varthabharthi


ಸಂಪಾದಕೀಯ

ತರಕಾರಿ ಬೆಲೆಯೇರಿಕೆ: ಸರಕಾರವೇ ಹೊಣೆ

ವಾರ್ತಾ ಭಾರತಿ : 25 Nov, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ರೈತರ ಹೋರಾಟಕ್ಕೆ ಮಣಿದು ಪ್ರಧಾನಿ ಮೋದಿಯವರು ಮಸೂದೆಯನ್ನು ಹಿಂದೆಗೆಯುವ ಭರವಸೆ ನೀಡಿದ ಬೆನ್ನಿಗೇ ತರಕಾರಿಗಳ ಬೆಲೆ ಗಗನಕ್ಕೇರಿದೆ. ಹೋರಾಟದಲ್ಲಿ ಮಡಿದ 700 ರೈತರ ಶಾಪವೋ, ಸರಕಾರದ ವೈಫಲ್ಯವೋ, ಬೃಹತ್ ದಾಸ್ತಾನುಗಾರರ ಒಳಸಂಚೋ ಒಟ್ಟಿನಲ್ಲಿ ಪೆಟ್ರೋಲ್‌ನಲ್ಲಿ ಇಳಿಸಿದ್ದು, ಟೊಮ್ಯಾಟೊದಲ್ಲಿ ಹೋಯಿತು ಎಂಬಂತಾಗಿದೆ. ಮೋದಿ ಭಕ್ತರು, ಇದು ಮಸೂದೆಯನ್ನು ಹಿಂದೆಗೆದ ಪರಿಣಾಮ ಎನ್ನುವ ತರ್ಕವಿಲ್ಲದ ವಾದವನ್ನು ಮಂಡಿಸುತ್ತಿದ್ದಾರೆ. ಅವರಿಗೆ ಟೊಮ್ಯಾಟೊ ಬೆಲೆ ಏರಿರುವುದಕ್ಕಿಂತ ಪ್ರಧಾನಿ ಮೋದಿಯವರ ವರ್ಚಸ್ಸು ಇಳಿದಿರುವ ಬಗ್ಗೆಯೇ ಯೋಚನೆಯಾಗಿದೆ. ಆದುದರಿಂದ, ಮೋದಿಯ ವರ್ಚಸ್ಸಿಗೂ ತರಕಾರಿ ಬೆಲೆಗೂ ತಳಕುಹಾಕುವ ಪ್ರಯತ್ನ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮಾಧ್ಯಮಗಳು, ಭಾರೀ ಮಳೆ ಹಾಗೂ ಪ್ರವಾಹಗಳೇ ತರಕಾರಿ ಬೆಲೆ ಹೆಚ್ಚುವುದಕ್ಕೆ ಕಾರಣ ಎಂದು ವ್ಯಾಖ್ಯಾನಿಸುತ್ತಿವೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ, ಪೆಟ್ರೋಲ್ ಬೆಲೆ ಹೆಚ್ಚಳ ಇವೆಲ್ಲ ನಮ್ಮ ದೈನಂದಿನ ಬದುಕಿನ ಮೇಲೆ ಬೀರುವ ಪರಿಣಾಮಗಳನ್ನು ಮರೆ ಮಾಡುವ ಪ್ರಯತ್ನ ನಡೆಯುತ್ತಿದೆ.

 ಲಾಕ್‌ಡೌನ್‌ನ ದುಷ್ಪರಿಣಾಮಗಳನ್ನು ದೇಶ ನಿಧಾನಕ್ಕೆ ತನ್ನದಾಗಿಸಿಕೊಳ್ಳುತ್ತಿದೆ. ನೋಟು ನಿಷೇಧ, ಲಾಕ್‌ಡೌನ್‌ನಿಂದಾಗಿ ದೇಶದ ಅರ್ಥವ್ಯವಸ್ಥೆ ಸಂಪೂರ್ಣ ಕುಸಿದಿದೆ. ಈ ಸಂದರ್ಭವನ್ನು ಕಾರ್ಪೊರೇಟ್ ಶಕ್ತಿಗಳು, ಆನ್‌ಲೈನ್ ವ್ಯಾಪಾರಿಗಳು ತನ್ನದಾಗಿಸಿಕೊಳ್ಳುತ್ತಿದ್ದಾರೆ. ಟೊಮ್ಯಾಟೊ ಕಿಲೋಗೆ 100 ರೂ. ತಲುಪಿದ್ದರೂ, ಈ ಹಣ ಬೆಳೆದ ರೈತರಿಗೆ ಸಿಗುತ್ತಿಲ್ಲ ಎನ್ನುವ ಅಂಶವನ್ನು ಗಮನಿಸಬೇಕು. ಕೆಲವು ರಾಜಕಾರಣಿಗಳು, ಬೆಲೆಯೇರಿಕೆಯಿಂದ ರೈತರ ಬದುಕು ಹಸನಾಗಿದೆ ಎಂಬಂತಹ ದಾಟಿಯಲ್ಲಿ ಮಾತನಾಡುತ್ತಿದ್ದಾರೆ. ಈಗಾಗಲೇ ರೈತರು ತಮ್ಮ ತರಕಾರಿಗಳನ್ನು ಮಧ್ಯವರ್ತಿಗಳಿಗೆ ಮಾರಿಯಾಗಿದೆ. ಹಾಗೆಯೇ ಹೊಸದಾಗಿ ಬೆಳೆದ ಬೆಳೆ ಮಳೆಯಿಂದ ಕೊಚ್ಚಿ ಹೋಗಿದೆ. ಈ ಸಂದರ್ಭವನ್ನು ಬೃಹತ್ ದಾಸ್ತಾನುದಾರರು ತಮಗೆ ಲಾಭವಾಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ. ರೈತರ ಬಳಿ ವಾತಾನುಕೂಲಿತ ದಾಸ್ತಾನು ಮಳಿಗೆಗಳಿದ್ದರೆ ಅವರು ಮಧ್ಯವರ್ತಿಗಳಿಗೆ ಕೇಳಿದ ದರಕ್ಕೆ ಮಾರಾಟ ಮಾಡುವ ಸಂದರ್ಭ ಬರುವುದಿಲ್ಲ. ಕನಿಷ್ಠ ಸರಕಾರವಾದರೂ ಬೆಂಬಲ ಬೆಲೆಯನ್ನು ನಿಗದಿಪಡಿಸಿ ತರಕಾರಿಗಳನ್ನು ದಾಸ್ತಾನು ಮಳಿಗೆಗಳಲ್ಲಿ ಶೇಖರಿಸುವ ವ್ಯವಸ್ಥೆ ಮಾಡಿದ್ದರೂ ಇಂದು ರೈತರಿಗೆ ಲಾಭವಾಗುತ್ತಿತ್ತು. ದುರದೃಷ್ಟಕ್ಕೆ ಆನ್‌ಲೈನ್ ಮೂಲಕ ವ್ಯಾಪಾರ ನಡೆಸುವ ಮತ್ತು ಬೃಹತ್ ಮಳಿಗೆಗಳ ಮೂಲಕ ಮಾರಾಟ ಮಾಡುವ ಕಾರ್ಪೊರೇಟ್ ಸಂಸ್ಥೆಗಳು ಇಂದು ಪರಿಸ್ಥಿತಿಯ ಲಾಭ ಪಡೆಯುತ್ತಿವೆ. ಸದ್ಯಕ್ಕೆ ಬೆಳೆದ ಬೆಳೆ ನಾಶವಾಗಿರುವುದರಿಂದ ಇರುವ ದಾಸ್ತಾನಿನ ದರವನ್ನು ಹೆಚ್ಚಿಸಿ, ರೈತರಿಂದ ಕೊಂಡು ಕೊಂಡದ್ದಕ್ಕಿಂತ ಹಲವು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿವೆ. ಪೆಟ್ರೋಲ್ ಬೆಲೆಯಲ್ಲಿ 50 ರೂಪಾಯಿ ಹೆಚ್ಚಿಸಿ, 5 ರೂಪಾಯಿ ಇಳಿಸುವುದರಿಂದ ಹಣದುಬ್ಬರವನ್ನು ತಡೆಯುವುದಕ್ಕೆ ಸಾಧ್ಯವಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆಯ ಏರಿಕೆಯೂ ತರಕಾರಿ ಬೆಲೆಯ ಇಂದಿನ ಸ್ಥಿತಿಯ ಮೇಲೆ ಪರಿಣಾಮವನ್ನು ಬೀರಿದೆ. ಲಾಕ್‌ಡೌನ್ ಬಳಿಕ ಎಲ್ಲ ಸರಕು ವಸ್ತುಗಳ ಬೆಲೆಯೂ ಸಾಕಷ್ಟು ಹೆಚ್ಚಾಗಿದೆ. ಸಾಗಾಟದ ವೆಚ್ಚ ದುಪ್ಪಟ್ಟಾಗಿರುವುದರಿಂದಲೇ ತರಕಾರಿ ಮತ್ತು ಇನ್ನಿತರ ಆಹಾರ ಪದಾರ್ಥಗಳ ಬೆಲೆಯೂ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ವಿಪರೀತವನ್ನು ತಲುಪುವ ಸಾಧ್ಯತೆಗಳಿವೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದಾಗ ಸರಕಾರ ಅದರ ಮೇಲೆ ಏಕಾಏಕಿ ಭಾರೀ ಸುಂಕವನ್ನು ವಿಧಿಸದೇ ಇದ್ದಿದ್ದರೆ ಇಂದು ಪರಿಸ್ಥಿತಿ ಹೀಗಿರುತ್ತಿರಲಿಲ್ಲ. ಒಟ್ಟಿನಲ್ಲಿ ರೈತರ ಹಿತಾಸಕ್ತಿಯನ್ನು ಸರಕಾರ ಸಂಪೂರ್ಣ ನಿರ್ಲಕ್ಷಿಸಿದ ಕಾರಣದಿಂದ, ಕಾಳಸಂತೆಕೋರರ ಮೂಗಿನ ನೇರಕ್ಕೆ ಆಡಳಿತ ನಡೆಯುತ್ತಿರುವುದರಿಂದಲೇ ಜನ ಬೆಲೆಯೇರಿಕೆಯಿಂದ ತತ್ತರಿಸುವಂತಾಗಿದೆ.

