ಭಾರತ ಸಹಿತ 6 ದೇಶಗಳ ವಿಮಾನ ಸಂಚಾರ ನಿಷೇಧ ರದ್ದು: ಸೌದಿ ಅರೇಬಿಯಾ ಘೋಷಣೆ
ಸಾಂದರ್ಭಿಕ ಚಿತ್ರ
ರಿಯಾದ್, ಡಿ.1: ಭಾರತ, ಪಾಕಿಸ್ತಾನ, ಈಜಿಪ್ಟ್ ಸೇರಿದಂತೆ 6 ದೇಶಗಳಿಂದ ನೇರವಾಗಿ ಆಗಮಿಸುವ ವಿಮಾನ ಪ್ರಯಾಣಿಕರಿಗೆ ವಿಧಿಸಿದ್ದ ನಿಷೇಧವನ್ನು ಸೌದಿ ಅರೆಬಿಯಾ ಬುಧವಾರ ರದ್ದುಗೊಳಿಸಿದೆ.
ಭಾರತ, ಈಜಿಪ್ಟ್, ಪಾಕಿಸ್ತಾನ, ಇಂಡೋನೇಶ್ಯಾ, ಬ್ರೆಝಿಲ್ ಮತ್ತು ವಿಯೆಟ್ನಾಮ್ ದೇಶಗಳ ಪ್ರಯಾಣಿಕರಿಗೆ ಇನ್ನು ಮುಂದೆ ಸೌದಿ ಅರೆಬಿಯಾ ಪ್ರವೇಶಿಸುವ ಮುನ್ನ ದೇಶದ ಹೊರಗೆ 14 ದಿನದ ಕ್ವಾರಂಟೈನ್ ಕಡ್ಡಾಯವಾಗಿಲ್ಲ ಎಂದು ಸೂಚಿಸಲಾಗಿದೆ.
ಕೊರೋನ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸಡಿಲಗೊಳಿಸುವ ನಿರ್ಧಾರದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರು ಪ್ರಯಾಣ ಆರಂಭಿಸುವ 72 ಗಂಟೆ ಮೊದಲು ಕ್ರಮಬದ್ಧ ಪಿಸಿಆರ್ ಪರೀಕ್ಷೆ ವರದಿ ಹೊಂದಿರಬೇಕು ಮತ್ತು ಖದೂಮ್ ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡಿರಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದರೆ, ಸೌದಿಗೆ ಆಗಮಿಸುವಾಗ 5 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿದೆ(ಲಸಿಕೆ ಪಡೆದವರಿಗೆ ಕೂಡಾ). ಅಲ್ಲದೆ ಕ್ವಾರಂಟೈನ್ನ ಪ್ರಥಮ ಮತ್ತು 5 ನೇ ದಿನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.