ಕರಾವಳಿಯಲ್ಲಿ ವರ್ಷದ ತಿರುಗಾಟಕ್ಕೆ ಸಜ್ಜಾಗಿವೆ ಯಕ್ಷಗಾನ ಮೇಳಗಳು
ಕೊರೋನೋತ್ತರ ದಿನಗಳಲ್ಲಿ ಭವಿಷ್ಯದ ಹುಡುಕಾಟ
ಉಡುಪಿ, ನ.14: ಕೊರೋನ ಸಾಂಕ್ರಾಮಿಕದಿಂದಾಗಿ ಸದ್ದಡಗಿದಂತಿದ್ದ ಯಕ್ಷಗಾನ ಮತ್ತೆ ತನ್ನ ಹಿಂದಿನ ವೈಭವದ ದಿನಗಳಿಗೆ ಮರಳುವ ನಿರೀಕ್ಷೆಯೊಂದಿಗೆ ಯಕ್ಷಗಾನ ಮೇಳಗಳು ಮತ್ತೆ ತಮ್ಮ ವರ್ಷದ ತಿರುಗಾಟಕ್ಕೆ ಸಜ್ಜಾಗಿವೆ. ನವೆಂಬರ್ ಕೊನೆಯ ವಾರದಿಂದ ಡಿಸೆಂಬರ್ ಮೊದಲ ವಾರದ ನಡುವೆ ಈ ಚಾಲ್ತಿಯಲ್ಲಿರುವ ಸುಮಾರು 40 ಮೇಳಗಳು ವರ್ಷದ ತಿರುಗಾಟ ನಡೆಸಲು ಬೇಕಾದ ಪೂರ್ವಸಿದ್ಧತೆಯ ಕೊನೆಯ ಹಂತದಲ್ಲಿವೆ. ಕೊರೋನದೊಂದಿಗೆ ಕಳೆದ ಒಂದು-ಒಂದೂವರೆ ವರ್ಷದಿಂದ ನಗುವನ್ನು ಮರೆತಂತಿದ್ದ ಸಾವಿರಾರು ಕಲಾವಿದರು, ಯಕ್ಷಗಾನ ಮೇಳಗಳ ಕಾರ್ಮಿಕರು ಹಾಗೂ ಅವರನ್ನೇ ನಂಬಿದ ಕುಟುಂಬಿಕರ ಬದುಕಿನಲ್ಲಿ ಮತ್ತೆ ಆಶಾಕಿರಣಗಳು ಮೂಡತೊಡಗಿವೆ. ನ.28ಕ್ಕೆ ಮಂದಾರ್ತಿ ಮೇಳದ ದೇವರಸೇವೆ: ಮಂದಾರ್ತಿ ದೇವಸ್ಥಾನದ ಆಡಳಿತಕ್ಕೊಳಪಟ್ಟ ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳ ನ.28ರಂದು ದೇವರ ಸೇವೆ ಆಟದೊಂದಿಗೆ ತನ್ನ ವರ್ಷದ ತಿರುಗಾಟವನ್ನು ಪ್ರಾರಂಭಿಸಲಿದೆ ಎಂದು ದೇವಸ್ಥಾನದ ಆಡಳಿತ ಟ್ರಸ್ಟಿ ಎಚ್.ಧನಂಜಯ ಶೆಟ್ಟಿ ಹೇಳುತ್ತಾರೆ.
ಈ ಬಾರಿಯೂ ಮಂದಾರ್ತಿಯ ಐದು ಮೇಳಗಳಿವೆ. ಇವುಗಳಲ್ಲಿ 200ರಷ್ಟು ಕಲಾವಿದರನ್ನು ನೇಮಿಸಿಕೊಳ್ಳಲಾಗಿದೆ ಎಂದವರು ವಿವರಿಸಿದರು.
2042-43ರವರೆಗೆ ಆಟದ ಬುಕ್ಕಿಂಗ್: ಮಂದಾರ್ತಿಯ ಐದು ಮೇಳಗಳು ಪ್ರತಿವರ್ಷ ಸುಮಾರು 900ರಷ್ಟು ಹರಕೆ ಆಟಗಳನ್ನು ಆಡುತ್ತವೆ. ಈ ಬಾರಿ ಜಿಲ್ಲಾಧಿಕಾರಿಯಿಂದ ಅನುಮತಿ ತಡವಾಗಿ ದೊರೆತದ್ದರಿಂದ ಎರಡು ಮೇಳಗಳು ಮಾತ್ರ ಹರಕೆ ಆಟ ಆಡುತ್ತಿವೆ. ಅದು ನ.24ರವರೆಗೆ ನಡೆಯಲಿದೆ. ಸದ್ಯದ ಮಟ್ಟಿಗೆ 2042-43ರವರೆಗೆ ಮಂದಾರ್ತಿ ಮೇಳದ ಎಲ್ಲಾ ಹರಕೆ ಆಟಗಳು ಬುಕ್ ಆಗಿವೆ ಎಂದು ಧನಂಜಯ ಶೆಟ್ಟಿ ಹೇಳಿದರು.
