varthabharthi


ಕಾಲಂ 9

ಹಂಸಲೇಖ-ಪುನೀತ್-ರಾಜ್‌ಕುಮಾರ್: ಶೂದ್ರ ಪ್ರತಿಭೆಗಳು ಮತ್ತು ಸಾಂಸ್ಕೃತಿಕ ರೂಪಾಂತರಗಳು

ವಾರ್ತಾ ಭಾರತಿ : 24 Nov, 2021
ಶಿವಸುಂದರ್

ಇತ್ತೀಚೆಗೆ ಹಂಸಲೇಖ ಅವರ ಬಹಿರಂಗ ಭಾಷಣವನ್ನು ಹೊರತುಪಡಿಸಿದರೆ, ರಾಜ್ ಕುಟುಂಬ ಮಾತ್ರವಲ್ಲ, ಅಬ್ರಾಹ್ಮಣ ಹಿನ್ನೆಲೆಯಿಂದ ಬಂದ ಕನ್ನಡ ಚಿತ್ರರಂಗದ ಪ್ರಮುಖರೆಂದು ಗುರುತಿಸಬಹುದಾದ ಯಾರೂ ಬ್ರಾಹ್ಮಣೀಯ ಸಾಂಸ್ಕೃತಿಕ ಯಜಮಾನಿಕೆಯನ್ನು ಎಂದಿಗೂ ಬಹಿರಂಗವಾಗಿ ಪ್ರಶ್ನಿಸಿಯೇ ಇಲ್ಲ. ಅದಕ್ಕೆ ಕೆರಿಯರ್ ಸ್ವಾರ್ಥದೊಂದಿಗೆ, ಶೂದ್ರ ಹಿನ್ನೆಲೆಯಿಂದ ಬಂದ ಪ್ರತಿಭೆಗಳ ಶೂದ್ರ ಪ್ರಜ್ಞೆಯಲ್ಲಿ ಇರಬೇಕಾದಷ್ಟು ಬ್ರಾಹ್ಮಣ್ಯ ವಿರೋಧ ಇಲ್ಲದಿರುವುದೂ ಒಂದು ಕಾರಣವಿರಬಹುದೇ? ಇತರ ರಾಜ್ಯಗಳಿಗೆ ಹೋಲಿಸಿದಲ್ಲಿ ಅಂತಹ ದುರ್ಬಲ ಶೂದ್ರ ಪ್ರಜ್ಞೆಗೆ ಕಾರಣವಾದ ಕರ್ನಾಟಕದ ಸನ್ನಿವೇಶವೇನಿರಬಹುದು?ನರೇಂದ್ರ ಮೋದಿಯವರು ಬಿಜೆಪಿ ಸೇರಲು ಪುನೀತ್‌ರಾಜ್‌ಕುಮಾರ್‌ಗೆ ಕೊಟ್ಟ ಆಹ್ವಾನವನ್ನು ಪುನೀತ್ ಅವರು ನಯವಾಗಿಯೇ ನಿರಾಕರಿಸಿದ ಸುದ್ದಿ ‘ಮೋದಿ ಭಕ್ತ-ಪುನೀತ್ ಅಭಿಮಾನಿ’ಗಳಲ್ಲಿ ಯಾವ ಬಗೆಯ ಭಾವನೆಗಳನ್ನು ಹುಟ್ಟಿಸಬಹುದು? ಅಭಿಮಾನಿಯೊಳಗಿನ ಭಕ್ತ ಮುನಿಸಿಕೊಳ್ಳಬಹುದೇ? ಅಥವಾ ಅಭಿಮಾನಿಯೇ ಭಕ್ತನನ್ನು ಮಣಿಸಬಹುದೇ? ಅಥವಾ ಸಂಘ ಪರಿವಾರದ ವಾಟ್ಸ್‌ಆ್ಯಪ್ ವಿಶ್ವವಿದ್ಯಾನಿಲಯ ಮೋದಿ-ಪುನೀತರ ಕಲ್ಪಿತ ಸಂಭಾಷಣೆಯನ್ನು ಹರಿಬಿಟ್ಟು ಪುನೀತರನ್ನೇ ಮೋದಿ ಭಕ್ತನೆಂದು ನಂಬಿಸಿ ಬಿಡಬಹುದೇ? ಅದೇನೇ ಇರಲಿ..