ಆರ್ಥಿಕ ಸ್ವಾತಂತ್ರ್ಯವಿಲ್ಲದ ಗೌರವರಹಿತ ಬದುಕು
ಭಾರತದಂತಹ ಸಾಂಸ್ಕೃತಿಕ ಬಹುತ್ವವುಳ್ಳ ದೇಶದಲ್ಲಿ 6ನೇ ಶತಮಾನದಲ್ಲಿ ಬುದ್ಧ, 12ನೇ ಶತಮಾನದಲ್ಲಿ ಬಸವ, 18ನೇ ಶತಮಾನದಲ್ಲಿ ಟಿಪ್ಪುಸುಲ್ತಾನ್ ಮತ್ತು ಮಹಾತ್ಮ ಫುಲೆ, 19ನೇ ಶತಮಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ನಾರಾಯಣ ಗುರು ಮತ್ತು 20ನೇ ಶತಮಾನದಲ್ಲಿ ಪೆರಿಯಾರ್,
ಅಂಬೇಡ್ಕರ್ ಒಳಗೊಳ್ಳುವ ಅಭಿವೃದ್ಧಿಯ ಹರಿಕಾರರು ಮತ್ತು ಸಮಸಮಾಜ ನಿರ್ಮಾಪಕರಾಗಿ ಸಾರ್ವಕಾಲಿಕ ಮನ್ನಣೆ ಹೊಂದಿದ್ದಾರೆ. ಇವರೆಲ್ಲರ ದಿಗ್ದರ್ಶನದಲ್ಲಿ ಬಡವರ ಅಭಿವೃದ್ಧಿಯ ಶಕೆ ಅನಾವರಣಗೊಂಡಿತು. ಈ ಮಹನೀಯರು ನಿಜವಾದ ಗೌರವಕ್ಕೆ ಎಲ್ಲ ಕಾಲಕ್ಕೂ ಭಾಜನರಾಗಿದ್ದಾರೆ. ಆದರೆ ಇಂದು 21ನೇ ಶತಮಾನದಲ್ಲಿ ಭಾರತದಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರ ಹೆಚ್ಚಲು, ಏಕತ್ವ ಸಂಸ್ಕೃತಿ, ಬಲಾಢ್ಯರ ಕಾರುಬಾರು, ಮಾರುಕಟ್ಟೆ ಶಕ್ತಿಗಳ ಏಕಸ್ವಾಮ್ಯ ಮತ್ತು ನವ ನಮೋಯುಗ ಕಾರಣವಾಗಿವೆ.
ಭಾರತವು ಸಾಂವಿಧಾನಿಕವಾಗಿ ಕಲ್ಯಾಣ ರಾಷ್ಟ್ರವಾಗಿದ್ದರೂ ಸ್ವಾತಂತ್ರ್ಯಾನಂತರದಲ್ಲಿ ಪ್ರಭುತ್ವವಾದಿಗಳು ಮತ್ತು ಬಂಡವಾಳಶಾಹಿಗಳ ನಡುವಣ ಅಪವಿತ್ರ ಮೈತ್ರಿಯಿಂದಾಗಿ ಅಲ್ಪಸಂಖ್ಯಾತ ಶ್ರೀಮಂತರು ಮತ್ತು ಬಹುಸಂಖ್ಯಾತ ಬಡವರ ನಡುವಣ ಅಭಿವೃದ್ಧಿ ಅಂತರ ಇನ್ನೂ ವಾಸ್ತವವಾಗಿದೆಯೆಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಇತ್ತೀಚೆಗೆ ಹೊಸದಿಲ್ಲಿಯಲ್ಲಿ ಜರುಗಿದ ಪಾನ್-ಇಂಡಿಯಾ ಕಾನೂನು ಜಾಗೃತಿ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ವಿಷಾದದಿಂದ ನುಡಿದಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಶೋಷಿತ ಜನಸಮುದಾಯಗಳಿಗೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಳನ್ನು ನೀಡುವ ಸಲುವಾಗಿ ಮೀಸಲಾತಿ ಸೌಲಭ್ಯವನ್ನು ಸಂವಿಧಾನದಲ್ಲಿ ಅಳವಡಿಸಿದರು. ಅಂದು ಗಾಂಧೀಜಿಯವರ ಸರ್ವೋದಯ ಮತ್ತು ಅಂಬೇಡ್ಕರ್‌ರ ಅಂತ್ಯೋದಯ ಅಭಿವೃದ್ಧಿ ಮಾದರಿಗಳನ್ನು ನಮ್ಮ ರಾಷ್ಟ್ರ ನಾಯಕರು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಲಿಲ್ಲ. ಅಂಬೇಡ್ಕರ್ ‘‘ಸರ್ವೋದಯದ ಗುರಿಯನ್ನು ಅಂತ್ಯೋದಯದ ಮೂಲಕ ಸಾಧಿಸೋಣ’’ ಎಂದು ಹೇಳಿದ ಮಾತು ನಮ್ಮ ರಾಷ್ಟ್ರವನ್ನಾಳಿದ ಜಾಣಪೆದ್ದರಿಗೆ ಅರ್ಥವಾಗಲಿಲ್ಲ. ಇಂದು ಭಾರತ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದೆಯಾದರೂ ಬಹುಜನ ಭಾರತೀಯರು ಅಭಿವೃದ್ಧಿಯ ಫಲಾನುಭವಿಗಳಾಗಿಲ್ಲ. ಈ ಕಾರಣಕ್ಕಾಗಿಯೇ ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಿದ್ದು ಅರಾಜಕತೆಯೆಡೆಗೆ ದೇಶ ಸಾಗುತ್ತಿದೆ.
ಬಹಳ ಹಿಂದೆಯೇ ‘‘ಆರ್ಥಿಕ ಸ್ವಾತಂತ್ರ್ಯವಿಲ್ಲದೆ ನಿಜವಾದ ಸ್ವಾತಂತ್ರ್ಯವಿಲ್ಲ ಮತ್ತು ಹಸಿವಿನಿಂದ ಬಳಲುತ್ತಿರುವ ಮನುಷ್ಯನನ್ನು ಮುಕ್ತ ಎಂದು ಕರೆದು ಅಪಹಾಸ್ಯ ಮಾಡುವುದು ಮೂರ್ಖತನದ ಪರಮಾವಧಿ’’ ಎಂದು ಜವಾಹರಲಾಲ್ ನೆಹರೂ ಅಭಿಪ್ರಾಯಪಟ್ಟಿದ್ದರು. ದೇಶದ ಸ್ವಾತಂತ್ರ್ಯ ಹೋರಾಟದ ಮೂಲಭೂತ ಧ್ಯೇಯವೆಂದರೆ ಎಲ್ಲರೂ ಸುರಕ್ಷತೆ ಮತ್ತು ಘನತೆಯಿಂದ ಬದುಕುವ ಪರಿಸರವನ್ನು ನಿರ್ಮಿಸುವುದೇ ಆಗಿದೆ. ಬಡತನವು ದುರದೃಷ್ಟಕರವಾಗಿದ್ದು ಇದಕ್ಕೆ ಕಾನೂನು ಮತ್ತು ವ್ಯವಸ್ಥೆಗಳನ್ನು ದೂಷಿಸಬಾರದೆಂಬ ವಸಾಹತುಶಾಹಿಯ ಧೋರಣೆಯನ್ನು ಪ್ರಸ್ತುತ ನಮ್ಮನ್ನು ಆಳುವವರು ಮುಂದುವರಿಸಿರುವುದು ಅತ್ಯಂತ ಖಂಡನೀಯ.
