varthabharthi


ನಿಮ್ಮ ಅಂಕಣ

ರಾಷ್ಟ್ರೀಯ ಹೆದ್ದಾರಿಗಳು ಸಾವಿನ ಹೆದ್ದಾರಿಗಳಾಗದಿರಲಿ

ವಾರ್ತಾ ಭಾರತಿ : 23 Nov, 2021
-ಮುರುಗೇಶ ಡಿ. ದಾವಣಗೆರೆ

ಮಾನ್ಯರೇ,

ಯಾವುದೇ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಅಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಪಾತ್ರವು ಕೂಡ ಅತಿ ಮುಖ್ಯವಾಗಿರುತ್ತದೆ. ಸರಕು ವಾಹನಗಳು ಮತ್ತು ದೂರದ ಬೇರೆ ಬೇರೆ ಸ್ಥಳಗಳಿಗೆ ಸಂಚರಿಸುವವರಿಗೆ ರಾಷ್ಟ್ರೀಯ ಹೆದ್ದಾರಿಗಳು ಪ್ರಮುಖ ಪಾತ್ರ ವಹಿಸುತ್ತವೆ. ವಾಹನಗಳ ಚಲನೆಯನ್ನು ವೇಗಗೊಳಿಸಲು ಮತ್ತು ಅಪಘಾತ ಮುಕ್ತವಾಗಿ ಹೆದ್ದಾರಿಗಳನ್ನು ಮಾರ್ಪಡಿಸಲು ಕೇಂದ್ರ ಸರಕಾರ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ. ಆದರೆ ರಾಷ್ಟ್ರೀಯ ಹೆದ್ದಾರಿ-4 ರಾಷ್ಟ್ರೀಯ ಹೆದ್ದಾರಿಯಾಗುವ ಬದಲು ಸಾವಿನ ಹೆದ್ದಾರಿಯಾಗುತ್ತಿದೆಯೇ ಎಂಬ ಸಂಶಯ ಮೂಡುತ್ತಿದೆ. ಯಾಕೆಂದರೆ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಡಿವೈಡರ್ ಮಧ್ಯೆ ಹಾಕಿರುವ ಆಲಂಕಾರಿಕ ಗಿಡಗಳ ಜೊತೆಗೆ ಬೆಳೆದಿರುವ ಹುಲ್ಲನ್ನು ತಿನ್ನಿಸಲು ರೈತರು ತಮ್ಮ ಸಾಕುಪ್ರಾಣಿಗಳನ್ನು ಡಿವೈಡರ್‌ನಲ್ಲಿ ಬಿಟ್ಟುಬಿಡುತ್ತಾರೆ. ರಾಜ್ಯ-ರಾಜ್ಯಗಳ ನಡುವೆ ಸಂಚರಿಸುವ ರಾಷ್ಟ್ರೀಯ ಹೆದ್ದಾರಿ ಇದಾಗಿರುವುದರಿಂದ ಬಹುತೇಕ ವಾಹನಗಳನ್ನು ಇಲ್ಲಿ ವೇಗವಾಗಿ ಚಲಾಯಿಸುತ್ತಿರುತ್ತಾರೆ. ದನ-ಕರುಗಳು ಏಕಾಏಕಿ ವಾಹನಗಳಿಗೆ ಅಡ್ಡಬಂದರೆ ಅಪಘಾತಗಳಾಗಿ ಪ್ರಾಣಹಾನಿ ಆಗುವ ಸಂಭವವೂ ಉಂಟು. ಈ ಹಿಂದೆ ಇಲ್ಲಿ ಇದೇ ರೀತಿಯ ಸಾಕಷ್ಟು ಅಪಘಾತಗಳಾಗಿರುವುದರ ಜೊತೆಗೆ ಸಾವು-ನೋವುಗಳೂ ಉಂಟಾಗಿವೆ. ಹೆದ್ದಾರಿ ನಿರ್ವಹಣೆ ಹೊತ್ತಿರುವ ಟೋಲ್ ಸಿಬ್ಬಂದಿಗಾದರೂ ಹೇಗೆ ನಿರ್ವಹಿಸಬೇಕು ಎಂಬ ಕನಿಷ್ಠ ಜ್ಞಾನವಿಲ್ಲವೇ? ಟೋಲ್ ಸಿಬ್ಬಂದಿ ಕೇವಲ ಟೋಲ್ ಸಂಗ್ರಹಿಸುವುದರಲ್ಲಿ ಬ್ಯುಸಿಯಾಗಿರುತ್ತಾರೆಯೇ ಹೊರತು ಜನರ ಜೀವ ಕಾಪಾಡುವ ಮುತುವರ್ಜಿ ಕಿಂಚಿತ್ತೂ ಅವರಿಗಿಲ್ಲ. ರಾಷ್ಟ್ರೀಯ ಹೆದ್ದಾರಿಗಳು ಸಾವಿನ ಹೆದ್ದಾರಿಗಳಾಗದಿರಲಿ. ಈಗಲಾದರೂ ಸರಕಾರ ಎಚ್ಚೆತ್ತುಕೊಂಡು ಹೆದ್ದಾರಿಗಳಲ್ಲಿ ದನ ಮೇಯಿಸುವುದನ್ನು ನಿಷೇಧಿಸಲಿ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)