ಎಂಎಸ್ಪಿ ಕಾಯ್ದೆಯಾಗದೆ ವಿದ್ಯುತ್ ಮಸೂದೆ ಹಿಂಪಡೆಯದೆ ರೈತ ವಿಜಯ ಅಪೂರ್ಣ!
ಭಾಗ - 2
ಆ ಮೋದಿ ಸಮಿತಿ 2011ರ ಡಿಸೇಂಬರ್ 1ರಂದು ತನ್ನ ವರದಿಯನ್ನು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಿಸಿತ್ತು. ಅದು 20 ಪ್ರಮುಖ ಶಿಫಾರಸುಗಳನ್ನು ಒಳಗೊಂಡಿತ್ತು. ಅದರಲ್ಲಿ ಎಪಿಎಂಸಿಯ ಯಾಜಮಾನಿಕೆಯನ್ನು ಮುರಿಯಲು ಖಾಸಗಿ ಮಂಡಿಗಳಿಗೆ ಅವಕಾಶ ಕೊಡಬೇಕು, ಕಾಂಟ್ರಾಕ್ಟ್ ಫಾರ್ಮಿಂಗ್ಗೆ ಅವಕಾಶ ಕೊಡಬೇಕು ಇನ್ನಿತ್ಯಾದಿ ಶಿಪಾರಸುಗಳಿದ್ದಿದ್ದೇನೋ ನಿಜ. ಆದರೆ ಅದರ ಜೊತೆಗೆ ಈ ಕೆಳಗಿನ ಪ್ರಮುಖ ಶಿಫಾರಸ್ಸುಗಳನ್ನು ಅದೂ ಮಾಡಿತ್ತು:
" ..Reduction in farmers marketing risk will improve farm income and thus increase the agriculture production. For the purpose, Government should announce of MSPs well in advance and ensure that no farmer-trader transaction is below MSP"
ಅಂದರೆ: ಮಾರುಕಟ್ಟೆಯಲ್ಲಿ ರೈತರು ಎದುರಿಸುವ ರಿಸ್ಕನ್ನು ಕಡಿಮೆ ಮಾಡುವುದರಿಂದ ಕೃಷಿ ಆದಾಯ ಹೆಚ್ಚುವುದಲ್ಲದೆ ಕೃಷಿ ಉತ್ಪಾದನೆಯೂ ಹೆಚ್ಚುತ್ತದೆ. ಇದನ್ನು ಸಾಧಿಸಲು ಸರಕಾರವು ಮುಂಚಿತವಾಗಿಯೇ ಕನಿಷ್ಠ ಬೆಂಬಲ ಬೆಲೆ-ಎಂಎಸ್ಪಿ-ಯನ್ನು ಘೋಷಿಸಬೇಕು ಮತ್ತು ವ್ಯಾಪಾರಿ-ರೈತರ ನಡುವಿನ ಯಾವುದೇ ವ್ಯವಹಾರವು ಎಂಎಸ್ಪಿಗಿಂತ ಕಡಿಮೆ ಇಲ್ಲದಿರುವುದನ್ನು ಖಾತರಿಗೊಳಿಸಬೇಕು.
b.3 Enforce MSP: Since intermediaries play a vital role in the functioning ofthe market and at times they have advance contract with farmers. In respect of all essential commodities, we should protect farmer's interests by mandating through statutory provisions that no farmer - trader transaction should be below MSP, wherever prescribed.
ಅಂದರೆ: ಕೃಷಿ ಮಾರುಕಟ್ಟೆಯ ವ್ಯವಹಾರಗಳಲ್ಲಿ ಮಧ್ಯವರ್ತಿಗಳು ಕೀಲಕ ಪಾತ್ರ ವಹಿಸುತ್ತಾರೆ ಮತ್ತು ಕೆಲವು ಸಂದರ್ಭಗಳಲ್ಲಿ ರೈತರ ಜೊತೆ ಮುಂಗಡ ಒಪ್ಪಂದವನ್ನೂ ಮಾಡಿಕೊಂಡಿರುತ್ತಾರೆ. ಎಲ್ಲಾ ಅತ್ಯಗತ್ಯ ಸರಕುಗಳ ವಹಿವಾಟುಗಳ ವಿಷಯದಲ್ಲಿ ರೈತಾಪಿ ಮತ್ತು ವ್ಯಾಪಾರಿಗಳ ನಡುವೆ ನಡೆಯುವ ಯಾವುದೇ ವಹಿವಾಟುಗಳು ಎಂಎಸ್ಪಿಗಿಂತ ಕಡಿಮೆದರದಲ್ಲಿ ನಡೆಯದಂತೆ ಮಾಡುವುದನ್ನು ಶಾಸನಾತ್ಮಕವಾಗಿ ಕಡ್ಡಾಯಗೊಳಿಸುವ ಮೂಲಕ ರೈತರ ಹಿತಾಸಕ್ತಿಯನ್ನುರಕ್ಷಿಸಬೇಕು
ಆದರೆ 2014ರಲ್ಲಿ ಮೋದಿಯೇ ಪ್ರಧಾನಿಯಾದ ಮೇಲೆ ಬಿಜೆಪಿ ಸರಕಾರ ಅಂತಹ ಶಾಸನ ಮಾಡಲು ಮುಂದಾಗುವುದಿರಲಿ ಸರಕಾರವು ಈವರೆಗೆ ರೈತರಿಂದ ಖರೀದಿ ಮಾಡುತ್ತಿದ್ದ ಪ್ರಮಾಣವನ್ನು ಕಡಿಮೆ ಮಾಡಲು ಪ್ರಾರಂಭಿಸಿತು. ಬದಲಿಗೆ ಸರಕಾರದ ಖರೀದಿಯನ್ನೇ ಕ್ರಮೇಣವಾಗಿ ಕಡಿಮೆ ಮಾಡಲು ಹಾಗೂ ಖಾಸಗೀಕರಿಸಲು ಮುಂದಾಗಿದೆ. ಎಫ್ಸಿಐಗೆ ಬಜೆಟ್ ಕಡಿತ- ರೈತರಿಗೆ ಎಂಎಸ್ಪಿ ಹಾಗೂ ಬಡವರಿಗೆ ಪಡಿತರವೂ ಕಡಿತ!
