varthabharthi


ಅನುಗಾಲ

ವಿಷದರ್ಶನ

ವಾರ್ತಾ ಭಾರತಿ : 25 Nov, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಈ ಕಾನೂನುಗಳನ್ನು ಶಾಸನಾತ್ಮಕವಾಗಿ ವಾಪಸ್ ಪಡೆಯುವವರೆಗೂ ತಾವು ಚಳವಳಿಯನ್ನು ಮುಂದುವರಿಸುವುದಾಗಿ ರೈತರು ಹೇಳಿದ್ದಾರೆ. ಇದಕ್ಕೂ ಕಾರಣವಿದೆ. ಪ್ರಧಾನಿಯ ಮಾತುಗಳನ್ನು ಜನ ನಂಬುವುದು ಕಡಿಮೆಯಾಗಿದೆ. ತಾನು ಹೇಳಿದ್ದಕ್ಕೆ ವಿರೋಧವಾಗಿ ಚಲಿಸುವುದನ್ನು ಪ್ರಧಾನಿ ಒಂದು ಚಟವಾಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿರುವಾಗ ಯಾವುದನ್ನು ವಿರೋಧಿಸಿದ್ದರೋ ಅದನ್ನು ಚಾಚೂ ತಪ್ಪದೆ ಮುಂದುವರಿಸಿಕೊಂಡು ಬಂದದ್ದು ಮಾತ್ರವಲ್ಲ, ಅದಕ್ಕೂ ಮೀರಿದ ವೈಪರೀತ್ಯಗಳನ್ನು ಕಳೆದ 7 ವರ್ಷಗಳಲ್ಲಿ ಸೃಷ್ಟಿಸಲಾಗಿದೆ. ಆಹಾರ, ಉದ್ಯೋಗ, ಆರೋಗ್ಯ, ಶಿಕ್ಷಣ, ಮುಂತಾದ ಅಭಿವೃದ್ಧಿಪರ ಯೋಜನೆಗಳ ಬದಲು ಮತ-ಧರ್ಮ-ಜಾತಿ ಇವೇ ರಂಗಸ್ಥಳದ ಮುಖ್ಯ ವೇಷಗಳಾಗಿವೆ.


ಸಮುದ್ರಮಥನವೆಂಬ ಪೌರಾಣಿಕ ಕಥಾನಕದಲ್ಲಿ ವಿಷ ಹುಟ್ಟಿದಾಗ ಅದನ್ನು ಪರಶಿವ ತಾನೇ ಸೇವಿಸಿ ಕಂಠದಲ್ಲಿಟ್ಟುಕೊಂಡು ಜಗತ್ತನ್ನುಳಿಸಿದನೆಂಬ ಪ್ರಸಂಗವಿದೆ. ಆನಂತರ ಅಮೃತ ಉದಿಸಿತು. ಅದನ್ನು ದೇವತೆಗಳಿಗೆ ಮಾತ್ರ ಹಂಚಲು ಮಹಾವಿಷ್ಣು ಯೋಜಿಸಿದ. ಆಗ ರಾಹು-ಕೇತು ಎಂಬ ಇಬ್ಬರು ದಾನವರು ದೇವತೆಗಳ ಸಾಲಿನಲ್ಲಿ ಕುಳಿತು ಕೈಚಾಚಿದರು. ಅಮೃತವನ್ನು ಹಂಚುತ್ತಿದ್ದ ವಿಷ್ಣು ತನ್ನ ಸೌಟಿನಿಂದಲೇ ಅವರ ಕತ್ತನ್ನು ಕತ್ತರಿಸಿದ. ಅಲ್ಲಿಗೆ ಅವರಲ್ಲಿ ಒಬ್ಬ ರುಂಡನಾದರೆ ಇನ್ನೊಬ್ಬ ಮುಂಡನಾದ. ಇದು