varthabharthi


ಸಂಪಾದಕೀಯ

ವೈದ್ಯರು ದೇವರ ಸ್ಥಾನದಿಂದ ಮನುಷ್ಯ ಸ್ಥಾನಕ್ಕೆ ಇಳಿಯಲಿ

ವಾರ್ತಾ ಭಾರತಿ : 26 Nov, 2021

‘ವೈದ್ಯೋ ನಾರಾಯಣ ಹರಿಃ’ ಎನ್ನುವ ಸಾಲನ್ನು ನಾವು ಎಷ್ಟೋ ಶತಮಾನಗಳಿಂದ ಪಠಿಸುತ್ತಾ ಬಂದಿದ್ದೇವೆ. ವೈದ್ಯರು ದೇವರಿಗೆ ಸಮಾನ ಎಂದು ಇದರ ಅರ್ಥ. ಭಾರತದಲ್ಲಿ ವೈದಿಕ ದೇವರುಗಳಿಗೆ ಎಲ್ಲರೂ ಸಮಾನರಲ್ಲ ಎನ್ನುವುದು ವಾಸ್ತವ. ಇಲ್ಲಿ ದೇವರೇ ಮೇಲ್‌ಜಾತಿಗೊಂದು ಸ್ಥಾನ, ಕೆಳಜಾತಿಗೊಂದು ಸ್ಥಾನವನ್ನು ನಿರ್ಧರಿಸಿದ್ದಾನೆ. ಆದುದರಿಂದ ಮೇಲಿನ ಶ್ಲೋಕ ಪರೋಕ್ಷವಾಗಿ, ಭಾರತದ ಆಸ್ಪತ್ರೆಗಳಲ್ಲಿ ಏನು ನಡೆಯುತ್ತಿದೆ ಎನ್ನುವುದಕ್ಕೆ ಕನ್ನಡಿ ಹಿಡಿಯುತ್ತದೆ. ಕಳೆದ ಕೊರೋನ ಕಾಲದಲ್ಲಿ ಆಸ್ಪತ್ರೆಗಳು ಬಡವರನ್ನು, ನಿರ್ದಿಷ್ಟ ಧರ್ಮದ ಜನರನ್ನು, ದಲಿತರನ್ನು ನಡೆಸಿಕೊಂಡ ರೀತಿ, ದೇವಸ್ಥಾನಗಳಂತೆ, ಆಸ್ಪತ್ರೆಗಳಲ್ಲಿ ಅಸ್ಪಶ್ಯತೆಯ ವಿರುದ್ಧ ಹೋರಾಟ ನಡೆಸಬೇಕಾದ ಅಗತ್ಯವನ್ನು ಹೇಳುತ್ತಿದೆ.