ಎಫ್ಸಿಐ ಮೂಲಕ ಸರಕಾರ ರೈತರ ಸರಕನ್ನು ಖರೀದಿ ಮಾಡಿದರೆ ರೈತರಿಗೆ ಎಂಎಸ್ಪಿ ದರವೂ, ಬಡವರಿಗೆ ಪಡಿತರವೂ ದೊರೆಯುತ್ತದೆ. ಆದರೆ ರೈತರಿಗೆ ಹಾಗೂ ಬಡವರಿಗೆ ನೇರವಾಗಿ ದರಕಡಿತ ಮಾಡುವುದು ಕಷ್ಟ. ಆದ್ದರಿಂದಲೇ ಕುತಂತ್ರಿ ಸರಕಾರ ಕೃಷಿ ಮಸೂದೆಗಳಲ್ಲೂ ನೇರವಾಗಿ ಎಂಎಸ್ಪಿಯನ್ನಾಗಲಿ ಅಥವಾ ಪಡಿತರವನ್ನಾಗಲೀ ರದ್ದು ಮಾಡುತ್ತೇನೆಂದು ಹೇಳುತ್ತಿಲ್ಲ. ಬದಲಿಗೆ ಮೂಲ ಎಫ್ಸಿಐ ಅನ್ನು ರದ್ದು ಮಾಡುವ ಅಥವಾ ಖಾಸಗೀಕರಿಸುವ ಯೋಜನೆಗಳನ್ನು ಸದ್ದಿಲ್ಲದಂತೆ ಜಾರಿ ಮಾಡುತ್ತಾ ಬಂದಿದೆ. ರೈತರಿಂದ ಎಂಎಸ್ಪಿ ದರದಲ್ಲಿ ಧಾನ್ಯಗಳನ್ನು ಖರೀದಿಸಿ ಅವನ್ನು ರಿಯಾಯಿತಿ ದರದಲ್ಲಿ ಪಡಿತರ ವ್ಯವಸ್ಥೆಯಲ್ಲಿ ಈ ದೇಶದ 5 ಲಕ್ಷ ರೇಷನ್ ಅಂಗಡಿಗಳ ಮೂಲಕ 80 ಕೋಟಿ ಬಡವರಿಗೆ ತಿಂಗಳಿಗೆ ಸರಾಸರಿ 7 ಕೆಜಿ ಧಾನ್ಯಗಳನ್ನು ತಲುಪಿಸಲು ಎಫ್ಸಿಐಗೆ 2019-20ರ ಸಾಲಿನಲ್ಲಿ 2. 27 ಲಕ್ಷ ಕೋಟಿ ರೂ. ಖರ್ಚಾಗಿತ್ತು. ಆದರೆ ಅದಕ್ಕೆ ಬಜೆಟ್ನಿಂದ ಒದಗಿಸಿದ್ದು ಕೇವಲ 75,000 ಕೋಟಿ ರೂ. ಮಾತ್ರ..
ಏಕೆಂದರೆ ಭಾರತದ ಬಡವರ ಆಹಾರ ಭದ್ರತೆಗೆಂದು ಸಬ್ಸಿಡಿ ಕೊಡಲು WHO ಕೊಟ್ಟಿದ್ದ ಗಡುವು 2017ಕ್ಕೆ ಮುಕ್ತಾಯವಾಗಿದೆ. ಅಲ್ಲದೆ, ಎಫ್ಸಿಐ ಅನ್ನು ಮುಚ್ಚಿ ಹಾಕಿ ಧಾನ್ಯ ಮಾರಾಟದಲ್ಲಿ ದೊಡ್ಡ ಕಾರ್ಪೊರೇಟ್ ಕಂಪೆನಿಗಳಿಗೆ ಅವಕಾಶ ಕೊಡಬೇಕೆಂಬ ಒತ್ತಡವು ಅದಾನಿ-ಅಂಬಾನಿ ಹಾಗೂ ಅವರ ವಿದೇಶಿ ಪಾಲುದಾರರ ದೈತ್ಯಧಾನ್ಯ ಸಗಟುದಾರರಿಂದ ಹೆಚ್ಚಾಗಿದೆ.
ಹೀಗಾಗಿ ಎಪಿಎಂಸಿ-ಎಂಎಸ್ಪಿ-ಎಫ್ಸಿಐ ಇವುಗಳು ಒಂದನ್ನೊಂದು ಅವಲಂಬಿಸಿರುವ ಅವಿನಾಭಾವಿ ವ್ಯವಸ್ಥೆಯಾಗಿದೆ.
ಎಪಿಎಂಸಿ ಮತ್ತು ಎಫ್ಸಿಐಗಳಿಲ್ಲದೆ ಎಂಎಸ್ಪಿಯು ರೈತರಿಗೆ ಸಿಗುವುದಿಲ್ಲ. ಏಕೆಂದರೆ ಈಗಿರುವ ವ್ಯವಸ್ಥೆಯಲ್ಲಿ ಸರಕಾರವನ್ನು ಬಿಟ್ಟರೆ ಯಾವುದೇ ಖಾಸಗಿ ಮಂಡಿಗಳು ರೈತರಿಗೆ ಎಂಎಸ್ಪಿ ಕೊಡುತ್ತಿಲ್ಲ. ಇತ್ತೀಚಿನ ಅಧ್ಯಯನದ ಪ್ರಕಾರವೇ ಕಳೆದ ಎರಡು ತಿಂಗಳಲ್ಲೇ ದೇಶದ 20,000 ನೋಂದಾಯಿತ ಕೃಷಿ ಮಾರುಕಟ್ಟೆಗಳ ಶೇ. 90ರಷ್ಟು ಖಾಸಗಿ ಖರೀದಿಗಳಲ್ಲಿ ಸರಕಾರ ಸೂಚಿಸಿರುವ ಬೆಂಬಲ ಬೆಲೆ ನೀಡಲಾಗಿಲ್ಲ. ಇದರಿಂದಾಗಿ ಕಳೆದವರ್ಷ ಕೇವಲ ಎರಡು ತಿಂಗಳಲ್ಲಿ ಖರೀದಿಯಲ್ಲೇ ಈ ದೇಶದ ರೈತಾಪಿಗೆ 2,000 ಕೋಟಿ ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ. ಅದರಲ್ಲಿ ಕರ್ನಾಟಕದ ಮೆಕ್ಕೆ ಜೋಳದ ಬೆಳೆಗಾರರಿಗೆ ಅಂದಾಜು ರೂ. 330 ಕೋಟಿ ನಷ್ಟ ಸಂಭವಿಸಿದೆ.
