varthabharthi


ರಾಷ್ಟ್ರೀಯ

ಜೇವರ್: ಭಾರತದ ಅತ್ಯಂತ ದೊಡ್ಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿಯಿಂದ ಶಿಲಾನ್ಯಾಸ

ವಾರ್ತಾ ಭಾರತಿ : 25 Nov, 2021

ಹೊಸದಿಲ್ಲಿ,ನ.25: ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಉತ್ತರ ಪ್ರದೇಶದ ಗೌತಮ ಬುದ್ಧ ನಗರದ ಜೇವರ್‌ನಲ್ಲಿ ನೊಯ್ಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಶಿಲಾನ್ಯಾಸವನ್ನು ನೆರವೇರಿಸಿದರು. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಣೆಗೆ ಕೆಲವೇ ವಾರಗಳ ಮುನ್ನ ಚಾಲನೆ ನೀಡಲಾಗಿರುವ ಈ ಬಹುನಿರೀಕ್ಷಿತ ಯೋಜನೆಯನ್ನು ದೇಶದಲ್ಲಿಯ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಒಂದೆಂದು ಬಿಂಬಿಸಲಾಗಿದ್ದು,ಒಂದು ಲಕ್ಷಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಹೇಳಲಾಗಿದೆ.

 ಜೇವರ್ ಈಗ ಅಂತರರಾಷ್ಟ್ರೀಯ ಭೂಪಟದಲ್ಲಿ ಕಾಣಿಸಿಕೊಳ್ಳಲಿದೆ. ವಿಮಾನ ನಿಲ್ದಾಣವು ಸಮೃದ್ಧಿಯನ್ನು ತರಲಿದೆ ಮತ್ತು ಸ್ಥಳೀಯರ ಬದುಕುಗಳನ್ನು ಬದಲಿಸಲಿದೆ ಎಂದು ಹೇಳಿದ ಮೋದಿ,ಉತ್ತಮ ರಸ್ತೆಗಳು,ಉತ್ತಮ ರೈಲ್ವೆ ಜಾಲ,ಉತ್ತಮ ವಿಮಾನ ನಿಲ್ದಾಣ ಇವೆಲ್ಲ ಕೇವಲ ಮೂಲಸೌಕರ್ಯ ಯೋಜನೆಗಳಲ್ಲ,ಅವು ಇಡೀ ಪ್ರದೇಶವನ್ನು,ಜನರ ಬದುಕುಗಳನ್ನು ಸಂಪೂರ್ಣವಾಗಿ ಬದಲಿಸುತ್ತವೆ ಎಂದರು.

 ನೂತನ ವಿಮಾನ ನಿಲ್ದಾಣವು ಉತ್ತರ ಭಾರತದ ‘ಲಾಜಿಸ್ಟಿಕ್ಸ್ ಗೇಟ್‌ವೇ ’ಆಗಲಿದೆ ಎಂದ ಅವರು,ರಾಜ್ಯದಲ್ಲಿ ಹತ್ತನೇ ವಿಮಾನ ನಿಲ್ದಾಣವಾಗಿರುವ ಇದು ನೊಯ್ಡಾ ಮತ್ತು ಪಶ್ಚಿಮ ಉತ್ತರ ಪ್ರದೇಶವನ್ನು ಜಾಗತಿಕ ಭೂಪಟದಲ್ಲಿ ದಾಖಲಿಸಲಿದೆ ಎಂದರು. ರೈತರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮೋದಿ,ನೊಯ್ಡ  ವಿಮಾನ ನಿಲ್ದಾಣವು ರೈತರು ತಾವು ಬೆಳೆದ ತರಕಾರಿಗಳು, ಹಣ್ಣುಹಂಪಲಗಳು ಮತ್ತು ಉತ್ಪನ್ನಗಳನ್ನು ನೇರವಾಗಿ ಇಡೀ ವಿಶ್ವಕ್ಕೆ ರಫ್ತು ಮಾಡಲು ನೆರವಾಗಲಿದೆ ಎಂದು ಹೇಳಿದರು.