ಭಾರತದ ಹಿಂದಿನ ಪ್ರಧಾನಿಗಳು ಭಾರತೀಯರಿಗೆ ಕನಿಷ್ಠ ಅಗತ್ಯತೆಗಳು, ಮೂಲಸೌಕರ್ಯಗಳು, ಜೀವನೋಪಾಯ ಮಾರ್ಗಗಳು, ಸಾಮಾಜಿಕ ಸುರಕ್ಷತಾ ಯೋಜನೆಗಳು ಮೊದಲಾದವುಗಳನ್ನು ಅನುಷ್ಠಾನಗೊಳಿಸಿ ಬಡತನವನ್ನು ನಿರ್ಮೂಲನೆಗೊಳಿಸಲು ಪ್ರಯತ್ನಿಸಿ ಬಡವರನ್ನು ರಕ್ಷಿಸುವತ್ತ ಹೆಜ್ಜೆಹಾಕಿದರು. ಜಾಗತೀಕರಣ ಯುಗದಲ್ಲಿ ಬಡವರ ನಿರ್ಮೂಲನೆ ಎಂಬ ಕೆಟ್ಟ ಶಕೆ ಆರಂಭವಾಯಿತು. ಯುಪಿಎ ಸರಕಾರದ ನಿಷ್ಕ್ರಿಯತೆ ಮತ್ತು ಹೊಣೆಗೇಡಿತನಗಳ ಲಾಭಪಡೆದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಬಡವರನ್ನು ಕಡೆಗಣಿಸಿ ಉಳ್ಳವರ ಉದ್ಧಾರಕ್ಕೆ ವಿಶೇಷ ಆದ್ಯತೆ ನೀಡಿತು. ಕಾರ್ಪೊರೇಟ್ ವಲಯ ಮೋದಿ ಸರಕಾರದ ಪ್ರಮುಖ ಫಲಾನುಭವಿಗಳಾದರೆ ಬಡವರು ಬದಲಾದ ಪರಿಸ್ಥಿತಿಯಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಬಲಿಪಶುಗಳಾಗಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿರುವುದಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯಸೇನ್ ನೊಂದು ನುಡಿದಿದ್ದಾರೆ.
ಹೊಸ ಆರ್ಥಿಕ ನೀತಿಯಿಂದಾಗಿ ಸಾಮಾಜಿಕವಾಗಿ ಅಂಚಿನಲ್ಲಿರುವ ಮತ್ತು ಆರ್ಥಿಕವಾಗಿ ಬಡತನ ಅನುಭವಿಸುತ್ತಿರುವ ಮಕ್ಕಳು ಆಹಾರ, ಪೌಷ್ಟಿಕತೆ, ಶಿಕ್ಷಣ, ಆರೋಗ್ಯ, ಸುರಕ್ಷತೆ ಮೊದಲಾದ ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇತ್ತೀಚೆಗೆ ಅಪೌಷ್ಟಿಕತೆಯ ದೃಷ್ಟಿಯಿಂದ ಭಾರತವು ವಿಶ್ವದಲ್ಲಿ 107 ದೇಶಗಳಲ್ಲಿ 94ನೇ ಸ್ಥಾನ ಪಡೆದಿರುವುದು ಅತ್ಯಂತ ಆತಂಕಕಾರಿಯಾಗಿದೆ.
ದೇಶದ ಮೂವರು ಮಕ್ಕಳಲ್ಲಿ ಒಬ್ಬರು ಅಪೌಷ್ಟಿಕತೆಯಿಂದ ನರಳುತ್ತಿದ್ದು ಮಾನವಾಭಿವೃದ್ಧಿ ದೃಷ್ಟಿಯಿಂದ ಭಾರತದ ಮಕ್ಕಳು ಶೋಚನೀಯ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಜಗತ್ತಿನಲ್ಲಿ ಸಂಭವಿಸುವ ಮಕ್ಕಳ ಸಾವಿನ ಕಾಲುಭಾಗದಷ್ಟು ಭಾರತದಲ್ಲಿ ಸಂಭವಿಸುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ವಿಶೇಷವಾಗಿ ಭಾರತದ ಹೆಣ್ಣುಮಕ್ಕಳು ಅತ್ಯಂತ ಅಲಕ್ಷಿತ ಸ್ಥಿತಿಯಲ್ಲಿ ಬದುಕುತ್ತಿರುವುದಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಆಂಡ್ರ್ಯೂ ಹ್ಯಾಮಿಲ್ಟನ್ ತಿಳಿಸಿದ್ದಾರೆ. ಜಗತ್ತಿನಾದ್ಯಂತ ಕೋವಿಡ್-19 ಬಡವರಿಗೆ ಜೀವನೋಪಾಯಗಳು, ಸಾಮಾಜಿಕ ಸುರಕ್ಷತೆ ಮತ್ತು ಆರ್ಥಿಕ ಹಿನ್ನೆಲೆಯಲ್ಲಿ ಹಲವಾರು ಸಂಕಷ್ಟಗಳನ್ನು ಉಂಟುಮಾಡಿವೆ. ಕೋವಿಡ್ ವೈರಾಣುವಿನಿಂದ ಸತ್ತವರಿಗಿಂತ ಜೀವನೋಪಾಯ ಮಾರ್ಗಗಳನ್ನು ಕಳೆದುಕೊಂಡು ಬೀದಿಗೆ ಬಿದ್ದು ಅಸಹಾಯಕರಾಗಿ ಸತ್ತವರ ಸಂಖ್ಯೆಯೇ ಹೆಚ್ಚು. ನವ ರಾಜಾಧಿರಾಜರು, ಪೂಜಾರಿಗಳು ಮತ್ತು ಜ್ಯೋತಿಷಿಗಳಿಗೆ ಅಸಹಾಯಕ ಬಡವರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಪಂಚಾಂಗಕ್ಕಿಂತ ರಾಜ್ಯಾಂಗ ಬಲು ಶ್ರೇಷ್ಠ, ಏಕಸ್ವಾಮ್ಯಕ್ಕಿಂತ ಪ್ರಜಾಸತ್ತೆ ಬಲುಶ್ರೇಷ್ಠ ಮತ್ತು ಧರ್ಮಕ್ಕಿಂತ ಪ್ರಕೃತಿ ಬಲು ಶ್ರೇಷ್ಠ ಎಂಬ ಅರಿವು ಸಾರ್ವಜನಿಕರಲ್ಲಿ ತಡವಾಗಿ ಆದರೂ ಮೂಡಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತದ ಆರ್ಥಿಕತೆ ಗಣನೀಯವಾಗಿ ಸುಧಾರಿಸಿದ್ದರೂ ಪ್ರಮುಖ ಫಲಾನುಭವಿಗಳು ಬಂಡವಾಳ ಹೂಡಿಕೆದಾರರೇ ಹೊರತು ಶ್ರೀಸಾಮಾನ್ಯ ಭಾರತೀಯರಲ್ಲ. ಪ್ರಜೆಗಳ ಆದಾಯದಲ್ಲಿ ಅಸಮಾನತೆ ನಿರಂತರವಾಗಿ ಹೆಚ್ಚಿದ್ದು ಬಹುಸಂಖ್ಯಾತ ಭಾರತೀಯರು ಪ್ರಕಾಶಿಸುತ್ತಿಲ್ಲ. ಸಾಮಾಜಿಕ ಬಂಡವಾಳ ಅಭಿವೃದ್ಧಿ ದೃಷ್ಟಿಯಿಂದ ಭಾರತದ ಸಾಧನೆ ತೃಪ್ತಿಕರವಾಗಿಲ್ಲ. ಮಾರುಕಟ್ಟೆ ಶಕ್ತಿಗಳು ಮತ್ತು ಪ್ರಬಲ ಶಕ್ತಿಗಳಿಗೆ ಹೂಡಿಕೆದಾರರ ಅಭಿವೃದ್ಧಿ ಮುಖ್ಯವೇ ಹೊರತು ಮಾನವಾಭಿವೃದ್ಧಿ ಮತ್ತು ಸಾಮಾಜಿಕ ಬಂಡವಾಳ ಅಭಿವೃದ್ಧಿ ಮುಖ್ಯವಾಗಿಲ್ಲ. ಇದುವರೆಗೆ ಸಾಧಿಸಿರುವ ಪ್ರಗತಿ ಶ್ರೀಮಂತರಿಗೆ ಅಪಾರ ಪ್ರಯೋಜನಗಳನ್ನು ನೀಡಿ ಬಡವರನ್ನು ಮತ್ತಷ್ಟು ಅಂಚಿಗೆ ನೂಕಿದೆ.
