ಮಹಿಳಾ ಮೀಸಲಾತಿ ಮಸೂದೆ: ಒಂದು ಹಿನ್ನೋಟ
ಮಹಿಳಾ ಮೀಸಲಾತಿ ಮತ್ತೆ ಚರ್ಚೆಯಲ್ಲಿದೆ. ಸಂಸತ್‌ನಲ್ಲಿ ಈ ಬಗ್ಗೆ ಕೆಲವು ಮಹಿಳಾ ಸಂಸದರು ಧ್ವನಿಯೆತ್ತಿದ್ದಾರೆ. ಅದರ ಒಂದು ಹಿನ್ನೋಟಲ್ಲಿದೆ.
ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 33 ಪ್ರಾತಿನಿಧ್ಯ ನೀಡುವ, ಭಾರತದ ರಾಜಕೀಯದಲ್ಲಿ ಮಹಿಳೆಯರ ಸಶಕ್ತೀಕರಣ ಉದ್ದೇಶದ ಮಹಿಳಾ ಮೀಸಲಾತಿ ಮಸೂದೆಯ ಸಂಕ್ಷಿಪ್ತ ವಿವರ ಹೀಗಿದೆ. ಈ ಮಸೂದೆಗೆ ಲೋಕಸಭೆಯಲ್ಲಿ ಇನ್ನೂ ಅಂಗೀಕಾರ ದೊರೆತಿಲ್ಲ. ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯ ವನ್ನು ಹೆಚ್ಚಿಸುವ ಉದ್ದೇಶದ ಈ ಮಸೂದೆಯನ್ನು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಮಂಡಿಸಲಾಗಿದ್ದರೂ, ಲೋಕಸಭೆಯಲ್ಲಿ ಇನ್ನೂ ಅಂಗೀಕಾರ ದೊರೆತಿಲ್ಲ. ರಾಜ್ಯಸಭೆ, ಲೋಕಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ. 33 ಸ್ಥಾನವನ್ನು ಮೀಸಲಿಡುವ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಪ್ರಸ್ತಾವನೆ ಹೊಂದಿರುವ ಮಹಿಳಾ ಮೀಸಲಾತಿ ಮಸೂದೆ ಸಂಸತ್ತಿನಲ್ಲಿ ಇನ್ನೂ ಅಂಗೀಕಾರಕ್ಕೆ ಬಾಕಿಯಾಗಿದೆ.
1. ಮೊತ್ತಮೊದಲು, ಎಚ್.ಡಿ. ದೇವೇಗೌಡ ಪ್ರಧಾನಿಯಾಗಿದ್ದ ಸಂದರ್ಭ, 1996ರ ಸೆಪ್ಟೆಂಬರ್ 12ರಂದು ಯುನೈಟೆಡ್ ಫ್ರಂಟ್ ಸರಕಾರ ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತು.
2. ಲೋಕಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ. 33 ಸ್ಥಾನವನ್ನು ಮೀಸಲಿಡುವುದು ಈ ಮಸೂದೆಯ ಪ್ರಮುಖ ಉದ್ದೇಶವಾಗಿದೆ.
3. ರೊಟೇಷನ್ ಆಧಾರದಲ್ಲಿ ಸ್ಥಾನಗಳನ್ನು ಮೀಸಲಿಡಲಾಗುವುದು. 3 ಸತತ ಸಾರ್ವತ್ರಿಕ ಚುನಾವಣೆಯಲ್ಲಿ ಒಂದು ಬಾರಿ ಆಯಾ ಕ್ಷೇತ್ರಕ್ಕೆ ಮೀಸಲಾತಿ ನಿಗದಿಯಾಗುವಂತೆ ಲಾಟರಿ ಎತ್ತಲಾಗುವುದು.
4. ವಾಜಪೇಯಿ ಸರಕಾರ ಈ ಮಸೂದೆಗೆ ಲೋಕಸಭೆಯ ಅನುಮೋದನೆ ಪಡೆಯಲು ಪ್ರಯತ್ನಿಸಿತು. ಆದರೆ ಮಸೂದೆಗೆ ಅಂಗೀಕಾರ ದೊರಕಲಿಲ್ಲ.
5. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಲೋಕಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ. 33 ಸ್ಥಾನವನ್ನು ಮೀಸಲಿಡುವ ಮಸೂದೆಯನ್ನು 2008ರ ಮೇ ತಿಂಗಳಿನಲ್ಲಿ ಮತ್ತೆ ಮಂಡಿಸಿತು.
6. ಮರು ಮಂಡನೆಯ ಬಳಿಕ 2010ರ ಮಾರ್ಚ್ 9ರಂದು ಮಸೂದೆಗೆ ರಾಜ್ಯಸಭೆಯ ಅನುಮೋದನೆ ದೊರಕಿತು. ಆದರೆ ಲೋಕಸಭೆಯಲ್ಲಿ ಅಂಗೀಕಾರವಾಗಲಿಲ್ಲ.