ಕಾಂಗ್ರೆಸ್ ಉಚ್ಛ್ರಾಯದಲ್ಲಿದ್ದ ಸಂದರ್ಭದಲ್ಲೂ ರಾಜ್‌ಕುಮಾರ್ ಕೂಡಾ ಕಾಂಗ್ರೆಸ್ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದರು. ಆದರೆ ಇಂದು ಇಡೀ ಸಮಾಜ ಮತ್ತು ರಾಜಕಾರಣ ಕೋಮು ಧ್ರುವೀಕರಣಗೊಂಡಿರುವ ಹೊತ್ತಿನಲ್ಲಿ, ಮೋದಿ ನೇತೃತ್ವದ ಬಿಜೆಪಿ ಸೇರುವುದೆಂದರೆ ಅಪರಿಮಿತ ಸುಖ ಸೌಕರ್ಯಗಳೆಂದೂ, ಅದಕ್ಕೆ ವಿರುದ್ಧವಾಗಿ ಮೋದಿ-ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗುವುದೆಂದರೆ ಕೊನೆಯಿಲ್ಲದ ಸಿಬಿಐ-ಐಡಿ ರೈಡುಗಳು ಮತ್ತು ಯುಎಪಿಎ ಕೇಸುಗಳು ಎಂದಾಗಿರುವಾಗ, ಮೋದಿಯವರೇ ಬಂದು ಖುದ್ದಾಗಿ ಬಿಜೆಪಿಗೆ ಆಹ್ವಾನಿಸಿದರೂ ಅದನ್ನು ನಿರಾಕರಿಸಿದ್ದು ಕೂಡಾ ಹೀರೋಗಿರಿಯೇ ಎನ್ನುವ ಸಂದರ್ಭದಲ್ಲಿ ನಾವಿದ್ದೇವೆ. ಹಾಗೆ ನೋಡಿದರೆ ತಮಗೆ ಎಂದಿಗೂ ಪೂರ್ತಿಯಾಗಿ ದಕ್ಕದೇ ಹೋದ ರಾಜ್ ಕುಟುಂಬದ ಬಗ್ಗೆ ಸಂಘಪರಿವಾರದ ಗರ್ಭಗುಡಿಯಲ್ಲಿ ವಿಶೇಷ ಆದರವೇನೂ ಇದ್ದಂತಿರಲಿಲ್ಲ. ಅದಕ್ಕೆ ಕಾರಣಗಳೂ ಇವೆ. ತೆರೆಯ ಮೇಲೆ ಅವರು ಮಾಡಿದ ಪಾತ್ರಗಳು ಹುಟ್ಟುಹಾಕಿದ ಸಾಂಸ್ಕೃತಿಕ ರಾಜಕಾರಣದ ಪರಿಣಾಮಗಳೇನೇ ಇದ್ದರೂ ತೆರೆಯ ಹಿಂದಿನ ಅವರ ಬದುಕು, ನಡೆ-ನುಡಿಗಳು ಸಂಘ ಪರಿವಾರ ಬಯಸುತ್ತಿದ್ದ ‘ಬ್ರಾಹ್ಮಣೀಯ ಸಂಸ್ಕಾರ’ ಅಥವಾ ‘ಹಿಂದುತ್ವ ರಾಜಕೀಯ ಧೋರಣೆ’ಯನ್ನು ಬಲಪಡಿಸುವಂತೇನೂ ಇರಲಿಲ್ಲ. ಹಾಗೆಂದೂ, ತಮಿಳು, ಮಲಯಾಳಂ ಸಿನಿರಂಗದ ಹಲವು ಪ್ರಮುಖರಂತೆ ರಾಜ್ ಕುಟುಂಬದವರೆಂದೂ, ಬ್ರಾಹ್ಮಣ್ಯದ ರಾಜಕಾರಣವನ್ನಾಗಲೀ, ಅದರ ಆಕ್ರಮಣಶೀಲ ಬೆಳವಣಿಗೆಯಾದ ಹಿಂದುತ್ವ ರಾಜಕಾರಣವು ಸಿನಿರಂಗದ ಸೃಜನಶೀಲತೆಯ ಮೇಲೆ ಮಾಡುತ್ತಿರುವ ದಾಳಿಗಳನ್ನಾಗಲೀ ಎಂದೂ ಬಹಿರಂಗವಾಗಿ ಪ್ರಶ್ನಿಸಿಲ್ಲ.

