ಹಣ ಅಕ್ರಮ ವರ್ಗಾವಣೆ ಪ್ರಕರಣ: ಅನಿಲ್ ದೇಶ್ಮುಖ್ ಗೆ 14 ದಿನಗಳ ನ್ಯಾಯಾಂಗ ಬಂಧನ
ಮುಂಬೈ, ನ. 15: ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಮತ್ತಷ್ಟು ಕಸ್ಟಡಿ ಕೋರದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ಗೆ ಇಲ್ಲಿನ ವಿಶೇಷ ಪಿಎಂಎಲ್ಎ ನ್ಯಾಯಾಲಯ ಸೋಮವಾರ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ಬಳಿಕ ಜಾರಿ ನಿರ್ದೇಶನಾಲಯ ಪಿಎಂಎಲ್ಎಯ ನಿಯಮದ ಅಡಿಯಲ್ಲಿ ದೇಶಮುಖ್ ಅವರನ್ನು ನವೆಂಬರ್ 1ರಂದು ಬಂಧಿಸಿತ್ತು. ಜಾರಿ ನಿರ್ದೇಶನಾಲಯದ ಕಸ್ಟಡಿ ಸೋಮವಾರ ಅಂತ್ಯಗೊಂಡ ಬಳಿಕ ದೇಶಮುಖ್ ಅವರನ್ನು ವಿಶೇಷ ನ್ಯಾಯಧೀಶ ಎಚ್.ಎಸ್. ಸಾಥ್ಬಾ ಅವರ ಮುಂದೆ ಹಾಜರುಪಡಿಸಿತು. ಜಾರಿ ನಿರ್ದೇಶನಾಲಯ ಮತ್ತಷ್ಟು ಕಸ್ಟಡಿ ಕೋರದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ದೇಶಮುಖ್ (71) ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದ ಬಳಿಕ ಅವರ ಕಾನೂನು ತಜ್ಞರ ತಂಡ ದೇಶಮುಖ್ ಅವರ ಪ್ರಾಯ ಹಾಗೂ ವೈದ್ಯಕೀಯ ಹಿನ್ನೆಲೆ ಗಮನಿಸಿ ಅವರಿಗೆ ಮನೆ ಆಹಾರ ಹಾಗೂ ಔಷಧಕ್ಕೆ ಅವಕಾಶ ನೀಡಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ದೇಶಮುಖ್ ಅವರಿಗೆ ಕೆಳಬೆನ್ನಿನಲ್ಲಿ ಗಂಭೀರ ನೋವಿದೆ. ಆದುದರಿಂದ ಅವರಿಗೆ ನೆಲದಲ್ಲಿ ಮಲಗಲು ಸಾಧ್ಯವಾಗುವುದಿಲ್ಲ. ಆದುದರಿಂದ ಬೆಡ್ ಒದಗಿಸುವಂತೆ ಕೂಡ ಕಾನೂನು ತಜ್ಞರ ತಂಡ ಮನವಿಯಲ್ಲಿ ಆಗ್ರಹಿಸಿತು.
ಈ ಮನವಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ದೇಶಮುಖ್ ಅವರಿಗೆ ಬೆಡ್ ಒದಗಿಸುವಂತೆ ಕಾರಾಗೃಹ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ. ವೈದ್ಯರು ಶಿಫಾರಸು ಮಾಡಿದ ಔಷಧವನ್ನು ಅವರು ತೆಗೆದುಕೊಳ್ಳಬಹುದು ಎಂದು ಕೂಡ ನ್ಯಾಯಾಲಯ ಸೂಚಿಸಿದೆ. ಆದರೆ, ಮನೆಯ ಆಹಾರಕ್ಕೆ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ಬದಿಗಿರಿಸಿದೆ. ಕಾರಾಗೃಹದ ಆಹಾರ ಬಗ್ಗೆ ಕೆಲವು ದಿನಗಳ ಬಳಿಕ ಯಾವುದೇ ದೂರುಗಳಿದ್ದರೆ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಭ್ರಷ್ಟಾಚಾರ ಹಾಗೂ ಹುದ್ದೆಯ ದುರ್ಬಳಕೆ ಆರೋಪದ ಕುರಿತಂತೆ ದೇಶಮುಖ್ ಅವರ ವಿರುದ್ಧ ಸಿಬಿಐ ಎಪ್ರಿಲ್ 21ರಂದು ಎಫ್ಐಆರ್ ದಾಖಲಿಸಿದ ಬಳಿಕ ಅವರು ಹಾಗೂ ಅವರ ಸಹವರ್ತಿಗಳ ವಿರುದ್ಧ ಜ್ಯಾರಿ ನಿರ್ದೇಶನಾಲಯ ತನಿಖೆ ಆರಂಭಿಸಿತ್ತು.