ಸರಕಾರೇತರ ಸಂಸ್ಥೆ ಒಕ್ಸ್‌ಫಾಮ್ ಮಂಗಳವಾರ ಬಿಡುಗಡೆಗೊಳಿಸಿದ ಸಮೀಕ್ಷಾ ವರದಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಅಸಹನೆ, ಅಸ್ಪಶ್ಯತೆಗಳ ಆತಂಕಕಾರಿ ಅಂಕಿಅಂಶಗಳನ್ನು ಹೊರ ಹಾಕಿದೆ. 2018ರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸಿದ್ಧಪಡಿಸಿದ ರೋಗಿಗಳ ಹಕ್ಕುಗಳ ಸನ್ನದನ್ನು ಎಷ್ಟರಮಟ್ಟಿಗೆ ಅನುಷ್ಠಾನಕ್ಕೆ ತರಲಾಗಿದೆ ಎನ್ನುವ ನಿಟ್ಟಿನಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿತ್ತು. ಎಲ್ಲ ಜಾತಿ ಧರ್ಮೀಯರ ರಕ್ತದ ಬಣ್ಣ ಒಂದೇ ಎನ್ನುವುದನ್ನು ಜನರಿಗೆ ತಿಳಿಸಬೇಕಾದ ವೈದ್ಯರೇ ಅಸ್ಪಶ್ಯತೆಯನ್ನು ಆಚರಿಸುತ್ತಿರುವುದು ಈ ಸಮೀಕ್ಷೆಯಲ್ಲಿ ಬಯಲಾಗಿದೆ. ‘‘ಕೆಲವು ಸಂದರ್ಭಗಳಲ್ಲಿ ವೈದ್ಯರು ಈಗಲೂ ದಲಿತ ವ್ಯಕ್ತಿಯ ಕೈಯನ್ನು ಹಿಡಿಯಲು ನಿರಾಕರಿಸುತ್ತಾರೆ’’ ಎಂದು ಸಮೀಕ್ಷಾ ತಂಡದ ನೇತೃತ್ವ ವಹಿಸಿದ್ದ ಆ್ಯಂಜೆಲಾ ತನೇಜಾ ಹೇಳಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 22ರಷ್ಟು ಪರಿಶಿಷ್ಟ ಪಂಗಡಗಳ ಜನರು, ಶೇ. 21ರಷ್ಟು ಪರಿಶಿಷ್ಟ ಜಾತಿಯ ಜನರು ಹಾಗೂ ಶೇ. 15ರಷ್ಟು ಹಿಂದುಳಿದ ವರ್ಗದ ಜನರು ಆಸ್ಪತ್ರೆಗಳಲ್ಲಿ ತಾವು ಅನುಭವಿಸಿರುವ ತಾರತಮ್ಯವನ್ನು ಬಹಿರಂಗಗೊಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಹೆಚ್ಚುತ್ತಿರುವ ಕೋಮುವಾದದ ಪರಿಣಾಮವಾಗಿ, ಶೇ. 33ರಷ್ಟು ಮುಸ್ಲಿಮರು ಕೂಡ ಆಸ್ಪತ್ರೆಗಳಲ್ಲಿ ತಾರತಮ್ಯವನ್ನು ಅನುಭವಿಸಿದ್ದಾರೆ. ತಮ್ಮ ಧರ್ಮದ ಕಾರಣಕ್ಕಾಗಿಯೇ ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ.

ವೈದ್ಯರ ವೃತ್ತಿಯನ್ನು ಸೇವೆ ಎಂದು ಕರೆಯಲಾಗುತ್ತದೆ. ಆದರೆ ಭಾರತದಲ್ಲಿ ಇದು ಸೇವೆಯ ರೂಪವನ್ನು ಕಳೆದುಕೊಂಡು ಹಲವು ದಶಕಗಳಾಗಿವೆ. ಇಲ್ಲಿ ಸೇವೆಯ ಮುಖವಾಡದಲ್ಲಿ ನಡೆಯುತ್ತಿರುವುದು ಉದ್ಯಮ. ಇಂದು ಆಸ್ಪತ್ರೆಗಳೆನ್ನುವುದು ಪಂಚತಾರ ಹೊಟೇಲ್‌ಗಳ ರೂಪ ಪಡೆದಿವೆ. ಹಣವಿಲ್ಲದೆ ಆಸ್ಪತ್ರೆಯ ಬಾಗಿಲು ತಟ್ಟುವಂತಿಲ್ಲ ಎನ್ನುವ ವಾತಾವರಣದ ಬಗ್ಗೆ ಬಹಳಷ್ಟು ಚರ್ಚೆ ನಡೆದಿದೆ. ಆದರೆ ಇದೇ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ವರ್ಗ ತಾರತಮ್ಯ ಮಾತ್ರವಲ್ಲ, ಜಾತಿ ಮತ್ತು ಧರ್ಮಗಳ ಹೆಸರಲ್ಲೂ ತಾರತಮ್ಯ ನಡೆಯುತ್ತಿದೆ ಎನ್ನುವ ಅಂಶವನ್ನು ಸಮೀಕ್ಷೆ ಹೇಳುತ್ತಿದೆ. ಜಾತಿ, ಧರ್ಮ ಮೊದಲಾದ ಭೇದ ಭಾವಗಳ ವಿರುದ್ಧ ಜಾಗೃತಿ ಮೂಡಿಸಿ, ಸೇವೆಗೆ ಧರ್ಮವಿಲ್ಲ ಎನ್ನುವುದನ್ನು ಬಂದ ರೋಗಿಗಳಿಗೆ ಮನವರಿಕೆ ಮಾಡಬೇಕಾದ ಆಸ್ಪತ್ರೆಗಳೇ ಜಾತಿ, ಭೇದಗಳನ್ನು ಅನುಸರಿಸುತ್ತವೆಯಾದರೆ, ಇನ್ನು ಜನ ಸಾಮಾನ್ಯರು ಯಾರಲ್ಲಿ ಭರವಸೆಯಿಡಬೇಕು? ‘ಹರ ಮುನಿದರೆ ಪರ ಕಾಯ್ವನೆ’ ಎಂಬಂತೆ, ವೈದ್ಯರೇ ಸ್ವತಃ ರೋಗಿಗಳಾದರೆ ಜನರಲ್ಲಿರುವ ತಾರತಮ್ಯ ರೋಗಗಳನ್ನು ಗುಣಪಡಿಸುವವರಾರು?

ಕಳೆದ ಕೊರೋನ ಕಾಲದಲ್ಲಿ ಕೊರೋನ ವೈರಸ್‌ಗಿಂತ ಹೆಚ್ಚು ಸುದ್ದಿಯಾಗಿದ್ದು ಕೋಮು ವೈರಸ್. ಒಂದು ರೋಗವನ್ನೇ ನಿರ್ದಿಷ್ಟ ಧರ್ಮದ ತಲೆಗೆ ಕಟ್ಟುವ ಪ್ರಯತ್ನ ಈ ಸಂದರ್ಭದಲ್ಲಿ ನಡೆಯಿತು. ಒಂದು ನಿರ್ದಿಷ್ಟ ಧರ್ಮದ ಕೊರೋನ ರೋಗಿಗಳನ್ನು ಆರಂಭದಲ್ಲಿ ಆಸ್ಪತ್ರೆಗಳು ಅತ್ಯಂತ ನಿಕೃಷ್ಟವಾಗಿ ಕಂಡವು. ಹಲವು ಆಸ್ಪತ್ರೆಗಳು ನಿರ್ದಿಷ್ಟ ಧರ್ಮದ, ಜಾತಿಯ ಜನರನ್ನು ಒಳ ಸೇರಿಸುವುದಕ್ಕೆ ಸಿದ್ಧವಿರಲಿಲ್ಲ. ಇಂದು ಕೊರೋನ ಕಡಿಮೆಯಾಗಿರಬಹುದು. ಆದರೆ ಜಾತಿ, ಧರ್ಮದ ಹೆಸರಲ್ಲಿ ದ್ವೇಷವನ್ನು ಬಿತ್ತುವ ವೈರಸ್ ಇನ್ನೂ ಅಸ್ತಿತ್ವದಲ್ಲಿದೆ. ವಿಪರ್ಯಾಸವೆಂದರೆ, ವೈದ್ಯಕೀಯ ವೃತ್ತಿಯನ್ನು ನಿರ್ವಹಿಸುತ್ತಲೇ ಸಾರ್ವಜನಿಕವಾಗಿ ಜಾತೀಯತೆಯನ್ನು, ಕೋಮುದ್ವೇಷಗಳನ್ನು ಸಮರ್ಥಿಸುವ ವೈದ್ಯರು ನಮ್ಮ ನಡುವಿದ್ದಾರೆ. ಆಸ್ಪತ್ರೆಗಳಲ್ಲಿ ಹರಡುತ್ತಿರುವ ಈ ವೈರಸ್ ಭಾರತದ ಆರೋಗ್ಯದ ಪಾಲಿಗೆ ಅತ್ಯಂತ ಆತಂಕಕಾರಿಯಾಗಿದೆ. ಈ ನಿಟ್ಟಿನಲ್ಲಿ ವೈದ್ಯರೊಳಗೆ ಈ ವೈರಸ್ ಪ್ರವೇಶಿಸದಂತೆ ನೋಡಿಕೊಳ್ಳುವ ಲಸಿಕೆಯನ್ನು ವೈದ್ಯಕೀಯ ಕಾಲೇಜುಗಳಲ್ಲಿ ಸಂಶೋಧಿಸಬೇಕಾಗಿದೆ.

