varthabharthi


ಕಾಲಂ 9

ಎಂಎಸ್‌ಪಿ ಕಾಯ್ದೆಯಾಗದೆ ವಿದ್ಯುತ್ ಮಸೂದೆ ಹಿಂಪಡೆಯದೆ ರೈತ ವಿಜಯ ಅಪೂರ್ಣ!

ವಾರ್ತಾ ಭಾರತಿ : 1 Dec, 2021
ಶಿವಸುಂದರ್

ಈ ಮೂರೂ ಮಸೂದೆಗಳ ಜೊತೆಜೊತೆಗೆ ರೈತ ಹೋರಾಟವು ಮುಂದಿಟ್ಟ ಮತ್ತೆರೆಡು ಪ್ರಮುಖ ಆಗ್ರಹಗಳಾದ ಎಂಎಸ್‌ಪಿ ಕಾಯ್ದೆಕರಣ ಮತ್ತು ವಿದ್ಯುತ್ ಮಸೂದೆ ವಾಪಸಾತಿ ವಿಷಯದ ಬಗ್ಗೆಯೂ ಮೋದಿ ಸರಕಾರ ಮತ್ತವರ ಲಾಲಿ ಮಾಧ್ಯಮಗಳು ರೈತರನ್ನು ವಿಲನ್ ಮಾಡಹೊರಟಿವೆ. ಮೂರು ಕಾಯ್ದೆಗಳನ್ನು ಸರಕಾರ ವಾಪಸ್ ತೆಗೆದುಕೊಳ್ಳುತ್ತಿರುವುದರಿಂದ ರೈತರು ಮನೆಗೆ ಹೋಗಬೇಕೇ ವಿನಾ ಇನ್ಯಾವುದೇ ಬೇಡಿಕೆಗಳನ್ನು ಮುಂದಿಡಬಾರದೆಂಬ ರೈತ ವಿರೋಧಿ ಪ್ರಚಾರವನ್ನು ಮಾಧ್ಯಮಗಳು ಮಾಡುತ್ತಿದ್ದರೆ, ಮೋದಿ ಸರಕಾರ ಎಂಎಸ್‌ಪಿಯನ್ನು ಪಾರದರ್ಶಕಗೊಳಿಸುವ ಬಗ್ಗೆ ಒಂದು ಸಮಿತಿ ರಚಿಸುವ ತಂತ್ರ ಮಾಡಿ ರೈತರನ್ನು ದಾರಿತಪ್ಪಿಸಲು ಯತ್ನಿಸುತ್ತಿದೆ.


ಭಾಗ-1

ಭಾರತದ ರೈತರ ಅದರಲ್ಲೂ ಪಂಜಾಬಿನ ಸಿಖ್ ರೈತಾಪಿಯ ಹಾಗೂ ಉತ್ತರ ಭಾರತದ ರೈತಾಪಿಯ ಧೀರೋದ್ದಾತ ಹೋರಾಟಕ್ಕೆ ಮಣಿದು ಮೂರು ರೈತ ವಿರೋಧಿ-ದೇಶ ವಿರೋಧಿ-ಕಾರ್ಪೊರೇಟ್ ಪರ ನೀತಿಗಳನ್ನು ಮೋದಿ ಸರಕಾರ ವಾಪಸ್ ತೆಗೆದುಕೊಂಡು ದೊಡ್ಡ ರಾಜಕೀಯ ಮುಖಭಂಗ ಅನುಭವಿಸುತ್ತಿದೆ.

