ಹಂಸಲೇಖರ ಹೇಳಿಕೆಯೂ... ದಲಿತರ ಸಿನೆಮಾ ಉದ್ಯಮಶೀಲತೆ ವಿಚಾರವೂ...
ಕಳೆದ ವಾರ ಪ್ರಶಸ್ತಿ ವಿತರಣಾ ಸಮಾರಂಭವೊಂದರಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ನೀಡಿದ ಹೇಳಿಕೆ ಮತ್ತು ಆನಂತರ ನೀಡಿದ ಕ್ಷಮಾಪಣೆ ಸ್ಪಷ್ಟನೆ ಕೇವಲ ಹಂಸಲೇಖರ ವೈಯಕ್ತಿಕ ವಿಚಾರವಲ್ಲ. ಆ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಖುದ್ದು ಹಾಜರಿದ್ದ ನಾನು ಕಿಕ್ಕಿರಿದ ಪ್ರೇಕ್ಷಕರ ನಡುವೆ ಜಾಗ ಸಿಗದೆ ಸಭಾಂಗಣದ ದ್ವ್ವಾರದ ಆಚೆ ನಿಂತು ಹಂಸಲೇಖರ ಆ ಮಾತುಗಳನ್ನು ಕೇಳಿಸಿಕೊಂಡೆ. ಆ ಮಾತುಗಳು ನನಗೆ ಹೊಸದೇನು ಅನಿಸಲಿಲ್ಲ. ‘ಮಹಾನಾಯಕ’ ಧಾರಾವಾಹಿ ಬಗ್ಗೆ ಹಿಂದೆ ಹಂಸಲೇಖರು ಇದೇ ರೀತಿ ಬಾಬಾಸಾಹೇಬ್ ಅಂಬೇಡ್ಕರರನ್ನು ಕುರಿತು ಮಾತಾಡಿದ್ದನ್ನು ಕೇಳಿದ್ದರಿಂದ ಅವರ ಆ ನುಡಿಗಳು ಸಹಜ ಎಂಬಂತೆ ಭಾಸವಾದವು. ಹಾಗೆಯೇ ಮೈಸೂರಿನಲ್ಲಿ ದಲಿತ ಪ್ರಗತಿಪರರ ಮಾತುಗಳು ಹೀಗೆಯೇ ಇರುವ ಕಾರಣಕ್ಕೂ ನನಗೆ ಅದು ಹೊಸತು ಅನಿಸಲಿಲ್ಲ. ಆದರೆ ಆ ಮಾತು ಆಡಿದ ವ್ಯಕ್ತಿ ದಿಗ್ಗಜರಾದ ಕಾರಣ ಅದು ವಿವಾದವಾಯಿತಷ್ಟೆ. ಹಂಸಲೇಖರು ಕೂಡ ಸೂಕ್ತ ಸಂದರ್ಭದಲ್ಲಿ ಕ್ಷಮೆ ಕೋರಿ ಸ್ವಲ್ಪ ಮಟ್ಟಿಗೆ ತಿಳಿಗೊಳಿಸಲು ಯತ್ನಿಸಿದ್ದಾರೆ.