ಸಾಧಾರಣವಾಗಿ ಈ ಹಿಂದೆಲ್ಲ ಪೆಟ್ರೋಲ್ ಬೆಲೆಯೇರಿಕೆಯಾದಾಕ್ಷಣ ಅದರ ವಿರುದ್ಧ ಜನರು ಬೀದಿಗಿಳಿಯುತ್ತಿದ್ದರು. ದುರದೃಷ್ಟಕ್ಕೆ ಇಂದು, ಸರಕಾರವನ್ನು ಜನರೇ ಸಮರ್ಥಿಸುತ್ತಾ ಮೂರ್ಖರಾಗುತ್ತಿದ್ದಾರೆ. ದೇಶಕ್ಕಿಂತ, ದೇಶದ ಜನರಿಗಿಂತ ಮೋದಿಯ ವರ್ಚಸ್ಸು ಕೆಲವರಿಗೆ ಮುಖ್ಯವಾಗಿದೆ. ಸರಕಾರದ ಜೀತ ಮಾಡುತ್ತಿರುವ ಮಾಧ್ಯಮಗಳೂ ಇದಕ್ಕೆ ಕಾರಣ. ಸರಕಾರದ ವೈಫಲ್ಯಗಳನ್ನು ಮುಚ್ಚಿಟ್ಟು ಮೋದಿಯ ಸುಳ್ಳು ವರ್ಚಸ್ಸನ್ನು ಹರಡುವ ಮೂಲಕ ಅವರು ಜನಸಾಮಾನ್ಯರ ಬಾಯಿ ಮುಚ್ಚಿಸುತ್ತಿದ್ದಾರೆ. ಉಚಿತ ಲಸಿಕೆ ನೀಡುವುದಕ್ಕಾಗಿ ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಜನರೇ ವ್ಯವಸ್ಥೆಯನ್ನು ಸಮರ್ಥಿಸುವಾಗ ಸರಕಾರವಾದರೂ ಯಾಕೆ ಪೆಟ್ರೋಲ್ ಬೆಲೆಯನ್ನು ಇಳಿಸುತ್ತದೆ? ಮಂದಿರ, ಮಸೀದಿ, ಕಾಶ್ಮೀರ, ಸಿಎಎ ಮೊದಲಾದ ವಿಸ್ಮತಿಯಿಂದ ಹೊರ ಬಂದು, ಉದ್ಯೋಗ, ಪೆಟ್ರೋಲ್ ಬೆಲೆ ಇಳಿಕೆ, ತರಕಾರಿ ಬೆಲೆ ಇಳಿಕೆ ಮೊದಲಾದ ಬೇಡಿಕೆಗಳ ಕಡೆಗೆ ಜನರು ಗಮನ ನೀಡಿದಾಗ ಮಾತ್ರ ಹೆಚ್ಚುತ್ತಿರುವ ಬೆಲೆ ತನ್ನಷ್ಟಕ್ಕೆ ಇಳಿದೀತು. ಒಂದು ಕಾಲದಲ್ಲಿ ನೀರುಳ್ಳಿ ಬೆಲೆಯೇರಿಕೆ ಒಂದು ಸರಕಾರವನ್ನೇ ಉರುಳಿಸಿತ್ತು. ಆ ಭಯ ಸರಕಾರಕ್ಕಿದ್ದಾಗ ಮಾತ್ರ, ಬೆಲೆಯೇರಿಕೆಗೆ ಕಡಿವಾಣ ಹಾಕಬಹುದು.

