ಸುರ್ಜೇವಾಲಾ ಸಮ್ಮುಖದಲ್ಲಿ ಮತ್ತೆ ಕಾಂಗ್ರೆಸ್ ಸೇರಿದ ನಟಿ ಭಾವನಾ
ಬೆಂಗಳೂರು, ನ.16: ನಟಿ ಭಾವನಾ ರಾಮಣ್ಣ ಬಿಜೆಪಿ ಸಖ್ಯ ತೊರೆದು ಪುನಃ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮಂಗಳವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾದ ಭಾವನಾ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂಬಂಧ ಟ್ವೀಟ್ ಮಾಡಿರುವ ರಣದೀಪ್ ಸಿಂಗ್ ಸುರ್ಜೇವಾಲ, ಕಾಂಗ್ರೆಸ್ನ ಮಾಜಿ ಕಾರ್ಯಕರ್ತೆ, ಕನ್ನಡದ ನಟಿ ಹಾಗೂ ಕಲಾವಿದೆ ಭಾವನಾ ರಾಮಣ್ಣ ನನ್ನನ್ನು ಭೇಟಿಯಾದರು. ಅಲ್ಲದೆ, ಕಾಂಗ್ರೆಸ್ ಸೇರಿ, ಪಕ್ಷಕ್ಕೆ ದುಡಿಯುವ ಸಂಕಲ್ಪವನ್ನು ಮಾಡಿದ್ದಾರೆ. ಪ್ರತಿಯೊಬ್ಬರ ಸೇರ್ಪಡೆಯೊಂದಿಗೆ ಕಾಂಗ್ರೆಸ್ ಪ್ರಾಬಲ್ಯ ಪಡೆಯಲಿದೆ ಎಂದು ನಾನು ಭಾವಿಸಿದ್ದೇನೆ. ಅವರಿಗೆ ಶುಭವಾಗಲಿ ಎಂದು ತಿಳಿಸಿದ್ದಾರೆ.
ನಟಿ ಭಾವನಾ ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲೆ ಸಕ್ರಿಯವಾಗಿದ್ದರು. ಅಲ್ಲದೆ, ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ರಾಜ್ಯ ಬಾಲ ಭವನದ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದರು. 2018ರಲ್ಲಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ನಲ್ಲಿನ ಕೆಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದರು. ಇದೀಗ ಪುನಃ ಅವರು ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ.