ಕನ್ನಡದಲ್ಲಿಲ್ಲದ ನಾಮಫಲಕ; ಖಾಸಗಿ ಬಸ್ಗಳ ವಿರುದ್ಧ ಆರ್ಟಿಒ ಕಾರ್ಯಾಚರಣೆ
ಮಂಗಳೂರು, ನ.18: ಕನ್ನಡ ಭಾಷೆಯಲ್ಲಿ ನಾಮ ಫಲಕ ಅಳವಡಿಸದ ಖಾಸಗಿ ಬಸ್ಗಳ ವಿರುದ್ಧ ಗುರುವಾರ ಸಾರಿಗೆ ಇಲಾಖೆ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಆ ಮೂಲಕ 22 ಪ್ರಕರಣ ದಾಖಲಿಸಿ, ತಲಾ 2 ಸಾವಿರ ರೂ. ದಂಡ ವಿಧಿಸಿದ್ದಾರೆ.
ನಗರದಿಂದ ತೆರಳುವ ಬಹುತೇಕ ಬಸ್ಗಳಲ್ಲಿ ಸಂಚಾರ ನಡೆಸುವ ಊರಿನ ಹೆಸರುಗಳನ್ನು ಇಂಗ್ಲಿಷ್ನಲ್ಲಿ ಬರೆಯಲಾಗಿದೆ. ಇದರಿಂದ ಇಂಗ್ಲಿಷ್ ಬಾರದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿತ್ತು. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿತ್ತು. ಅಲ್ಲದೆ ಕನ್ನಡ ಭಾಷೆಯಲ್ಲೇ ನಾಮಫಲಕ ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗೋಪಾಲಕೃಷ್ಣ ಭಟ್ ಮನವಿ ಸಲ್ಲಿಸಿದ್ದರು. ಅದಂತೆ ಆರ್ಟಿಒ ಅಧಿಕಾರಿಗಳು ಗುರುವಾರ ಕಾರ್ಯಾಚರಣೆ ನಡೆಸಿದರು.
ಖಾಸಗಿ ಬಸ್ಗಳಲ್ಲಿ ಕಡ್ಡಾಯವಾಗಿ ರಾಜ್ಯ ಭಾಷೆ ಕನ್ನಡದಲ್ಲಿ ನಾಮ ಫಲಕ ಅಳವಡಿಸಬೇಕು. ಕನ್ನಡವನ್ನು ನಿರ್ಲಕ್ಷಿಸಿದ ಬಸ್ಗಳ ವಿರುದ್ಧ ಪ್ರತೀ ವಾರದ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿ ರಮೇಶ್ ಎಂ. ವರ್ಣೇಕರ್ ತಿಳಿಸಿದ್ದಾರೆ.
Next Story