ಈ ನಿಟ್ಟಿನಲ್ಲಿ ರೈತರ ಹೋರಾಟ ನಮಗೆ ಒಂದು ಪಾಠವಾಗಬೇಕು. ರೈತರು ತಮ್ಮ ಹಕ್ಕುಗಳಿಗೆ ಸರ್ವಶಕ್ತಿಯನ್ನು ಒಗ್ಗೂಡಿಸಿ ಸರಕಾರದ ವಿರುದ್ಧ ನಿರಂತರ ಹೋರಾಟ ನಡೆಸಿದರು. ಭೇದ ಹುಟ್ಟಿಸುವ, ಬೆದರಿಸುವ, ದಮನಿಸುವ ಸರಕಾರದ ಯಾವ ಹುನ್ನಾರಗಳಿಗೂ ಅವರು ಬಲಿಯಾಗದೆ ತಮ್ಮ ಮೂಲಭೂತ ಬೇಡಿಕೆಗಳಿಗಾಗಿ ಒಂದಾಗಿ ಬೀದಿಯಲ್ಲಿ ನಿಂತರು. ಸರಕಾರ ಹೆದರಿದ ಕಾರಣದಿಂದಲೇ ಮೂರು ಮಸೂದೆಗಳನ್ನು ಹಿಂದೆಗೆಯಿತು. ಇಂತಹದೇ ಪ್ರತಿಭಟನೆ ಬೆಲೆಯೇರಿಕೆಯ ವಿರುದ್ಧವೂ ಬರಬೇಕಾಗಿದೆ. ಮುಖ್ಯವಾಗಿ ತೈಲದ ಮೇಲಿನ ಸುಂಕ ರದ್ದತಿಗೆ ಜನಸಾಮಾನ್ಯರು, ರೈತರು ನಡೆಸಿದ ರೀತಿಯ ಬೃಹತ್ ಹೋರಾಟವನ್ನು ಸಂಘಟಿಸಿದರೆ ಖಂಡಿತವಾಗಿಯೂ ಸರಕಾರ ಬೆದರದೆ ಇರುವುದಿಲ್ಲ. ತೈಲ ಬೆಲೆ ಇಳಿಕೆ ರೈತರ, ವ್ಯಾಪಾರಿಗಳ, ಉದ್ಯಮಿಗಳ ಅಗತ್ಯವಾಗಿರುವುದರಿಂದ, ರೈತ ಹೋರಾಟಕ್ಕಿಂತಲೂ ಬೃಹತ್ ಚಳವಳಿಯನ್ನು ನಡೆಸುವುದಕ್ಕೆ ಅವಕಾಶವಿದೆ. ಯಾವಾಗ ಸರಕಾರ ಪೆಟ್ರೋಲ್ ಬೆಲೆಯನ್ನು ದೊಡ್ಡ ಮಟ್ಟದಲ್ಲಿ ಇಳಿಸುತ್ತದೆಯೋ ಆಗ, ದೇಶದಲ್ಲಿ ಬೆಲೆಯೇರಿಕೆಗಳಿಗೂ ಸಣ್ಣದೊಂದು ತಡೆ ಬೀಳಬಹುದು. ಇದೇ ಸಂದರ್ಭದಲ್ಲಿ, ಮಾಂಸಾಹಾರಕ್ಕೆ ಮುಕ್ತ ಅವಕಾಶವನ್ನು ನೀಡಿದರೆ, ಜನರು ಸಸ್ಯಾಹಾರವನ್ನು ಪೂರ್ಣ ಪ್ರಮಾಣದಲ್ಲಿ ಅವಲಂಬಿಸುವುದೂ ತಪ್ಪುತ್ತದೆ. ತರಕಾರಿಯ ಬೆಲೆ ಸ್ವಲ್ಪಮಟ್ಟಿಗಾದರೂ ಇಳಿಕೆಯಾಗಬಹುದು. ಆದುದರಿಂದ ಗೋಶಾಲೆಯಂತಹ ಅನಗತ್ಯ ಹೊರೆಯನ್ನು ಹೊತ್ತುಕೊಂಡು, ನಕಲಿ ಗೋರಕ್ಷಕರಿಗೆ ಸರಕಾರದ ದುಡ್ಡು ಸುರಿಯುವ ಬದಲು ಜಾನುವಾರುಗಳ ಮಾರಾಟದ ಹಕ್ಕನ್ನು ಸಂಪೂರ್ಣ ರೈತರಿಗೇ ನೀಡಬೇಕು. ಗೋಮಾಂಸ ಸೇವನೆಗೆ ಸರಕಾರವೇ ಪ್ರೋತ್ಸಾಹ ನೀಡುವ ಮೂಲಕ, ಜನರ ಆಹಾರ ವೈವಿಧ್ಯತೆಗಳನ್ನು ರಕ್ಷಿಸಿ ಬೆಲೆ ಇಳಿಕೆಗೆ ಕಾರಣವಾಗಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)