ಸಾರಾಂಶ ಸ್ಪಷ್ಟ. ಸರಕಾರ ಖರೀದಿ ಮಾಡದಿದ್ದರೆ ಅಥವಾ ಖಾಸಗಿ ವ್ಯಾಪಾರಿಗಳು ಕಡ್ಡಾಯವಾಗಿ ಎಂಎಸ್ಪಿ ಪಾವತಿಸಬೇಕೆಂಬ ಶಾಸನವನ್ನು ಮಾಡದೆ ರೈತರಿಗೆ ಎಂಎಸ್ಪಿ ದಕ್ಕುವುದಿಲ್ಲ, ಪಡಿತರ ದಕ್ಕುವುದಿಲ್ಲ.
ಆದ್ದರಿಂದ ರೈತ ಚಳವಳಿ ಎಂಎಸ್ಪಿಯನ್ನು ಕಾಯ್ದೀಕರಿಸುವ ಆಗ್ರಹದ ಜೊತೆಜೊತೆಗೆ ಪಡಿತರವನ್ನು ಉಚಿತ ಹಾಗೂ ಸಾರ್ವತ್ರೀಕರಿಸುವ ಆಗ್ರಹವನ್ನು ಅಷ್ಟೇ ಗಟ್ಟಿಯಾಗಿ ಆಗ್ರಹಿಸಬೇಕಿದೆ. ಏಕೆಂದರೆ ಅವೆರಡು ಆಗ್ರಹಗಳ ನಡುವೆ ಎಷ್ಟು ಅವಿನಾಭಾವ ಸಂಬಂಧವಿದೆಯೋ ರೈತ ಹಾಗೂ ನಗರ-ಗ್ರಾಮೀಣ ಬಡ ಸಮುದಾಯಗಳ ನಡುವೆಯೂ ಅಷ್ಟೇ ಅವಿನಾಭಾವ ಸಂಬಂಧವಿದೆ.
ಎಂಎಸ್ಪಿಯನ್ನು ಶಾಸನಬದ್ಧಗೊಳಿಸಿ ಬೆಲೆ ಖಾತರಿ ಮಾಡುವುದು ಮಾರುಕಟ್ಟೆ ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸಿ ದೇಶದ ಅಭಿವೃದ್ಧಿಗೆ ಬೇಕಾದ ಖಾಸಗಿ ಬಂಡವಾಳ ಬರದಂತೆ ಆಗುತ್ತದೆ ಎಂಬುದು ಸರಕಾರದ ಹಾಗೂ ಸರಕಾರಿ ಪಂಡಿತರ ಮತ್ತೊಂದು ವಾದ.
ಹಾಗೆ ನೋಡಿದರೆ 2006ರಿಂದ ಬಿಹಾರದಲ್ಲಿ ಎಪಿಎಂಸಿಯನ್ನು ರದ್ದುಗೊಳಿಸಲಾಗಿದೆ. ಆದರೆ ಅಲ್ಲಿ ಯಾವ ಖಾಸಗಿ ಮಾರುಕಟ್ಟೆಯೂ ಮಂಡಿ ತೆರೆದಿಲ್ಲ. ಅಲ್ಲಿನ ರೈತರಿಗೆ ಎಂಎಸ್ಪಿಯು ಸಿಗುತ್ತಿಲ್ಲ, ಅದಕ್ಕಿಂತ ಹೆಚ್ಚಿನದರವೂ ಸಿಗುತ್ತಿಲ್ಲ. ಬಿಹಾರದ ರೈತರು ದೂರದ ಪಂಜಾಬಿಗೆ ಹೋಗಿ ಅಲ್ಲಿನ ಎಪಿಎಂಸಿಗಳಲ್ಲಿ ಮಾರಿ ಹೆಚ್ಚಿನ ಬೆಲೆಯನ್ನು ಪಡೆದುಕೊಳ್ಳುತ್ತಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಸರಕಾರವು ಖಾಸಗಿ ಬಂಡವಾಳ ಹೂಡಿಕೆಯಾಗಬೇಕು ಎಂಬ ನೆಪದಲ್ಲಿ ಬೃಹತ್ ಕಾರ್ಪೊರೇಟ್ ಉದ್ದಿಮೆಗಳಿಗೆ ಅವರ ಹೂಡಿಕೆಯ ಮೇಲೆ ಲಾಭವನ್ನು ಖಚಿತಗೊಳಿಸುವ ನೀತಿಯನ್ನು ಅನುಸರಿಸುತ್ತಿಲ್ಲವೇ?
ಅದಾನಿಗೆ ಲಾಭ ಖಾತರಿ ದೇಶಸೇವೆ- ರೈತರಿಗೆ ಎಂಎಸ್ಪಿ ಖಾತರಿ ದೇಶದ್ರೋಹ!
2019-20ರ ಬಜೆಟ್ನಲ್ಲೇ ಮೋದಿ ಸರಕಾರ ಅಂತರ್ರಾಷ್ಟ್ರೀಯ ಹಣಕಾಸು ಸಂಸ್ಥೆಗಳು, ಕಾರ್ಪೊರೇಟ್ ಕಂಪೆನಿಗಳಿಗೆ ತಾನು ಕೊಟ್ಟಿದ್ದ ಲಾಭದ ಖಾತರಿಯಲ್ಲಿ ಆದ ವ್ಯತ್ಯಾಸವನ್ನು ಪೂರೈಸಲು 3, 87, 727 ಕೋಟಿ ರೂ. ಒದಗಿಸಿತ್ತು. ಆಸಕ್ತರು ಹೆಚ್ಚಿನ ವಿವರಗಳಿಗೆ ಸರಕಾರದ ಈ ಬಜೆಟ್ಡಾಕ್ಯುಮೆಂಟನ್ನು ಓದಬಹುದು.
(https://www.indiabudget.gov.in/doc/rec/annex93.pdf)
ಅಷ್ಟು ಮಾತ್ರವಲ್ಲ. ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿಗಳು ಖಚಿತವಾಗುತ್ತಿದ್ದಂತೆ ಮೋದಿ ಮಿತ್ರ ಅದಾನಿ 700 ಕೋಟಿ ರೂ. ವೆಚ್ಚದಲ್ಲಿ 12 ಲಕ್ಷ ಟನ್ ಆಹಾರ ಧಾನ್ಯಗಳನ್ನು ಸಂಗ್ರಹಿಸಿಡುವ ಉಗ್ರಾಣಗಳನ್ನು ನಿರ್ಮಿಸಿಕೊಂಡ. ಆದರೆ ಇದರಿಂದ ಆತನಿಗೇನು ಲಾಭ?
2015ರ ಒಪ್ಪಂದದ ಪ್ರಕಾರ ಭಾರತೀಯ ಆಹಾರ ನಿಗಮವು ಒಂದು ಕ್ವಿಂಟಾಲ್ ಧಾನ್ಯವನ್ನು ಸಂಗ್ರಹಿಸಿಟ್ಟುಕೊಳ್ಳಲು ಒಂದು ತಿಂಗಳಿಗೆ 100 ರೂ. ಬಾಡಿಗೆಯನ್ನು ನೀಡುತ್ತದೆ ಹಾಗೂ ಈ ಒಪ್ಪಂದವು 30 ವರ್ಷಗಳ ಕಾಲ ಖಾಯಂ ಆಗಿರುವುದಲ್ಲದೆ ಪ್ರತಿವರ್ಷ ಬಾಡಿಗೆದರವನ್ನು ಹಣದುಬ್ಬರಕ್ಕೆ ತಕ್ಕಂತೆ ಪರಿಷ್ಕರಿಸಲಾಗುವುದು. ತಿಂಗಳಿಗೆ ಒಂದು ಕ್ವಿಂಟಾಲಿಗೆ 100 ರೂ. ಬಾಡಿಗೆಯಂತೆ 10 ಲಕ್ಷಟನ್ಗೆ ಒಂದು ವರ್ಷಕ್ಕೆ ಅದಾನಿ ಕಂಪೆನಿಗೆ ಸರಕಾರವು ತೆರಲಿರುವ ಬಾಡಿಗೆ ಎಷ್ಟು? ರೂ. 120 ಕೋಟಿ.
ಅಂದರೆ ಕೇವಲ ಆರು ವರ್ಷಗಳಲ್ಲಿ ಈ ಸೈಲೋಗಳನ್ನು ಕಟ್ಟಲು ಆದ 700 ಕೋಟಿಯನ್ನು ಅದಾನಿ ಕಂಪೆನಿ ವಾಪಸ್ ಪಡೆದುಕೊಂಡಿರುತ್ತದೆ. ಆದರೆ ಕಾಂಟ್ರಾಕ್ಟ್ 30 ವರ್ಷಗಳದ್ದು. ಹೀಗಾಗಿ ಉಳಿದ 23 ವರ್ಷ ಲಾಭ! ಇಂತಹ ಲಾಭ ಯಾವ ಖಾಸಗಿ ವ್ಯವಹಾರಗಳಲ್ಲಿ ಇರಲು ಸಾಧ್ಯ??
ಹೀಗಾಗಿಯೇ, ಅದಾನಿಯವರ 2019-20ರ ವಾರ್ಷಿಕ ವಹಿವಾಟು ವರದಿಯ ಪ್ರಕಾರ ಒಟ್ಟಾರೆ ಅದಾನಿ ಸಾಮ್ರಾಜ್ಯದ ಗಳಿಕೆಯು ಶೇ.27ರ ದರದಲ್ಲಿ ಬೆಳೆದರೆ, ಅಗ್ರಿ ಲಾಜಿಸ್ಟಿಕ್ಸ್ ಮೂಲದ ಲಾಭದ ದರವು ಶೇ.60ರ ದರದಲ್ಲಿ ಬೆಳೆದಿದೆ.
ಅದೇ ವರದಿಯಲ್ಲಿ ಅದಾನಿ ಕಂಪೆನಿಯು:
AALL has long term (20-30 year) guaranteed offtake contracts on use or pay basis with 70%+ EBITDA margins. AALL targets to double infrastructure capacity in the next 3 years and tap the new 12.5 MMT infrastructure market as well
(ಅಂದರೆ- ಅದಾನಿ ಅಗ್ರಿ ಲಾಜಿಸ್ಟಿಕ್ಸ್ ಕಂಪೆನಿಗೆ ಸರಕಾರದಿಂದ 20-30 ವರ್ಷಗಳ ಖಾತರಿಯಾದ ಒಪ್ಪಂದವಿದೆ. ಇದು ಶೇ. 70ರಷ್ಟು ಲಾಭವನ್ನು ಗಳಿಸಿಕೊಡಲಿದೆ. ಹೀಗಾಗಿ ಮುಂದಿನ ಮೂರು ವರ್ಷಗಳಲ್ಲಿ ತನ್ನ ಸಾಮರ್ಥ್ಯವನ್ನು 1.25 ಕೋಟಿ ಟನ್ಗಳಿಗೆ ಹೆಚ್ಚಿಸಿಕೊಳ್ಳುವ ಯೋಜನೆಯನ್ನು ಹೊಂದಿದೆ. ಎಂದು ಹೇಳಿಕೊಂಡಿದೆ.)