ನೊಯ್ಡ ವಿಮಾನ ನಿಲ್ದಾಣವು ಉ.ಪ್ರದೇಶದ ಐದನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದ್ದು,ಅತ್ಯಂತ ಹೆಚ್ಚಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದ ಹೆಗ್ಗಳಿಕೆ ಈ ರಾಜ್ಯದ್ದಾಗಿದೆ.

ಕೇಂದ್ರ ಮತ್ತು ಉತ್ತರ ಪ್ರದೇಶದಲ್ಲಿಯ ಬಿಜೆಪಿ ಸರಕಾರಗಳ ಕುರಿತು ಮಾತನಾಡಿದ ಅವರು,ದೇಶಕ್ಕೆ ಸ್ವಾತಂತ್ರ ಲಭಿಸಿದ ಬಳಿಕ ಇದೇ ಮೊದಲ ಬಾರಿಗೆ ಈ ಡಬಲ್-ಇಂಜಿನ್ ಸರಕಾರವು ಉ.ಪ್ರದೇಶಕ್ಕೆ ಸಲ್ಲಬೇಕಾದ್ದನ್ನು ನೀಡುತ್ತಿದೆ. ಹಿಂದೆ ಕೆಟ್ಟ ರಸ್ತೆಗಳು,ಕಳಪೆ ಮೂಲಸೌಕರ್ಯ,ಮಾಫಿಯಾ ಇತ್ಯಾದಿಗಳಿಗಾಗಿ ಉ.ಪ್ರದೇಶವನ್ನು ಟೀಕಿಸಲಾಗುತ್ತಿತ್ತು. ಹಿಂದಿನ ಸರಕಾರಗಳು ಉ.ಪ್ರದೇಶವನ್ನು ಬಡತನದಲ್ಲಿಯೇ ಇಟ್ಟಿದ್ದವು. ಇಂದು ರಾಜ್ಯವು ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಗುರುತನ್ನು ಮೂಡಿಸುತ್ತಿದೆ ಎಂದು ಹೇಳಿದರು.

ಬಿಜೆಪಿ ಸರಕಾರವು ಯೋಜನೆಗಳು ಸಕಾಲದಲ್ಲಿ ಪೂರ್ಣಗೊಳ್ಳುವುದನ್ನು ಖಚಿತಪಡಿಸಿದೆ ಎಂದ ಮೋದಿ,‘ಹಿಂದೆಲ್ಲ ಯೋಜನೆಗಳು ಘೋಷಣೆಯಾಗುತ್ತಿದ್ದವು,ಅದರೆ ವಾಸ್ತವದಲ್ಲಿ ತಳಮಟ್ಟದಲ್ಲಿ ಏನೂ ಆಗುತ್ತಿರಲಿಲ್ಲ. ವೆಚ್ಚಗಳು ಹೆಚ್ಚುತ್ತಿದ್ದವು ಮತ್ತು ಆರೋಪ-ಪ್ರತ್ಯಾರೋಪಗಳ ಕೆಸರೆರಚಾಟಗಳು ನಡೆಯುತ್ತಿದ್ದವು. ಸಕಾಲದಲ್ಲಿ ಮೂಲಸೌಕರ್ಯ ಯೋಜನೆಗಳು ಪೂರ್ಣಗೊಳ್ಳುವುದನ್ನು ನಮ್ಮ ಸರಕಾರವು ಖಚಿತಪಡಿಸಿದೆ. ಇಲ್ಲದಿದ್ದರೆ ದಂಡಗಳನ್ನು ಪಾವತಿಸಬೇಕಾಗುತ್ತದೆ ’ ಎಂದರು.

ನೂತನ ವಿಮಾನ ನಿಲ್ದಾಣವು ದಿಲ್ಲಿ ರಾಜಧಾನಿ ಪ್ರದೇಶ (ಎನ್‌ಸಿಆರ್)ದಲ್ಲಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದ್ದು,ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ನೆರವಾಗಲಿದೆ. ಆಯಕಟ್ಟಿನ ಸ್ಥಳದಲ್ಲಿರುವ ಅದು ದಿಲ್ಲಿ, ನೊಯ್ಡ , ಘಾಝಿಯಾಬಾದ್,ಅಲಿಗಡ,ಆಗ್ರಾ,ಫರೀದಾಬಾದ್ ಸೇರಿದಂತೆ ಹಲವು ನಗರಗಳು ಮತ್ತು ನೆರೆಯ ಪ್ರದೇಶಗಳ ಜನರಿಗೆ ಸೇವೆಯನ್ನು ಒದಗಿಸಲಿದೆ.

