ಟಾಮ್ ಆ್ಯಂಡ್ ಜೆರ್ರಿ: ಬೇರೂರದ ಭಾವಗಳಿಗೆ ನೆಲೆಗೊಳ್ಳುವ ಕನಸು!
'ಹಾಯಾಗಿದೇ ಎದೆಯೊಳಗೇ..' ಎನ್ನುವ ಒಂದು ಹಾಡಿನ ಮೂಲಕ ಸುದ್ದಿಯಾದ ಚಿತ್ರ 'ಟಾಮ್ ಆ್ಯಂಡ್ ಜೆರ್ರಿ'. ಹೆಸರೇ ಸೂಚಿಸುವಂತೆ ಸದಾ ಜಗಳವಾಡುತ್ತಲೇ ಮನರಂಜಿಸುವ ಜೋಡಿ ಅದು. ಆದರೆ ಚಿತ್ರದಲ್ಲಿ ಮನರಂಜನೆ ಎಷ್ಟರಮಟ್ಟಿಗೆ ಇದೆ ಎನ್ನುವುದು ಚಿತ್ರ ನೋಡಿದಾಗಲೇ ಅರಿವಾಗುವುದು.
ನಾಯಕ ನಾಯಕಿಯ ಬಾಲ್ಯವನ್ನು ಅನಾಥಾಲಯದಲ್ಲಿ ತೋರಿಸಲಾಗುತ್ತದೆ. ಅವರಿಬ್ಬರನ್ನು ಬೇರೆ ಬೇರೆ ಮನೆಯ ಶ್ರೀಮಂತ ದಂಪತಿ ದತ್ತು ತೆಗೆದುಕೊಂಡು ಹೋಗುತ್ತಾರೆ. ಅಲ್ಲಿಗೆ ಅವರಿಬ್ಬರಿಗೆ ಇದ್ದ ಸಂಪರ್ಕ ಕಡಿದುಕೊಳ್ಳುತ್ತದೆ. ಆದರೆ ಎರಡು ದಶಕಗಳ ಬಳಿಕ ಅವರು ಮತ್ತೆ ಭೇಟಿಯಾದಾಗ ಹೇಗೆ ಗುರುತಾಗುತ್ತದೆ? ಆನಂತರ ಅವರ ನಡುವಿನ ಸಂಬಂಧ ಏನಾಗುತ್ತದೆ ಎನ್ನುವುದನ್ನು ಚಿತ್ರದ ಕತೆ ಹೇಳುತ್ತದೆ.
ಹಾಗೆ ನೋಡಿದರೆ ಚಿತ್ರದಲ್ಲಿ ಹೇಳಿಕೊಳ್ಳುವಂತಹ ಕತೆ ಇಲ್ಲ. ಇದ್ದರೂ ಅದನ್ನು ಹೇಳಿಕೊಳ್ಳಲಾಗಿಲ್ಲ. ಕತೆಗಿಂತ ಸಂಭಾಷಣೆಗೆ ಪ್ರಾಮುಖ್ಯತೆ ನೀಡಲಾಗಿದೆ ಅಥವಾ ಇಡೀ ಚಿತ್ರವನ್ನು ಸಂಭಾಷಣೆಯಲ್ಲೇ ಸರಿದೂಗಿಸಲು ಪ್ರಯತ್ನಿಸಲಾಗಿದೆ. ಹಾಗಾಗಿ ಈ ಚಿತ್ರದ ಪ್ಲಸ್ ಮತ್ತು ಮೈನಸ್ ಎರಡೂ ಸಂಭಾಷಣೆಗಳೇ. ಏನೋ ಒಂದು ವಿಚಾರ ಚೆನ್ನಾಗಿದೆ ಎಂದು ಅನಿಸುವ ಹೊತ್ತಿಗೆ ಅದನ್ನೇ ಪಾತ್ರಗಳ ಮೂಲಕ ಹೇಳಿಸಿ ರೇಜಿಗೆ ಹುಟ್ಟಿಸಿದ್ದಾರೆ. ಚಿತ್ರದಲ್ಲಿ ಯಾವುದೋ ಒಂದು ಪಾತ್ರದ ಮೂಲಕ ಸೆಂಟಿಮೆಂಟ್ ವರ್ಕೌಟ್ ಆಗುತ್ತಿದೆ ಎನ್ನುವ ಹಂತದಲ್ಲಿ ಜೊತೆಗಿದ್ದ ಪಾತ್ರಗಳೇ ಕಣ್ಣೀರಾಗಿ ಓವರ್ ಆ್ಯಕ್ಟ್ ಮಾಡುತ್ತವೆ. ಆ ಮೂಲಕ ಪ್ರೇಕ್ಷಕನ ಪ್ರತಿಕ್ರಿಯೆ ಹೀಗೆಯೇ ಇರಬೇಕು ಎಂದು ಸ್ಪೂನ್ ಫೀಡ್ ಮಾಡುತ್ತವೆ. ಚಿತ್ರದ ನಾಯಕ ಧರ್ಮನಾಗಿ ನವನಟ ನಿಶ್ಚಿತ್ ಕೊರೋಡಿ ಅಭಿನಯಿಸಿದ್ದಾರೆ. ಟೀನೇಜ್ ದಾಟುವ ಹೊತ್ತಲ್ಲಿ ಭವಿಷ್ಯದ ಸ್ಪಷ್ಟ ಕಲ್ಪನೆ ಇರದ ಮುಂಗೋಪಿ ಹುಡುಗನ ಪಾತ್ರಕ್ಕೆ ಜೀವ ತುಂಬುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅದರಲ್ಲೂ ಅನಾಥಾಲಯದಿಂದ ಬಂದು ತಾನು ದತ್ತುಪುತ್ರನೆಂಬ ಮನೋಭಾವದಲ್ಲೇ ಬೆಳೆಯುವ ಹುಡುಗನ ಅಭದ್ರತೆಯನ್ನು ವರ್ತನೆಗಳ ಮೂಲಕ ಹೊರಗೆಡಹಿದ್ದಾರೆ. ಆತನ ಗೆಳತಿ ಸತ್ಯಾಳ ಪಾತ್ರದಲ್ಲಿ ಯುವನಟಿ ಚೈತ್ರಾ ರಾವ್ ತಮ್ಮ ಅಸಹಜ ಪಾತ್ರವನ್ನು ಕೂಡ ಆಕರ್ಷಕವಾಗಿ ನಿರ್ವಹಿಸಿದ್ದಾರೆ. ನಾಯಕನ ತಾಯಿಯಾಗಿ ತಾರಾ, ತಂದೆಯಾಗಿ ಜೈಜಗದೀಶ್, ಹುಚ್ಚನಾಗಿ ಸಂಪತ್, ಬಸ್ ನಿರ್ವಾಹಕನಾಗಿ ಕಡ್ಡಿಪುಡಿ ಚಂದ್ರು ಮೊದಲಾದವರು ಪ್ರಮುಖ ಪಾತ್ರದಲ್ಲಿದ್ದರೆ, ಅಕ್ಷರಶಃ ಒಂದು ಬಸ್ ತುಂಬ ಪೋಷಕ ಪಾತ್ರಗಳೇ ತುಂಬಿಕೊಂಡ ದೃಶ್ಯ ಪದೇಪದೆ ಕಾಣಬಹುದಾಗಿದೆ!
ಎರಡು ಗಂಟೆಯ ಸಿನೆಮಾವಾದರೂ ಇಬ್ಬರೇ ಕಲಾವಿದರ ಮುಖಗಳು ಮತ್ತು ನೂರುಮುಖದ ಬದುಕಿನ ಕುರಿತಾಗಿ ಹೇಳುವ ಚಿತ್ರ ಇದು. ಎಷ್ಟೇ ಪಾತ್ರಗಳು ಬಂದರೂ, ಸನ್ನಿವೇಶಗಳು ಬದಲಾದರೂ ಸಂಭಾಷಣೆಗಳೇ ದೃಶ್ಯವನ್ನು ಆಳುತ್ತವೆ. ಬದುಕಲ್ಲಿ ನೆಲೆಗೊಳ್ಳಲು ಹಣ ಮೊದಲೋ, ಪ್ರೀತಿ ಮೊದಲೋ ಎನ್ನುವ ಪ್ರಶ್ನೆಗೆ ಅನುಭವದಿಂದಲೇ ಎರಡರ ಅಗತ್ಯವೇನು ಎನ್ನುವ ಅರಿವು ಮೂಡಬಲ್ಲದು ಎಂದು ನಿರ್ದೇಶಕರು ತೋರಿಸಿದ್ದಾರೆ.
ದತ್ತು ಪಡೆದುಕೊಂಡ ಮಕ್ಕಳ ಮಾನಸಿಕ ಸ್ಥಿತಿಯ ಬಗ್ಗೆ ಚಿತ್ರದಲ್ಲಿ ತೋರಿಸಿರುವ ಅವಲೋಕನವನ್ನು ಕಂಡರೆ ದತ್ತು ತೆಗೆದುಕೊಳ್ಳುವವರು ಕೂಡ ಹಿಂಜರಿದರೆ ಅಚ್ಚರಿಯಿಲ್ಲ. ಹರೆಯದ ಹುಡುಗರಿಗೆ ಬದುಕಿನ ಬಗ್ಗೆ ಇರುವ ಗೊಂದಲಗಳನ್ನು ಪರಿಹರಿಸುವ ರೀತಿಯಲ್ಲಿ ತಯಾರಾದ ಚಿತ್ರ ಇದು. ಆದರೆ ಅದನ್ನು ಹಾಗೆಯೇ ನೋಡಬೇಕು ಎನ್ನುವ ತಯಾರಿಯೊಂದಿಗೆ ಹೋಗದಿದ್ದರೆ ನೋಡುಗರಲ್ಲೇ ಗೊಂದಲವಾಗುವುದು ಖಚಿತ.
ನಿರ್ದೇಶನ: ರಾಘವ್ ವಿನಯ್ ಶಿವಗಂಗೆ
ನಿರ್ಮಾಣ: ವಿನಯ್ ಚಂದ್ರ
ತಾರಾಗಣ: ನಿಶ್ಚಿತ್ ಕೊರೊಡಿ, ಚೈತ್ರಾ ರಾವ್, ತಾರಾ ಅನುರಾಧಾ, ಜೈಜಗದೀಶ್ ಮೊದಲಾದವರು.