ಬಂಟ್ವಾಳ: ಟೀಂ ಯೂತ್ ಫಾರ್ ನೇಷನ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ
ಬಂಟ್ವಾಳ: ತಾಲೂಕಿನ ಬ್ರಹ್ಮರಕೋಟ್ಲುವಿನಲ್ಲಿ ಟೀಂ ಯೂತ್ ಫಾರ್ ನೇಷನ್ ನ 'ಸ್ವಚ್ಛ ಬಂಟ್ವಾಳ ಅಭಿಯಾನ'ದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಯಿತು.
ತಂಡದ ಕಾರ್ಯಕರ್ತರು ಪಾಲ್ಗೊಂಡು ಪರಿಸರವನ್ನು ಸ್ವಚ್ಛಗೊಳಿಸುವುದರೊಂದಿಗೆ ಸ್ಥಳೀಯರ ಪ್ರಶಂಸೆಗೆ ಪಾತ್ರರಾದರು. ಸಾರ್ವಜನಿಕರಲ್ಲಿ ಪರಿಸರದ ಸ್ವಚ್ಛತೆಯ ಅಗತ್ಯತೆ ಹಾಗೂ ಮಹತ್ವಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಬ್ರಹ್ಮರಕೋಟ್ಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಹುಕಾಲದಿಂದ ಜನರು ತ್ಯಾಜ್ಯಗಳನ್ನು ಎಸೆಯುತ್ತಿದ್ದು, ಈ ವಿಚಾರ ತಂಡದ ಗಮನಕ್ಕೆ ಬಂದಿತ್ತು. ಈ ನಿಟ್ಟಿನಲ್ಲಿ ತಮ್ಮ ಊರನ್ನು ಚಂದಗಾಣಿಸುವ ಸಲುವಾಗಿ ಈ ಯುವಕರ ತಂಡವು ಸತ್ಕಾರ್ಯವನ್ನು ಕೈಗೊಂಡು ಇತರರಿಗೆ ಮಾದರಿಯಾಗಿದೆ. ಸ್ವಚ್ಛತಾ ಕಾರ್ಯದ ನಂತರ ತ್ಯಾಜ್ಯವನ್ನು ಬಂಟ್ವಾಳ ಪುರಸಭೆಗೆ ಹಸ್ತಾಂತರಿಸಲಾಯಿತು. ಪುರಸಭೆಯ ಸದಸ್ಯರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಟೀಂ ಯೂತ್ ಫಾರ್ ನೇಷನ್ ಯುವಕರ ತಂಡವಾಗಿದ್ದು ಅನೇಕ ಸಮಾಜಮುಖಿ ಅಭಿವೃದ್ಧಿ ಕಾರ್ಯವನ್ನು ನಡೆಸುತ್ತಾ ಬಂದಿದೆ ಎಂದು ಸಂಘಟಕರು ತಿಳಿಸಿದರು.