ದಮ್ಮಾಮ್: ಇಂಡಿಯನ್ ಸೋಶಿಯಲ್ ಫೋರಂ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ದಮ್ಮಾಮ್: ಇಂಡಿಯನ್ ಸೋಶಿಯಲ್ ಫೋರಂ, ದಮ್ಮಾಮ್, ಕರ್ನಾಟಕ ಘಟಕದ ಪ್ರಯುಕ್ತ ಇತ್ತೀಚೆಗೆ 66ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ರಫಾ ಕ್ಲಿನಿಕ್ ಆಡಿಟೊರಿಯಂನಲ್ಲಿ ಆಯೋಜಿಸಲಾಗಿತ್ತು. ನಾಡಗೀತೆಯೊಂದಿಗೆ ಪ್ರಾರಂಭಗೊಂಡು ಸಭಾ ಕಾರ್ಯಕ್ರಮ, ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡು ವಿನೂತನ ಶೈಲಿಯಲ್ಲಿ ಸಬೆಯು ಆಯೋಜನೆಗೊಂಡಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ರೌದ ಆಸ್ಪತ್ರೆ ಇಲ್ಲಿನ ಮೌಖಿಕ ಹಾಗೂ ಮ್ಯಾಕ್ಸೈಲೋಫೇಸಿಯಲ್ ಶಸ್ತ್ರಚಿಕಿತ್ಸಕ ಡಾ.ಅಭಿಜಿತ್ ವರ್ಗೀಸ್, "ಹೊರ ನಾಡಿನ ಜೀವನ ತಾಯ್ನಾಡಿನ ಬೆಲೆಯೇನೆಂಬುದನ್ನು ನಮಗೆ ತೋರಿಸಿಕೊಟ್ಟಿದೆ. ತಾಯ್ನೆಲದ ಸ್ಮರಣೆಗೆ ಅವಕಾಶವುಂಟುಮಾಡಿದ ಈ ಕಾರ್ಯಕ್ರಮವನ್ನು ಆಯೋಜಿಸಿದ ಐ.ಎಸ್.ಎಫ್ ಪ್ರಯತ್ನ ಶ್ಲಾಘನೀಯ" ಎಂದರು.
ಕನ್ನಡ ರಾಜ್ಯೋತ್ಸವ ಸಂದೇಶ ಭಾಷಣ ನೀಡಿದ ದಮ್ಮಾಮ್ ಐ.ಎಸ್.ಎಫ್ ರಾಜ್ಯ ಸಮಿತಿ ಸದಸ್ಯ ಎ.ಎಂ.ಆರಿಫ್ ಜೋಕಟ್ಟೆ ಮಾತನಾಡಿ, "2000 ವರುಷಗಳ ಇತಿಹಾಸವಿರುವ ಕನ್ನಡ ಭಾಷೆಯು 8 ಜ್ಞಾನ ಪೀಠ ಪ್ರಶಸ್ತಿಗಳನ್ನು ಲಭಿಸಿ ಕೊಟ್ಟ ಅತ್ಯಂತ ಹಳೆಯ ಭಾಷೆಯಾಗಿದ್ದು ಹಲವು ತರಹದ ನಾಡಭಾಷೆಗಳ, ನಡೆ ನುಡಿಗಳ, ಜಲ ಸಮೃದ್ಧಿಯ, ಮೌಲ್ಯ, ಸಂಸ್ಕೃತಿಗಳ ರಸಬೀಡು". ಇಂದು ನಮ್ಮ ಒಕ್ಕೂಟ ಸರಕಾರ ರಾಷ್ಟ್ರೀಯ ಭಾಷೆ ಹಿಂದಿಯನ್ನು ಹೇರುವ ಮುಖಾಂತರ ಕನ್ನಡ ಭಾಷೆಗೆ ತೊಡಕಾಗುವ ಕೆಲಸ ಮಾಡುತ್ತಿದೆ. ಹೊಸ ಶಿಕ್ಷಣ ನೀತಿಯ ಪೋಶಾಕಿನಲ್ಲಿ ಪ್ರಾದೇಶಿಕ ಭಾಷೆಗಳಿಗೆ ಕಡಿವಾಣ ಹಾಕುವ ಹುನ್ನಾರವನ್ನೂ ಕೂಡಾ ಒಕ್ಕೂಟ ಸರಕಾರ ಪ್ರಯತ್ನ ಮಾಡುತ್ತಿದೆ. ಇದಲ್ಲದೆ ಐಟಿ. ಬಿಟಿ ಭರಾಟೆಯಲ್ಲಿ, ಬೃಹತ್ ಉದ್ದಿಮೆಗಳಲ್ಲಿ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಹಲವಾರು ಉದ್ಯೋಗ ವ್ಯವಸ್ಥೆಗಳಿದ್ದರೂ, ಸ್ಥಳೀಯರಿಗೆ ಉದ್ಯೋಗಾವಕಶ ನೀಡಬೇಕು ಎಂಬ ನಿಯಮವಿದ್ದರೂ ಅದನ್ನು ನೀಡದೆ ಅಕ್ರಮವೆಸಗುತ್ತಿರುವುದು ಕನ್ನಡ ನಾಡಿಗೆ ಮಾಡುವ ದ್ರೋಹವಾಗಿದೆ ಎಂದು ಅವರು ಹೇಳಿದರು.