ಹೀಗಾಗಿಯೇ ಮೋದಿ ಸರಕಾರ ಮಸೂದೆ ವಾಪಸಾತಿಯ ಬಗ್ಗೆ ಯಾವುದೇ ಚರ್ಚೆಗೆ ಅವಕಾಶ ಕೊಡದ ಹೇಡಿತನವನ್ನು ಪ್ರದರ್ಶಿಸಿದೆ. ಮೋದಿಯ ಭಟ್ಟಂಗಿ ಪಡೆಗಳು ಕಾಯ್ದೆಯ ವಾಪಸಾತಿಗೆ ಇಲ್ಲದ ದೇಶ ಭದ್ರತೆಯ ಕಾರಣಗಳನ್ನು ಮುಂದೊಡ್ಡಿ ಮೋದಿಯನ್ನು ಮುತ್ಸದ್ಧಿಯನ್ನಾಗಿಯೂ ಗೆದ್ದ ರೈತರನ್ನು ದೇಶದ್ರೋಹಿಗಳನ್ನಾಗಿಯೂ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಮೋದಿ ಸರಕಾರ ಮಂಡಿಸಿರುವ ಕಾಯ್ದೆ ವಾಪಸಾತಿ ಮಸೂದೆಯಲ್ಲೂ ಇದೇ ದುರಹಂಕಾರವನ್ನು ಮೋದಿ ಸರಕಾರ ಪ್ರದರ್ಶಿಸಿದೆ. ರೈತ ವಿಜಯಕ್ಕೆ ನೈತಿಕ ಹಿರಿಮೆಯನ್ನು ನಿರಾಕರಿಸುತ್ತಾ, ತಾನು ಮಾಡಿದ ಕಾರ್ಪೊರೇಟ್ ಪಾತಕಕ್ಕೆ ವಿಫಲ ದೇಶರಕ್ಷಣೆಯ ಮುಖವಾಡತೊಟ್ಟು ರಾಜಕೀಯ ಗೆಲುವನ್ನಾಗಿಸುವ ಕುತಂತ್ರವನ್ನು ಮಾಡುತ್ತಿದೆ. ಇದರ ಜೊತೆಗೆ ಈ ಮೂರೂ ಮಸೂದೆಗಳ ಜೊತೆಜೊತೆಗೆ ರೈತ ಹೋರಾಟವು ಮುಂದಿಟ್ಟ ಮತ್ತೆರೆಡು ಪ್ರಮುಖ ಆಗ್ರಹಗಳಾದ ಎಂಎಸ್‌ಪಿ ಕಾಯ್ದೆಕರಣ ಮತ್ತು ವಿದ್ಯುತ್ ಮಸೂದೆ ವಾಪಸಾತಿ ವಿಷಯದ ಬಗ್ಗೆಯೂ ಮೋದಿ ಸರಕಾರ ಮತ್ತವರ ಲಾಲಿ ಮಾಧ್ಯಮಗಳು ರೈತರನ್ನು ವಿಲನ್ ಮಾಡಹೊರಟಿವೆ. ಮೂರು ಕಾಯ್ದೆಗಳನ್ನು ಸರಕಾರ ವಾಪಸ್ ತೆಗೆದುಕೊಳ್ಳುತ್ತಿರುವುದರಿಂದ ರೈತರು ಮನೆಗೆ ಹೋಗಬೇಕೇ ವಿನಾ ಇನ್ಯಾವುದೇ ಬೇಡಿಕೆಗಳನ್ನು ಮುಂದಿಡಬಾರದೆಂಬ ರೈತ ವಿರೋಧಿ ಪ್ರಚಾರವನ್ನು ಮಾಧ್ಯಮಗಳು ಮಾಡುತ್ತಿದ್ದರೆ, ಮೋದಿ ಸರಕಾರ ಎಂಎಸ್‌ಪಿಯನ್ನು ಪಾರದರ್ಶಕಗೊಳಿಸುವ ಬಗ್ಗೆ ಒಂದು ಸಮಿತಿ ರಚಿಸಿಸುವ ತಂತ್ರ ಮಾಡಿ ರೈತರನ್ನು ದಾರಿತಪ್ಪಿಸಲು ಯತ್ನಿಸುತ್ತಿದೆ.

