ಕಿತ್ತಳೆ ಮಾರಾಟ ಮಾಡುತ್ತಿದ್ದಾಗ ಇಂಗ್ಲೀಷ್‍ನಲ್ಲಿ ಕೇಳಿದ ಪ್ರಶ್ನೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಿತು: ಹರೇಕಳ ಹಾಜಬ್ಬ
ಮೈಸೂರು,ನ.21: ಕುಗ್ರಾಮದಲ್ಲಿ ಶಾಲೆ ನಿರ್ಮಿಸಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಪಿಯು ಕಾಲೇಜು ಆರಂಭಿಸುವ ಗುರಿ ಹೊಂದಿದ್ದಾರೆ.
ರಾಷ್ಟ್ರೋತ್ಥಾನ ಸಾಹಿತಿ ವತಿಯಿಂದ ನಂಜರಾಜ ಬಹದ್ದೂರ್ ಛತ್ರದಲ್ಲಿ ರವಿವಾರ ಆಯೋಜಿಸಿದ್ದ ಕನ್ನಡ ಪುಸ್ತಕ ಹಬ್ಬದಲ್ಲಿ ಅದ್ಧೂರಿ ಗೌರವ ಸ್ವೀರಿಕಸಿ ಮಾತನಾಡಿದರು.
ಜೀವನವನ್ನು ಕಟ್ಟಿಕೊಳ್ಳಲು ಬಸ್ ನಿಲ್ದಾಣದಲ್ಲಿ ಕಿತ್ತಳೆ ಮಾರಾಟ ಮಾಡುತ್ತಿದ್ದಾಗ ಇಂಗ್ಲಿಷ್‍ನಲ್ಲಿ ಕೇಳಿದ ಪ್ರಶ್ನೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಿತು.
ನಾನಂತೂ ಕಲಿತಿಲ್ಲ. ನಮ್ಮೂರಿನ ಮಕ್ಕಳಿಗಾದರೂ ಶಾಲೆ ನಿರ್ಮಿಸಬೇಕು ಎನ್ನುವ ಛಲ ಮೂಡಿತು. ಹರೇಕಳದಲ್ಲಿ ಶಾಲೆ ನಿರ್ಮಿಸುವ ಕನಸು ಹಂತ ಹಂತವಾಗಿ ಹೀಗೆ ಈಡೇರಿದೆ. ಇದೀಗ ನಮ್ಮೂರಲ್ಲಿ ಪಿಯು ಕಾಲೇಜು ಆಗಬೇಕು ಎನ್ನುವುದೇ ಸದ್ಯದ ನನ್ನ ಬಯಕೆಯಾಗಿದೆ ಎಂದು ಹೇಳಿದರು.
ಸಣ್ಣ ಜೋಪಡಿಯಲ್ಲಿ ನನ್ನ ಬದುಕು ಆರಂಭವಾಗಿತ್ತು. 1974ರಲ್ಲಿ ಪ್ರವಾಹ ಬಂದು ಎಲ್ಲವೂ ಕೊಚ್ಚಿ ಹೋಗಿತ್ತು. ಆಗ ಬೇರೆ ಮನೆ ಮಾಡಿಕೊಳ್ಳಲು ಸರ್ಕಾರದ ನೆರವು ನೀಡಿತ್ತು ಎಂದರು.
ಮೈಸೂರೊಂದಿಗಿನ ನಂಟನ್ನು ಸಭೆಗೆ ಪರಿಚಯಿಸಿದ ಹಾಜಬ್ಬ ಅವರು, ಮೂರ್ನಾಲ್ಕು ದಶಕಗಳ ಹಿಂದೆ ನಗರದ `ಕಾಮದೇನು' ಹೋಟೆಲ್ ನಲ್ಲಿ ಕೆಲ ಸಮಯ ಪಾತ್ರೆ ತೊಳೆಯುವ ಕೆಲಸ ಮಾಡಿದ್ದೆ ಎಂದು ಖುದ್ದು ಹಾಜಬ್ಬ ನೆನಪಿಸಿಕೊಂಡರು. ಯಾವುದೇ ಅಳುಕಿಲ್ಲದೆ ತಾವು ಮೈಸೂರಿನಲ್ಲಿ ನಿರ್ವಹಿಸಿದ್ದ ಕೆಲಸದ ವಿಷಯವನ್ನು ಸಭೆಗೆ ತಿಳಿಸಿದರು.
ಮೈಸೂರಿನ ಸ್ವಾಮಿ ಲಿಂಗಪ್ಪ(ಶಿಕ್ಷಣ), ಸಿ.ವಿ.ಕೇಶವಮೂರ್ತಿ(ನ್ಯಾಯಾಂಗ), ಶ್ರೀಧರ ಚಕ್ರವರ್ತಿ(ಶಿಕ್ಷಣ ಸೇವೆ), ಎಚ್.ಡಿ.ಕೋಟೆಯ ಮದಲಿ ಮಾದಯ್ಯ(ಸಾಮಾಜಿಕ ಹೋರಾಟ) ಅವರನ್ನು ಅಭಿನಂದಿಸಲಾಯಿತು. ವಿಶ್ರಾಂತ ಕುಲಪತಿ ಡಾ.ಚಿದಾನಂದಗೌಡ, ವಕೀಲ ಶ್ಯಾಮ್ ಭಟ್ ಇನ್ನಿತರರು ಪಾಲ್ಗೊಂಡಿದ್ದರು.
ಸಮಾಜ ನನ್ನನ್ನು ಗುರುತಿಸಿದ್ದಕ್ಕೆ ಹೆಮ್ಮೆಯಾಗುತ್ತದೆ. ಒಬ್ಬ ಸಾಮಾನ್ಯ ಮನುಷ್ಯನಿಗೆ ದೇಶದ ಅತ್ಯುನ್ನತ ಪ್ರಶಸ್ತಿ ಪದ್ಮಶ್ರೀ ನೀಡಿ ಗೌರವಿಸಲಾಗಿದೆ. ಜೀವಮಾನದಲ್ಲೇ ಇಂತಹ ಕನಸು ಸಹ ಕಂಡಿರಲಿಲ್ಲ. ಈ ಪ್ರಶಸ್ತಿ ಪಡೆಯುವಾಗ ನನ್ನ ಕಣ್ಣಾಲಿಗಳು ತುಂಬಿ ಬಂದವು.
-ಹರೇಕಳ ಹಾಜಬ್ಬ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬಗೆ ಆತ್ಮೀಯ ಸ್ವಾಗತ
ಸರಳವಾದ ಉಡುಗೆ ತೊಟ್ಟು, ಬರೀಗಾಲಿನಲ್ಲಿ ರಾಷ್ಟ್ರಪತಿ ಭವನದಲ್ಲಿ ಇತ್ತೀಚಿಗೆ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿ ದೇಶದ ಗಮನ ಸೆಳೆದಿದ್ದ ಹಾಜಬ್ಬ ಅವರಿಗೆ ನಂಜರಾಜ ಬಹದ್ದೂರ್ ಛತ್ರದಲ್ಲಿ ಆತ್ಮೀಯವಾಗಿ ವಿಶೇಷ ಗೌರವ ಸಲ್ಲಿಸಲಾಯಿತು.
ಮಂಗಳೂರಿನಿಂದ ಬಂದ ಅವರ ಮೇಲೆ ಹೂಮಳೆಗೈಯುವ ಮೂಲಕ ಮಹಿಳೆಯರು ಆತ್ಮೀಯವಾಗಿ ಸ್ವಾಗತಕೋರಿದರು. ನಂತರ ಅವರನ್ನು ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.