varthabharthi


ಸಂಪಾದಕೀಯ

ಸಂಸತ್ ಕಲಾಪ ಸುಗಮವಾಗಿ ನಡೆಯಲಿ

ವಾರ್ತಾ ಭಾರತಿ : 1 Dec, 2021

ಸಂಸತ್ತಿನ ಉಭಯ ಸದನಗಳ ಚಳಿಗಾಲದ ಅಧಿವೇಶನ ಸೋಮವಾರ ಆರಂಭವಾಗಿದೆ. ಕಲಾಪ ಆರಂಭವಾದ ಮೊದಲ ದಿನವೇ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ಚರ್ಚೆಯಿಲ್ಲದೆ ವಾಪಸ್ ತೆಗೆದುಕೊಳ್ಳಲಾಗಿದೆ. ಚರ್ಚೆಗೆ ಅವಕಾಶ ನೀಡದ ಸರಕಾರದ ವರ್ತನೆಯನ್ನು ಪ್ರತಿಭಟಿಸಿ ಪ್ರತಿಪಕ್ಷ ಸದಸ್ಯರು ಪಟ್ಟು ಹಿಡಿದ ಪರಿಣಾಮವಾಗಿ ರಾಜ್ಯಸಭೆಯ 12 ಪ್ರತಿಪಕ್ಷ ಸದಸ್ಯರನ್ನು ಚಳಿಗಾಲದ ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಲಾಗಿದೆ. ಅಮಾನತುಗೊಂಡವರಲ್ಲಿ ಕಾಂಗ್ರೆಸ್‌ನ ಆರು, ಶಿವಸೇನೆ ಮತ್ತು ಟಿಎಂಸಿಯ ತಲಾ ಇಬ್ಬರು ಹಾಗೂ ಸಿಪಿಐ ಮತ್ತು ಸಿಪಿಎಂನ ತಲಾ ಒಬ್ಬರು ಸೇರಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸಂಸತ್ತಿನ ಉಭಯ ಸದನಗಳ ಅಧಿವೇಶನ ಸಹಜವಾಗಿ ನಡೆಯುತ್ತಲೇ ಇಲ್ಲ. ಒಂದಿಲ್ಲೊಂದು ವಿವಾದ ಉಂಟಾಗಿ ಸದನದಲ್ಲಿ ಕೋಲಾಹಲ ನಡೆದು ಪದೇ ಪದೇ ಮುಂದೂಡುವುದು ಸಾಮಾನ್ಯವಾಗಿದೆ. ಈ ಅಪ್ರಿಯಕರ ವಿದ್ಯಮಾನಗಳಿಗೆ ಪ್ರತಿಪಕ್ಷಗಳಿಗಿಂತ ಆಡಳಿತ ಪಕ್ಷದ ಲೋಪವೇ ಎದ್ದು ಕಾಣುತ್ತದೆ. ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗಲೂ ಸದನದ ಕಲಾಪಗಳಿಗೆ ಪದೇ ಪದೇ ಅಡ್ಡಿಯುಂಟು ಮಾಡುತ್ತಿತ್ತು. ಈಗ ಆಡಳಿತ ಪಕ್ಷವಾಗಿದ್ದರೂ ಅದರ ನಕಾರಾತ್ಮಕ ವರ್ತನೆಯಲ್ಲಿ ಬದಲಾವಣೆಯಾಗಿಲ್ಲ. ಕೃಷಿಗೆ ಸಂಬಂಧಿಸಿದ ವಿಧೇಯಕಗಳನ್ನು ಅಂಗೀಕರಿಸುವಾಗಲೂ ಚರ್ಚೆ ನಡೆಯಲಿಲ್ಲ. ವಾಪಾಸ್ ಪಡೆಯುವಾಗಲೂ ಚರ್ಚೆಗೆ ಅವಕಾಶ ನೀಡಲಿಲ್ಲ. ಬಹುಮತದ ಲಾಭ ಪಡೆದು ಕೆಲವೇ ನಿಮಿಷಗಳಲ್ಲಿ ವಿಧೇಯಕ ಮಂಡಿಸಿ ಪಾಸು ಮಾಡಿಸಿಕೊಳ್ಳುವುದು ಮತ್ತು ಚರ್ಚೆಯಿಲ್ಲದೆ ವಾಪಸ್ ಪಡೆಯುವುದು ಸಂಸದೀಯ ಪ್ರಜಾಪ್ರಭುತ್ವದ ಸತ್ಪರಂಪರೆಗೆ ಅಪಚಾರ ಮಾಡಿದಂತೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಸಂಸತ್ ಕಲಾಪ ಸರಿಯಾಗಿ ನಡೆಯುತ್ತಲೇ ಇಲ್ಲ. ಕಳೆದ ವರ್ಷ ಕೋವಿಡ್ ಕಾರಣಕ್ಕಾಗಿ ಸಂಸತ್ ಅಧಿವೇಶನ ನಡೆಯಲಿಲ್ಲ. ಈ ವರ್ಷದ ಮುಂಗಡ ಪತ್ರದ ಅಧಿವೇಶನಕ್ಕೂ ಅದೇ ಗತಿಯಾಯಿತು. ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯುತ್ತವೆ. ಅಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತಾವು ಪಾಲ್ಗೊಳ್ಳಬೇಕೆಂದು ಕೆಲ ಸದಸ್ಯರು ಒತ್ತಾಯಿಸಿದ ಪರಿಣಾಮವಾಗಿ ಬಜೆಟ್ ಅಧಿವೇಶನವನ್ನು ಮೊಟಕುಗೊಳಿಸಲಾಯಿತು. ಪೆಗಾಸಸ್ ಮತ್ತು ರೈತರ ಹೋರಾಟದ ಕಾರಣಕ್ಕಾಗಿ ಮುಂಗಾರು ಅಧಿವೇಶನವೂ ಅವಧಿಗೆ ಮುನ್ನವೇ ಮುಂದೂಡಲ್ಪಟ್ಟಿತು. ಈ ಚಳಿಗಾಲದ ಸಂಸತ್ ಅಧಿವೇಶನಕ್ಕೂ ಅದೇ ಗತಿ ಬರುವುದೇನೋ ಎಂಬ ಸಂದೇಹ ಸಹಜವಾಗಿ ಮೂಡುತ್ತದೆ.