ಮತ್ತೊಂದು ಕಡೆ 2020ರ ಡಿಸೆಂಬರ್‌ನಲ್ಲಿ ರೈತ ನಾಯಕರೊಂದಿಗೆ ನಡೆದ ಮಾತುಕತೆಯಲ್ಲಿ ವಿದ್ಯುತ್ ಮಸೂದೆಯನ್ನು ವಾಪಸ್ ತೆಗೆದುಕೊಳ್ಳಲು ಒಪ್ಪಿಕೊಂಡಿದ್ದರೂ ಅಧಿವೇಶನದಲ್ಲಿ ಅದನ್ನು ಮಂಡಿಸಲು ಮುಂದಾಗಿದೆ. ಆದ್ದರಿಂದಲೇ ರೈತ ಚಳವಳಿಗೆ ನಾಯಕತ್ವ ನೀಡುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ ಪ್ರಬುದ್ಧ ನಾಯಕತ್ವ, ಎಂಎಸ್‌ಪಿ ಕಾಯ್ದೆಯಾಗುವ ಆಗ್ರಹದ ಬಗ್ಗೆ ಪ್ರಧಾನಿ ಸಂಸತ್ತಿನಲ್ಲಿ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿ ಸ್ಪಷ್ಟವಾದ ಘೋಷಣೆ ಮಾಡಬೇಕೆಂದು ಆಗ್ರಹಿಸಿದೆ. ಹಾಗೆಯೇ ವಿದ್ಯುತ್ ಮಸೂದೆ ವಾಪಸ್ ತೆಗೆದುಕೊಳ್ಳದೆ ಹಾಗೂ ಲಕೀಂಪುರ್ ಖೇರಿಯಲ್ಲಿ ರೈತರ ಕೊಲೆಗಳಿಗೆ ನೇರ ಕಾರಣನಾದ ಕೇಂದ್ರ ಮಂತ್ರಿ ಅಜಯ್ ಮಿಶ್ರಾರ ರಾಜೀನಾಮೆ, ರೈತರ ಮೇಲಿನ ಕೇಸುಗಳ ವಾಪಾಸಾತಿ ಇನ್ನಿತರ ನಾಲ್ಕು ಬೇಡಿಕೆಗಳ ಬಗ್ಗೆ ಸರಕಾರವು ಖಚಿತವಾದ ಮತ್ತು ವಿಶ್ವಾಸಾರ್ಹ ಕ್ರಮಗಳನ್ನು ತೆಗೆದುಕೊಳ್ಳದೆ ಹೋರಾಟವನ್ನು ಹಿಂದೆಗೆದುಕೊಳ್ಳುವುದಿಲ್ಲ ಮತ್ತು ಗಡಿಗಳಿಂದ ಹಿಂದಿರುಗುವುದಿಲ್ಲ ಎಂದು ಘೋಷಿಸಿದೆ ಮತ್ತು ಈ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಡಿಸೆಂಬರ್ 4ರ ಗಡುವನ್ನು ವಿಧಿಸಿದೆ.

ಆದರೆ ಎಂಎಸ್‌ಪಿ ಕಾಯ್ದೆಕರಣ ಮತ್ತು ವಿದ್ಯುತ್ ಮಸೂದೆಯ ವಾಪಸಾತಿ ಆಗ್ರಹಗಳು ಹೇಗೆ ಈ ದೇಶದ ರೈತರ ಮಾತ್ರವಲ್ಲ ಇಡೀ ದೇಶದ ಗ್ರಾಮೀಣ ಹಾಗೂ ನಗರದ ಎಲ್ಲಾ ಬಡ ಮತ್ತು ಮಧ್ಯಮ ವರ್ಗದ ಹಿತಾಸಕ್ತಿಯ ಪರವಾಗಿದೆ ಎಂಬುದಾಗಲೀ, ಅದಕ್ಕೆ ತದ್ವಿರುದ್ಧವಾಗಿ ಎಂಎಸ್‌ಪಿ ರದ್ದು ಮತ್ತು ಹೊಸ ವಿದ್ಯುತ್ ಮಸೂದೆಗಳ ಜಾರಿ ಹೇಗೆ ಕಾರ್ಪೊರೇಟ್ ಹಿತಾಸಕ್ತಿಯ ಪರವಾಗಿದ್ದು ದೇಶದ್ರೋಹಿಯಾಗಿದೆಯೆಂಬುದಾಗಲೀ ಹೆಚ್ಚಿನ ಜನರಿಗೆ ತಿಳಿದಿಲ್ಲ.