ಹಾಗೆ ನೋಡಿದರೆ, ಇತ್ತೀಚೆಗೆ ಹಂಸಲೇಖ ಅವರ ಬಹಿರಂಗ ಭಾಷಣವನ್ನು ಹೊರತುಪಡಿಸಿದರೆ, ರಾಜ್ ಕುಟುಂಬ ಮಾತ್ರವಲ್ಲ, ಅಬ್ರಾಹ್ಮಣ ಹಿನ್ನೆಲೆಯಿಂದ ಬಂದ ಕನ್ನಡ ಚಿತ್ರರಂಗದ ಪ್ರಮುಖರೆಂದು ಗುರುತಿಸಬಹುದಾದ ಯಾರೂ ಬ್ರಾಹ್ಮಣೀಯ ಸಾಂಸ್ಕೃತಿಕ ಯಜಮಾನಿಕೆಯನ್ನು ಎಂದಿಗೂ ಬಹಿರಂಗವಾಗಿ ಪ್ರಶ್ನಿಸಿಯೇ ಇಲ್ಲ. ಅದಕ್ಕೆ ಕೆರಿಯರ್ ಸ್ವಾರ್ಥದೊಂದಿಗೆ, ಶೂದ್ರ ಹಿನ್ನೆಲೆಯಿಂದ ಬಂದ ಪ್ರತಿಭೆಗಳ ಶೂದ್ರ ಪ್ರಜ್ಞೆಯಲ್ಲಿ ಇರಬೇಕಾದಷ್ಟು ಬ್ರಾಹ್ಮಣ್ಯ ವಿರೋಧ ಇಲ್ಲದಿರುವುದೂ ಒಂದು ಕಾರಣವಿರಬಹುದೇ? ಇತರ ರಾಜ್ಯಗಳಿಗೆ ಹೋಲಿಸಿದಲ್ಲಿ ಅಂತಹ ದುರ್ಬಲ ಶೂದ್ರ ಪ್ರಜ್ಞೆಗೆ ಕಾರಣವಾದ ಕರ್ನಾಟಕದ ಸನ್ನಿವೇಶವೇನಿರಬಹುದು?

