ಮಳೆಯಿಂದಾಗಿ ಅಡಕತ್ತರಿಯಲ್ಲಿ ಅಡಿಕೆ ಬೆಳೆಗಾರರು
► ಒಣಗಿಸಲು ಬಿಸಿಲಿನ ಕೊರತೆ ► ಬೆಲೆ ಹೆಚ್ಚಾದರೂ ಸಂಕಷ್ಟದಲ್ಲಿ ಕೃಷಿಕರು
ಮಂಗಳೂರು, ನ.14: ನವೆಂಬರ್ ತಿಂಗಳಾಂತ್ಯ ಸಮೀಪಿಸುತ್ತಿದ್ದರೂ ದ.ಕ. ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ಕಾರಣ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ದಿನನಿತ್ಯ ಮೋಡ ಕವಿದ ವಾತಾವರಣ, ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುತ್ತಿರುವುದು ಅಡಿಕೆ ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ದ.ಕ. ಜಿಲ್ಲೆಯಲ್ಲಿ ಒಟ್ಟು 97 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ತೋಟವಿದೆ. ಈಗಾಗಲೇ ಅಡಿಕೆ ಕೊಯ್ಲು ಆರಂಭಗೊಂಡಿದೆ. ಆದರೆ ಅಕಾಲಿಕ ಮಳೆ, ಬಿಸಿಲಿನ ವಾತಾವರಣ ಇಲ್ಲದಿರುವುದರಿಂದ ಕೊಯ್ದ ಅಡಿಕೆಯನ್ನು ಒಣಗಿಸಲು ಪ್ರಯಾಸಪಡುವಂತಾಗಿದೆ. ಇದೇರೀತಿ ಮಳೆ ವಾತಾವರಣ ಮುಂದುವರಿದರೆ ಸಂಸ್ಕರಿತ ಅಡಿಕೆ ಶೀಲಿಂಧ್ರಬಾಧೆಗೊಳಗಾಗಿ ಹಾಳಾಗುವ ಸಾಧ್ಯತೆಯಿದೆ. ಒಂದೆಡೆ ಮಳೆಯಿಂದಾಗಿ ಕೊಯ್ಲು ಮಾಡಲಾಗುತ್ತಿಲ್ಲ. ಮತ್ತೊಂದೆಡೆ ರೋಗ ಬಾಧೆಯೂ ತಪ್ಪುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ ಅಡಿಕೆ ಬೆಳೆಗಾರರು.
ಹಳದಿ, ಸುಳಿ ರೋಗ
ಮೊದಲೇ ಹಳದಿ ರೋಗದಿಂದ ಹೈರಾಣಗಿದ್ದ ಜಿಲ್ಲೆಯ ಅಡಿಕೆ ಬೆಳೆಗಾರರು ಮಳೆಯ ಕಾರಣದಿಂದಾಗಿ ಮತ್ತೊಮ್ಮೆ ಸಂಕಷ್ಟಕ್ಕೀಡಾಗಿದ್ದಾರೆ. ಇಷ್ಟು ಸಾಲದೆಂಬಂತೆ ಜಿಲ್ಲೆಯ ಹಲವೆಡೆ ಅಡಿಕೆಗೆ ಸುಳಿ ರೋಗ ಲಗ್ಗೆಯಿಟ್ಟಿದ್ದು, ಅಡಿಕೆ ತೋಟ ಗಳನ್ನೇ ನಾಶ ಮಾಡುತ್ತಿದೆ. ಇವೆಲ್ಲವೂ ಅಡಿಕೆ ಬೆಳೆಗಾರರನಿದ್ದೆಗೆಡಿಸಿದೆ.
ಪರ್ಯಾಯ ವ್ಯವಸ್ಥೆಯ ಮೊರೆ ಹೋದ ಬೆಳೆಗಾರರು
ಈ ನಡುವೆ ಅಕಾಲಿಕ ಮಳೆ, ಮೋಡ ಕವಿದ ವಾತಾ ವರಣದಿಂದ ಕಂಗಲಾಗಿರುವ ಬೆಳೆಗಾರರು ಹಣ್ಣು ಅಡಿಕೆಯನ್ನು ಒಣಗಿಸಲು ಪರ್ಯಾಯ ವ್ಯವಸ್ಥೆ ಕಂಡುಕೊಂಡಿದ್ದಾರೆ. ತೀರಾ ಇತ್ತೀಚಿನ ವರ್ಷಗಳವರೆಗೆ ತಮ್ಮ ಮನೆಯ ಅಟ್ಟದಲ್ಲಿ ಅಡಿಕೆಯನ್ನು ಹರಡಿ ಒಣಗಿಸುತ್ತಿದ್ದರು. ಆದರೆ ಇದೀಗ ಬೆಳೆಗಾರರು ‘ಸೋಲಾರ್ ಟರ್ಪಲ್’ ಎಂಬ ನೂತನ ವ್ಯವಸ್ಥೆಗೆ ಮಾರು ಹೋಗಿದ್ದಾರೆ. ಇದು ಹೊರಗಿನ ಶಾಖವನ್ನು ಹೀರಿ ಒಳಗೆ ಹಾಕಿರುವ ಅಡಿಕೆಯನ್ನು ಒಣಗಿಸುತ್ತದೆ. ಇದೇರೀತಿ ಸೋಲಾರ್ ಟರ್ಪಲ್ ಗೂಡು ರಚಿಸಿ ಅದರಲ್ಲಿ ಹಣ್ಣು ಅಡಿಕೆಯನ್ನು ಒಣಗಿಸುತ್ತಿದ್ದಾರೆ.