ವಿಮಾನ ನಿಲ್ದಾಣದ ಮೊದಲ ಹಂತದ ಕಾಮಗಾರಿಗೆ 10,500 ಕೋ.ರೂ.ಗೂ ಹೆಚ್ಚಿನ ವೆಚ್ಚವಾಗಲಿದೆ. 1,300 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ತಲೆಯೆತ್ತಲಿರುವ ವಿಮಾನ ನಿಲ್ದಾಣದ ಮೊದಲ ಹಂತ ಪೂರ್ಣಗೊಂಡ ಬಳಿಕ ವಾರ್ಷಿಕ ಸುಮಾರು 1.2 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರಲಿದೆ ಮತ್ತು 2024ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಝುರಿಚ್ ಏರ್‌ಪೋರ್ಟ್ ಇಂಟರ್‌ನ್ಯಾಷನಲ್ ಎಜಿ ನೂತನ ವಿಮಾನ ನಿಲ್ದಾಣ ನಿರ್ಮಾಣದ ಹೊಣೆಯನ್ನು ವಹಿಸಿಕೊಂಡಿದ್ದು, ಮೊದಲ ಹಂತಕ್ಕಾಗಿ ಭೂ ಸ್ವಾಧೀನ ಮತ್ತು ಸಂತ್ರಸ್ತ ಕುಟುಂಬಗಳ ಪುನರ್ವಸತಿ ಪ್ರಕ್ರಿಯೆಗಳು ಪೂರ್ಣಗೊಂಡಿವೆ.

ವಿಮಾನ ನಿಲ್ದಾಣವು ಮೆಟ್ರೋ ಮತ್ತು ಹೈ-ಸ್ಪೀಡ್ ರೈಲ್ವೆ ನಿಲ್ದಾಣಗಳು,ಟ್ಯಾಕ್ಸಿ ಮತ್ತು ಬಸ್ ಸೇವೆಗಳು ಹಾಗೂ ಖಾಸಗಿ ಪಾರ್ಕಿಂಗ್ ಸೌಲಭ್ಯಗಳನ್ನು ಒಳಗೊಂಡಿರಲಿದೆ. ಇದು ರಸ್ತೆ,ರೈಲು ಮತ್ತು ಮೆಟ್ರೋಗಳ ಮೂಲಕ ವಿಮಾನ ನಿಲ್ದಾಣಕ್ಕೆ ಸುಗಮ ಸಂಪರ್ಕವನ್ನು ಕಲ್ಪಿಸಲಿದೆ.

►ವಿವಾದ

ಪ್ರಧಾನಿ ಭೇಟಿಗೆ ಮುನ್ನ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿರುವ ರೈತರ ಪ್ರತಿಭಟನೆಗಳಿಂದಾಗಿ ವಿಮಾನ ನಿಲ್ದಾಣವು ವಿವಾದದಲ್ಲಿ ಸಿಲುಕಿತ್ತು. ವಿಮಾನ ನಿಲ್ದಾಣದಿಂದ ಕೇವಲ 700 ಮೀ.ದೂರದಲ್ಲಿ ಟೆಂಟ್‌ಗಳನ್ನು ಹೂಡಿರುವ ಈ ರೈತರು ತಮಗೆ ಪರಿಹಾರವನ್ನು ಅಥವಾ ಪರ್ಯಾಯ ಮನೆಗಳನ್ನು ಒದಗಿಸಲಾಗಿಲ್ಲ ಎಂದು ಆರೋಪಿಸಿದ್ದಾರೆ. ಭೂ ಸ್ವಾಧೀನ ಪ್ರಕ್ರಿಯೆ ತರಾತುರಿಯಲ್ಲಿ ನಡೆದಿದ್ದನ್ನು ಸ್ಥಳೀಯ ಬಿಜೆಪಿ ಶಾಸಕರು ಒಪ್ಪಿಕೊಂಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)