ಮಾನವರಹಿತ ಸೇನಾ ನೌಕೆ ಅಭಿವೃದ್ಧಿಪಡಿಸಲು ಯುಎಇ-ಇಸ್ರೇಲ್ ಒಪ್ಪಂದ
photo:twitter/@AmbAlKhaja
ದುಬೈ, ನ.18: ಸಬ್ಮೆರೀನ್ ವಿರೋಧಿ ವ್ಯವಸ್ಥೆಯನ್ನು ಹೊಂದಿರುವ ಅತ್ಯಾಧುನಿಕ ಮಾನವರಹಿತ ನೌಕೆಗಳನ್ನು ಜಂಟಿಯಾಗಿ ರೂಪಿಸಿ ಅಭಿವೃದ್ಧಿಪಡಿಸಲು ಯುಇಎ ಮತ್ತು ಇಸ್ರೇಲ್ ನಿರ್ಧರಿಸಿವೆ.
ದುಬೈನಲ್ಲಿ ನಡೆದ ದ್ವೈವಾರ್ಷಿಕ ಏರ್ ಶೋ ಕಾರ್ಯಕ್ರಮದ ಅಂತಿಮ ದಿನವಾದ ಗುರುವಾರ ಈ ಕುರಿತ ಕಾರ್ಯತಂತ್ರದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಸೇನೆಯ ಅಗತ್ಯ ಮತ್ತು ವಾಣಿಜ್ಯ ಉದ್ದೇಶ ಎರಡಕ್ಕೂ ಬಳಸಬಹುದಾದ ಅತ್ಯಾಧುನಿಕ ಮಾನವರಹಿತ ಸೇನಾ ನೌಕೆ ‘170 ಎಂ’ ಅನ್ನು ವಿನ್ಯಾಸಗೊಳಿಸಲಾಗುವುದು ಎಂದು ಯುಎಇಯ ರಕ್ಷಣಾ ಸಂಘಟನೆ ಇಡಿಜಿಇ ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್(ಐಎಐ) ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಸ್ವಯಂ ನಿರ್ವಹಣೆ ವ್ಯವಸ್ಥೆಯುಳ್ಳ ಈ ನೌಕೆಯು ಜಲಾಂತರ್ಗಾಮಿ ನೌಕೆಗಳನ್ನು ಪತ್ತೆಹಚ್ಚುವ , ಜಲಾಂತರ್ಗಾಮಿ ನೌಕೆಗಳನ್ನು ನಿರ್ಬಂಧಿಸುವ ಕಾರ್ಯ ನಿರ್ವಹಿಸಲಿದೆ ಎಂದು ಐಎಐ ಅಧ್ಯಕ್ಷ ಬೋಯಜ್ ಲೆವಿ ಹೇಳಿದ್ದಾರೆ.
ಇಡಿಜಿ ಸಹಯೋಗದಲ್ಲಿ ಅತ್ಯಾಧುನಿಕ ಡ್ರೋನ್ ರಕ್ಷಣಾ ವ್ಯವಸ್ಥೆಯನ್ನು ಜಂಟಿಯಾಗಿ ಅಭಿವೃದ್ಧಿಗೊಳಿಸುವುದಾಗಿ ಮಾರ್ಚ್ನಲ್ಲಿ ಐಎಐ ಹೇಳಿತ್ತು. ಕಳೆದ ವರ್ಷ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಯುಎಇ ಮತ್ತು ಇಸ್ರೇಲ್ ನಡುವೆ ರಾಜತಾಂತ್ರಿಕ ಸಂಬಂಧ ಸ್ಥಾಪನೆಗೊಂಡಿದೆ.