ಎಂಎಸ್‌ಪಿ-ಶಾಸನವಾಗದೆ ಕನಿಷ್ಟ ಬೆಂಬಲ ಬೆಲೆ ಕವಚವಾಗುವುದಿಲ್ಲ!
ರೈತರ ಅಸಹಾಯಕತೆಯನ್ನು ವ್ಯಾಪಾರಿಗಳು ಮತ್ತು ಮಧ್ಯವರ್ತಿಗಳು ದುರುಪಯೋಗಪಡಿಸಿಕೊಳ್ಳಬಾರದೆಂಬ ಉದ್ದೇಶದಿಂದಲೇ ಸರಕಾರ 1965ರಲ್ಲಿ ಒಂದು ಸರಕಾರಿ ಆದೇಶದ ಮೂಲಕ ಎಂಎಸ್‌ಪಿ ವ್ಯವಸ್ಥೆಯನ್ನು ಜಾರಿಗೆ ಮಾಡಿತು. ಆಗ ಭಾರತ ದೊಡ್ಡ ಆಹಾರದ ಕೊರತೆಯನ್ನು ಎದುರಿಸುತ್ತಿದ್ದರಿಂದ ಭಾರತ ಸರಕಾರ ಹಸಿರು ಕ್ರಾಂತಿಯೆಂಬ ಬಂಡವಾಳಶಾಹಿ ಕೃಷಿಯನ್ನು ವಿಶೇಷವಾಗಿ ಪಂಜಾಬ್, ಹರ್ಯಾಣ, ಉ.ಪ್ರದೇಶಗಳ ನೀರಾವರಿ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹಿಸಿತು. ರೈತರು ಸ್ವಇಚ್ಚೆಯಿಂದ ಈ ಕೃಷಿ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ರೈತರು ಬೆಳೆದಿದ್ದ ಎಲ್ಲವನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಸರಕಾರವೇ ಖರೀದಿಸುವ ಆಶ್ವಾಸನೆಯನ್ನು ನೀಡಿತು. ಹೀಗೆ ಜಾರಿಯಾದ ಎಂಎಸ್‌ಪಿ ವ್ಯವಸ್ಥೆಯು ಒಂದು ಪ್ರೋತ್ಸಾಹಕರ ಹಾಗೂ ಆಶ್ವಾಸನೆಯ ರೂಪದ ಸರಕಾರಿ ಕ್ರಮವಾಗಿತ್ತೇ ವಿನಾ ಸರಕಾರವನ್ನಾಗಲೀ ಅಥವಾ ಮಾರುಕಟ್ಟೆಯನ್ನಾಗಲೀ ಕಡ್ಡಾಯಗೊಳಿಸುವ ಶಾಸನವಾಗಿರಲಿಲ್ಲ. ಪ್ರಾರಂಭದಲ್ಲಿ ಕೇವಲ ಭತ್ತ ಮತ್ತು ಗೋಧಿಗೆ ಸೀಮಿತವಾಗಿದ್ದ ಈ ವ್ಯವಸ್ಥೆ ನಿಧಾನವಾಗಿ ರೈತರು ಬೆಳೆಯುವ 23 ಬೆಳೆಗಳಿಗೆ ವಿಸ್ತರಿಸಿತು, ಪ್ರತಿವರ್ಷ ಕೇಂದ್ರ ಸರಕಾರದಡಿಯಲ್ಲಿರುವ Commission on Agricultural Costs & Prices (CACP)-ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುತ್ತದೆ. ಆದರೆ ಇದು ಶಾಸನವಲ್ಲವಾದ್ದರಿಂದ ಆ ಬೆಲೆ ಸಿಗಬೇಕೆಂದರೆ ಸರಕಾರಿ ಏಜೆನ್ಸಿಗಳು ಖರೀದಿ ಮಾಡಬೇಕು. ಖಾಸಗಿ ವ್ಯಾಪಾರಿಗಳು ಏನಿಲ್ಲವೆಂದರೂ ಘೋಷಿತ ಎಂಎಸ್‌ಪಿ ದರಕ್ಕಿಂತ ಶೇ.15-40ರಷ್ಟು ಕಡಿಮೆ ಬೆಲೆಯನ್ನು ಮಾತ್ರ ರೈತರಿಗೆ ನೀಡಿ ಖರೀದಿಸಿ ಅದನ್ನು ದುಪ್ಪಟ್ಟು ಬೆಲೆಗೆ ಮಾರಿಕೊಳ್ಳುತ್ತಾರೆ.