(https://www.adaniports.com/-/media/Project/Ports/Investor/corporate-governance/Corporate-Announcement/other-intimation--1/24523022019Intimation-of-proposal-for-acquisition.pdf?la=en)
ರೈತರಿಗೆ ಎಂಎಸ್ಪಿ ಬೆಲೆಯನ್ನು ಖಾತರಿಗೊಳಿಸಲು ನಿರಾಕರಿಸುವ ಮೋದಿ ಸರಕಾರ ಅದಾನಿ ಕಂಪೆನಿಗೆ ಒಂದಲ್ಲ ಎರಡಲ್ಲ 30 ವರ್ಷಗಳ ಕಾಲ ಶೇ. 70ರಷ್ಟು ಲಾಭವನ್ನು ಖಾತರಿಗೊಳಿಸಿದೆ. ಮಿತ್ರಋಣ ತೀರಿಸುತ್ತಿದೆ. ಆದರೆ ದೇಶಕ್ಕೆ ದ್ರೋಹ ಬಗೆಯುತ್ತಿಲ್ಲವೇ? ರೈತರಿಗೆ ಎಂಎಸ್ಪಿ ಬೆಲೆಯನ್ನು ಖಾತರಿ ಮಾಡುವ ನೀತಿ ಶಾಸನವಾದರೆ ಮುಕ್ತ ಮಾರುಕಟ್ಟೆ ಅಸ್ತವ್ಯಸ್ತವಾಗುತ್ತದೆ ಅನ್ನುವ ಸರಕಾರ ಮತ್ತವರ ಪಂಡಿತರು, ಅದಾನಿಗೆ ಹಾಗೂ ಅದರಂತಹ ನೂರು ಉದ್ದಿಮೆಗಳಿಗೆ ಲಾಭ ಖಾತರಿ ಮಾಡುವ ನೀತಿಗಳನ್ನು ಮಾತ್ರ ಮುಕ್ತ ಮಾರುಕಟ್ಟೆ ಆರ್ಥಿಕತೆಗೆ ಅಡ್ಡಿ ಎಂದೇಕೆ ವಾದಿಸುವುದಿಲ್ಲ?
ವಿದ್ಯುತ್ ಮಸೂದೆ-2021
ರೈತಬದುಕನ್ನು ಕತ್ತಲಿಗೆ ದೂಡುವ ನೀಲನಕ್ಷೆ
ರೈತರನ್ನು ಹಾಗೂ ಈ ದೇಶದ ಎಲ್ಲಾ ಬಡ ಮಧ್ಯಮವರ್ಗದವರನ್ನು ಮತ್ತಷ್ಟು ಹಿಂಡಿಹಿಪ್ಪೆ ಮಾಡಿ ಕಾರ್ಪೊರೇಟ್ ಧಣಿಗಳ ಋಣ ಸಂದಾಯ ಮಾಡಲು ಮೋದಿ ಸರಕಾರ ಜಾರಿಗೆ ತರುತ್ತಿರುವ ಮತ್ತೊಂದು ನೀತಿ ಹೊಸ ವಿದ್ಯುತ್ ಸುಧಾರಣ ಮಸೂದೆ. ಈ ಮಸೂದೆಯ ಉದ್ದೇಶವೇ ವಿದ್ಯುತ್ ವಿತರಣಾ ಕ್ಷೇತ್ರವನ್ನು ಖಾಸಗೀಕರಿಸುವುದು. ಆದರೆ ಲಾಭದ ಉದ್ದೇಶದಿಂದ ಉದ್ಯಮದಲ್ಲಿರುವ ಹಾಗೂ ಹೆಚ್ಚು ಲಾಭವಿರುವ ಕ್ಷೇತ್ರಗಳಲ್ಲಿ ಮಾತ್ರ ಹೂಡಿಕೆ ಮಾಡುವ ಕಾರ್ಪೊರೇಟ್ ಕಂಪೆನಿಗಳು ಈಗಾಗಲೇ ನಷ್ಟದಲ್ಲಿರುವ ವಿದ್ಯುತ್ ವಿತರಣಾ ಕ್ಷೇತ್ರಕ್ಕೇಕೆ ಬರುತ್ತವೆ? ಆದ್ದರಿಂದಲೇ ಈ ಮಸೂದೆಯು ವಿದ್ಯುತ್ ವಿತರಣೆಯನ್ನು ಲಾಭದಾಯಕ ಮಾಡುವ ಹಲವಾರು ಪ್ರಸ್ತಾಪಗಳನ್ನು ಹೊಂದಿದೆ.
ಕ್ರಾಸ್ ಸಬ್ಸಿಡಿ ರದ್ದು-ಒಂದೇ ದೇಶ, ಒಂದೇ ಬೆಲೆ!