7. ಲಾಲೂಪ್ರಸಾದ್ ಯಾದವ್ ನೇತೃತ್ವದ ಆರ್‌ಜೆಡಿ ಹಾಗೂ ಸಮಾಜವಾದಿ ಪಕ್ಷಗಳು ಈ ಮಸೂದೆಗೆ ತೀವ್ರ ವಿರೋಧ ಸೂಚಿಸಿವೆ. ಮಸೂದೆಯನ್ನು ವಿರೋಧಿಸಿ ಎರಡೂ ಪಕ್ಷದ ಸಂಸದರು ಹಲವು ಬಾರಿ ಪ್ರಶ್ನೋತ್ತರ ಅವಧಿಯಲ್ಲಿ ಗದ್ದಲ ಎಬ್ಬಿಸಿದ್ದಾರೆ. ಮಹಿಳಾ ಮೀಸಲಾತಿಯೊಳಗೆ ಹಿಂದುಳಿದ ವರ್ಗದ ಮಹಿಳೆಯರಿಗೆ ಒಳ ಮೀಸಲಾತಿ ಇರಬೇಕು ಎಂಬುದು ಇವರ ಆಗ್ರಹವಾಗಿದೆ.
8. ಎಲ್‌ಜೆಪಿ ಪಕ್ಷದ ಚಿರಾಗ್ ಪಾಸ್ವಾನ್, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ರಂತಹ ಮುಖಂಡರು ತಮ್ಮ ಚುನಾವಣಾ ರ್ಯಾಲಿ ಹಾಗೂ ಭಾಷಣದ ಸಂದರ್ಭ ಮಹಿಳಾ ಮೀಸಲಾತಿ ಮಸೂದೆಯ ಪರ ಧ್ವನಿ ಎತ್ತುತ್ತಾರೆ.
ಮಸೂದೆಯ ಮೂಲ:
1993ರಲ್ಲಿ ಅಂಗೀಕಾರಗೊಂಡ ಸಂವಿಧಾನ ತಿದ್ದುಪಡಿ ಪ್ರಸ್ತಾವನೆಯು ಈ ಮಸೂದೆಯ ಮೂಲವಾಗಿದೆ. ಗ್ರಾಮ ಪಂಚಾಯತ್‌ಗಳ ಗ್ರಾಮ ಸಮಿತಿ ಮುಖಂಡರು ಅಥವಾ ಸರಪಂಚರ ಹುದ್ದೆಯಲ್ಲಿ ಮೂರನೇ ಒಂದು ಪ್ರಮಾಣ ಮಹಿಳೆಯರಿಗೆ ಮೀಸಲಾಗಿರಬೇಕು ಎಂದು ಸಂವಿಧಾನ ತಿದ್ದುಪಡಿ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಈ ಮೀಸಲಾತಿಯನ್ನು ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗೂ ವಿಸ್ತರಿಸುವ ದೀರ್ಘಾವಧಿಯ ಯೋಜನೆಯಾಗಿ ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಆದರೆ ಮಹಿಳೆಯರಿಗೆ ಯಾಕೆ ಆದ್ಯತೆ ನೀಡಬೇಕು ಎಂದು ಪ್ರಶ್ನಿಸುವ ಕೆಲವರು ಈ ಮಸೂದೆಯನ್ನು ವಿರೋಧಿಸುತ್ತಿದ್ದಾರೆ.
ಮಹಿಳಾ ಮೀಸಲಾತಿ ಕಾಯ್ದೆಯ ಈಗಿನ ಸ್ಥಿತಿ:
ಈಗ ಈ ಮಸೂದೆ ಲೋಕಸಭೆಯಲ್ಲಿ ಬಾಕಿಯಾಗಿದೆ. ಲೋಕಸಭೆಯಲ್ಲಿ ಹಾಲಿ ಸರಕಾರಕ್ಕೆ ಪೂರ್ಣ ಬಹುಮತ ಇರುವುದರಿಂದ ಅನುಮೋದನೆ ಪಡೆಯುವುದು ಅಸಾಧ್ಯವೇನಲ್ಲ. ಆದರೂ, ಇತ್ತೀಚಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಯಾವುದೇ ಪ್ರಮುಖ ಬೆಳವಣಿಗೆ ಆಗಿಲ್ಲ. ಹಾಲಿ ಸರಕಾರ ಮಸೂದೆಗೆ ಅಂಗೀಕಾರ ಪಡೆಯಲು ಕ್ರಮ ಕೈಗೊಂಡರೆ, ಮಸೂದೆ ಲೋಕಸಭೆಯ ಅಂಗೀಕಾರ ಪಡೆಯುವ ವಿಶ್ವಾಸವಿದೆ.