varthabharthi


ಕರಾವಳಿ

ಜಗದೀಶ್ ಕಾರಂತ ವಿರುದ್ಧ ದ.ಕ. ಜಿಲ್ಲಾಧಿಕಾರಿ ನೀಡಿದ ದೂರು ವಾಪಸ್ ಪಡೆಯಲು ಹಿಂಜಾವೇ ಆಗ್ರಹ

ವಾರ್ತಾ ಭಾರತಿ : 25 Nov, 2021

ಮಂಗಳೂರು : ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ ವಿರುದ್ಧ ದ.ಕ. ಜಿಲ್ಲಾಧಿಕಾರಿಯು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ನೀಡಿದ ದೂರನ್ನು ವಾಪಸ್ ಪಡೆಯಬೇಕು ಎಂದು ಹಿಂಜಾವೇ ಆಗ್ರಹಿಸಿದೆ.

ಗುರುವಾರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹಿಂಜಾವೇ ಪ್ರಾಂತೀಯ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ 2007ರಿಂದ ಈವರೆಗೆ ಕಾರಿಂಜ ದೇವಸ್ಥಾನದ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಹಾಗಾಗಿ ನ.21ರಂದು ಕಾರಿಂಜ ರಥಬೀದಿಯಲ್ಲಿ ಹಿಂಜಾವೇ ಬಂಟ್ವಾಳ ತಾಲೂಕು ಸಮಿತಿಯ ವತಿಯಿಂದ ಜನಜಾಗೃತಿ ಜಾಥಾ ನಡೆಸಲಾಗಿತ್ತು. ದಿಕ್ಸೂಚಿ ಭಾಷಣಗೈದ ಜಗದೀಶ್ ಕಾರಂತ ವಿರುದ್ಧ ಇದೀಗ ದ.ಕ. ಜಿಲ್ಲಾಧಿಕಾರಿ ದೂರು ನೀಡಿದ್ದಾರೆ. ಅದನ್ನು ವಾಪಸ್ ಪಡೆಯಬೇಕು. ಇದು ನಮ್ಮ ಆಗ್ರಹವೇ ಹೊರತು ಬೇಡಿಕೆ ಅಥವಾ ಮನವಿ ಅಲ್ಲ ಎಂದರು.

ನಿಮ್ಮಿಂದ ತಪ್ಪಾಗಿದೆ, ಸರಿಪಡಿಸಿಕೊಳ್ಳಿ. ಹೀಗೆ ದೂರು ನೀಡಿ ಹಿಂದುತ್ವಕ್ಕಾಗಿ ಹೋರಾಟ ಮಾಡುವವರ ಧ್ವನಿ ಅಡಗಿಸುವೆವು ಎಂದು ನೀವು ಭಾವಿಸಬೇಡಿ. ಹಿಂದೂ ಸಮಾಜದ ಭಾವನೆಗಳ ಜೊತೆ ಚೆಲ್ಲಾಟಬೇಡ, ಹಿಂದೂ ಸಮಾಜವನ್ನು ಕೆರಳಿಸುವ ಪ್ರಯತ್ನವನ್ನೂ ಮಾಡಬೇಡಿ. ಇಂತಹ ನೂರಲ್ಲ, ಸಾವಿರಾರು ಕೇಸು ಎದುರಿಸಲು ಹಿಂದೂ ಸಮಾಜ ಸಿದ್ಧವಿದೆ ಎಂದು ರಾಧಾಕೃಷ್ಣ ಅಡ್ಯಂತಾಯ ಹೇಳಿದರು.

ಒಂದಲ್ಲ, ಸಾವಿರಾರು ಕೇಸು ಹಾಕಿದರೂ ಎದುರಿಸಲು ಸಿದ್ಧರಿದ್ದೇವೆ ಎನ್ನುವ ನೀವು ಜಿಲ್ಲಾಧಿಕಾರಿ ನೀಡಿದ ದೂರನ್ನು ವಾಪಸ್ ಪಡೆಯಲು ಆಗ್ರಹಿಸುವುದು ಯಾಕೆ ? ಎಂದು ಪತ್ರಕರ್ತರ ಪ್ರಶ್ನೆಗೆ ಮುಖಂಡರು ಸಮರ್ಪಕ ಉತ್ತರ ನೀಡಲಿಲ್ಲ.

ಸುದ್ದಿಗೋಷ್ಠಿಯಲ್ಲಿ ಹಿಂಜಾವೇ ಮುಖಂಡರಾದ ರತ್ನಾಕರ ಶೆಟ್ಟಿ, ಪ್ರಶಾಂತ್, ಯೋಗೀಶ್ ತುಂಬೆ, ಕಿಶೋರ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)