ಹೆಚ್ಚಿನ ಶಿಶುಮರಣ ಪ್ರಮಾಣ, ಕಡಿಮೆ ಜೀವಿತಾವಧಿ, ಜೀವನೋಪಾಯ ಮಾರ್ಗಗಳ ಕೊರತೆ, ಮಹಿಳೆಯರು ಮತ್ತು ಮಕ್ಕಳ ಅಪೌಷ್ಟಿಕತೆ, ಯುವಜನರ ನಿರುದ್ಯೋಗ, ವಿಶೇಷ ಚೇತನರು ಮತ್ತು ವೃದ್ಧರಿಗೆ ಸಾಮಾಜಿಕ ಅಭದ್ರತೆ, ಹೆಚ್ಚುತ್ತಿರುವ ಗ್ರಾಮೀಣ-ನಗರ ವಲಸೆ ಮೊದಲಾದ ಪ್ರವೃತ್ತಿಗಳು ಈ ನಿಟ್ಟಿನಲ್ಲಿ ಅಗತ್ಯ ಆಧಾರಗಳನ್ನು ಒದಗಿಸುತ್ತವೆ. ಶ್ರೀಮಂತರು ಮತ್ತು ಬಡವರ ನಡುವಣ ಅಂತರವನ್ನು ತಗ್ಗಿಸುವ ನಿಟ್ಟಿನಲ್ಲಿ ಅವಶ್ಯಕವಾದ ರಾಜಕೀಯ ಇಚ್ಛಾಶಕ್ತಿಯನ್ನು ನಮ್ಮನ್ನು ಆಳುವವರು ಹೊಂದಿಲ್ಲ.
ಆರ್ಥಿಕ ಅಸಮಾನತೆ ಸ್ವೀಕಾರಾರ್ಹವಲ್ಲ ಎಂಬ ಪ್ರಜ್ಞೆ ನಮ್ಮನ್ನು ಗಂಭೀರವಾಗಿ ಕಾಡುತ್ತಿಲ್ಲ. ಅಸಮಾನತೆ ವಿರುದ್ಧ ಸಾರ್ವಜನಿಕ ಅಸಮಾಧಾನವು ಉತ್ತುಂಗವನ್ನು ತಲುಪಿದೆ. ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ತಂಭಗಳಾದ ನ್ಯಾಯಾಂಗ ಮತ್ತು ಮಾಧ್ಯಮಗಳು ಸೂಕ್ತ ಅವಲೋಕನ ನಡೆಸಿ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಮತ್ತೊಂದು ರಾಷ್ಟ್ರೀಯ ಜನಾಂದೋಲನವನ್ನು ರೂಪಿಸುವ ನಿಟ್ಟಿನಲ್ಲಿ ಸಕ್ರಿಯವಾಗುವ ಅಗತ್ಯ ಇಂದು ಇದೆ. ಪ್ರಗತಿಪರ ಸಂಘಟನೆಗಳು ನಾಗರಿಕ ಸಮಾಜದ ಹಿತರಕ್ಷಣೆಗಾಗಿ ನಿರಂತರವಾಗಿ ದುಡಿಯುವ ಅವಶ್ಯಕತೆ ಎಂದಿಗಿಂತ ಇಂದು ಹೆಚ್ಚಾಗಿದೆ.