ಲಖಿಂಪುರ ಖೇರಿ ಪ್ರಕರಣ: ತನಿಖೆಯ ಮೇಲ್ವಿಚಾರಣೆಗೆ ಜಸ್ಟಿಸ್ ಆರ್.ಕೆ. ಜೈನ್ ಅವರನ್ನು ನೇಮಕ ಮಾಡಿದ ಸುಪ್ರೀಂಕೋರ್ಟ್
ಹೊಸದಿಲ್ಲಿ,ನ.17: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಉತ್ತರ ಪ್ರದೇಶದ ವಿಶೇಷ ತನಿಖಾ ತಂಡ (ಸಿಟ್)ದಿಂದ ದೈನಂದಿನ ತನಿಖೆಯ ಮೇಲ್ವಿಚಾರಣೆಗಾಗಿ ಪಂಜಾಬ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾ.ರಾಕೇಶ ಕುಮಾರ ಜೈನ್ ಅವರನ್ನು ಸರ್ವೋಚ್ಚ ನ್ಯಾಯಾಲಯವು ಬುಧವಾರ ನೇಮಕಗೊಳಿಸಿದೆ. ಅ.3ರಂದು ಸಂಭವಿಸಿದ್ದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಮೃತಪಟ್ಟಿದ್ದರು.
ರಾಜ್ಯ ಸರಕಾರವು ಒದಗಿಸಿದ್ದ ಐಪಿಎಸ್ ಅಧಿಕಾರಿಗಳ ಹೆಸರುಗಳನ್ನೂ ಗಮನಕ್ಕೆ ತೆಗೆದುಕೊಂಡ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು,ರಾಜ್ಯದ ಸಿಟ್‌ಗೆ ಮೂವರು ಅಧಿಕಾರಿಗಳನ್ನು ನೇಮಕಗೊಳಿಸಿತು. ಈ ಬಗ್ಗೆ ಶೀಘ್ರವೇ ವಿವರವಾದ ಆದೇಶವನ್ನು ಹೊರಡಿಸುವುದಾಗಿ ಅದು ತಿಳಿಸಿತು.
ಸಿಟ್ ತನಿಖೆಯನ್ನು ಪೂರ್ಣಗೊಳಿಸಿ ಸ್ಥಿತಿಗತಿ ವರದಿಯನ್ನು ಮತ್ತು ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ ಬಳಿಕ ತಾನು ಮತ್ತೆ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಸರ್ವೋಚ್ಚ ನ್ಯಾಯಾಲಯವು ಹೇಳಿತು. ರಾಜ್ಯದ ಸಿಟ್ ತನಿಖೆಯ ಮೇಲ್ವಿಚಾರಣೆಗಾಗಿ ಮಾಜಿ ನ್ಯಾಯಾಧೀಶರೋರ್ವರನ್ನು ನೇಮಿಸಬಹುದಾಗಿದೆ ಎಂಬ ಸರ್ವೋಚ್ಚ ನ್ಯಾಯಾಲಯದ ಸಲಹೆಯನ್ನು ಉತ್ತರ ಪ್ರದೇಶ ಸರಕಾರವು ನ.15ರಂದು ಒಪ್ಪಿಕೊಂಡಿತ್ತು.