ಎಂಎಸ್‌ಪಿ ವ್ಯವಸ್ಥೆಯಲ್ಲಿ ಸರಕಾರವು ಪ್ರಧಾನವಾಗಿ ಪಂಜಾಬ್, ಹರ್ಯಾಣಗಳಲ್ಲಿ ಅಲ್ಲಿನ ಎಪಿಎಂಸಿಗಳ ಮೂಲಕ ರೈತರು ಬೆಳೆದ ಶೇ. 90ರಷ್ಟು ಭತ್ತ ಹಾಗೂ ಗೋಧಿಯನ್ನು ಎಂಎಸ್‌ಪಿ ಬೆಲೆಯಲ್ಲಿ ಖರೀದಿ ಮಾಡುತ್ತಿತ್ತು. ಹೀಗಾಗಿ ಎಪಿಎಂಸಿ ಮತ್ತು ಎಂಎಸ್‌ಪಿ ವ್ಯವಸ್ಥೆಯು ಅಲ್ಲಿನ ಬಹುಪಾಲು ಸಣ್ಣ ಹಾಗೂ ಮಧ್ಯಮ ರೈತಾಪಿಗೂ ಪ್ರಧಾನವಾದ ಜೀವನಾಧಾರವೇ ಆಗಿದೆ. ಎಪಿಎಂಸಿ-ಎಂಎಸ್‌ಪಿ ವ್ಯವಸ್ಥೆ ರದ್ದಾದರೆ ಇಡೀ ರೈತಾಪಿ ಬದುಕು ಬೀದಿಪಾಲಾಗುತ್ತದೆ. 2012ರ ನಂತರ ಆಗಿನ ಸರಕಾರ ಜಾರಿಗೆ ತಂದ Decentralised Procurement Policy (DPP) ನೀತಿಯನುಸಾರ ಈ ವ್ಯವಸ್ಥೆಯ ಲಾಭ ತೆಲಂಗಾಣ, ಆಂಧ್ರಪ್ರದೇಶ, ಚತ್ತೀಸ್‌ಗಡ ಹಾಗೂ ಒಡಿಶಾದಂತಹ ರಾಜ್ಯಗಳಿಗೆ ವಿಸ್ತರಿಸಿತು. ಆದರೆ ಈಗಲೂ ಈ ವ್ಯವಸ್ಥೆಯ ಸಂಪೂರ್ಣ ಲಾಭ ರಾಜ್ಯಗಳ ರೈತರಿಗೂ ಸರಿಸಮನಾಗಿಯೂ ಒದಗುತ್ತಿಲ್ಲ ಹಾಗೂ ಪ್ರಧಾನವಾಗಿ ಭತ್ತ, ಗೋಧಿ ಹಾಗೂ ಇನ್ನಿತರ ಇಪ್ಪತ್ತು ರೈತೋತ್ಪನ್ನಗಳನ್ನು ಬಿಟ್ಟರೆ ರೈತ ಬೆಳೆಯುವ ಎಲ್ಲಾ ಬೆಳೆಗಳು ಎಂಎಸ್‌ಪಿ ಅಡಿ ಬರುವುದಿಲ್ಲ. ಎಂಎಸ್‌ಪಿ ಶಾಸನಬದ್ಧವಲ್ಲವಾದ್ದರಿಂದ ಸರಕಾರ ಖರೀದಿ ಮಾಡದಿದ್ದರೆ ಖಾಸಗಿ ಮಂಡಿ/ವ್ಯಾಪಾರಿಗಳು ಎಂಎಸ್‌ಪಿ ಕೊಡುವುದಿಲ್ಲ. ಆದ್ದರಿಂದ ಎಂಎಸ್‌ಪಿ ದರದಲ್ಲಿ ಖರೀದಿಯಾಗದಿದ್ದರೆ ಕೇವಲ ಎಂಎಸ್‌ಪಿ ಘೋಷಣೆಯಿಂದ ಯಾವ ಪ್ರಯೋಜನವೂ ಇಲ್ಲ  ಎಲ್ಲಕ್ಕಿಂತ ಹೆಚ್ಚಾಗಿ ಎಂಎಸ್‌ಪಿ ಲೆಕ್ಕಾಚಾರದಲ್ಲೇ ರೈತರ ಎಲ್ಲಾ ವೆಚ್ಚಗಳನ್ನೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ.