ಪ್ರಸಂಗ. ನಂಬಿದರೆ ನಂಬಿ; ಬಿಟ್ಟರೆ ಬಿಡಿ. ಆದರೆ ಇದೊಂದು ಒಳ್ಳೆಯ ರೂಪಕ. ಅಮೃತವನ್ನು ಹಂಚುವವನು ಕತ್ತು ಕತ್ತರಿಸಬಲ್ಲ. ಏಕೆಂದರೆ ಅಮೃತವು ಒಂದು ವರ್ಗಕ್ಕೆ ಮೀಸಲಾದದ್ದು. ಅದನ್ನು ಇತರರು ಪಡೆಯುವ ಹಕ್ಕಿಲ್ಲ. ವಿಷ್ಣುವೆಂಬ ಕಾಗೆ ತನ್ನ ಬಳಗವನ್ನು ಮಾತ್ರ ಕರೆಯಿತು. ದಾನವರನ್ನು ಕೇಡೆಂದು ಚಿತ್ರಿಸಲಾಗಿದೆ. ಆದರೆ ಅವರೂ ಅಮೃತಕ್ಕಾಗಿ ಹಾತೊರೆದರು. ಎಲ್ಲರೂ ಇರಲಿಕ್ಕಿಲ್ಲ; ರಾಹು-ಕೇತುವಿನಂತಹ ಕೆಲವರಾ ದರೂ ಕೇಳಿದರಲ್ಲ. ಅವರಿಗೆ ಅಮೃತವನ್ನುಣಿಸುವುದರ ಮೂಲಕ ದಾನವತ್ವವನ್ನು ಅಷ್ಟರ ಮಟ್ಟಿಗಾದರೂ ಕಡಿಮೆಮಾಡಬೇಕೆಂದು ಜಗತ್ಪಾಲಕ ವಿಷ್ಣುವಿಗೆ ಅನ್ನಿಸಲಿಲ್ಲ. ನಿಜಕ್ಕೂ ಆಗಬೇಕಿದ್ದದ್ದೆಂದರೆ ದಾನವರೂ ಸೇರಿದಂತೆ ಎಲ್ಲರಿಗೂ ಅಮೃತವನ್ನುಣಿಸಬೇಕಿತ್ತು. ಹೀಗೆ ಅಮೃತ ಕೆಲವರ ಪಾಲಾಗಿ ಶಾಶ್ವತವಾದ ವಿಭಜನೆ ನಡೆಯಿತು. ದಾನವತ್ವವನ್ನು ನಾಶಮಾಡುವ ಪ್ರಯತ್ನ ನಡೆಯಲೇ ಇಲ್ಲ. ಸಮುದ್ರಮಥನ ಮರುಕಳಿಸಿದರೆ ಹೇಗಿದ್ದೀತು? ಈಗ ಅಮೃತವಿಚಾರ ಮಥನವೇ ಇಲ್ಲದಾಗಿದೆ. ಅಮೃತಕ್ಕಾಗಿ ಹಾತೊರೆಯುವವರ ಸಂಖ್ಯೆ ಈಗ ಬಹು ಕಡಿಮೆ. ವಿಷಕಂಠರೇ ಎಲ್ಲ. ಈ ಬಾರಿ ವಿಷವನ್ನು ತನ್ನೊಳಗಿಟ್ಟುಕೊಂಡು ಜಗತ್ತನ್ನುಳಿಸುವವರಿಲ್ಲ. ಬದಲಾಗಿ ಅದನ್ನು ಮಾತು ಮತ್ತು ಉಗುಳಿನ ಮೂಲಕ ವಿಶಿಷ್ಟ ಮತ್ತು ಭಿನ್ನ ತರಂಗಾಂತರಗಳಲ್ಲಿ ಹಂಚುವವರೇ ಎಲ್ಲ. ಈಗ ಇಂತಹವರೇ ದಿಕ್ಪಾಲಕರು. ಎಲ್ಲ ಕಡೆ ಬಗೆಬಗೆಯ ಗಾತ್ರದ ಸೀಸೆಗಳಲ್ಲಿ ವರ್ಣರಂಜಿತ ವಿಷವನ್ನು ಹಂಚಲಾಗುತ್ತಿದೆ. ಅದಕ್ಕೆ ಜಾತಿ, ಮತ, ಧರ್ಮ, ವರ್ಗ ಹೀಗೆ ಹಲವು ಮಾದರಿ ಸೀಸೆಗಳಿವೆ.

