ಹೇರಿಕೆಗಳನ್ನು ವಿರೋಧಿಸಲು ಒಗ್ಗೂಡಬೇಕಾಗಿದೆ
ಮಾನ್ಯರೇ,
ದೇಶವನ್ನು ಬ್ರಾಹ್ಮಣ್ಯ ನಿಧಾನವಾಗಿ ಸಂಪೂರ್ಣ ಹಿಡಿತಕ್ಕೆ ತೆಗೆದುಕೊಳ್ಳುತ್ತಿದೆ. ಮಾಂಸಾಹಾರದ ಬಗ್ಗೆ ಸಮಾಜ ಮತ್ತು ವಿಶೇಷವಾಗಿ ಚುನಾಯಿತ ಸರಕಾರಗಳ ಧೋರಣೆ ಇದಕ್ಕೆ ಅತ್ಯುತ್ತಮ ಉದಾಹರಣೆ. ಶಾಲೆ-ಕಾಲೇಜು, ದೇವಾಲಯಗಳ ಇಂತಿಷ್ಟು ವ್ಯಾಪ್ತಿಯಲ್ಲಿ ಮಾಂಸಾಧಾರಿತ ಖಾದ್ಯಗಳ ಮಾರಾಟ ಮಾಡುವಂತಿಲ್ಲ ಎಂಬ ನಿಯಮ ಗುಜರಾತ್‌ನಲ್ಲಿ ಜಾರಿಯಾಗುತ್ತಿದೆ ಎಂದು ವರದಿಯಾಗಿದೆ.! ಈ ಆಹಾರ ರಾಜಕಾರಣವು ವಿಸ್ತೃತ ಸಾಂಸ್ಕೃತಿಕ ರಾಜಕಾರಣದ್ದೇ ಒಂದು ಬಹುದೊಡ್ಡ ಭಾಗ.
ಹಾಗೆ ನೋಡಿದರೆ, ಸಸ್ಯಾಹಾರವನ್ನು ಶ್ರೇಷ್ಠ, ಮಾಂಸಾಹಾರವನ್ನು ನಿಕೃಷ್ಠ ಎಂದು ಹೇಳುತ್ತ ಮಾಂಸಾಹಾರಿಗಳನ್ನು ಅವಮಾನಿಸುವ, ಅವರ ಹಕ್ಕು ನಿರಾಕರಿಸುವ ಆಹಾರ ರಾಜಕಾರಣ ಶುರುವಾಗಿ ಬಹಳ ಕಾಲ ಆಯಿತು. ಪ್ರತಿರೋಧದ ದನಿಗಳು ದುರ್ಬಲವಿದ್ದಾಗ ಈ ಆಹಾರ ರಾಜಕಾರಣವನ್ನು ಅವರು ಎಷ್ಟು ಸುಲಭದಲ್ಲಿ ಜಾರಿಗೊಳಿಸುತ್ತಾರೆ ಎಂಬುದಕ್ಕೆ ನಾನು ಕಂಡ ಒಂದು ಉದಾಹರಣೆ ಕೊಡುತ್ತೇನೆ.
ಮಂಗಳೂರಿನ ಒಂದು ಬೃಹತ್ ಕಾರ್ಖಾನೆ. ಅಲ್ಲಿ ಆಗ ಸುಮಾರು 800 ಮಂದಿ ಕಾರ್ಮಿಕರಿದ್ದರು. ಸುಮಾರು ಶೇ. 97ಕ್ಕೂ ಅಧಿಕ ಮಂದಿ ಮಾಂಸಾಹಾರಿಗಳು ಎಂದರೂ ತಪ್ಪಾಗದು.