ಸಂಸತ್ತಿನ ಉಭಯ ಸದನಗಳ ಚಳಿಗಾಲದ ಅಧಿವೇಶನ ಮೂರು ವಾರಗಳ ಕಾಲ ಅಂದರೆ ಡಿಸೆಂಬರ್ 23ರ ವರೆಗೆ ನಡೆಯುವ ನಿರೀಕ್ಷೆಯಿದೆ. ವಿವಾದಾತ್ಮಕವಾದ ಕೃಷಿ ವಿಧೇಯಕಗಳ ರದ್ದತಿ ಸೇರಿದಂತೆ ಒಟ್ಟು 26 ವಿಧೇಯಕಗಳನ್ನು ಈ ಸಲದ ಅಧಿವೇಶನದ ಕಲಾಪ ಪಟ್ಟಿಯಲ್ಲಿ ಸೇರಿಸಲಾಗಿದೆ. ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಸಂದರ್ಭದಲ್ಲಿ ಚರ್ಚೆಯಾಗಬೇಕು. ರೈತರ ಫಸಲುಗಳಿಗೆ ಕನಿಷ್ಠ ಬೆಂಬಲ ಬೆಲೆಯ ವ್ಯವಸ್ಥೆಗೆ ಕಾನೂನಿನ ಸ್ವರೂಪ ನೀಡಬೇಕು ಎಂಬುದು ಮಾತ್ರವಲ್ಲ, ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಹರಿಸಿ ಕನಿಷ್ಠ ಆರು ಮಂದಿಯ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಗೃಹ ಸಹಾಯಕ ಸಚಿವ ಅಜಯ ಮಿಶ್ರಾ ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದ ಪರಿಣಾಮವಾಗಿ ಮತ್ತು ಇದಕ್ಕೆ ಸರಕಾರ ಸ್ಪಂದಿಸದಿರುವುದರಿಂದ ಸಂಸತ್ ಅಧಿವೇಶನದ ಮೊದಲ ದಿನವೇ ಕೋಲಾಹಲದ ವಾತಾವರಣ ಉಂಟಾಗಿದೆ.