ಆದ್ದರಿಂದ ರೈತರು ಮೂರು ಹೊಸ ಶಾಸನಗಳ ವಾಪಸಾತಿಯ ಜೊತೆಗೆ ಎಂಎಸ್‌ಪಿಗೆ ಸಂಬಂಧಪಟ್ಟಂತೆ ಈ ಕೆಳಗಿನ ಆಗ್ರಹಗಳನ್ನು ಮುಂದಿಟ್ಟಿದ್ದರು:

1. ಎಂಎಸ್‌ಪಿ ಲೆಕ್ಕಾಚಾರ ಮಾಡುವಾಗ ರೈತರು ಖರೀದಿ ಮಾಡುವ ಬೀಜ, ಗೊಬ್ಬರ, ಇನ್ನಿತ್ಯಾದಿ ಹಾಗೂ ಕುಟುಂಬ ಶ್ರಮವನ್ನು ಮಾತ್ರ ಲೆಕ್ಕ ಹಾಕುವ ಪದ್ಧತಿಯನ್ನು ಕೈಬಿಟ್ಟು ಸ್ವಾಮಿನಾಥನ್ ಸಮಿತಿ ವರದಿಯ ಲೆಕ್ಕಾಚಾರದಂತೆ (ಸಿ2+50%) ಸಮಗ್ರ ವೆಚ್ಚದ ಮೇಲೆ ಶೇ. 50ರ ಲಾಭ ಸೇರಿಸಿ ಎಂಎಸ್‌ಪಿ ನಿಗದಿ ಮಾಡಬೇಕು.

2. ಎಂಎಸ್‌ಪಿಯನ್ನು ಶಾಸನಬದ್ಧಗೊಳಿಸಬೇಕು. ಘೋಷಿತ ಎಂಎಸ್‌ಪಿ ದರಕ್ಕಿಂತ ಸರಕಾರವಾಗಲೀ, ಖಾಸಗಿ ವ್ಯಾಪಾರಿಗಳಾಗಲೀ ಖರೀದಿ ಮಾಡುವುದನ್ನು ಶಿಕ್ಷಾರ್ಹ ಅಪರಾಧವೆಂದು ಪರಗಣಿಸಬೇಕು. ಆಗ ಮಾತ್ರ ಸರಕಾರ ಘೋಷಿಸುವ ಎಂಎಸ್‌ಪಿಯಿಂದ ರೈತರಿಗೆ ಏನಾದರೂ ಲಾಭ ದಕ್ಕುತ್ತದೆ.

3. ರೈತರ ಬೆಳೆಯನ್ನು ಎಂಎಸ್‌ಪಿ ದರದಲ್ಲಿ ಸರಕಾರವೇ ಖರೀದಿ ಮಾಡಬೇಕು ಅಥವಾ ಮಾರುಕಟ್ಟೆ ದರವು ಎಂಎಸ್‌ಪಿ ದರಕ್ಕಿಂತ ಕಡಿಮೆಯಾದಾಗ ಆ ವ್ಯತ್ಯಾಸವನ್ನಾದರೂ ಸರಕಾರ ಭರಿಸಬೇಕು. ಅತ್ಯಂತ ನ್ಯಾಯಯುತವಾಗಿರುವ ಈ ಆಗ್ರಹಗಳ ಬಗ್ಗೆ ಸರಕಾರ ಮತ್ತು ಸರಕಾರಿ ಪಂಡಿತರು ಈ ರೀತಿ ಎಂಎಸ್‌ಪಿ ದರದಲ್ಲಿ ಸರಕಾರವೇ ರೈತರಿಂದ ಎಲ್ಲಾ ಬೆಳೆಗಳನ್ನು ಖರೀದಿ ಮಾಡಿದರೆ ದೇಶದ ಆರ್ಥಿಕತೆ ಹಾಳಾಗಿ ಹೋಗುತ್ತದೆ ಎಂದು ಹುಯಿಲೆಬ್ಬಿಸಿದ್ದಾರೆ. ಅವರ ಪ್ರಕಾರ ರೈತರ ಈ ಆಗ್ರಹದಂತೆ ನಡೆದರೆ:

1) ಸರಕಾರಕ್ಕೆ ವಾರ್ಷಿಕ 17 ಲಕ್ಷ ಕೋಟಿ ವೆಚ್ಚವಾಗುತ್ತದೆ. ಇದು ಕೇಂದ್ರ ಸರಕಾರದ ವಾರ್ಷಿಕ ಬಜೆಟ್‌ನ ಅರ್ಧದಷ್ಟು. ಹೀಗಾಗಿ ಈ ಆಗ್ರಹ ಈಡೇರಿಸಿದರೆ ದೇಶದ ಅಭಿವೃದ್ಧಿಗೆ ಹಣವೇ ಇಲ್ಲದಂತಾಗುತ್ತದೆ. 2) ಈಗಾಗಲೇ ಏಕಕೃಷಿಯಿಂದ ಮಣ್ಣಿನ ಫಲವತ್ತತೆ ಕುಸಿಯುತ್ತಿದೆ. ಈಗ ಖಚಿತ ಲಾಭ ಇದೆಯೆಂದಾದ ಮೇಲೆ ಎಲ್ಲಾ ರೈತರು ಹೆಚ್ಚಿನ ನೀರು ಕಬಳಿಕೆ ಮಾಡುವ ಈ ಬೆಳೆಗಳನ್ನೇ ಬೆಳೆಯುತ್ತಾರೆ. ಇದರಿಂದ ಬರಲಿರುವ ದಿನಗಳಲ್ಲಿ ಕೃಷಿಯೇ ಅಸ್ಥಿರವಾಗುತ್ತದೆ.. ಎಂಬ ಕುಂಟು ಹಾಗೂ ಉತ್ಪ್ರೇಕ್ಷಿತ ವಾದಗಳನ್ನು ಮುಂದಿಡುತ್ತಿದ್ದಾರೆ. ಮೊದಲನೆಯದಾಗಿ, ರೈತರು ಬೆಳೆದದ್ದನ್ನೆಲ್ಲಾ ಸರಕಾರ ಖರೀದಿ ಮಾಡಬೇಕಿಲ್ಲ. ಆದರೆ ಈ ದೇಶದ ಶೇ. 80ರಷ್ಟು ಜನರ ಹಸಿವನ್ನು ನೀಗಿಸಲು ಕಡಿಮೆ ದರದಲ್ಲಿ ಎಷ್ಟು ಧಾನ್ಯ ಖರೀದಿ ಮಾಡಬೇಕೋ ಅಷ್ಟೇ ಖರೀದಿ ಮಾಡಿದರೂ ಸಾಕಾಗುತ್ತದೆ. ಅದನ್ನು ಎಂಎಸ್‌ಪಿ ದರದಲ್ಲಿ ಖರೀದಿ ಮಾಡಿದರೆ ಉಳಿದ ಖರೀದಿಗೆ ಖಾಸಗಿ ಮಾರುಕಟ್ಟೆಗೆ ಅದು ಮಾದರಿ ದರವಾಗುತ್ತದೆ ಹಾಗೂ ಎಂಎಸ್‌ಪಿಯನ್ನು ಶಾಸನಬದ್ಧಗೊಳಿಸಿದರೆ ಪ್ರಾರಂಭದಲ್ಲಿ ಖಾಸಗಿ ಮಾರುಕಟ್ಟೆ ಖರೀದಿಯನ್ನು ಬಹಿಷ್ಕರಿಸಿದರೂ ಆ ನಂತರ ವಹಿವಾಟನ್ನು ಮುಂದುವರಿಸಲೇ ಬೇಕೆಂದರೆ ಎಂಎಸ್‌ಪಿ ದರದ ಖರೀದಿ ಸಹಜವಾಗುತ್ತದೆ. ಅಲ್ಲಿಯವರೆಗೆ ಒಂದೋ ಸರಕಾರ ಖರೀದಿಸಬೇಕು ಅಥವಾ ಮಾರುಕಟ್ಟೆ ಮತ್ತು ಎಂಎಸ್‌ಪಿ ದರದ ವ್ಯತ್ಯಾಸವನ್ನು ಸರಕಾರ ರೈತರಿಗೆ ತುಂಬಿಕೊಡಬೇಕು. ರೈತ ಕಾರ್ಯಕರ್ತರು ಮತ್ತು ಪಂಡಿತರು ಮಾಡಿರುವ ಲೆಕ್ಕಾಚಾರದ ಪ್ರಕಾರ ಇದರಿಂದ ಸರಕಾರದ ಮೇಲೆ ಹೆಚ್ಚೆಂದರೆ 50 ಸಾವಿರ ಕೋಟಿಯಿಂದ ಎರಡು ಲಕ್ಷ ಕೋಟಿ ರೂ. ಹೆಚ್ಚುವರಿ ವೆಚ್ಚವಾಗುತ್ತದೆ. ಇದನ್ನು ರಾಜ್ಯ ಹಾಗೂ ಕೇಂದ್ರಗಳೆರಡೂ ಭರಿಸುವುದಾದರೆ ಅದು ಹೊರೆಯೂ ಆಗುವುದಿಲ್ಲ. ಆದರೆ ಈ ಹೆಚ್ಚುವರಿ ಎರಡು ಲಕ್ಷ ಕೋಟಿಗಳ ಖಾತರಿಯಿಂದ ಈ ದೇಶದ 80 ಕೋಟಿ ರೈತಾಪಿಗೆ ಖಾತರಿ ಆದಾಯ ಮತ್ತು ಭವಿಷ್ಯ ದಕ್ಕುತ್ತದೆ.