ಬ್ರಾಹ್ಮಣ್ಯ ಮತ್ತು ಕರ್ನಾಟಕತ್ವ

ಹಾಗೆ ನೋಡಿದರೆ ತಮಿಳುನಾಡು, ಆಂಧ್ರ, ಕೇರಳಗಳಲ್ಲಿ ನಡೆದ ಭಾಷಿಕ ಅಸ್ಮಿತೆಯ ಚಳವಳಿಗಳು ಸಾಮಾಜಿಕ ನ್ಯಾಯದ, ದ್ರಾವಿಡ-ದಮನಿತ ಹಕ್ಕಿನ ಶೂದ್ರ-ದಲಿತ-ಕಾರ್ಮಿಕ ಜನಚಳವಳಿಗಳೊಂದಿಗೆ ಸಾವಯವವಾಗಿ ಬೆಸೆದುಕೊಂಡಿದ್ದವು. ಇದು ಅಲ್ಲಿನ ರಾಜಕೀಯ ಮತ್ತು ಸಾಂಸ್ಕೃತಿಕ ಲೋಕಗಳ ನಡುವೆ ಜೀವಂತವಾದ ಕೊಂಡಿಯನ್ನು ಬೆಸೆದವು. ದ್ರಾವಿಡ ಅಸ್ಮಿತೆಯಂತೂ ಆರ್ಯ ಭಾರತದ ಪರಿಕಲ್ಪನೆಯನ್ನೇ ಒಪ್ಪಿಕೊಳ್ಳಲಿಲ್ಲ. ಅದು ಚಿತ್ರರಂಗದಲ್ಲೂ ನೇರ ಪರಿಣಾಮ ಬೀರಿರುವುದಕ್ಕೆ ತಮಿಳು ಚಿತ್ರರಂಗ ಕೊಡುತ್ತಿರುವ ಇತ್ತೀಚಿನ ಚಿತ್ರಗಳು ಮತ್ತು ಅದಕ್ಕೆ ಸಿಗುತ್ತಿರುವ ಜನಮನ್ನಣೆಗಳೇ ಸಾಕ್ಷಿ. ಅಲ್ಲಿ ಪ್ರಖರ ದಲಿತ ಪ್ರಜ್ಞೆಯ, ಹರಿತ ಬ್ರಾಹ್ಮಣ ವಿರೋಧಿ ಶೂದ್ರ ಪ್ರಜ್ಞೆಯ ನಿರ್ದೇಶಕ, ನಿರ್ಮಾಪಕ, ಲೇಖಕರು ಬರುತ್ತಿರುವುದು ಮಾತ್ರವಲ್ಲದೆ ಅದನ್ನು ಅಪ್ಪಿಕೊಳ್ಳುವ ಶೂದ್ರ-ದಲಿತ ಸಂವೇದನೆಯುಳ್ಳ ಬಹುಸಂಖ್ಯಾತ ಪ್ರಜ್ಞಾವಂತ ಪ್ರೇಕ್ಷಕ ವರ್ಗವನ್ನು ಅಲ್ಲಿನ ಸಮಾಜ ರೂಪಿಸಿದೆ. ಇವೆರಡಕ್ಕೂ ಕಾರಣವಾಗಿದ್ದು ಆ ಸಮಾಜವನ್ನೇ ಇಡಿಯಾಗಿ ಆವರಿಸಿಕೊಂಡ ಸಾಮಾಜಿಕ ನ್ಯಾಯದ ಮೌಲ್ಯಗಳು ಮತ್ತು ಚಳವಳಿಗಳು. ಆದರೆ ಈಗ ಅಲ್ಲಿಯೂ ಹಿಂದುತ್ವ-ಬ್ರಾಹ್ಮಣ್ಯ ರಾಜಕಾರಣವು ಶೂದ್ರ ಪ್ರಜ್ಞೆಯಲ್ಲಿ ಬಚ್ಚಿಟ್ಟುಕೊಂಡಿರುವ ದಲಿತ ವಿರೋಧಿ ಅಸಹನೆಯನ್ನು ಆಧರಿಸಿ ಕೊಂಡು ಬೇರುಬಿಡಲು ಪ್ರಯತ್ನಿಸುತ್ತಿದೆ ಎಂಬುದು ಮತ್ತೊಂದು ವಿಚಾರ. ಆದರೆ ಕನ್ನಡ ರಾಷ್ಟ್ರೀಯತೆಯ ಜಾಗೃತಿಯು ಪ್ರಾರಂಭದಲ್ಲಿ ಪ್ರಧಾನವಾಗಿ ಪ್ರೇರಣೆಗೊಂಡಿದ್ದೇ ತಿಲಕ್ ಮಾದರಿ ಬ್ರಾಹ್ಮಣೀಯ ಶ್ರೇಷ್ಟತೆಯ ‘ಭಾರತ ಜನನಿಯ ತನುಜಾತೆ’ಯ ಮಾದರಿಯಲ್ಲಿ. ಕನ್ನಡ ರಾಷ್ಟ್ರೀಯತೆಯ ಪ್ರಧಾನಧಾರೆ ‘‘ಬ್ರಾಹ್ಮಣೀಯ ಸಂಸ್ಕಾರವನ್ನು-ಸಾಮಾಜಿಕ, ರಾಜಕೀಯ ಧೋರಣೆಗಳನ್ನು’’ ಪ್ರಶ್ನಿಸುವುದಿರಲಿ, ಪೋಷಿಸಿದವು. ಅದಕ್ಕೆ ಪ್ರಧಾನ ಕಾರಣ ಅದರ ಬ್ರಾಹ್ಮಣೀಯ ನಾಯಕತ್ವವೇ.