ಕಳೆದ ಒಂದು ವರ್ಷದಷ್ಟು ಕಾಲ ಅವಿರತವಾಗಿ ಮತ್ತು ನಂಬಲೂ ಅಸಾಧ್ಯವಾದ ರೀತಿಯಲ್ಲಿ ಉತ್ತರ ಭಾರತದ ರೈತರು (ದಕ್ಷಿಣ ಭಾರತದ ರೈತರು ದೊಡ್ಡ ಪ್ರಮಾಣದಲ್ಲಿ ಈ ಚಳವಳಿಯಲ್ಲಿ ಭಾಗಿಯಾಗಲೇ ಇಲ್ಲ. ಯಾರಾದರೂ ಪ್ರಾತಿನಿಧಿಕವಾಗಿ ಭಾಗವಹಿಸಿದ್ದರೆ ಅವರಿಗೆ ಅಭಿನಂದನೆಗಳು.) ಒಕ್ಕೂಟ ಸರಕಾರ ಅನುಮೋದಿಸಿದ ಮತ್ತು ಜಾರಿಗೆ ತರಲು ಉದ್ದೇಶಿಸಿದ್ದ ಮೂರು ಕೃಷಿ ಕಾನೂನುಗಳ ವಿರುದ್ಧ ಸತ್ಯಾಗ್ರಹ ಮತ್ತು ಪ್ರತಿಭಟನೆ ನಡೆಸಿದರು. ಇದು ಅಹಿಂಸಾತ್ಮಕವಾಗಿಯೇ ನಡೆಯಿತು. ಆಡಳಿತ ವ್ಯವಸ್ಥೆಯು ಇದನ್ನು ಹಿಂಸಾತ್ಮಕವಾಗಿಸಲು ನಡೆಸಿದ ಎಲ್ಲ ಪ್ರಯತ್ನಗಳೂ ವಿಫಲವಾದವು. ಸರ್ವೋಚ್ಚ ನ್ಯಾಯಾಲಯವು ಈ ಕಾನೂನುಗಳ ಜಾರಿಗೆ ತಡೆಯಾಜ್ಞೆ ನೀಡಿತು. ಒಕ್ಕೂಟ ಸರಕಾರವು ನೇರವಾಗಿ ಮತ್ತು ಪರೋಕ್ಷನೀತಿಯಿಂದ ರೈತರು ರಸ್ತೆ ತಡೆ ಮಾಡುತ್ತಾರೆಂಬ, ಗಣರಾಜ್ಯೋತ್ಸವದಂದು ಕೆಂಪುಕೋಟೆಯ ಮೇಲೆ ಹಾರಿಸಿದ್ದ ರಾಷ್ಟ್ರಧ್ವಜವನ್ನು ಕಿತ್ತೊಗೆದರೆಂಬ, ಸಾವಿರ ಸುಳ್ಳುಗಳ ಮೂಲಕ ರೈತರನ್ನು ಖಳನಾಯಕರೆಂದು, ಭಯೋತ್ಪಾದಕರೆಂದು, ಖಲಿಸ್ತಾನಿಗಳೆಂದು, ಆಂದೋಲನ ಜೀವಿಗಳೆಂದು ಬಿಂಬಿಸಲು ಯತ್ನಿಸಿತು. ತನ್ನ ಎಲ್ಲ ಪ್ರತಿನಿಧಿಗಳ, ಕಾರ್ಯಕರ್ತರ ಮತ್ತು ಅಧಿಕಾರವರ್ಗದ ಮೂಲಕ ದೇಶಾದ್ಯಂತ ಈ ಕಾನೂನುಗಳು ಹೇಗೆ ಫಲಪ್ರದ, ಸುಖಪ್ರದವೆಂದು ಪ್ರಚಾರ ಮಾಡಿತು. ಹೀಗೆ ಪ್ರಚಾರ ಮಾಡುವುದು ಸರಕಾರಕ್ಕೆ ಹೊಸದೇನಲ್ಲ; ಕಷ್ಟವೂ ಅಲ್ಲ. ಗೋಬೆಲ್ ತನ್ನ ಪುನರ್ಜನ್ಮವನ್ನು ಭಾರತದಲ್ಲೇ ತಾಳಿದ್ದಾನೆಂಬಂತೆ ಈ ಪ್ರಚಾರ ನಡೆಯುತ್ತ ಬಂದಿದೆ. ಆಹಾರ ಪದಾರ್ಥದಿಂದ ತೈಲದವರೆಗೆ ಬೆಲೆಯೇರಿಕೆಯಾದರೆ ಅದಕ್ಕೂ ಸಬೂಬು; ಮತ್ತು ಅದು ಜನಹಿತಕ್ಕಾಗಿ, ಕಲ್ಯಾಣಕ್ಕಾಗಿ ಅನಿವಾರ್ಯವೆಂಬಂತೆ ನಂಬಿಸುವುದಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚವಾದರೂ ಭಾರತೀಯ ಕುರಿಮಂದೆ ಅದಕ್ಕೆ ಗೋಣಾಡಿಸುತ್ತ ಬರುತ್ತಿದೆ. ಇವೆಲ್ಲವೂ ತಮ್ಮ ಆರೋಗ್ಯಕ್ಕೆ ಎಂದು ನಂಬುತ್ತಿದೆ. ಇದಕ್ಕೆ ಅಪವಾದವಾದದ್ದು ಉತ್ತರ ಭಾರತದ ರೈತರ ವರ್ಷ-ಕಾಲದ ಚಳವಳಿ. ಅದರಲ್ಲೂ ಪಂಜಾಬಿನ ಸಿಖ್ಖರ ದೃಢನಿರ್ಧಾರ; ಇದಕ್ಕೆ ಇಂಬು ನೀಡಿದ ಉತ್ತರ ಪ್ರದೇಶ, ಹರ್ಯಾಣ, ಉತ್ತರಾಖಂಡ, ರಾಜಸ್ಥಾನ ಮುಂತಾದ ರಾಜ್ಯಗಳ ಮೇಟಿವೀರರು. ಒಕ್ಕೂಟ ಸರಕಾರವು ಇದನ್ನು ಹೇಗೇಗೋ ಚಿತ್ರಿಸಲು, ವಿವಿಧ ರಾಜಕೀಯ ಪಕ್ಷಗಳು ಈ ಚಳವಳಿಯ ಬಿಸಿಯಲ್ಲಿ ಚಳಿಕಾಯಿಸಲು ಪ್ರಯತ್ನಿಸಿದರೂ, ಈ ಚಳವಳಿ ರಾಜಕೀಯವಾಗಲೇ ಇಲ್ಲ. ಇದರಲ್ಲೇ ಅಡಗಿತ್ತು ಈ ಚಳವಳಿಯ ಸಂಕಲ್ಪ ಮತ್ತು ಯಶಸ್ಸು.

2021ರ ನವೆಂಬರ್ 25ಕ್ಕೆ ಈ ಚಳವಳಿಯ ಮೊದಲನೇ ವಾರ್ಷಿಕೋತ್ಸವ. ಇದನ್ನು ಬಗ್ಗುಬಡಿಯಲು ತನ್ನೆಲ್ಲ ಸಾಮರ್ಥ್ಯವನ್ನೂ ವ್ಯಯಿಸಿಯೂ ಅಶಕ್ತವಾದ ಒಕ್ಕೂಟ ಸರಕಾರವು ಕೊನೆಗೂ (!) ತನ್ನ ಪ್ರಧಾನಿಯ ಮೂಲಕ ಕ್ಷಮೆಯಾಚಿಸಿ ಈ ಕಾನೂನುಗಳನ್ನು ಹಿಂದಕ್ಕೆ ಪಡೆಯುವುದಾಗಿ ಘೋಷಿಸಿ ರೈತರು ಮನೆಗೆ ಮರಳಬೇಕೆಂದು ಯಾಚಿಸಿತು. ಪ್ರಧಾನಿಯ ಮಾತುಗಳನ್ನು ನಂಬುವುದಾದರೆ ಬರಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ಕಾನೂನುಗಳು ರದ್ದಾಗುತ್ತವೆ. ಈ ಹಠಾತ್ ನಿರ್ಧಾರ ಆಳುವ ಪಕ್ಷದ ಬೆಂಬಲಿಗರಿಗೆ, ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ಇದರ ಹಿಂದೆ ಇದ್ದದ್ದು ಪ್ರಧಾನಿಯೊಬ್ಬರದೇ ಅಥವಾ ಆಳುವ ಪಕ್ಷವೂ ಸೇರಿದಂತೆ ಸಂಘ ಪರಿವಾರದ ನಿರ್ಧಾರವೇ ಎಂಬುದು ಇನ್ನೂ ಬೆಳಕಿಗೆ ಬರಬೇಕಿದೆ. ಆದರೆ ಸ್ಥೂಲವಾಗಿ ನೋಡಿದರೆ ಕೆಲವೇ ತಿಂಗಳುಗಳಲ್ಲಿ ಎದುರಾಗುವ ಪಂಚರಾಜ್ಯಗಳ ಚುನಾವಣೆಯೇ ಈ ಸರ್ಜಿಕಲ್ ಸ್ಟ್ರೈಕ್‌ಗೆ ಕಾರಣವೆಂದು ಅನ್ನಿಸುತ್ತದೆ. ಇದು ಹೌದಾದರೆ ಈ ಕಾನೂನುಗಳ ವಾಪಸಾತಿ ದುರುದ್ದೇಶದ್ದೆಂಬುದು ಸ್ಪಷ್ಟ. ಪ್ರಾಯಃ ಇದರ ವಾಸನೆ ಚಳವಳಿ ನಿರತ ರೈತರಿಗೂ ಬಂದಿರಬೇಕು. ಈ ನಿರ್ಧಾರದ ಹಿಂದೆ ಬಹುದೊಡ್ಡ ಅಧಿಕಾರ ರಾಜಕೀಯ ಕೆಲಸ ಮಾಡಿದೆಯಾದರೆ ಆಳುವವರು ತಮ್ಮ ಈ ಕಾನೂನುಗಳ ಮೂಲಕ ಪ್ರತಿಪಕ್ಷಗಳು ಲಾಭ ಪಡೆಯಬಾರದೆಂಬ ಕಾರಣಕ್ಕೆ ಇವನ್ನು ವಾಪಸು ಪಡೆದಿರಬಹುದು. ಅಂದರೆ ಅಧಿಕಾರ ರಾಜಕೀಯ (ಟಡಿಛ್ಟಿ ಟ್ಝಜಿಠಿಜ್ಚಿ) ದಲ್ಲಿ ಜನಹಿತವಿರುವುದೇ ಇಲ್ಲ; ಇದ್ದರೂ ಅವು ಅಪರೂಪಕ್ಕೊಮ್ಮೊಮ್ಮೆ ಅನುಷಂಗಿಕ; ಆಕಸ್ಮಿಕ.