 ಇದೇ ಸಂದರ್ಭದಲ್ಲಿ ಮಹಿಳೆಯರು ತಾವು ‘ಮಹಿಳೆ’ಯರಾದ ಕಾರಣಕ್ಕಾಗಿಯೇ ಆಸ್ಪತ್ರೆಗಳಲ್ಲಿ ಭೇದಗಳನ್ನು ಎದುರಿಸುತ್ತಿದ್ದಾರೆ. ಶೇ. 35ರಷ್ಟು ಮಹಿಳೆಯರನ್ನು ವೈದ್ಯಕೀಯ ತಪಾಸಣಾ ಕೊಠಡಿಯಲ್ಲಿ ಇನ್ನೋರ್ವ ಮಹಿಳೆಯ ಅನುಪಸ್ಥಿತಿಯಲ್ಲಿ ಪುರುಷ ವೈದ್ಯರು ತಪಾಸಣೆ ನಡೆಸುತ್ತಾರೆ ಎನ್ನುವುದನ್ನು ಸಮೀಕ್ಷೆ ಹೇಳುತ್ತದೆ. ಸರಕಾರಿ ಆಸ್ಪತ್ರೆಗಳಲ್ಲಿ ಮಹಿಳೆಯರು ಇದನ್ನು ಪ್ರತಿಭಟಿಸುವಂತಹ ಸ್ಥಿತಿಯಲ್ಲೂ ಇರುವುದಿಲ್ಲ. ಅನಿವಾರ್ಯ, ಅಸಹಾಯಕತೆಯಿಂದ ಅವರು ತೀವ್ರ ಮುಜುಗರವನ್ನು ಅನುಭವಿಸಬೇಕಾಗುತ್ತದೆ. ಇಂತಹ ವ್ಯವಸ್ಥೆಯಲ್ಲೇ ರೋಗಿಗಳ ಮೇಲೆ ವೈದ್ಯರು ಅಥವಾ ಪುರುಷ ಸಿಬ್ಬಂದಿಯಿಂದ ಅತ್ಯಾಚಾರಗಳು ಸಂಭವಿಸುವುದು. ಹೆರಿಗೆಯ ಸಂದರ್ಭದಲ್ಲಿ ಬಡ ವರ್ಗದ ಮಹಿಳೆಯರು ಸರಕಾರಿ ಆಸ್ಪತ್ರೆಗಳಲ್ಲಿ ಅನುಭವಿಸುವ ದೌರ್ಜನ್ಯಗಳನ್ನು ವೌನವಾಗಿ ಒಪ್ಪಿಕೊಳ್ಳುತ್ತಾರೆ. ಇವರಲ್ಲಿ ಹೆಚ್ಚಿನವರಿಗೆ, ಪುರುಷ ವೈದ್ಯರು ತಮ್ಮ ತಪಾಸಣೆ ನಡೆಸುವಾಗ ಕಡ್ಡಾಯವಾಗಿ ಇನ್ನೋರ್ವ ಮಹಿಳೆಯ ಉಪಸ್ಥಿತಿ ಇರಬೇಕಾಗುತ್ತದೆ ಎನ್ನುವ ನಿಯಮವೇ ಗೊತ್ತಿಲ್ಲ. ಒಂದು ವೇಳೆ ಆ ನಿಯಮವನ್ನು ವೈದ್ಯರಿಗೆ ನೆನಪಿಸಿದರೆ ಅವರು ಚಿಕಿತ್ಸೆಯಿಂದಲೇ ವಂಚಿತರಾಗಬೇಕಾಗುತ್ತದೆ. ಆದುದರಿಂದ ವೌನವಾಗಿ ಸಹಿಸುತ್ತಾರೆ. ಹೆರಿಗೆಯ ನೋವಿನಿಂದ ನರಳುವ ಮಹಿಳೆಗೆ ಅತ್ಯಂತ ಅವಾಚ್ಯವಾಗಿ ನಿಂದಿಸುವುದು, ಲೈಂಗಿಕ ದೌರ್ಜನ್ಯಗಳನ್ನು ನೀಡುವುದು ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಆದರೆ ಆ ಮಹಿಳೆಯರು ಅದನ್ನು ಹೊರಗೆಲ್ಲೂ ಬಹಿರಂಗ ಪಡಿಸದೆ ನುಂಗಿಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಬಡವರು ಆಸ್ಪತ್ರೆಗೆ ಹೋಗಿ ಅಲ್ಲೇ ಮೃತಪಟ್ಟರೆ, ಬಿಲ್ ತುಂಬದೆ ಶವವನ್ನೂ ಕೊಡದೆ ಸತಾಯಿಸುವ ಪ್ರಕರಣಗಳು ಬಹಳಷ್ಟು ನಡೆದಿವೆ. ಶೇ. 19ರಷ್ಟು ಮಂದಿ ಈ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