ಕರ್ನಾಟಕದ ಚಳವಳಿಗಳು- ನವಬ್ರಾಹ್ಮಣ್ಯದ ಸವಾಲುಗಳು

ಆ ನಂತರದಲ್ಲಿ ಕರ್ನಾಟಕದಲ್ಲಿ ಶಿಕ್ಷಿತ-ಜಾಗೃತ ಶೂದ್ರ ಹಾಗೂ ದಲಿತರ ನಾಯಕತ್ವದಲ್ಲಿ ನಡೆದ ರೈತ, ದಲಿತ, ಕಾರ್ಮಿಕ, ಭಾಷಾ ಚಳವಳಿಗಳು ಬ್ರಾಹ್ಮಣ್ಯದ ರೆಂಬೆ ಕೊಂಬೆಗಳನ್ನು ಕಡಿದರೂ ಬ್ರಾಹ್ಮಣ್ಯದ ಬುಡವನ್ನು ಪೆರಿಯಾರರ ತಮಿಳುನಾಡು ಜಾಡಿಸಿದಂತೆ ಜಾಡಿಸಲಿಲ್ಲ. ಇದೆಲ್ಲಕ್ಕೂ ಕೆಲವು ಅಪರೂಪದ ಅಪವಾದಗಳಿದ್ದವೆಂಬುದು ನಿಜ. ಆದರೂ ಸಾಮಾಜಿಕ ಚಲನೆಗೆ ಬ್ರಾಹ್ಮಣ್ಯದ ಸಿದ್ಧಾಂತದ ಸೋಲು ಪೂರ್ವ ಶರತ್ತು ಎಂಬ ಗ್ರಹಿಕೆ ಕರ್ನಾಟಕದ ಚಳವಳಿಗಳಲ್ಲಿ ಇತರ ರಾಜ್ಯಗಳಲ್ಲಿ ಕಂಡುಬಂದಷ್ಟು ತೀವ್ರವಾಗಿ ಕಾಣಲಿಲ್ಲ. ಪರಿಣಾಮವಾಗಿ ಹಳೆಯ ಪಾರಂಪರಿಕ ಬ್ರಾಹ್ಮಣ್ಯದ ಜೊತೆಗೆ ಶೂದ್ರ-ದಲಿತ ಮಧ್ಯಮ ಹಾಗೂ ಮೇಲ್ ಮಧ್ಯಮ ವರ್ಗಗಳ ನವ ಬ್ರಾಹ್ಮಣ್ಯವೂ ಮತ್ತು ಬ್ರಾಹ್ಮಣ್ಯದ ಜೊತೆ ಅವರ ಅನುಸಂಧಾನವಾದಿ ಧೋರಣೆಗಳು ಬ್ರಾಹ್ಮಣ್ಯ ವಿರೋಧಿ ಮೊನಚನ್ನು ಕಡಿಮೆ ಮಾಡಿದ್ದಲ್ಲದೆ ರೈತ-ದಲಿತ-ಕಾರ್ಮಿಕ ಚಳವಳಿಗಳಿಗೂ ಮತ್ತು ಸಂಘಟನೆಗಳಿಗೂ ತೊಡಕಾಗಲಾರಂಭಿಸಿದವು. ಇದರ ಜೊತೆಗೆ, ಇತರ ರಾಜ್ಯಗಳಲ್ಲಿ ಚಳವಳಿ ಮತ್ತು ಚಿತ್ರರಂಗಗಳ ನಡುವೆ ಇದ್ದ ನಿಕಟ ಸಂಬಂಧವೂ ಕರ್ನಾಟಕದಲ್ಲಿ ಮೊದಲಿನಿಂದಲೂ ಇರಲಿಲ್ಲ. ಗೋಕಾಕ್ ಚಳವಳಿಯೊಂದನ್ನು ಹೊರತುಪಡಿಸಿದರೆ ಕನ್ನಡ ಚಿತ್ರರಂಗ ದೊಡ್ದ ಮಟ್ಟದಲ್ಲಿ ಮತ್ತೆ ನಾಡಿನ ಆಗುಹೋಗುಗಳಲ್ಲಿ ಬೆರೆಯಲೇ ಇಲ್ಲ. ಚಳವಳಿಗಳಿಂದ ಅಥವಾ ಸಾಮಾಜಿಕ ನ್ಯಾಯ-ಸಮಾನತಾ ಸಿದ್ಧಾಂತಗಳಿಂದ ಪ್ರಭಾವಿತರಾಗಿ ಕನ್ನಡ ಚಿತ್ರರಂಗಕ್ಕೆ ಹೋದವರು ಉತ್ತಮವಾದ ಪ್ರಯತ್ನಗಳನ್ನು ನಡೆಸುತ್ತಿದ್ದಾರಾದರೂ ಅವರು ದ್ವೀಪವಾಗಿಯೇ ಉಳಿದಿದ್ದಾರೆ. ಒಟ್ಟ್ಟಾರೆಯಾಗಿ ಕನ್ನಡ ಚಿತ್ರರಂಗದ ಪ್ರಧಾನರೂಪ ಮಾತ್ರ ಯಥಾಸ್ಥಿತಿವಾದಿ, ಬ್ರಾಹ್ಮಣೀಯ ಮೌಲ್ಯಗಳ ಅನುಮೋದನೆ ಅಥವಾ ಅನುಸಂಧಾನವೇ ಆಗಿಬಿಟ್ಟಿದೆ.

ಹಂಸಲೇಖ ಪ್ರಶ್ನೆಗಳು-ಬ್ರಾಹ್ಮಣ್ಯದ ಕ್ರೌರ್ಯಗಳು-ನವಬ್ರಾಹ್ಮಣ್ಯದ ಮೌನಗಳು

ಇಂತಹ ಸನ್ನಿವೇಶದಲ್ಲಿ ಪೇಜಾವರ ಸ್ವಾಮಿಗಳ ದಲಿತಕೇರಿಯ ಭೇಟಿಯ ಹಿಂದಿನ ಬ್ರಾಹ್ಮಣೀಯ ಹಿಪಾಕ್ರಸಿಯ ಬಗ್ಗೆ ನಾಡಿನ ಹೆಮ್ಮೆಯ ಸಂಗೀತಗಾರ ಹಂಸಲೇಖ ಅವರು ಮಾಡಿದ ಭಾಷಣ ಇಂತಹ ಯಥಾಸ್ಥಿತಿವಾದಕ್ಕೆ ಹಾಗೂ ಬ್ರಾಹ್ಮಣೀಯ ‘ಸಂಸ್ಕಾರ’ಗಳ ಅನುಸಂಧಾನಕ್ಕೆ ಕೊಟ್ಟ ಅನಿರೀಕ್ಷಿತ ಹಾಗೂ ಅತ್ಯಂತ ಅಪೇಕ್ಷಿತ ಪೆಟ್ಟಾಗಿತ್ತು. ಅದನ್ನು ಬ್ರಾಹ್ಮಣೀಯ ಶಕ್ತಿಗಳು ಹಲವು ರೀತಿಯಲ್ಲಿ ತಿರುಚುತ್ತಾ ಹಂಸಲೇಖ ಅವರ ತೇಜೋವಧೆ ಮಾಡುತ್ತಿದ್ದರೂ ಕನ್ನಡ ಸಾಂಸ್ಕೃತಿಕ ಲೋಕದ ಮೌನವೂ ಮೇಲೆ ವಿವರಿಸಲಾದ ವಿದ್ಯಮಾನದ ಫಲಿತಾಂಶವೇ ಅಗಿದೆ. ಅನ್ನವನ್ನು ಅರ್ಥಾತ್ ತಿನ್ನುವ ಯಾವುದೇ ಆಹಾರವನ್ನು ಪರಬ್ರಹ್ಮ ಎನ್ನುವ ಪೇಜಾವರರು, ದಲಿತಕೇರಿಗೆ ಬಂದಾಗ ದಲಿತರು ಮಾಂಸಾಹಾರ ಕೊಟ್ಟರೆ ಸ್ವೀಕರಿಸುತ್ತಿದ್ದರೇ ಎಂದು ಹಂಸಲೇಖ ಪ್ರಶ್ನಿಸಿದ್ದಾರೆ. ಹಾಗೆಯೇ ಹಿಂದೂ ಧರ್ಮದ ಒಳಗೆ ಇರುವ ತಾರತಮ್ಯವನ್ನು ನಿಜಕ್ಕೂ ಹೋಗಲಾಡಿಸಬೇಕೆಂದಿದ್ದರೆ ಪೇಜಾವರರು ದಲಿತಕೇರಿಗೆ ಬರುವುದಕ್ಕಿಂತ ದಲಿತರನ್ನು ತಮ್ಮ ದೇವಸ್ಥಾನದೊಳಗೆ, ಮಠದೊಳಗೆ, ಮನಸ್ಸಿನೊಳಗೆ, ಬಿಟ್ಟುಕೊಳ್ಳುವುದು ಹೆಚ್ಚು ಸುಧಾರಣವಾದಿ ಕ್ರಿಯೆಯಾಗುತ್ತಿತ್ತು ಎಂದು ಹಂಸಲೇಖ ಅಭಿಪ್ರಾಯ ಪಟ್ಟಿದ್ದಾರೆ. ಇದರಲ್ಲಿ ತಪ್ಪೇನಿದೆ? ವಾಸ್ತವದಲ್ಲಿ, ಪೇಜಾವರರು ದಲಿತಕೇರಿಗೆ ಬಂದಿದ್ದೇ ಪತಿತೋದ್ಧಾರದ ಬ್ರಾಹ್ಮಣೀಯ ಮೇಲರಿಮೆಯ ಪರಿಕಲ್ಪನೆಯಲ್ಲಿ. ಅವರ ಪ್ರಕಾರ ಮಾಂಸಾಹಾರ ಕೀಳಾದ ಅಭ್ಯಾಸ. ದಲಿತರಿಗೆ ವೈಷ್ಣವ ದೀಕ್ಷೆಯನ್ನು ಕೊಡಬೇಕೆಂದರೆ ಅವರು ಮಾಂಸಾಹಾರವನ್ನು ತ್ಯಜಿಸಬೇಕು. ಬ್ರಾಹ್ಮಣಯತಿಯಾದ ತಾವು ದಲಿತಕೇರಿಗೆ ಬರುವ ಮೂಲಕ ದಲಿತರಿಗೆ ಉಪಕಾರ ಮಾಡುತ್ತಿದ್ದೇನೆ ಎಂಬುದೇ ಅವರ ಧೋರಣೆಯಾಗಿತ್ತು.

