varthabharthi


ರಾಷ್ಟ್ರೀಯ

ಕಾರ್ಯಕ್ರಮದ ವೀಡಿಯೋ ಡಿಲೀಟ್ ಮಾಡಲು ಆದೇಶ

ತೀಸ್ತಾ ಅವರ ಶಾಹೀನ್ ಭಾಗ್ ಭೇಟಿ ಕುರಿತ 'ಟೈಮ್ಸ್ ನೌ' ಕಾರ್ಯಕ್ರಮಕ್ಕೆ 'ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಅಥಾರಿಟಿ' ತರಾಟೆ

ವಾರ್ತಾ ಭಾರತಿ : 25 Nov, 2021

ಹೊಸದಿಲ್ಲಿ: ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್  ಅವರು ಶಾಹೀನ್ ಭಾಗ್ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ಕುರಿತು 'ಟೈಮ್ಸ್ ನೌ' ವಾಹಿನಿ ಪ್ರಸಾರ ಮಾಡಿದ ಕಾರ್ಯಕ್ರಮವೊಂದು ವಸ್ತುನಿಷ್ಠವಾಗಿರಲಿಲ್ಲ ಹಾಗೂ ಪ್ರಸಾರ ಮಾನದಂಡಗಳು ಹಾಗೂ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಎಂಡ್ ಡಿಜಿಟಲ್ ಸ್ಟಾಂಡರ್ಡ್ಸ್ ಅಥಾರಿಟಿಯ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಪ್ರಾಧಿಕಾರ ತನ್ನ ಇತ್ತೀಚಿನ ಆದೇಶದಲ್ಲಿ ಹೇಳಿದೆ. ಈ ನಿರ್ದಿಷ್ಟ ಕಾರ್ಯಕ್ರಮದ ವೀಡಿಯೋವನ್ನು ವಾಹಿನಿಯಿಂದ ಹಾಗೂ ಯುಟ್ಯೂಬ್ ಮತ್ತಿತರೆಡೆಗಳಿಂದ ತೆಗೆಯಬೇಕೆಂದು ಹಾಗೂ ಕೈಗೊಂಡ ಕ್ರಮ ಕುರಿತು ಪ್ರಾಧಿಕಾರಕ್ಕೆ ಏಳು ದಿನಗಳೊಳಗೆ ಸೂಚಿಸಬೇಕೆಂದು ಆದೇಶಿಸಲಾಗಿದೆ ಎಂದು livelaw.in ವರದಿ ಮಾಡಿದೆ.

'ಟೈಮ್ಸ್ ನೌ' ವಾಹಿನಿಯು ಫೆಬ್ರವರಿ 19, 2020ರಂದು ಪ್ರಸಾರ ಮಾಡಿದ ಕಾರ್ಯಕ್ರಮ 'ತೀಸ್ತಾ ಸೆಟಲ್ವಾಡ್  ಕೋಚಸ್ ಶಾಹೀನ್ ಭಾಗ್ ಪ್ರೊಟೆಸ್ಟ್' ವಿರುದ್ಧ ಸಿಟಿಜನ್ಸ್ ಫಾರ್ ಜಸ್ಟಿಸ್ ಎಂಡ್ ಪೀಸ್ ಎಂಬ ಎನ್‌ಜಿಒ ದೂರು ಸಲ್ಲಿಸಿತ್ತು. ತೀಸ್ತಾ ಅವರು ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಯಾವುದೇ ಮಾತುಗಳನ್ನಾಡದೇ ಇದ್ದರೂ ಮೋದಿಗಾಗಿ ಹೊಂಚುಹಾಕುವವರು (Modi Baiter) ಎಂದು ಅವರನ್ನು ಬಣ್ಣಿಸಲಾಗಿತ್ತು.

ತೀಸ್ತಾ ಅವರು ಆಕ್ಷೇಪಾರ್ಹ ಯಾವುದೇ ಹೇಳಿಕೆ ನೀಡಿರದೇ 'Modi Baiter' ಎಂದು ದಪ್ಪಕ್ಷರಗಳನ್ನು ಶೀರ್ಷಿಕೆ ನೀಡುವುದು ಸರಿಯಲ್ಲ ಇದು ಆಕೆಯ ಭಾಷಣವನ್ನು ವಸ್ತುನಿಷ್ಠವಾಗಿ ನಿಷ್ಪಕ್ಷಪಾತವಾಗಿ ವರದಿ ಮಾಡಿಲ್ಲ ಹಾಗೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ಪ್ರಾಧಿಕಾರದ ಆಧ್ಯಕ್ಷ ಎ ಕೆ ಸಿಕ್ರಿ ತಮ್ಮ ನವೆಂಬರ್ 13ರ ಆದೇಶದಲ್ಲಿ ಹೇಳಿದ್ದಾರೆ.

ಇಂತಹ ಕಾರ್ಯಕ್ರಮ, ಚರ್ಚೆಗಳನ್ನು ಭವಿಷ್ಯದಲ್ಲಿ ನಡೆಸದಂತೆ ನೋಡಿಕೊಳ್ಳಬೇಕು ಎಂದೂ ಆದೇಶದಲ್ಲಿ ಹೇಳಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)