ಆದರೆ ಪ್ರಶ್ನೆ ಅಂದರೆ ಹಂಸಲೇಖರ ಈ ಮಾತುಗಳ ಮಹತ್ವದ ಕುರಿತದ್ದು. ಹೌದು, ಹಂಸಲೇಖರ ಆ ನುಡಿಗಳು ಕನ್ನಡ ಚಿತ್ರರಂಗದಲ್ಲಿ ಎದ್ದ ಬಂಡಾಯದ ನುಡಿಗಳಾಗಿದ್ದವು. ಈಗಷ್ಟೇ ಕನ್ನಡವು ಸೇರಿದಂತೆ ಪಂಚ ಭಾಷೆಗಳಲ್ಲಿ ತಯಾರಾಗಿ ಬಿಡುಗಡೆಗೊಂಡು ಸುದ್ದಿಯಲ್ಲಿರುವ ‘ಜೈ ಭೀಮ್’ ಚಿತ್ರದ ಹಿನ್ನಲೆಯಲ್ಲಿ ಅವರು ನುಡಿದ ಆ ನುಡಿಗಳು ಅಕ್ಷರಶಃ ಅಗತ್ಯವಾಗಿದ್ದವು. ಯಾಕೆಂದರೆ ಕನ್ನಡ ಚಿತ್ರರಂಗ ಈಗಲೂ ಫ್ಯೂಡಲ್ ಜಾತಿಗಳ ಹಿಡಿತದಲ್ಲಿದೆ, ಸಂಪ್ರದಾಯವಾದಿಗಳ ಉಡದ ಹಿಡಿತದಲ್ಲಿದೆ. ಪಕ್ಕದ ತಮಿಳುನಾಡಿನಲ್ಲಿ ಕಳೆದ ಒಂದಷ್ಟು ವರ್ಷಗಳಿಂದ ಬೀಸುತ್ತಿರುವ ಗಾಳಿ ಕರ್ನಾಟಕದಲ್ಲಿ ಅಲೆ ಎಬ್ಬಿಸುತ್ತಿಲ್ಲ ಅಂದರೆ ಅದಕ್ಕೆ ಪಟ್ಟಭದ್ರರ ಅಂತಹ ಉಡದ ಹಿಡಿತವೇ ಕಾರಣ. ಅದಕ್ಕೊಂದು ಈ ಕ್ಷಣಕ್ಕೆ ಒಂದು ಇಂಜೆಕ್ಷನ್ ಬೇಕಾಗಿತ್ತು. ಹಂಸಲೇಖ ಅದನ್ನು ನೀಡಿದ್ದಾರೆ.
ಕನ್ನಡ ಚಿತ್ರರಂಗ ದಲಿತ ಮತ್ತು ಪ್ರಗತಿಪರ ನೋಟಕ್ಕೆ ತೆರೆದುಕೊಂಡದ್ದು ತುಂಬಾ ಕಡಿಮೆ. ಅದೇ ಹಳೆ ಮರ ಸುತ್ತುವ, ಕುಟುಂಬ ಸುತ್ತುವ, ಹೊಡಿ-ಬಡಿ-ಕಡಿ ಕತೆಗಳ ಸುತ್ತಲೇ ಅದು ಸುತ್ತುತ್ತಿದೆ, ಹಾಗೆ ಸುತ್ತುವಂತೆ ನೋಡಿಕೊಳ್ಳಲಾಗುತ್ತಿದೆ. ಹೀಗಿರುವಾಗ ಬಹುಸಂಖ್ಯೆಯ ದಲಿತ, ಹಿಂದುಳಿದವರ ನೋವು- ನಲಿವು ಇಲ್ಲಿ ಕತೆಯ ರೂಪದಲ್ಲಿ ಬರುವುದಾದರೂ ಹೇಗೆ? ಮುಖ್ಯವಾಗಿ ಇಲ್ಲಿ ನಿರ್ಮಾಪಕರು, ನಿರ್ದೇಶಕರು, ಕತೆಗಾರರು, ಸಂಭಾಷಣಾಕಾರರು ಅದೇ ಹಳೆ ಮಂತ್ರಕ್ಕೆ ಜೋತು ಬಿದ್ದು ಚಿತ್ರ ತೆಗೆಯುವವರು. ವ್ಯವಸ್ಥೆ ಹಾಗೇ ಇರುವಂತೆ ಕೋಟೆ ಕಟ್ಟಲಾಗಿದೆ, ಕಾವಲು ಕಾಯಲಾಗುತ್ತಿದೆ. ಹಾಗಿದ್ದರೆ ಬದಲಾವಣೆ? ನೇರ ಹೇಳಬೇಕೆಂದರೆ ತಮಿಳುನಾಡಿನಲ್ಲಿ ಆದ ಹಾಗೆ ದಲಿತ, ಹಿಂದುಳಿದ ಪ್ರಗತಿಪರರು ಇಲ್ಲಿ ಫೀಲ್ಡ್‌ಗೆ ಬರುವಂತಾಗಬೇಕಿತ್ತು, ಸಂಪ್ರದಾಯದ ಬೇಲಿ ಕಿತ್ತೊಗೆಯಬೇಕಿತ್ತು. ಒಂದೆರಡು ಜಾತಿಗಳ ಪ್ರಾಬಲ್ಯ ಮುರಿದು ಎಲ್ಲರಿಗೂ ಅವಕಾಶ ಎಂಬಂತೆ ಸಾಮಾಜಿಕ ನ್ಯಾಯದ ತತ್ವದಡಿಯಲ್ಲಿ ಇಲ್ಲಿ ಅವಕಾಶ ಸಿಗಬೇಕಿತ್ತು. ಅನುಚ್ಛೇದ19(1)ರ ಪ್ರಕಾರ ಅದು ಸಂವಿಧಾನಬದ್ಧ ಹಕ್ಕು ಕೂಡ ಆಗಿದೆ.
ಅಂದಹಾಗೆ ಇದಕ್ಕೆ ಇತರರು ಪ್ರೋತ್ಸಾಹ ಕೊಡದಿದ್ದರೂ ಪರವಾಗಿಲ್ಲ ಬದಲಿಗೆ ತೊಂದರೆ ಕೊಡಬಾರದು. ಆದರೆ ಆಗುತ್ತಿರುವುದು? ತೊಂದರೆ ಕೊಡುವ ವಾತಾವರಣ ಸಹಜ ಭಯದ ರೂಪದಲ್ಲಿ ಇದೆ. ‘ಜೈ ಭೀಮ್’ ಎಂದು ಕನ್ನಡದಲ್ಲಿ ಯಾರಾದರೂ ಸಿನೆಮಾ ತೆಗೆದರೆ ಥಿಯೇಟರ್‌ಗಳನ್ನೇ ಕೊಡದ ಕಹಿ ವಾತಾವರಣ ನಮ್ಮಲ್ಲಿದೆ ಮತ್ತು ಹಾಗೆ ಸಿನೆಮಾ ತೆಗೆದವರನ್ನು ಒಂದು ಗುಂಪಿಗೆ ಸೀಮಿತಗೊಳಿಸುವ, ಚಿತ್ರರಂಗದ ಯಾವುದೇ ನೆರವು, ಪ್ರೋತ್ಸಾಹ ಸಿಗದಂತೆ ನೋಡಿಕೊಳ್ಳುವ ಭೀಭತ್ಸ ವಾತಾವರಣ ಇಂದು ನಮ್ಮಲ್ಲಿದೆ ಎಂದರೆ ಅದು ಸುಳ್ಳಾಗಿರದು. ಪ್ರಶ್ನೆ ಅಂದರೆ ಇಂತಹ ವಾತಾವರಣ ಎಲ್ಲಿಯವರೆಗೆ ಮುಂದುವರಿಯಬೇಕು? ಸಮಾಜದ ಒಂದು ಬೃಹತ್ ವರ್ಗದ ಆಸೆ-ಆಕಾಂಕ್ಷೆಗಳು, ಒಲವು-ನಿಲುವುಗಳು ಅದೆಲ್ಲಿಯವರೆಗೆ ನಿರಾಕರಣೆಯಾಗಬೇಕು? ವಾಸ್ತವ ಎಂದರೆ ಚೀನಾ, ಅಮೆರಿಕ, ಇರಾನ್...