ಉಪಾಧ್ಯಕ್ಷರಾದ ಎಂ. ಶರೀಫ್ ಅಡ್ಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
3000ಕ್ಕೂ ಹೆಚ್ಚು ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆಗಳನ್ನು ಮಾಡಿದ ದಮ್ಮಾಮ್ ನ ಕಿಂಗ್ ಫಹದ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹೃದಯ ಶಸ್ತ್ರಚಿಕಿತ್ಸಕ ಡಾ.ಫಯಾಝ್ ಅವರನ್ನು ಸನ್ಮಾನಿಸಲಾಯಿತು. ಐ.ಎಸ್.ಎಫ್ ದಮ್ಮಾಮ್ ಕರ್ನಾಟಕ ರಾಜ್ಯಾಧ್ಯಕ್ಷ ಮೆಹ್ರಾಜ್ ಗುಲ್ಬರ್ಗಾ ಕಾರ್ಯಕ್ರಮ ನಡೆಸಿಕೊಟ್ಟರು.
ರಾಜ್ಯ ಸಮಿತಿ ಸದಸ್ಯರಾದ ಇಮ್ರಾನ್ ಕಾಟಿಪಳ್ಳ ಐ.ಎಸ್.ಎಫ್ ಸೌದಿ ಅರೇಬಿಯಾದಾದ್ಯಂತ ವಿವಿಧ ಕನ್ನಡಿಗ ಸಾಧಕರನ್ನು ಗುರುತಿಸಿ ಸನ್ಮಾನಿಸಿರುವ ಕುರಿತು ವರದಿಯಿಟ್ಟರು. ಈ ಕುರಿತ ವಿಡಿಯೊ ಚಿತ್ರವನ್ನು ಪ್ರದರ್ಶಿಸಲಾಯಿತು. ಅನಿವಾಸಿ ಕನ್ನಡಿಗರ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಕನ್ನಡಿಗರಾದ ಜವಾಝ್ ಬಸ್ರೂರು ರಿಯಾದ್, ಲತೀಫ್ ಉಪ್ಪಿನಂಗಡಿ ಜೆದ್ದ, ಮುಹಮ್ಮದ್ ಯಾಸೀನ್ ಗುಲ್ಬರ್ಗಾ ಅಲ್ ಖೋಬರ್ ಅವರನ್ನು ಸನ್ಮಾನಿಸಿದ ಕುರಿತು ಉಲ್ಲೇಖಿಸಿದರು.
ಸಮಾರಂಭದ ಅಂಗವಾಗಿ ನಡೆದ ವಿನೂತನ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕನ್ನಡ ಅಭಿಮಾನಿಗಳ ಮನ ಗೆದ್ದಿತು. ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ, ಕರುನಾಡ ದಂತಕಥೆಗಳ ಅಲಂಕಾರಿಕ ಉಡುಗೆಗಳ ವೇಷಭೂಷಣ ಹಾಗೂ ಕನ್ನಡ ಡಿಂಡಿಮದ ಕಲರವ ಹಾಡು ನೆರೆದವರ ಹಾಗೂ ಅಂತರ್ಜಾಲ ವೀಕ್ಷಕರ ಮನಗೆದ್ದಿತು.
ಅಕ್ಟೋಬರ್ ತಿಂಗಳಲ್ಲಿ ನಡೆಸಿದ್ದ ಗಾಂಧಿ ಜಯಂತಿ ಅಂಗವಾಗಿ 'ಗಾಂಧಿಯಿಂದ ಗೋಡ್ಸೆಯೆಡೆಗೆ ವಾಲುತ್ತಿರುವ ಭಾರತ' ಎಂಬ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತರ ಹೆಸರುಗಳನ್ನು ಪ್ರಕಟಿಸಲಾಯಿತು. ನಲ್ವತ್ತ ಮೂರು ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಪ್ರಥಮ ಸ್ಥಾನವನ್ನು ಶಬೀರ್ ರಹಿಮಾನ್, ದ್ವಿತೀಯ ಸ್ಥಾನವನ್ನು ಫಾತಿಮಾ ರಲಿಯಾ ಮತ್ತು ತೃತೀಯ ಸ್ಥಾನವನ್ನು ಫಾತಿಮಾ ನುಸೈಬಾ ಹಾಗೂ ಸಮೀನಾ ಅಲ್‌ಖೋಬರ್ ಗೆದ್ದುಕೊಂಡರು.
ಇಂಡಿಯಾ ಫ್ರಟೆರ್ನಿಟಿ ಫೋರಂ ದಮ್ಮಾಮ್, ಕರ್ನಾಟಕ ರಾಜ್ಯಾಧ್ಯಕ್ಷ ಸಾಜಿದ್ ವಳವೂರು, ಐ.ಎಸ್.ಎಫ್ ಕೇಂದ್ರ ಸಮಿತಿ ಸದಸ್ಯ ಸಲಾವುದ್ದೀನ್ ತುಮಕೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೈಸೂರು ಚಾರಿಟೇಬಲ್ ಟ್ರಸ್ಟ್ ರಾಜ್ಯಾಧ್ಯಕ್ಷ ಸಯ್ಯದ್ ಅಮೀನ್, ಶಿವಮೊಗ್ಗ ಚಾರಿಟೇಬಲ್ ಟ್ರಸ್ಟ್ ರಾಜ್ಯಾಧ್ಯಕ್ಷ ನಯಾಝ್ ಅಹ್ಮದ್ ಮತ್ತು ಬೆಳಗಾಂ ಅಸೋಸಿಯೇಷನ್ ನ ಅಮ್ಜದ್ ಮುಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಐ.ಎಸ್.ಎಫ್ ರಾಜ್ಯ ಸಮಿತಿ ಕಾರ್ಯದರ್ಶಿ ಶರೀಫ್ ಕೃಷ್ಣಾಪುರ ಧನ್ಯವಾದ ಸಲ್ಲಿಸಿದರು ಮತ್ತು ಐ.ಎಸ್.ಎಫ್ ಖೋಬರ್ ಉತ್ತರ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಮುನೀರ್ ಮೈಸೂರು ಕಾರ್ಯಕ್ರಮ ನಿರೂಪಿಸಿದರು