ಮಾಂಸಾಹಾರ ಕೀಳು ಎಂದು ಪ್ರತಿಪಾದಿಸುವ ಮೂಲಕ ಪೇಜಾವರರು ಸಮಾಜದಲ್ಲಿರುವ ಬ್ರಾಹ್ಮಣ ಮೇಲು-ದಲಿತ ಕೀಳು ಎಂಬ ಜಾತಿಪದ್ಧತಿಗೆ ದಲಿತರ ಇಂತಹ ಅಭ್ಯಾಸಗಳೇ ಕಾರಣ ಎಂಬ ಅಮಾನುಷ ಬ್ರಾಹ್ಮಣ ಸಮರ್ಥನೆಯನ್ನು ಮುಂದಿಟ್ಟಿದ್ದರು. ಅರ್ಥಾತ್ ದಲಿತಕೇರಿಗೆ ಬಂದು ದಲಿತರನ್ನು ಪರೋಕ್ಷವಾಗಿ ಅಪಮಾನಿಸುವ ಹಾಗೂ ಜಾತಿ ವ್ಯವಸ್ಥೆಗೆ ಕಾರಣವಾದ ಬ್ರಾಹ್ಮಣ್ಯವನ್ನು ಸಮರ್ಥಿಸಿಕೊಳ್ಳುವ ಅಪ್ಪಟ ದಮನಕೋರ ಧೋರಣೆಯನ್ನು ಪೇಜಾವರರು ವ್ಯಕ್ತಪಡಿಸಿದ್ದರು. ಅವರು ದಲಿತಕೇರಿಗೆ ಬಂದದ್ದೇ ದಲಿತರ ಪುಣ್ಯ ಎಂದು ನಂಬಿಸ ಹೊರಟ ಬ್ರಾಹ್ಮಣ್ಯವಾದಿಗಳು ಈಗ ಹಂಸಲೇಖರನ್ನು ವಿಲನ್ ಮಾಡಿ ಬರ್ಬರವಾಗಿ ದಾಳಿ ಮಾಡುತ್ತಾ ತಮ್ಮ ಮೃಗೀಯ ಕ್ರೌರ್ಯವನ್ನು ಬೀದಿಬೀದಿಗಳಲ್ಲಿ ಪ್ರದರ್ಶಿಸುತ್ತಿದ್ದಾರೆ. ‘ನಾದಬ್ರಹ್ಮ’ ಎಂದು ನಾಡು ಗೌರವಿಸಿದ ತಮ್ಮ ಲೋಕದ ಕಲಾವಿದನಿಗೆ ಬ್ರಾಹ್ಮಣೀಯ ದುರುದ್ದೇಶದಿಂದ ಇಷ್ಟು ಅಪಮಾನ ಮಾಡುತ್ತಿದ್ದರೂ ಕನ್ನಡಚಿತ್ರರಂಗ, ಸಮಾಜ ಏಕೆ ಮೌನ? ಅಲ್ಲಲ್ಲಿ ದಲಿತ ಸಂಘಟನೆಗಳು ಪ್ರತಿಭಟಿಸಿವೆ ಹಾಗೂ ಪ್ರಜ್ಞಾವಂತ ಬುದ್ಧಿಜೀವಿಗಳು ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬೀದಿಗಿಂತ ಹೆಚ್ಚಿನ ಪ್ರತಿರೋಧ ವ್ಯಕ್ತವಾಗಿದೆ. ‘ಬಾಡೇಗಾಡು’ ಎಂಬ ಸಪ್ತಾಹದಂತಹ ಸುಲಭ ಪ್ರತಿರೋಧ ಪೇಸ್‌ಬುಕ್‌ನಲ್ಲಿ ಚಾಲ್ತಿಯಲ್ಲಿದೆ. ಆದರೆ ಅಲ್ಲಿಯೂ ಕೊರಬಾಡು ಮಿಸ್ಸಾಗಿದೆ. ಅದು ವರ್ತಮಾನದ ಪ್ರಗತಿಪರತೆ ಮಿಸ್ ಮಾಡಿಕೊಳ್ಳುತ್ತಿರುವ ಕೊರಬಾಡು ಕೂಡಾ ಆಗಿದೆಯೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)