ಡಿ.6ಕ್ಕೆ ಸಾಲಿಗ್ರಾಮ ಮೇಳ: ಜಿಲ್ಲೆಯಲ್ಲಿ ಐದು ಮೇಳಗಳನ್ನು -ಸಾಲಿಗ್ರಾಮ, ಹಿರಿಯಡ್ಕ, ಸೌಕೂರು, ಮಡಾಮಕ್ಕಿ, ಮೇಗವಳ್ಳಿ- ನಡೆಸುವ ಪಿ.ಕಿಶನ್ ಹೆಗ್ಡೆ ಕೂಡ ತಮ್ಮ ಮೇಳಗಳ ತಿರುಗಾಟದ ದಿನಗಳನ್ನು ನಿಗದಿಪಡಿಸಿದ್ದಾರೆ. ಸಾಲಿಗ್ರಾಮ ಮೇಳದ ತಿರುಗಾಟ ಡಿ.6, ಸೌಕೂರು ಮೇಳದ ಸಂಚಾರ ನ.29, ಹಿರಿಯಡ್ಕ ಮೇಳದ್ದು ಡಿ.9ಕ್ಕೆ, ಮಡಾಮಕ್ಕಿ ಮೇಳದ್ದು ಡಿ.13 ಹಾಗೂ ಮೇಗರವಳ್ಳಿ ಮೇಳದ ಸಂಚಾರವನ್ನು ಡಿ.20ರ ನಂತರ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಕಿಶನ್ ಹೆಗ್ಡೆ ತಿಳಿಸಿದ್ದಾರೆ. ಧರ್ಮಸ್ಥಳ ಶ್ರೀಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳದಲ್ಲಿ ಈಗಾಗಲೇ ತನ್ನ ಪ್ರದರ್ಶನವನ್ನು ಪ್ರಾರಂಭಿಸಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ತಿರುಗಾಟವನ್ನು ಪ್ರಾರಂಭಿಸಲಿದೆ ಎಂದು ತಿಳಿದು ಬಂದಿದೆ. ಅದೇ ರೀತಿ ಹಟ್ಟಿಯಂಗಡಿ ಮೇಳವೂ ತನ್ನ ಪ್ರದರ್ಶನ ಪ್ರಾರಂಭಿಸಿದ್ದು, ಕಳೆದೊಂದು ವಾರದಿಂದ ಶ್ರೀಕೃಷ್ಮ ಮಠದಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಿದೆ. ಇದೇ ರೀತಿ ಇನ್ನುಳಿದ ಮೇಳಗಳೂ ಮುಂದಿನ 15-20 ದಿನಗಳಲ್ಲಿ ತಮ್ಮ ವರ್ಷದ ತಿರುಗಾಟವನ್ನು ಪ್ರಾರಂಭಿಸಲಿವೆ.
40 ಮೇಳ 1,500 ಕಲಾವಿದರು
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸುಮಾರು 40 ವೃತ್ತಿಪರ ಮೇಳಗಳಿವೆ. ಇವುಗಳಲ್ಲಿ ಸುಮಾರು 1,500ರಷ್ಟು ಕಲಾವಿದರು ದುಡಿಯುತ್ತಿದ್ದಾರೆ. ಈ ಮೇಳಗಳಲ್ಲಿ ಇತರ ಕಾರ್ಮಿಕರು ಸೇರಿ ಸುಮಾರು 3,000 ಮಂದಿಯ ಕುಟುಂಬ ಯಕ್ಷಗಾನ ಆಟವನ್ನೇ ನಂಬಿ ಬದುಕು ಸಾಗಿಸುತ್ತಿವೆ. ಇದಲ್ಲದೆ ಯಕ್ಷಗಾನ ಆಟದ ಸಮಯದಲ್ಲಿ ಬೇರೆ ಬೇರೆ ರೀತಿಯಲ್ಲಿ ನೂರಾರು ಮಂದಿಗೆ ಇದು ಉದ್ಯೋಗ ನೀಡುತ್ತಿದೆ. ಕಳೆದ ಎರಡು ವರ್ಷಗಳಿಂದ ಯಕ್ಷಗಾನ ಬಯಲಾಟಗಳು ನಿಂತಿರುವುದರಿಂದ ಇವರೆಲ್ಲರೂ ಜೀವನಾಧಾರವನ್ನೇ ಕಳೆದುಕೊಂಡಿದ್ದರು.