ಈ ಕಾನೂನುಗಳನ್ನು ಶಾಸನಾತ್ಮಕವಾಗಿ ವಾಪಸ್ ಪಡೆಯುವವರೆಗೂ ತಾವು ಚಳವಳಿಯನ್ನು ಮುಂದುವರಿಸುವುದಾಗಿ ರೈತರು ಹೇಳಿದ್ದಾರೆ. ಇದಕ್ಕೂ ಕಾರಣವಿದೆ. ಪ್ರಧಾನಿಯ ಮಾತುಗಳನ್ನು ಜನ ನಂಬುವುದು ಕಡಿಮೆಯಾಗಿದೆ. ತಾನು ಹೇಳಿದ್ದಕ್ಕೆ ವಿರೋಧವಾಗಿ ಚಲಿಸುವುದನ್ನು ಪ್ರಧಾನಿ ಒಂದು ಚಟವಾಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿರುವಾಗ ಯಾವುದನ್ನು ವಿರೋಧಿಸಿದ್ದರೋ ಅದನ್ನು ಚಾಚೂ ತಪ್ಪದೆ ಮುಂದುವರಿಸಿಕೊಂಡು ಬಂದದ್ದು ಮಾತ್ರವಲ್ಲ, ಅದಕ್ಕೂ ಮೀರಿದ ವೈಪರೀತ್ಯಗಳನ್ನು ಕಳೆದ 7 ವರ್ಷಗಳಲ್ಲಿ ಸೃಷ್ಟಿಸಲಾಗಿದೆ. ಆಹಾರ, ಉದ್ಯೋಗ, ಆರೋಗ್ಯ, ಶಿಕ್ಷಣ, ಮುಂತಾದ ಅಭಿವೃದ್ಧಿಪರ ಯೋಜನೆಗಳ ಬದಲು ಮತ-ಧರ್ಮ-ಜಾತಿ ಇವೇ ರಂಗಸ್ಥಳದ ಮುಖ್ಯ ವೇಷಗಳಾಗಿವೆ. ವಿಶೇಷ ತಮಾಷೆಯೆಂದರೆ ಈ ಕಾನೂನುಗಳು ಹಿಂದಕ್ಕೆ ಪಡೆಯುವ ಮೊದಲೇ ಅನೇಕ ರಾಜಕಾರಣಿಗಳು ಇದು ಅಂತಿಮ ಗೆಲುವೆಂದು ಘೋಷಿಸತೊಡಗಿದ್ದಾರೆ. ಮನೆಯೊಳಗೆ ಸೇರಿಕೊಂಡ ಹಾವು ಹೊರಗೆ ಹೋಯಿತೆಂದು ಯಾರಾದರೂ ಹೇಳಿದರೆ ಅದಕ್ಕೆ ಪ್ರತ್ಯಕ್ಷ ಪ್ರಮಾಣ ಸಿಗುವವರೆಗೂ ನಂಬಬಾರದು. ಇದಕ್ಕೆ ಪೂರಕವೆಂಬಂತೆ ಆಡಳಿತವನ್ನು ಬೆಂಬಲಿಸುವ ಸಾಕಷ್ಟು ಮಂದಿ ಹುಡಿಪುಡಿ, ಸಣ್ಣಪುಟ್ಟ ನಾಯಕರೂ ಈ ಕಾನೂನುಗಳನ್ನು ಮತ್ತೆ ತರುವುದಾಗಿ ಅಶ್ವಾಸನೆ/ಬೆದರಿಕೆ ನೀಡುತ್ತಿದ್ದಾರೆ. ಅವರು ಈ ವಾಪಸಾತಿ ಒಂದು ತಂತ್ರವೆಂಬುದನ್ನು ವಿಶ್ವಸನೀಯವಾಗಿ ಹೇಳತೊಡಗಿದ್ದಾರೆ. ಇದು ಇರಲಾರದು; ಅಥವಾ ಇರಬಹುದು. ಏಕೆಂದರೆ ಹೀಗೆ ಹೇಳಿ ಮುಂದುವರಿದರೆ ಜನರಿಗೆ ಈ ಚಳವಳಿಯ ಕುರಿತಾಗಲೀ ಕಾನೂನುಗಳ ಕುರಿತಾಗಲೀ ಗಂಭೀರವಾದ ಚಿಂತನೆಯಿರಲಾರದು ಎಂಬುದೇ ಇವರ ತರ್ಕ.

