ಪತ್ರಕರ್ತರು, ವಕೀಲರ ವಿರುದ್ಧ ಯುಎಪಿಎ ಪ್ರಕರಣ: ಮರುಪರಿಶೀಲಿಸುವಂತೆ ಸೂಚಿಸಿದ ತ್ರಿಪುರಾ ಸಿಎಂ
ತ್ರಿಪುರಾ ಸಿಎಂ ಬಿಪ್ಲಬ್ ಕುಮಾರ್ ದೇಬ್ (PTI)
ಅಗರ್ತಲಾ: ತ್ರಿಪುರಾದಲ್ಲಿ ಅಕ್ರಮ ಚಟುವಟಿಕೆಯ ನಿಯಂತ್ರಣ ಕಾಯಿದೆಯಡಿ ಇತ್ತೀಚೆಗೆ ವಕೀಲರು, ಪತ್ರಕರ್ತರು ಸಹಿತ 102 ಮಂದಿಯ ವಿರುದ್ಧ ದಾಖಲಿಸಿದ ಪ್ರಕರಣಗಳನ್ನು ಮರುಪರಿಶೀಲಿಸುವಂತೆ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರು ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದಾರೆ. ಕಳೆದ ತಿಂಗಳು ತ್ರಿಪುರಾದಲ್ಲಿ ಸಂಭವಿಸಿದ ಹಿಂಸಾಚಾರ ಕುರಿತಾದ ನಕಲಿ ವೀಡಿಯೋಗಳನ್ನು ಶೇರ್ ಮಾಡಿ ಶಾಂತಿಭಂಗಕ್ಕೆ ಪ್ರಯತ್ನಿಸಿದ್ದಾರೆಂಬ ಆರೋಪದ ಮೇಲೆ ಈ ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.
ಮುಖ್ಯಮಂತ್ರಿಯ ಸೂಚನೆಯ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ವಿ ಎಸ್ ಯಾದವ್ ಅವರು ಪ್ರಕರಣಗಳನ್ನು ಮರುಪರಿಶೀಲಿಸುವಂತೆ ಕ್ರೈಂ ಬ್ರ್ಯಾಂಚ್ನ ಹೆಚ್ಚುವರಿ ಮಹಾನಿರ್ದೇಶಖರಿಗೆ ಆದೇಶಿಸಿದ್ದಾರೆ.
ಮಾಧ್ಯಮವನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಆರೋಪಿಸಿ ತ್ರಿಪುರಾ ಸರಕಾರದ ವಿರುದ್ಧ ವಿವಿಧ ಪತ್ರಕರ್ತರ ಸಂಘಟನೆಗಳು ಹಾಗೂ ನಾಗರಿಕ ಸಂಘಟನೆಗಳು ಕಿಡಿಕಾರಿದ್ದವಲ್ಲದೆ ತಕ್ಷಣ ಪ್ರಕರಣಗಳನ್ನು ವಾಪಸ್ ಪಡೆಯಬೇಕೆಂದೂ ಆಗ್ರಹಿಸಿದ್ದವು.
ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಕೂಡ ಆಘಾತ ವ್ಯಕ್ತಪಡಿಸಿ ಹಿಂಸಾಚಾರದ ಬಗ್ಗೆ ಸೂಕ್ತ ತನಿಖೆ ನಡೆಸುವುದರೊಂದಿಗೆ ಪತ್ರಕರ್ತರನ್ನು ಶಿಕ್ಷಿಸದಂತೆ ಕೋರಿತ್ತು.
ಪ್ರಕರಣ ಎದುರಿಸುತ್ತಿರುವವರ ಪೈಕಿ ಪತ್ರಕರ್ತ ಶ್ಯಾಮ್ ಮೀರಾ ಸಿಂಗ್ ಹಾಗೂ ಸುಪ್ರೀಂ ಕೋರ್ಟ್ ವಕೀಲರುಗಳಾದ ಅನ್ಸಾರ್ ಇಂದೋರಿ ಹಾಗೂ ಮುಕೇಶ್ ಅವರ ವಿರುದ್ಧ ಮುಂದಿನ ಆದೇಶದ ತನಕ ಯಾವುದೇ ಬಲವಂತದ ಕ್ರಮಕೈಗೊಳ್ಳಬಾರದೆಂದು ಸುಪ್ರೀಂ ಕೋರ್ಟ್ ತನ್ನ ನವೆಂಬರ್ 17ರ ಆದೇಶದಲ್ಲಿ ತಿಳಿಸಿತ್ತು.