ಇದಷ್ಟೇ ಅಲ್ಲ. ಬೆಲೆಏರಿಕೆ, ಹಣದುಬ್ಬರ, ಭಾರತದ ಭೂಪ್ರದೇಶದಲ್ಲಿ ಚೀನಾ ಆಕ್ರಮಣ, ಕಾಶ್ಮೀರ ಸಮಸ್ಯೆ, ರಫೇಲ್ ಹಗರಣ ಹೀಗೆ ಹಲವಾರು ವಿಷಯಗಳನ್ನು ಪ್ರಸ್ತಾವಿಸಿ ಮೋದಿ ಸರಕಾರವನ್ನು ತುದಿಗಾಲ ಮೇಲೆ ನಿಲ್ಲಿಸುವುದು ಪ್ರತಿಪಕ್ಷಗಳ ಕಾರ್ಯತಂತ್ರವಾಗಿತ್ತು. ಆದರೆ ತನ್ನ ಮುಖ ಉಳಿಸಿಕೊಳ್ಳಲು ಸರಕಾರ ಸಂಸತ್ ಕಲಾಪವನ್ನೇ ಬಲಿ ಕೊಡಲು ಮುಂದಾಗಿರುವುದು ವಿಷಾದದ ಸಂಗತಿಯಾಗಿದೆ.

ಸಂಸತ್ ಅಧಿವೇಶನ ಸುಗಮವಾಗಿ ನಡೆಯಬೇಕಾದರೆ ಸದನದಲ್ಲಿ ಪ್ರಸ್ತಾವವಾಗುವ ವಿಷಯ ಪಟ್ಟಿಯ ಬಗ್ಗೆ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಕಲಾಪಕ್ಕೆ ಮುನ್ನ ಚರ್ಚೆ ನಡೆದು ಒಮ್ಮತ ಮೂಡಬೇಕು. ಇದರ ಜೊತೆಗೆ ಮುಖ್ಯ ಪ್ರತಿಪಕ್ಷವಾದ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ನಡುವೆ ಪ್ರಸ್ತಾಪಿಸಲ್ಪಡುವ ವಿಷಯಗಳ ಬಗ್ಗೆ ಸಹಮತ ಏರ್ಪಡಬೇಕು. ಇದರಲ್ಲಿ ಲೋಕಸಭಾಧ್ಯಕ್ಷರ ಹಾಗೂ ರಾಜ್ಯಸಭೆಯ ಸಭಾಪತಿಗಳ ಪಾತ್ರ ಕೂಡ ಮುಖ್ಯವಾಗಿದೆ. ಜೊತೆಗೆ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸುಗಮವಾಗಿ ಕಲಾಪ ನಡೆಸುವ ಸಂಸದೀಯ ಸಂಪ್ರದಾಯವನ್ನು ಆಡಳಿತ ಪಕ್ಷ ಅನುಸರಿಸಬೇಕು. ಸಂಸತ್ತಿನ ಉಭಯ ಸದನಗಳ ಕಲಾಪಗಳನ್ನು ಮುಂಚೆ ದೇಶದ ಜನ ಪತ್ರಿಕೆಗಳಲ್ಲಿ ಓದುತ್ತಿದ್ದರು. ಆದರೆ ಈಗ ಟಿ.ವಿ.ಗಳಲ್ಲಿ ನೋಡುತ್ತಾರೆ. ಸದನದ ಸದಸ್ಯರಿಗೆ ಇದರ ಅರಿವಿರಬೇಕು.ಮತದಾರರು ಇವರನ್ನು ಚುನಾಯಿಸಿದ್ದು ಸದನದಲ್ಲಿ ಗಲಾಟೆ ಮಾಡಲು ಅಲ್ಲ ಎಂಬ ಅರಿವಿರಬೇಕು.ಅದೇ ರೀತಿ ಆಡಳಿತ ಪಕ್ಷ ಬಹುಮತವನ್ನು ಉಪಯೋಗಿಸಿಕೊಂಡು ಸದನದಲ್ಲಿ ಚರ್ಚೆ ಮಾಡದೆ ವಿಧೇಯಕಗಳನ್ನು ಪಾಸು ಮಾಡಿಕೊಳ್ಳಲು ಅಲ್ಲ ಎಂಬ ಪ್ರಜ್ಞೆ ಇರಬೇಕು. ಆದರೆ ವಿಷಾದದ ಸಂಗತಿಯೆಂದರೆ ಕಾಂಗ್ರೆಸ್ ಮುಕ್ತ ಭಾರತದ ಹೆಸರಿನಲ್ಲಿ ಪ್ರತಿಪಕ್ಷ ಮುಕ್ತ ಭಾರತ ಮತ್ತು ಪ್ರಜಾಪ್ರಭುತ್ವ ಮುಕ್ತ ರಾಷ್ಟ್ರವನ್ನು ಮಾಡಲು ಹೊರಟವರಿಗೆ ಇದರ ಅರಿವಿಲ್ಲ.