ಕಾರ್ಖಾನೆ ಅಂದ ಮೇಲೆ ಮೈಬಗ್ಗಿಸಿ ಬೆವರು ಹರಿಸುವ ತೀವ್ರ ಶ್ರಮದ ಕೆಲಸವಲ್ಲವೇ? ಹಾಗೆ ದುಡಿಯುವವರಿಗೆ ಶಕ್ತಿದಾಯಕ ಒಳ್ಳೆಯ ಆಹಾರ ಬೇಕು. ಆದ್ದರಿಂದಲೇ ಅಲ್ಲಿನ ಕ್ಯಾಂಟೀನ್‌ನಲ್ಲಿ (subsidized) ಮಧ್ಯಾಹ್ನದ ಊಟದೊಂದಿಗೆ ಮಾಂಸಾಹಾರ ಲಭ್ಯವಿತ್ತು. ಸೋಮವಾರ ಮಟನ್ (m), ಮಂಗಳವಾರ ಚಿಕನ್ (c), ಬುಧವಾರ ಫಿಶ್ (f). ಮತ್ತೆ ಇದೇ ಕ್ರಮ ಪುನರಾವರ್ತನೆ. ಈ ಕ್ರಮ ಸುಮಾರು 25 ವರ್ಷ ಚಾಲ್ತಿಯಲ್ಲಿತ್ತು.
ಆಮ್ಲೆಟ್ ಅಂತೂ ಮಧ್ಯಾಹ್ನ ಮತ್ತು ರಾತ್ರಿ ಎರಡೂ ಹೊತ್ತು ಲಭ್ಯವಿತ್ತು. ನಿಧಾನವಾಗಿ ಒಂದೆಡೆ ಕಾರ್ಮಿಕ ಸಂಘಟನೆ ದುರ್ಬಲಗೊಂಡಿತು. ಇನ್ನೊಂದೆಡೆ ಬ್ರಾಹ್ಮಣ್ಯ ಮೇಲುಗೈ ಸಾಧಿಸಲಾರಂಭಿಸಿತು. ಅಧಿಕಾರ ಸ್ಥಾನಗಳಲ್ಲಿ ಬ್ರಾಹ್ಮಣ್ಯ ಮನಸುಗಳು ವಿರಾಜಮಾನವಾದವು. ಅದರ ಮೊದಲ ಪರಿಣಾಮ ಉಂಟಾದುದು ಕ್ಯಾಂಟೀನ್ ಮೇಲೆ. ಅಲ್ಲಿ ಮಾಂಸಾಹಾರ ಲಭ್ಯವಿಲ್ಲದಂತೆ ಮಾಡಲಾಯಿತು. ಎಲ್ಲಿಯವರೆಗೆ ಎಂದರೆ ಕೊನೆಗೆ ಆಮ್ಲೆಟ್ ಕೂಡಾ ಇಲ್ಲದಂತೆ ಮಾಡಿದರಂತೆ (ಈ ಕೊನೆಯ ಹಂತ ನಾನು ಅಲ್ಲಿಂದ ನಿರ್ಗಮಿಸಿದ ಮೇಲೆ ನಡೆದುದರಿಂದ ಆ ಬಗ್ಗೆ ಗೆಳೆಯರಿಂದ ಕೇಳಿಯಷ್ಟೇ ಗೊತ್ತು). ಶೇ. 97 ಮಂದಿಯ ಮೇಲೆ ತಮ್ಮ ಸಿದ್ಧಾಂತ ಹೇರುತ್ತಾ ಈ ಶೇ. 3 ಮಂದಿ ಹೀಗೆ ದೇಶವನ್ನು ಎಲ್ಲಿಗೆ ಒಯ್ಯುತ್ತಿದ್ದಾರೆ ಗಮನಿಸಿ. ಯಾರನ್ನು ಮದುವೆ ಯಾಗಬೇಕು, ಯಾವ ಉಡುಗೆ ಧರಿಸಬೇಕು ಎಂಬ ಆಯ್ಕೆಗಳನ್ನು ಬಿಡಿ, ಕೊನೆಗೆ ತಮಗಿಷ್ಟವಾದ ಆಹಾರವನ್ನೂ ಸೇವಿಸದಂತೆ ಮಾಡುತ್ತಾರೆ!. ಅಗ್ರಹಾರದ ಗೇಟ್ ಕೀಪರ್‌ಗಳಿಗೆ ಇವೆಲ್ಲ ಅರ್ಥ ಆಗುವುದು ಯಾವಾಗ? ಶೇ. 3 ಮಂದಿ ನಡೆಸುವ ಹೇರಿಕೆಗಳನ್ನು ವಿರೋಧಿಸಲು ಶೇ. 97 ಮಂದಿ ಒಗ್ಗೂಡುವುದು ಯಾವಾಗ?!