ಅದರಲ್ಲಿ ಮೊತ್ತ ಮೊದಲನೆಯದು ಬಡವರಿಗೆ, ರೈತರಿಗೆ ಕೊಡುತ್ತಿದ್ದ ಸಬ್ಸಿಡಿ ದರದ ವಿದ್ಯುತ್ತನ್ನು ರದ್ದುಮಾಡಿ ಎಲ್ಲರಿಗೂ ಒಂದೇ ದರವನ್ನು ನಿಗದಿ ಮಾಡುವುದು. ಕಾರ್ಪೊರೇಟ್ ಕಂಪೆನಿಗಳ ಪ್ರಕಾರ ವಿತರಣಾ ಕಂಪೆನಿಗಳು ನಷ್ಟವನ್ನೆದುರಿಸಲು ಕಾರಣ ಗ್ರಾಹಕರು ವಿದ್ಯುತ್ ಉತ್ಪಾದನೆ ಹಾಗೂ ವಿತರಣೆಗೆ ಎಷ್ಟು ವೆಚ್ಚವಾಗುವುದೋ ಅಷ್ಟು ಬೆಲೆಯನ್ನು ಕಟ್ಟದಿರುವುದು. ಆದ್ದರಿಂದ ವಿದ್ಯುತ್ ಬೆಲೆಯಲ್ಲಿ ರಿಯಾಯಿತಿ ಇರದೆ ಬಡವ-ಶ್ರೀಮಂತರೆನ್ನದೆ ಎಲ್ಲಾ ಗ್ರಾಹಕರು ಎಷ್ಟು ವೆಚ್ಚವಾಗುವುದೋ ಅಷ್ಟು ಬೆಲೆಯನ್ನು ಕಟ್ಟಬೇಕು. ಈ ಮಾರುಕಟ್ಟೆ ತತ್ವವನ್ನು ಮೋದಿ ಸರಕಾರ ಚಾಚೂ ತಪ್ಪದೆ ಒಪ್ಪಿಕೊಂಡಿದೆ. ಹೊಸ ಮಸೂದೆಯ 12 (ii) ಅಂಶ ಹೀಗೆ ಹೇಳುತ್ತದೆ: “Provided also that such surcharge and cross subsidies shall be progressively reduced by the State Commission in the manner as may be provided in the Tariff Policy:” ಎಂಬ ಕಲಮನ್ನು ಅಡಕ ಮಾಡಲಾಗಿದೆ ಹಾಗೂ ಹೊಸ ಖಾಸಗಿ ವಿತರಣಾ ಕಂಪೆನಿಗಳಿಗೆ ಸರಕಾರ ಈವರೆಗೆ ನೀಡುತ್ತಾ ಬಂದ ಎಲ್ಲಾ ಬಗೆಯ ಕ್ರಾಸ್ ಸಬ್ಸಿಡಿಗಳನ್ನು ವೇಗವಾಗಿ ಕಡಿತಗೊಳಿಸಲಾಗುವುದು ಎಂಬ ಭರವಸೆ ನೀಡಲಾಗಿದೆ. ಇದಕ್ಕೆ ಪೂರಕವಾಗಿ 2016ರಲ್ಲಿ ಜಾರಿ ಮಾಡಿದ್ದ ಹೊಸ ವಿದ್ಯುತ್ ಶುಲ್ಕ ನೀತಿಗೂ ತಿದ್ದುಪಡಿ ತರುವ ಭರವಸೆಯನ್ನು ಅಡಕಗೊಳಿಸಲಾಗಿದೆ. ಅದರೆ ಒಂದೊಮ್ಮೆ ಈ ಮಸೂದೆ ಕಾಯ್ದೆಯಾದರೆ ಸರಕಾರಿ ಒಡೆತನದಲ್ಲಿರುವ ವಿತರಣಾ ಕಂಪೆನಿಗಳ ಬದಲಿಗೆ ಖಾಸಗಿ ವಿತರಣಾ ಕಂಪೆನಿಗಳಿಂದ ಅವರು ನಿಗದಿಪಡಿಸಿದ ಶುಲ್ಕವನ್ನು ತೆತ್ತು ರೈತರು ಮತ್ತು ಬಡವರು ವಿದ್ಯುತ್ತನ್ನು ಖರೀದಿ ಮಾಡಬೇಕಿರುತ್ತದೆ. ಸಬ್ಸಿಡಿ ಇಲ್ಲದಿರುವುದರಿಂದ ಹಾಗೂ ಎಲ್ಲರಿಗೂ ಒಂದೇ ದರವಾದ್ದರಿಂದ ಅದು ಈಗಿರುವುದಕ್ಕಿಂತ ಸಹಜವಾಗಿಯೇ ಎರಡು-ಮೂರುಪಟ್ಟು ಹೆಚ್ಚಿರುತ್ತದೆ.
ನೇರ ನಗದು ವರ್ಗಾವಣೆಯೆಂಬ ಬಳಸು ಮೋಸ
ಆದರೆ ಆ ಮಸೂದೆಯಲ್ಲಿ ರಾಜ್ಯ ಸರಕಾರಗಳು ಬೇಕಿದ್ದರೆ ಆ ನಂತರ ಕೆಲವು ನಿರ್ದಿಷ್ಟ ವರ್ಗಗಳ ಗ್ರಾಹಕರ ಅಕೌಂಟಿಗೆ ಸಬ್ಸಿಡಿ ಹಣವನ್ನು ತುಂಬಬಹುದು ಎಂಬ ಅವಕಾಶವನ್ನು ನೀಡಿದೆ. ಆದರೆ ಗ್ಯಾಸ್ ಮತ್ತು ಗೊಬ್ಬರದ ವಿಷಯಗಳಲ್ಲಿ ಅದರಲ್ಲೂ ವಿಶೇಷವಾಗಿ ಅಡುಗೆ ಅನಿಲದ ವಿಷಯದಲ್ಲಿ ಈ ನೇರೆ ನಗದು ವರ್ಗಾವಣೆ ಎಂಬುದು ಹೇಗೆ ಜನರನ್ನು ಮೋಸ ಮಾಡುವ ತಂತ್ರವಾಗಿದೆ ಎಂಬುದನ್ನು ಈ ದೇಶದ ಜನ ಅರ್ಥ ಮಾಡಿಕೊಂಡಿದ್ದಾರೆ. ಆದ್ದರಿಂದ ಪ್ರಾರಂಭದ ಒಂದೆರಡು ವರ್ಷ ಬಡವರ ಮತ್ತು ರೈತರ ಅಕೌಂಟಿನಲ್ಲಿ ವಿದ್ಯುತ್ ಸಬ್ಸಿಡಿ ಹಣ ಬಂದರೂ ನಂತರದಲ್ಲಿ ಖಾಸಗಿ ಕಂಪೆನಿಗಳು ನಿಗದಿಪಡಿಸಿದಷ್ಟು ಶುಲ್ಕವನ್ನು ತೆರಲೇಬೇಕಾದ ವ್ಯವಸ್ಥೆ ಜಾರಿಗೆ ಬರಲಿದೆ.