ಇವನ್ನು ಜನ ಹೇಗೆ ಗ್ರಹಿಸುತ್ತಾರೆಂಬುದರಲ್ಲೇ ರೈತರ ಭವಿಷ್ಯ ಅಡಗಿದೆ. ಇಷ್ಟೊಂದು ಜನ ರೈತರು ರಾಜಕೀಯರಹಿತವಾಗಿ ಈ ಕಾನೂನನ್ನು ಗ್ರಹಿಸಿ ಚಳವಳಿ ನಡೆಸಿದರೂ ಅನೇಕರು ಇನ್ನೂ ಇವುಗಳ ದುಷ್ಪರಿಣಾಮವನ್ನು ಅಳೆಯಲು ಸಮರ್ಥರಾಗಿಲ್ಲ ಮಾತ್ರವಲ್ಲ, ಅಂತಹ ಪ್ರಯತ್ನವನ್ನೂ ಮಾಡಿಲ್ಲ. ಕೃಷಿಯೆಂಬ ರಾಜ್ಯಪಟ್ಟಿಯ ಕಾನೂನನ್ನು ಒಕ್ಕೂಟ ಸರಕಾರ ಜಾರಿಗೆ ತರುವುದು ಸಂವಿಧಾನವಿರೋಧಿಯೆಂದರೆ ಅದರಿಂದೇನಾಯಿತು ಎಂದು ಪ್ರಶ್ನಿಸುವ ವಿದ್ಯಾವಂತರೂ ಇದ್ದಾರೆ. ಇದೇ ರೀತಿಯ ಸಮಸ್ಯೆಯು ಸಹಕಾರ ತತ್ವಕ್ಕೂ ಇದೆ. ಅದೂ ರಾಜ್ಯ ಪಟ್ಟಿಯ ವಿಚಾರ. ಅದಕ್ಕೂ ಒಕ್ಕೂಟ ಸರಕಾರವು ತಲೆಹಾಕಿದೆ ಮಾತ್ರವಲ್ಲ, ಒಂದು ಇಲಾಖೆಯನ್ನೇ ಸೃಷ್ಟಿಸಿದೆ. ಸ್ವತಃ ಒಕ್ಕೂಟ ಸರಕಾರದ ಗೃಹಮಂತ್ರಿಗಳೇ ಆ ಇಲಾಖೆಯನ್ನು ಕೈಗೆತ್ತಿಕೊಂಡಿದ್ದಾರೆ ಅಂದರೆ ಅದರ ಗುರುತ್ವಾಕರ್ಷಣೆ ಎಷ್ಟಿರಬಹುದೆಂದು ಊಹಿಸಬಹುದು!

