ಉಡುಪಿ ಜಿಲ್ಲೆಯ ನಾಲ್ವರಲ್ಲಿ ಕೊರೋನ ಸೋಂಕು ಪತ್ತೆ
ಉಡುಪಿ, ನ.15: ಜಿಲ್ಲೆಯಲ್ಲಿ ಇಂದು ನಾಲ್ವರಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ದಿನದಲ್ಲಿ ನಾಲ್ವರು ರೋಗದಿಂದ ಗುಣಮುಖರಾದರೆ, 41 ಮಂದಿ ಇನ್ನೂ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ದಿನದಲ್ಲಿ ಮೂವರು ಪುರುಷರು ಮತ್ತು ಓರ್ವ ಮಹಿಳೆಯಲ್ಲಿ ಸೋಂಕು ಕಂಡುಬಂದಿದೆ. ಇವರಲ್ಲಿ ಮೂವರು ಕುಂದಾಪುರ ತಾಲೂಕಿನವಾದರೆ, ಒಬ್ಬರು ಹೊರಜಿಲ್ಲೆಯವರು. ಸೋಂಕು ಪತ್ತೆಯಾದವರಲ್ಲಿ ಒಬ್ಬರಿಗೆ ಆಸ್ಪತ್ರೆ ಯಲ್ಲಿ ಉಳಿದ ಮೂವರಿಗೆ ಮನೆಯಲ್ಲೂ ಚಿಕಿತ್ಸೆ ನೀಡಲಾಗುತ್ತಿದೆ. ಸತತ 27ನೇ ದಿನವಾದ ಇಂದು ಸಹ ಜಿಲ್ಲೆಯಲ್ಲಿ ಕೊರೋನದಿಂದ ಯಾರೂ ಮೃತಪಟ್ಟಿಲ್ಲ.
ರವಿವಾರ ಸೋಂಕಿನಿಂದ ನಾಲ್ವರು ಗುಣಮುಖರಾಗಿದ್ದು, ಈವರೆಗೆ ಕೊರೋನ ದಿಂದ ಚೇತರಿಸಿಕೊಂಡವರ ಸಂಖ್ಯೆ 76,272ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 863 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 76,789ಕ್ಕೇರಿದೆ.
5296 ಮಂದಿಗೆ ಲಸಿಕೆ: ಇಂದು ಜಿಲ್ಲೆಯಲ್ಲಿ ಒಟ್ಟು 5296 ಮಂದಿ ಕೋವಿಡ್ ಲಸಿಕೆ ಸ್ವೀಕರಿಸಿದ್ದು, ಇವರಲ್ಲಿ 349 ಮಂದಿ ಮೊದಲ ಡೋಸ್ ಹಾಗೂ 4947 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ ಎಂದು ಡಿಎಚ್ಓ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
ಲಸಿಕೆ ಪಡೆದವರಲ್ಲಿ 18 ವರ್ಷದಿಂದ 44 ವರ್ಷದೊಳಗಿನ 262 ಮಂದಿ ಮೊದಲ ಡೋಸ್ ಹಾಗೂ 3796 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದರೆ, 45 ವರ್ಷ ಮೇಲಿನ 87 ಮೊದಲ ಡೋಸ್ ಹಾಗೂ 1144 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಅಲ್ಲದೇ ಓರ್ವ ಆರೋಗ್ಯ ಕಾರ್ಯಕರ್ತ ಮತ್ತು ಆರು ಮಂದಿ ಮುಂಚೂಣಿ ಕಾರ್ಯಕರ್ತರು ಸಹ ಎರಡನೇ ಡೋಸ್ ಲಸಿಕೆ ಸ್ವೀಕರಿಸಿದ್ದಾರೆ