ಹೀಗೆ ನಮ್ಮದಲ್ಲದ ಅನೇಕ ದೇಶಗಳಿಂದ ಬಂದ ಚಿತ್ರಗಳು ಯಶಸ್ಸು ಕಾಣುತ್ತವೆ, ಜನರಿಂದ ಸ್ವೀಕರಿಸಲ್ಪಡುತ್ತವೆ. ಆದರೆ ಸ್ವದೇಶೀಯರೇ ಆದ ದಲಿತರಿಗೆ ಅಂತಹ ಅವಕಾಶ ಇಲ್ಲ! ಇದ್ಯಾವ ಸೀಮೆ .....ಪ್ರೇಮ?
ಇಂತಹದ್ದು ಮುಂದುವರಿಯಬಾರದು. ದೇಶದ ಪ್ರತಿಯೊಂದು ವರ್ಗಕ್ಕೂ ಪ್ರತಿಯೊಂದು ಕ್ಷೇತ್ರದಲ್ಲೂ ಅದಕ್ಕೆ ತಕ್ಕ ಪ್ರಾತಿನಿಧ್ಯ ಸಿಗಬೇಕು. ಅಕಸ್ಮಾತ್ ಚಿತ್ರ ಚೆನ್ನಾಗಿಲ್ಲ ಅಂದರೆ ಅದನ್ನು ತಿರಸ್ಕರಿಸುವ ಹಕ್ಕು ಪ್ರೇಕ್ಷಕರಿಗೆ, ವಿಮರ್ಶಕರಿಗೆ ಇದ್ದೇ ಇದೆ. ಅದು ಬಿಟ್ಟು ಅವಕಾಶವನ್ನೇ ಕೊಡಲಿಲ್ಲ ಎಂದರೆ? ಚಿತ್ರ ತೆಗೆದರೂ ಸಿನೆಮಾ ಥಿಯೇಟರ್‌ಗಳಲ್ಲಿ ಬರದ ಹಾಗೆ ದಿಗ್ಬಂಧನ ಹೇರಿದರೆ? ಇಂತಹ ಜಾತಿ ತಾರತಮ್ಯವನ್ನು ಸಂವಿಧಾನದ ಅನುಚ್ಛೇದ 15 ಮತ್ತು ಅನುಚ್ಛೇದ 17 ಅದೆಂದೋ ನಿಷೇಧಿಸಿವೆ, ಶಿಕ್ಷಾರ್ಹ ಅಪರಾಧ ಎಂದು ಘೋಷಿಸಿವೆ.
ಹಾಗೆಯೇ ಸಿನೆಮಾ ಇದು ಉದ್ಯಮ. ಇದರ ಹಿನ್ನೆಲೆಯಲ್ಲಿ ಮತ್ತೊಂದು ಪ್ರಶ್ನೆ ಎಂದರೆ, ದಲಿತರಿಗೆ ಸಿನೆಮಾ ತೆಗೆಯಲು ತೊಂದರೆ ಕೊಡುವ ಮಂದಿ, ತಾವು ತೆಗೆದ ಸಿನೆಮಾವನ್ನು, ಟಿವಿ ಧಾರಾವಾಹಿಗಳನ್ನು ದಲಿತರು ನೋಡುವುದು ಬೇಡ ಕೇವಲ ತಮ್ಮವರಿಗೆ ಮಾತ್ರ ಎಂದು ಘೋಷಿಸಿಕೊಳ್ಳಲಿ? ಇದು ಸಾಧ್ಯವೆ? ಸಾಧ್ಯ ಆದರೂ ಅವರು ಹಾಗೆ ಮಾಡರು. ಏಕೆಂದರೆ ಗ್ರಾಹಕರು ಬೇಕಲ್ಲ! ಅಂದರೆ ದಲಿತರು ಸಿನೆಮಾ ನೋಡುವ, ಅದನ್ನು ಕುರಿತು