ಈಗ ಎರಡು ವಿಚಾರಗಳನ್ನು ಕಾಯಲಾಗುತ್ತಿದೆ: ಒಂದು, ಈ ಕಾನೂನುಗಳು ಯಾವಾಗ ವಾಪಸು ಪಡೆಯಲಾಗುತ್ತಿದೆಯೆಂಬುದು. ಹಳತನ್ನು ನೆನಪುಮಾಡಿಕೊಳ್ಳುವುದಾದರೆ ಈ ಕಾನೂನುಗಳು ಮೊದಲು ಪ್ರವೇಶಿಸಿದ್ದು ಸುಗ್ರೀವಾಜ್ಞೆಯ ಮೂಲಕ. ಆನಂತರ ಸಂಸತ್ತಿನ ಮೂಲಕ ಕಾನೂನಾದವು. ಈಗಲೂ ಒಕ್ಕೂಟ ಸರಕಾರಕ್ಕೆ ಮನಸ್ಸಿದ್ದರೆ ಈ ವಾಪಸಾತಿಯನ್ನೂ ಸುಗ್ರೀವಾಜ್ಞೆಯ ಮೂಲಕ ಜಾರಿಮಾಡಿ ಆನಂತರ ಸಂಸತ್ತಿನಲ್ಲಿ ಕಾನೂನುಗಳನ್ನು ರದ್ದುಮಾಡಬಹುದಿತ್ತು. ಪ್ರಾಯಃ ಈ ಮುಖಭಂಗದ ವ್ಯಾಪ್ತಿಯ, ಪರಿಣಾಮದ ಬಗ್ಗೆ ಒಕ್ಕೂಟ ಸರಕಾರಕ್ಕೆ ಸಂಶಯವಿರಬಹುದು. ಹೇಗೂ ಇರಲಿ, ಈ ಕಾಯ್ದೆಗಳು ವಾಪಸಾಗುವುದು ಮುಖ್ಯ. ಅದಕ್ಕಿಂತಲೂ ಮುಖ್ಯವೆಂದರೆ ಅವನ್ನು ಮತ್ತೆ ಯಾವ ಸ್ವರೂಪದಲ್ಲೂ ಜಾರಿಮಾಡುವುದಿಲ್ಲವೆಂದು ಸರಕಾರ ಪ್ರಮಾಣ ಮಾಡಬೇಕು. ಈ ಹಂತಕ್ಕೆ ಯಾವುದೇ ಸರಕಾರದ ವಿಶ್ವಾಸಾರ್ಹತೆ ತಲುಪಿದ್ದು ಸ್ವತಂತ್ರ ಭಾರತದಲ್ಲಿ ಇರಲಿಕ್ಕಿಲ್ಲ. ಎರಡು, ಈ ಕಾನೂನುಗಳನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಗಳ ಇತ್ಯರ್ಥ. ಯಾವುದೇ ಕಾನೂನು ವಾಪಸಾದ ತಕ್ಷಣ ಅದರ ವಿವಾದ ಮುಗಿಯಿತೆಂದಲ್ಲ. ಏಕೆಂದರೆ ಸರ್ವೋಚ್ಚ ನ್ಯಾಯಾಲಯವು ಈ ಕಾನೂನುಗಳ ಪರಿಶೀಲನೆಗೆ ಒಂದು ಸಮಿತಿಯನ್ನು ರಚಿಸಿತ್ತು. ಅದರ ವರದಿ ಇನ್ನೂ ಬಿಡುಗಡೆಯಾಗಿಲ್ಲ. ಈಗಾಗಲೇ ಅದರ ಸದಸ್ಯರೊಬ್ಬರು ಈ ಕಾನೂನುಗಳ ವಾಪಸಾತಿಯನ್ನು ರಾಜಕೀಯ ನಡೆಯೆಂದು ಟೀಕಿಸಿದ್ದಾರೆ. ತಾಂತ್ರಿಕ ವಿಚಾರಗಳಲ್ಲಿ ರಾಜಕೀಯ ಪ್ರವೇಶಿಸಬಾರದು ಎಂಬುದು ಅಲಿಖಿತ ನೀತಿಸಂಹಿತೆ. ಆದರೆ ಒಕ್ಕೂಟ ಸರಕಾರವು ರಾಜಕೀಯವಿಲ್ಲದೆ ದೇಶದ ಯಾವ ಹೆಜ್ಜೆಯೂ ಇಡಲಾಗದು ಎಂಬಂತೆ ವರ್ತಿಸಿದೆ. ತಜ್ಞರಿಗೆ ಯಾವ ಬೆಲೆಯೂ ಇಲ್ಲದಂತೆ ನಡೆದುಕೊಳ್ಳುತ್ತಿದೆ. ಇಂದು ಯಾರೇ ಆದರೂ ಪ್ರಸ್ತುತವಾಗಬೇಕಾದರೆ ಮೋದಿ ನಡೆಯನ್ನು ಬೆಂಬಲಿಸಬೇಕಾದ ಅನಿವಾರ್ಯತೆಯಿದೆ. ಇದರಿಂದಾಗಿ ಎಲ್ಲವನ್ನೂ 56 ಇಂಚಿಗೆ ಹೊಂದಿಸಬೇಕಾಗಿದೆ. ವಿದ್ಯಾವಂತರೂ ವಿವೇಕಿಗಳೂ ಅವಕಾಶವಾದಿಗಳಾಗುತ್ತಿದ್ದಾರೆ. ಇನ್ನು ಕೆಲವರು-ಬಿಸಿಲು ಬಂದಾಗೆಲ್ಲ ಚಳಿಕಾಯಿಸಿಕೊಳ್ಳುವವರು- ಮುಕ್ತಕಂಠದಿಂದ ವಿಷವನ್ನು ಹಂಚುತ್ತಿದ್ದಾರೆ. ಇವರಿಗೆ ಸಮಯ-ಸಂದರ್ಭವಿರುವುದಿಲ್ಲ. ಅವಕಾಶವೇ ಪ್ರಸ್ತುತ. ಕಂಗನಾ ರಣಾವತ್ ಎಂಬ ಬಾಲಿವುಡ್ ನಟಿ ಸಂದರ್ಭಕ್ಕೆ ಸರಿಯಾಗಿ ಈ ಕಾನೂನು ವಾಪಸಾತಿಯನ್ನು ಖಂಡಿಸಿದಳು. ಚಳವಳಿನಿರತ ರೈತರನ್ನು ಭಯೋತ್ಪಾದಕರೆಂದು, ಖಲಿಸ್ತಾನಿಗಳೆಂದು ಹಳಿದವಳೂ ಇವಳೇ. ಇಂತಹ ಹಳಿತಪ್ಪಿದಂತಿರುವ ಮಾತುಗಳೂ ಒಂದು ತಂತ್ರವೇ ಇರಬಹುದು. ಅಧಿಕಾರವನ್ನು ಬೆಂಬಲಿಸುವ ಮಂದಿಗೆ ಇಂತಹ ಮಾತುಗಳು ಸ್ಥೈರ್ಯ ನೀಡಬಹುದು. ಇದನ್ನು ಮನರಂಜನೆಯೆಂದು ಹಗುರವಾಗಿ ಕಂಡವರೇ ಇದರ ದುಷ್ಪರಿಣಾಮವನ್ನು ಎದುರಿಸುತ್ತಿದ್ದಾರೆ!

ಸಾಮಾಜಿಕ ಹಿತ, ಸಮಾಜ ಹಿತ ಸಾಧಿಸಬೇಕಾದರೆ ಎಲ್ಲರಿಗೂ ಅಮೃತ ಹಂಚಬೇಕು. ವಿಷವನ್ನು ಹಂಚಿದರೆ ಅದು ಯಾರನ್ನೂ ಉಳಿಸಲಾಗದು. ನಮ್ಮಲ್ಲಿ ಈ ವಿಷಜೀವಿಗಳು ಬಹಳಷ್ಟಿದ್ದಾರೆ. ದೇಶದ ವಾಯುಮಾಲಿನ್ಯದ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದ ನಡೆಯುತ್ತಿದ್ದಾಗ ನ್ಯಾಯಮೂರ್ತಿಗಳು ದೃಶ್ಯಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳೇ ಎಲ್ಲಕ್ಕಿಂತ ಹೆಚ್ಚು ಮಾಲಿನ್ಯವನ್ನು ಸೃಷ್ಟಿಸುತ್ತವೆಯೆಂದು ಹೇಳಿದರು. ಈ ಮಾಲಿನ್ಯ ಹೆಚ್ಚು ಅಪಾಯಕಾರಿ. ಇದು ವಾತಾವರಣ ಮಾಲಿನ್ಯದ ಕೇಡನ್ನು ಹಂಚುತ್ತದೆ ಮತ್ತು ಹರಡುತ್ತದೆ. ವಿವೇಕರಹಿತ ಸಮುದ್ರಮಥನದ ಅಪಾಯವನ್ನು ಜನರು ಅರ್ಥಮಾಡಿಕೊಂಡರೆ ರೈತರು ಮಾತ್ರವಲ್ಲ ಎಲ್ಲರೂ ಇದ್ದದ್ದರಲ್ಲೇ ತೃಪ್ತಿಪಟ್ಟುಕೊಂಡಾದರೂ ಸುಖವಾಗಿ, ನೆಮ್ಮದಿಯಿಂದ ಇರಬಹುದು. ಇಲ್ಲವಾದರೆ ರಾಜಕೀಯದ ಕಾಳ್ಗಿಚ್ಚಿಗೆ ಬಲಿಯಾಗಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)