ಈ ಎರಡು ಲಕ್ಷಕೋಟಿಯೆಂದರೆ ನಮ್ಮ ಜಿಡಿಪಿಯ ಶೇ. 1 ಭಾಗ ಮಾತ್ರ ಅಥವಾ ಕೇಂದ್ರ ಬಜೆಟ್‌ನ ಶೇ. 5 ಭಾಗ ಮಾತ್ರ. ಇದು ಸರಕಾರಕ್ಕೆ ಹೊರೆಯಾಗುತ್ತದೆಯೇ? ಇನ್ನು ಭತ್ತ ಹಾಗೂ ಗೋಧಿಗೆ ಮಾತ್ರವಲ್ಲದೆ ಈಗಿರುವಂತೆ ಇತರ 7 ಧಾನ್ಯಗಳಿಗೆ, 5 ದ್ವಿದಳ ಧಾನ್ಯಗಳಿಗೆ, 7 ಎಣ್ಣೆ ಕಾಳುಗಳಿಗೆ ಹಾಗೂ 4 ವಾಣಿಜ್ಯ ಬೆಳೆಗಳಿಗೂ ಕಡ್ಡಾಯವಾಗಿ ವಿಸ್ತರಿಸಿದರೆ ಸಹಜವಾಗಿ ರೈತ ತನಗೆ ಲಾಭತರುವ ಎಲ್ಲಾ ಬೆಳೆಯನ್ನು ಬೆಳೆಯುತ್ತಾನೆಯೇ ಹೊರತು ಭತ್ತ, ಗೋಧಿಗೆ ಮಾತ್ರ ಅಂಟಿ ಕೂರುವುದಿಲ್ಲ. ಹೀಗಾಗಿ ಎಂಎಸ್‌ಪಿ ಶಾಸನ ಮಾಡುವುದರಿಂದ ಏಕಕೃಷಿಯನ್ನೂ ಉತ್ತೇಜಿಸಿದಂತಾಗುವುದಿಲ್ಲ. ಪರಿಸರವೂ ಹಾಳಾಗುವುದಿಲ್ಲ. ಆದ್ದರಿಂದ ಇವೆಲ್ಲಾ ರೈತರಿಗೆ ಎಂಎಸ್‌ಪಿ ವಂಚಿಸುವ ಕುತಂತ್ರಗಳೇ ಹೊರತು ಮತ್ತೇನಲ್ಲ. ಹಾಗೆ ನೋಡಿದರೆ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಕೇಂದ್ರದಲ್ಲಿ ಬಿಜೆಪಿ ವಿರೋಧ ಪಕ್ಷವಾಗಿದ್ದಾಗ ಎಂಎಸ್‌ಪಿಯನ್ನು ಶಾಸನಬದ್ಧಗೊಳಿಸಬೇಕೆಂದು ಬಿಜೆಪಿಯೇ ಆಗ್ರಹಿಸಿತ್ತು!!

ಎಂಎಸ್‌ಪಿಯನ್ನು ಶಾಸನಬದ್ಧಗೊಳಿಸಿ: ಮುಖ್ಯಮಂತ್ರಿ ಮೋದಿ ಸಮಿತಿ, 2011   
2011ರಲ್ಲಿ ಯುಪಿಎ ಸರಕಾರ ಕೃಷಿ ಮಾರುಕಟ್ಟೆ ಸುಧಾರಣೆಯ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು, ಹಾಲಿ ಪ್ರಧಾನಿ-ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತ್ತು.

ನಾಳೆಯ ಸಂಚಿಕೆಗೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)