ಹೊಗಳುವ ವಿಮರ್ಶಕರಾಗಿ ಬೇಕು. ಅದೇ ಆ ಸಿನೆಮಾದ ಪಾತ್ರಗಳಾಗಿ, ಅಲ್ಲಿ ತಮ್ಮ ಕತೆಗಳಾಗಿ, ಲಾಭ ಪಡೆಯುವ ನಿರ್ಮಾಪಕರಾಗಿ, ತಂತ್ರಜ್ಞರಾಗಿ ಬೇಡ! ನಿಜ ಹೇಳಬೇಕೆಂದರೆ ವ್ಯವಸ್ಥೆಯ ಇಂತಹ ನಡತೆಯಿಂದಾಗಿ ಅದೆಷ್ಟೋ ದಲಿತ ಪ್ರತಿಭೆಗಳು ಅವಕಾಶ ಸಿಗದೆ ಮರುಟಿಹೋಗಿವೆ. ಅರ್ಹರ ಮುಂದೆ ಜಾತಿಯ ಕಾರಣ ಅನರ್ಹರು ಅವಕಾಶ ಪಡೆದು ಮಿಂಚುವುದನ್ನು ಕಂಡು ಸೊರಗಿ ಕುಳಿತಿವೆ. ಬಹುಶಃ ಇಂತಹ ನೋವುಗಳನ್ನು ಹೇಳಿದರೂ ಎಲ್ಲಿ ತಮಗೆ ಅವಕಾಶವೇ ಸಿಗದಿರಬಹುದೋ, ಕಣ್ಣಿಗೆ ಬೀಳುತ್ತೇನೋ ಎಂದು ಅದೆಷ್ಟು ಶೋಷಿತ ಪ್ರತಿಭೆಗಳು ಹೆದರಿ ಕುಳಿತಿರಬಹುದು. ಇದನ್ನು ಕಂಡೂ ಕಾಣುತ್ತ ಕಣ್ಣು ಮುಚ್ಚಿ ಪಟ್ಟಭದ್ರ ಜಾತಿಗಳು ಎಂಜಾಯ್ ಮಾಡುತ್ತಿರಬಹುದು!
ಆದ್ದರಿಂದ ಹಂಸಲೇಖರ ಮಾತುಗಳು ಅದು ಕೇವಲ ಅವರ ಮಾತುಗಳಾಗಿ ಉಳಿದಿಲ್ಲ. ಅದರ ವಾಸ್ತವ, ಸಾರ ಏನೇ ಇರಬಹುದು. ಆದರೆ ದಲಿತರು ಈ ಸೆಲ್ಯೂಲಾಯ್ಡ್ ಜಗತ್ತಿಗೆ ಬಂದು, ಅವರು ಆ ಥರ ಮಾತಾಡಿದರೆ ಅವರ ಪರಿಸ್ಥಿತಿ ಏನಾಗುತ್ತದೆ ಎಂಬುದಕ್ಕೆ ಹಂಸಲೇಖರ ಈ ನುಡಿಗಳ ವಿರುದ್ಧ ನಡೆದ ಟ್ರೋಲ್ ಸಾಕ್ಷಿಯಾಗಿ ಉಳಿಯುತ್ತದೆ. ಈ ನಿಟ್ಟಿನಲ್ಲಿ ಒಟ್ಟಾರೆ ಇಡೀ ಪ್ರಕರಣ ದಲಿತ ತಳ ಸಮುದಾಯಗಳಿಗೆ ಚಿತ್ರರಂಗದತ್ತ ಒಂದು ದೃಢ ಹೆಜ್ಜೆ ಇಡಲಿಕ್ಕೆ ಒಂದು ಸ್ಫೂರ್ತಿಯ, ಕೆಚ್ಚಿನ ಘಟನೆಯಾಗಿ ದಾಖಲಾಗುತ್ತದೆ ಎಂದರೆ ಅದು ಅತಿಶಯೋಕ್ತಿಯೆನಿಸದು.