ರೈತರಿಗೆ ಸಹಾಯ ಮಾಡುವುದನ್ನು ನಿಲ್ಲಿಸುವಂತೆ ಎನ್ಆರ್ಐಗಳಿಗೆ ಸೂಚಿಸಲಾಗಿತ್ತೇ ಎಂಬ ಪ್ರಶ್ನೆಯನ್ನು ಕೈಬಿಟ್ಟ ಸರಕಾರ
ರಾಜ್ಯಸಭಾ ಅಧಿವೇಶನ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ರೈತರ ಹೋರಾಟವನ್ನು ಬೆಂಬಲಿಸುತ್ತಿದ್ದ ಎನ್ಆರ್ಐಗಳಿಗೆ ವಿಮಾನ ನಿಲ್ದಾಣಗಳಲ್ಲಿ ಕಿರುಕುಳ ನೀಡಲಾಗಿತ್ತೇ ಹಾಗೂ ಕೆಲವರನ್ನು ವಾಪಸ್ ಕಳುಹಿಸಲಾಗಿತ್ತೇ ಹಾಗೂ ರೈತರ ಹೋರಾಟಕ್ಕೆ ಸಹಾಯ ಮಾಡುವುದನ್ನು ನಿಲ್ಲಿಸುವಂತೆ ಕೋರಲಾಗಿತ್ತೇ, ಈ ಕುರಿತು ವಿವರ ನೀಡಿ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಕೆ ಸಿ ವೇಣುಗೋಪಾಲ್ ಅವರು ವಿದೇಶಾಂಗ ವ್ಯವಹಾರಗಳ ಸಚಿವರಿಗೆ ಕೇಳಿದ್ದ ಪ್ರಶ್ನೆ ಸ್ವೀಕೃತವಾಗಿ ಡಿಸೆಂಬರ್ 2ರಂದು ರಾಜ್ಯಸಭಾ ಅಧಿವೇಶನದಲ್ಲಿ ಅದಕ್ಕೆ ಉತ್ತರ ನೀಡಬೇಕಾಗಿದ್ದರೂ ಆ ದಿನದ ಪ್ರಶ್ನೆಗಳ ಅಂತಿಮ ಪಟ್ಟಿಯಿಂದ ವೇಣುಗೋಪಾಲ್ ಅವರ ಪ್ರಶ್ನೆಯನ್ನು ಕೈಬಿಡಲಾಗಿದೆ ಎಂದು indianexpress.com ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ವೇಣುಗೋಪಾಲ್, ಹಿಂದೆ ಯಾವುದಾದರೂ ಪ್ರಶ್ನೆಯನ್ನು ಕೈಬಿಟ್ಟಾಗ ಅದಕ್ಕೆ ಸ್ಪಷ್ಟ ಕಾರಣ ನೀಡಲಾಗುತ್ತಿತ್ತು. ಆದರೆ ಈ ಬಾರಿ ಮೌಖಿಕವಾಗಿ ಮಾತ್ರ ತಿಳಿಸಲಾಯಿತು. ಜಲಿಯನ್ವಾಲಾಬಾಗ್ ನವೀಕರಣವು ಅದರ ಪಾರಂಪರಿಕತೆಯನ್ನು ಕಡಿಮೆಗೊಳಿಸುತ್ತಿರುವ ಕುರಿತು ಇನ್ನೊಂದು ಪ್ರಶ್ನೆಯನ್ನೂ ಕೈಬಿಡಲಾಗಿದೆ ಎಂದು ಅವರು ಹೇಳಿದರು.
ಒಂದು ಪ್ರಶ್ನೆಯನ್ನು ಅಂತಿಮ ಪಟ್ಟಿಯಿಂದ ಕೈಬಿಡಲು ಹಲವು ಕಾರಣಗಳಿರಬಹುದು. ಒಂದು ಪ್ರಶ್ನೆ ಸ್ವೀಕಾರಾರ್ಹವಾಗಲು 22 ಷರತ್ತುಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಪೆಗಾಸಸ್ ಸ್ಪೈವೇರ್ ಕುರಿತಾದ ಒಂದು ಪ್ರಶ್ನೆಯನ್ನೂ ಸರಕಾರ ಅನುಮತಿಸಿರಲಿಲ್ಲ.