ಈ ಬಾರಿ ಬಂಗಾಳ ಕೊಲ್ಲಿ, ಅರಬಿ ಸಮುದ್ರದಲ್ಲಿ ಆಗಾಗ ಕಾಣಿಸಿಕೊಳ್ಳುವ ವಾಯುಭಾರ ಕುಸಿತದ ಪರಿಣಾಮ ಸತತ ಮಳೆಯಾಗುತ್ತಿದೆ. ಚಂಡಮಾರುತ ಒಂದೊಮ್ಮೆಗೆ ಸಾಕಷ್ಟು ಹಾನಿ ಮಾಡಿದರೂ ಸತತವಾಗಿ ವಾರಗಟ್ಟಲೆ ಮೋಡ, ಮಳೆಯ ವಾತಾವರಣ ಇರುವುದು ಕಡಿಮೆ. ಮೂರು ವರ್ಷ ದೀರ್ಘಾವಧಿ ಸರಾಸರಿಗಿಂತ ಜಾಸ್ತಿ ಮಳೆ ದಾಖಲಾದರೆ ನಂತರದ ಎರಡು ವರ್ಷ ಕಡಿಮೆ ಇರುವುದು ವಾಡಿಕೆ. ಕಳೆದ ಮೂರು ವರ್ಷಗಳಲ್ಲಿ ಸರಾಸರಿಗಿಂತ ಅಧಿಕ ಮಳೆ ಸುರಿದಿದೆ. ಆ ಕಾರಣದಿಂದ ಈ ವರ್ಷ ಶೇ.5ರಿಂದ 8 ರಷ್ಟು ಕಡಿಮೆ ಇರಬಹುದೆಂಬ ಅಂದಾಜು ಇತ್ತು. ಆದರೆ ಈಗ ಎಲ್ಲ ಲೆಕ್ಕಾಚಾರ ತಲೆಕೆಳಗಾಗಿದೆ. ವಾರ್ಷಿಕ ಗರಿಷ್ಠ 201 - ಕನಿಷ್ಠ 144 ದಿನ ಸೇರಿದಂತೆ ಸರಾಸರಿ 165 ದಿನ ಮಳೆ ದಾಖಲಾಗುವುದು ವಾಡಿಕೆ. ಈ ವರ್ಷ ಈಗಾಗಲೇ 188 ದಿನ ಮಳೆ ಸುರಿದಿದ್ದು, 200 ದಿನಗಳನ್ನು ದಾಟಲಿದೆ ಅಂತ ಈಗಿನ ಅಂದಾಜು. ಅಂತೂ ಮಳೆ ಇನ್ನೂ ಮುಂದುವರಿಯಲಿದ್ದು, ಅಡಿಕೆ ಬೆಳೆಗೆ ಇನ್ನಷ್ಟು ಮಾರಕವಾಗುವ ಸಾಧ್ಯತೆ ಇದೆ.
- ಪಿ.ಜಿ.ಎಸ್.ಎನ್.ಪ್ರಸಾದ್ ಬಾಳಿಲ, ಮಳೆ ಮಾಹಿತಿ ತಜ್ಞ
ಕಳೆದ ಕೆಲ ವರ್ಷಗಳಿಂದ ವಾತಾವರಣ ಸಂಪೂರ್ಣ ಬದಲಾಗಿದೆ. ಮಳೆ, ಚಳಿ, ಬಿರುಬಿಸಿಲು ಇವು ಮೂರನ್ನೂ ಒಂದೇ ದಿನ ಕಾಣಬಹುದಾಗಿದೆ. ಕೃಷಿ ಕ್ಷೇತ್ರಕ್ಕೆ ಇದು ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಈ ವರ್ಷದ ಪರಿಸ್ಥಿತಿಯಂತೂ ಕಳೆದ 5 ದಶಕಗಳ ನನ್ನ ಅನುಭವದಲ್ಲಿ ವಿಭಿನ್ನವಾಗಿ ಕಾಣುತ್ತಿದೆ. ಇದು ಅಡಿಕೆ ಕೃಷಿಕರಿಗೆ ದೊಡ್ಡ ಹೊಡೆತ ನೀಡಿದೆ. ಈ ಬಾರಿ ವಾಡಿಕೆಗಿಂತ ಒಂದು ತಿಂಗಳು ಮುಂಚಿತವಾಗಿ ಅಡಿಕೆ ಹಣ್ಣಾಗಿದ್ದರೂ ಕೊಯ್ಲು ಮಾಡದ ಸ್ಥಿತಿ ಎದುರಾಗಿದೆ. ಅಡಿಕೆ ಕೊಳೆತು ಹೋಗಿದೆ. ಜೊತೆಗೆ ಕೊಳೆರೋಗ, ಹಳದಿ ರೋಗದ ಬಾಧೆ ಬೇರೆ. ಅಡಿಕೆಯ ಬೆಲೆ ಹೆಚ್ಚಳದಿಂದ ಸಂತಸದಲ್ಲಿದ್ದ ಬೆಳೆಗಾರ ಅಡಿಕೆಯ ಗುಣಮಟ್ಟ ಕಾಪಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
- ಎಂ.ಡಿ.ವಿಜಯಕುಮಾರ್ ಮಡಪ್ಪಾಡಿ,ಕೃಷಿಕರು