ಪ್ರೀ ಪೇಯ್ಡ ಮೀಟರ್ ಎಂಬ ರಾಷ್ಟ್ರೀಯ ಕುತಂತ್ರ
ಎಲ್ಲಕ್ಕಿಂತ ಹೆಚ್ಚಾಗಿ ಖಾಸಗಿ ವಿತರಣಾ ಕಂಪೆನಿಗಳಿಗಿದ್ದ ದೊಡ್ಡ ತಕರಾರು ಗ್ರಾಹಕ ವರ್ಗಗಳು ಶುಲ್ಕವನ್ನು ಪಾವತಿ ಮಾಡುವುದು ವಿದ್ಯುತ್ತಿನ ಸಬರಾಜನ್ನು ಮಾಡಿದ ತಿಂಗಳ ನಂತರ. ಆದರೆ ಆ ವರ್ಗಗಳು ತಿಂಗಳ ನಂತರ ಶುಲ್ಕ ಪಾವತಿ ಮಾಡದಿದ್ದರೆ? ಅದರಿಂದ ತಮ್ಮ ಇಡೀ ವ್ಯವಹಾರ ಯೋಜನೆಯೇ ತಳಕೆಳಗಾಗುವುದರಿಂದ ಈ ಖಾಸಗಿ ಕಂಪೆನಿಗಳು ಪ್ರೀ ಪೇಯ್ಡಿ ಮೀಟರಿಂಗ್ ಯೋಜನೆಯನ್ನು ಮುಂದಿಟ್ಟಿವೆ. ಸರಕಾರ ಇದನ್ನು ಕೂಡ ಚಾಚೂ ತಪ್ಪದೆ ಒಪ್ಪಿಕೊಂಡಿದೆ. ಪ್ರೀ ಪೇಯ್ಡಿ ಸ್ಮಾರ್ಟ್ ಮೀಟರಿಂಗ್ ಯೋಜನೆಯೆಂದರೆ ಪ್ರೀ ಪೀಯ್ಡಾ ಮೊಬೈಲ್ ರೀ ಚಾರ್ಜ್ ಇದ್ದಂತೆ. ಬಳಸುವ ಮುನ್ನವೇ ದುಡ್ಡು ಕಟ್ಟಬೇಕು. ಎಷ್ಟು ದುಡ್ಡು ಕಟ್ಟಲಾಗಿದೆಯೋ ಅಷ್ಟರವರೆಗೆ ಸೇವೆ ಲಭ್ಯ. ಆ ನಂತರ ಮತ್ತೆ ದುಡ್ಡು ತುಂಬುವವರೆಗೆ ಇನ್ ಕಮಿಂಗ್ ಮತ್ತು ಔಟ್ ಗೋಯಿಂಗ್ ಕಟ್! ಹಾಗೆಯೇ ವಿದ್ಯುತ್ ಕ್ಷೇತ್ರದಲ್ಲೂ ಇನ್ನು ಮುಂದೆ ಗ್ರಾಹಕರು ವಿದ್ಯುತ್ತನ್ನು ಬಳಸುವ ಮುಂಚೆಯೇ ಅದರ ಶುಲ್ಕವನ್ನು ತಮ್ಮ ಬ್ಯಾಂಕ್ ಅಕೌಂಟಿನಲ್ಲಿ ತುಂಬಿರಬೇಕು ಅಥವಾ ಗ್ರಾಹಕರ ಅಕೌಂಟಿನಲ್ಲಿ ಎಷ್ಟು ಹಣವಿದೆಯೋ ಅಷ್ಟರವರೆಗೆ ವಿದ್ಯುತ್ ಸರಬರಾಜಾಗುತ್ತದೆ. ಹಣ ಮುಗಿದೊಡನೆ ವಿದ್ಯುತ್ ನಿಲ್ಲುತ್ತದೆ. ಇದರಿಂದ ಖಾಸಗಿ ವಿತರಕರ ಲಾಭ ಖಾತರಿಯಾಗುತ್ತದೆ. ಆದರೆ ಬಡ-ರೈತಾಪಿಯ ಬದುಕು?? ಆದರೂ ಮೋದಿ ಸರಕಾರ 2019ರಿಂದಲೇ ಸದ್ದಿಲ್ಲದೆ ಪ್ರೀ ಪೀಯ್ದಾ ಮೀಟರಿಂಗ್ ಯೋಜನೆಗೆ ಸನ್ನಾಹ ಪ್ರಾರಂಭಿಸಿದೆ. ಹಾಗೆ ನೋಡಿದರೆ ವಿದ್ಯುತ್ ಕೇಂದ್ರ ಮತ್ತು ರಾಜ್ಯ ಎರಡಕ್ಕೂ ಸಂಬಂಧಿಸಿದ ಸಮವರ್ತಿ ಪಟ್ಟಿಯಲ್ಲಿದೆ. ಆದರೆ ರಾಜ್ಯಗಳ ಸಮ್ಮತಿಯನ್ನೂ ಪಡೆಯದೆ ಹಾಗೂ ಯಾವುದೇ ಶಾಸನಗಳ ಬೆಂಬಲವೂ ಇಲ್ಲದಂತೆ ಮೋದಿ ಸರಕಾರ 2019ರಿಂದಲೇ ಒಂದು ರಾಷ್ಟೀಯ ಸ್ಮಾರ್ಟ್ ಮೀಟರಿಂಗ್ ಕಾರ್ಯಕ್ರಮ ಪ್ರಾರಂಭಿಸಿದೆ. 2020ರ ಬಜೆಟ್ನಲ್ಲೂ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ದೇಶದ 22 ಕೋಟಿ ವಿದ್ಯುತ್ ಮೀಟರ್ಗಳನ್ನು ಹಂತಹಂತವಾಗಿ ಸ್ಮಾರ್ಟ್ ಮತ್ತು ಪ್ರೀ ಪೀಯ್ಡಾ ಮೀಟರ್ ಆಗಿ ಬದಲಾಯಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಕೇಂದ್ರದ ಶಕ್ತಿ ಸಚಿವಾಲಯದ ಪೋರ್ಟಲ್ನಲ್ಲಿ ದೇಶದಲ್ಲಿ ಈ ಸ್ಮಾರ್ಟ್ ಮೀಟರಿಂಗ್ ಯಾವ ಗತಿಯಲ್ಲಿ ನಡೆಯುತ್ತಿದೆ ಎಂಬುದರ ಮೇಲೆ ನಿಗಾ ಇಡುತ್ತಾ ತ್ವರಿತಗೊಳಿಸಲು ‘ನ್ಯಾಷನಲ್ ಸ್ಮಾರ್ಟ್ ಗ್ರಿಡ್ ಮಿಷನ್’ ಎಂಬ ಉಪ ಇಲಾಖೆಯನ್ನೇ ತೆರೆಯಲಾಗಿದೆ. ಅದರ ಡ್ಯಾಷ್ ಬೋರ್ಡ್ ಹೇಳುವಂತೆ 1.11 ಕೋಟಿ ಸ್ಮಾರ್ಟ್ ಮೀಟರ್ಗಳ ಸ್ಯಾಂಕ್ಷನ್ ಆಗಿದ್ದು 22 ಲಕ್ಷ ಸ್ಮಾರ್ಟ್ ಮೀಟರ್ಗಳನ್ನು ಈಗಾಗಲೇ ಅಳವಡಿಸಲಾಗಿದೆ. ಅದರಲ್ಲಿ ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ಅಳವಡಿಸಲಾಗಿರುವ 22 ಸಾವಿರ ಸ್ಮಾರ್ಟ್ ಮೀಟರ್ಗಳು ಸೇರಿಕೊಂಡಿವೆ. ಇದಲ್ಲದೆ ಉತ್ತರದ ಹಲವಾರು ರಾಜ್ಯಗಳಲ್ಲಿ ಈಗಾಗಲೇ 2.5 ಲಕ್ಷ ಪ್ರೀ ಪೇಯ್ಡಾ ಮೀಟರ್ಗಳನ್ನು ಹಾಕಲಾಗಿದೆ. ಆಸಕ್ತರು ಹೆಚ್ಚಿನ ವಿವರಗಳನ್ನು ಈ ವೆಬ್ಸೈಟಿನಲ್ಲಿ ನೋಡಬಹುದು: https://www.nsgm.gov.in/en/state-wise-map ಹೀಗಾಗಿ ಈ ಮಸೂದೆ ಈ ಅಧಿವೇಶನದಲ್ಲಿ ಪಾಸಾಗದಿದ್ದರೂ ಪ್ರೀ ಪೀಯ್ದ ಮೀಟರಿಂಗ್ ಅರ್ಥಾತ್ ಜನರನ್ನು ಕತ್ತಲಿಂದ ಕಗ್ಗತ್ತಲಿಗೆ ದೂಡುವ ಕಾರ್ಯಕ್ರಮ ಮುಂದುವರಿಯುವ ಎಲ್ಲಾ ಸಾಧ್ಯತೆಗಳಿದೆ.
ಕಾರ್ಪೊರೇಟ್ಗಳಿಗೆ ಬೆಳಕೆಂದರೆ ದೇಶಕ್ಕೆ ಕತ್ತಲೆ
ಹಾಗೆ ನೋಡಿದರೆ ಖಾಸಗಿ ವಿತರಕರು ಈಗಾಗಲೇ ಮಾರ್ಕೆಟ್ನಲ್ಲಿದ್ದಾರೆ. ದೇಶದ ಶೇ. 10ರಷ್ಟು ವಿತರಣೆ ಖಾಸಗಿ ಸುಪರ್ದಿಯಲ್ಲಿದೆ. ಆದರೆ ಅದು ಮುಂಬೈ, ದಿಲ್ಲಿ, ರಾಜಸ್ಥಾನಗಳ ಲಾಭ ಖಾತರಿ ನಗರಗಳಲ್ಲಿ ಮಾತ್ರ. ಅವರಿಗೆ ಒಡಿಶಾ ಹಾಗೂ ಬಿಹಾರಗಳ ನಗರಗಳ ವಿತರಣೆಯ ಅವಕಾಶಗಳಿದ್ದರೂ ಅದನ್ನು ಆಯ್ದುಕೊಳ್ಳಲಿಲ್ಲ. ಕಾರಣ ಅದು ಲಾಭದಾಯಕವಲ್ಲ. ಹೀಗಾಗಿ ನಾಳೆ ಸರಕಾರಿ ವಿತರಣಾ ಕಂಪೆನಿಗಳನ್ನು ಸರಕಾರಗಳೇ ಕೊಂದು ಹಾಕಿ ಕೇವಲ ಖಾಸಗಿಗಳೇ ಉಳಿದರೆ ಗ್ರಾಮೀಣ ಪ್ರದೇಶಗಳಿಗೆ ಮತ್ತು ಬಡಮಧ್ಯಮ ವಸತಿ ಪ್ರದೇಶಗಳಿಗೆ ಹಾಗೂ ಅವರ ಉದ್ದಿಮೆಗಳಿಗೆ ವಿದ್ಯುತ್ ಸಿಗುವ ಖಾತರಿಯೇನು? ಜೊತೆಗೆ ಸುಮಾರು 25 ಲಕ್ಷದಷ್ಟು ಉದ್ಯೋಗಿಗಳಿರುವ ವಿದ್ಯುತ್ ವಿತರಣಾ ಕ್ಷೇತ್ರ ಖಾಸಗಿಯಾದರೆ ಅರ್ಧಕ್ಕರ್ಧ ಉದ್ಯೋಗಿಗಳು ಬೀದಿಪಾಲಾಗಲಿದ್ದಾರೆ. ಆದ್ದರಿಂದ ಶತಾಯ ಗತಾಯ ಈ ದೇಶದ ಎಲ್ಲಾ ಜನರು ವಿದ್ಯುತ್ ಕ್ಷೇತ್ರದ ಈ ದೇಶದ್ರೋಹಿ ಜನದ್ರೋಹಿ ಖಾಸಗೀಕರಣವಾಗದಂತೆ ಸದಾ ಎಚ್ಚರದಿಂದಿರಬೇಕಿದೆ.