 ಬಡವರೆನ್ನುವ ಕಾರಣಕ್ಕಾಗಿ ಆಸ್ಪತ್ರೆಗಳು ನಡೆಸುವ ದೌರ್ಜನ್ಯಗಳನ್ನು ಪ್ರತ್ಯೇಕವಾಗಿ ವಿವರಿಸುವ, ಅದಕ್ಕಾಗಿ ಸಮೀಕ್ಷೆ ನಡೆಸುವ ಅಗತ್ಯವೂ ಇಲ್ಲ. ಅಲೋಪತಿ ಆಸ್ಪತ್ರೆಗಳಿರುವುದು ಬಡವರಿಗಲ್ಲ ಎನ್ನುವುದನ್ನು ಸರಕಾರವೇ ಘೋಷಿಸಿ, ಸೆಗಣಿ, ಮೂತ್ರಗಳನ್ನು ಅವರಿಗೆ ಪರ್ಯಾಯ ಔಷಧಿಯಾಗಿ ಬಳಸಲು ಸೂಚಿಸುತ್ತಿದೆ. ಮುಂದಿನ ದಿನಗಳಲ್ಲಿ ಬಡವರು ಕ್ಯಾನ್ಸರ್ ಬಂದರೆ ‘ಮೂತ್ರ, ಸೆಗಣಿ ಬಳಸಿ’ ಎಂದು ಸರಕಾರ ಸಲಹೆ ನೀಡಬಹುದು. ಜೊತೆಗೆ ಆಯುಷ್ ಹೆಸರಿನಲ್ಲಿ ಬಡವರ ಮೇಲೆ ಬಲವಂತವಾಗಿ ಆಯುರ್ವೇದ ಮತ್ತು ಹೋಮಿಯೋಪತಿಯನ್ನು ಹೇರುತ್ತಿದೆ. ಇಂದಿನ ದಿನಗಳಲ್ಲಿ ವೈದ್ಯರು ದೇವರಾಗುವುದು ಬೇಡ. ತಾವು ಮನುಷ್ಯರು ಎನ್ನುವ ಪ್ರಜ್ಞೆಯನ್ನಾದರೂ ಇಟ್ಟುಕೊಂಡರೆ ಇಂತಹ ಜಾತಿ, ಧರ್ಮ, ವರ್ಗ ತಾರತಮ್ಯ ಆಸ್ಪತ್ರೆಗಳಲ್ಲಿ ನಡೆಯಲಾರದು. ಈ ನಿಟ್ಟಿನಲ್ಲಿ ವೈದ್ಯರಿಗೆ ನೈತಿಕ ಪಾಠವನ್ನು ಕಲಿಸುವ ಅಗತ್ಯವನ್ನು ಒಕ್ಸ್‌ಫಾಮ್ ಸಮೀಕ್ಷಾ ವರದಿ ನಮಗೆ ಹೇಳುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)