ಇರಾಕ್‌ನ ಒಳಿತಿಗಾಗಿ ಎಲ್ಲರೂ ಶಾಂತಿ ಕಾಪಾಡಿಕೊಳ್ಳಬೇಕು ಎಂದು ಪ್ರಧಾನಿ ಕಧಿಮಿ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಬಳಿಕ ಸರಕಾರಿ ಸ್ವಾಮ್ಯದ ಟಿವಿ ವಾಹಿನಿಯಲ್ಲಿ ಕಾಣಿಸಿಕೊಂಡ ಅವರು ‘ ಹೇಡಿತನದ ರಾಕೆಟ್ ಮತ್ತು ಡ್ರೋನ್ ದಾಳಿಯಿಂದ ದೇಶವನ್ನು ಅಥವಾ ದೇಶದ ಭವಿಷ್ಯವನ್ನು ನಿರ್ಮಿಸಲಾಗದು’ ಎಂದು ಹೇಳಿದರು.
ದಾಳಿಯನ್ನು ಖಂಡಿಸಿರುವ ಇರಾಕ್ ಅಧ್ಯಕ್ಷ ಬರ್ಹಾಮ್ ಸಲಿಹ್, ಇದೊಂದು ಭಯೋತ್ಪಾದಕ ಕೃತ್ಯವಾಗಿದ್ದು ಇರಾಕ್ ವಿರುದ್ಧಧ ಘೋರ ಅಪರಾಧವಾಗಿದೆ. ಇಂತಹ ಕೃತ್ಯಗಳ ವಿರುದ್ಧ ಒಗ್ಗೂಡಿ ಹೋರಾಡುವ ಅಗತ್ಯವಿದೆ ಎಂದಿದ್ದಾರೆ.