ರೈತ ಹೋರಾಟ ಸೇರಿದಂತೆ ಭಾರತದ ಜನತೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಧ್ವನಿಯೆತ್ತುವುದು ಪ್ರತಿಪಕ್ಷಗಳ ಸಹಜ ಕರ್ತವ್ಯ. ಇಂತಹ ಧ್ವನಿ ಬಂದಾಗ ಸರಕಾರದಲ್ಲಿದ್ದವರು ಕಿವುಡರಂತೆ ನಡೆದುಕೊಳ್ಳದೆ ಸಹಾನುಭೂತಿಯಿಂದ ಕೇಳಿಸಿಕೊಳ್ಳಬೇಕು. ವಿರೋಧ ಪಕ್ಷಗಳನ್ನು ವೈರಿಗಳಂತೆ ಕಾಣಬಾರದು. ಆಡಳಿತ ಮತ್ತು ಪ್ರತಿಪಕ್ಷಗಳು ಸೇರಿ ದೇಶವನ್ನು ಮುನ್ನಡೆಸಿಕೊಂಡು ಹೋಗಬೇಕು. ನಮ್ಮ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರೆತ ನಂತರ ಬಾಬಾಸಾಹೇಬರು ಸಂವಿಧಾನದ ಮೂಲಕ ಆರೋಗ್ಯಕರ ಜನತಂತ್ರಕ್ಕೆ ಭದ್ರ ಬುನಾದಿ ಹಾಕಿದರು. ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥ ಆಡಳಿತ ನೀಡಿ ಸಂಸದೀಯ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಿದರು. ಆದರೆ ಈಗ ಅಧಿಕಾರದಲ್ಲಿದ್ದವರ ಸಂವಿಧಾನ ಪ್ರೇಮ ನಾಟಕೀಯವಾದದ್ದು ಮತ್ತು ನೆಹರೂ ಹಾಕಿದ ಪರಂಪರೆಯ ಮಾರ್ಗವನ್ನು ಹಾಳು ಮಾಡುವುದು ಇವರ ಹುನ್ನಾರ ಎಂಬ ವಿರೋಧಿಗಳ ಟೀಕೆ ನಿಜವೆಂದು ಜನ ನಂಬುವಂತೆ ಆಡಳಿತ ಪಕ್ಷ ವರ್ತಿಸುತ್ತಿರುವದು ವಿಷಾದದ ಸಂಗತಿಯಾಗಿದೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಪ್ರತಿಪಕ್ಷಗಳ ಬಗ್ಗೆ ಅದರ ನಡೆ ಆರೋಗ್ಯಕರವಾಗಿಲ್ಲ. ಭಿನ್ನ ಧ್ವನಿಯನ್ನು ಹತ್ತಿಕ್ಕುವ ಅಂತರಾಳದ ಸರ್ವಾಧಿಕಾರಿ ಮನೋಭಾವನೆಯನ್ನು ಆಗಾಗ ತೋರಿಸುತ್ತಲೇ ಬಂದಿದೆ. ಬಹುತೇಕ ಸಂದರ್ಭಗಳಲ್ಲಿ ಸಂಸದೀಯ ನಿಯಮಾವಳಿಗಳನ್ನೇ ಗಾಳಿಗೆ ತೂರಿ ನಿರಂಕುಶವಾಗಿ ವರ್ತಿಸಿದೆ ಎಂಬ ಟೀಕೆಯಲ್ಲಿ ಹುರುಳಿಲ್ಲದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಪಕ್ಷಗಳನ್ನು ಶತ್ರುಗಳಂತೆ ಕಾಣದೆ ವಿಶ್ವಾಸಕ್ಕೆ ತೆಗೆದುಕೊಂಡು ಸದನದ ಕಲಾಪ ಸುಗಮವಾಗಿ ನಡೆಯುವಂತೆ ಮಾಡಬೇಕು. ಪ್ರತಿಪಕ್ಷಗಳೂ ಸಹಕಾರ ನೀಡಬೇಕು. ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ಸಂಸದೀಯ ಪ್ರಜಾಪ್ರಭುತ್ವದ ಸತ್ಪರಂಪರೆಗೆ ಚ್ಯುತಿಯಾಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)